ಮುಂದುವರಿದ ಹೊರಗುತ್ತಿಗೆ ಪೌರಕಾರ್ಮಿಕರ ಧರಣಿ

7

ಮುಂದುವರಿದ ಹೊರಗುತ್ತಿಗೆ ಪೌರಕಾರ್ಮಿಕರ ಧರಣಿ

Published:
Updated:
ಮುಂದುವರಿದ ಹೊರಗುತ್ತಿಗೆ ಪೌರಕಾರ್ಮಿಕರ ಧರಣಿ

ರಾಯಚೂರು: ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದರಿಂದ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹವಾಗುತ್ತಿಲ್ಲ. ಇದರಿಂದ ವಸತಿ ಪ್ರದೇಶಗಳ ಎದುರಿನ ರಸ್ತೆಗಳಲ್ಲಿ ಜನರು ತ್ಯಾಜ್ಯ ಎಸೆಯುತ್ತಿದ್ದಾರೆ.

ಮನೆಯಿಂದಲೇ ತ್ಯಾಜ್ಯ ಸಂಗ್ರಹ ಯೋಜನೆಯನ್ನು ನಗರಸಭೆಯಿಂದ ಆರಂಭಿಸಿದ ಬಳಿಕ ಬಡಾವಣೆಗಳಲ್ಲಿ ಇರಿಸಲಾಗಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಲಾಗಿದೆ. ಸದ್ಯಕ್ಕೆ ಕಸ ಎಲ್ಲಿ ಎಸೆಯಬೇಕು ಎನ್ನುವ ಸಮಸ್ಯೆ ನಗರದ ಜನರನ್ನು ಕಾಡುತ್ತಿದೆ. ಕೆಲವರು ಮನೆಗಳಲ್ಲೆ ಕಸ ಇಟ್ಟುಕೊಂಡು ಪೌರ ಕಾರ್ಮಿಕರಿಗಾಗಿ ಕಾಯುತ್ತಿದ್ದಾರೆ.

ಸೂಪರ್‌ ಮಾರ್ಕೆಟ್‌, ಮಡ್ಡಿ ಪೇಟೆ, ಗಂಜ್‌ ಪ್ರದೇಶ, ಮಂತ್ರಾಲಯ ರಸ್ತೆ, ಕೆರೆಯ ಸುತ್ತಲಿನ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಬಹಳಷ್ಟು ತ್ಯಾಜ್ಯ ಹರಡಿಕೊಂಡಿದೆ. ಎರಡು ದಿನಗಳಿಂದ ತುಂತುರು ಮಳೆ ಸುರಿಯುತ್ತಿರುವುದರಿಂದ ರಸ್ತೆಗೆ ಬಿದ್ದಿರುವ ತ್ಯಾಜ್ಯವು ದುರ್ವಾಸನೆ ಎಬ್ಬಿಸಿವೆ.

ಸ್ಟೇಷನ್‌ ರಸ್ತೆ, ಕೆರೆಯ ಪಕ್ಕದ ನಂದಿಶ್ವರ ದೇವಸ್ಥಾನದಿಂದ ಮಾರ್ಕೆಟ್‌ ಕಡೆಗೆ ಹೋಗುವ ಕಡೆಗಳಲ್ಲಿ ಅವ್ಯವಸ್ಥೆ ಇನ್ನೂ ಹೆಚ್ಚಾಗಿದೆ. ಬಡಾವಣೆಗಳ ಮೂಲೆಗಳು ಮತ್ತು ಖಾಲಿ ನಿವೇಶನಗಳು ತಿಪ್ಪೆಗಳಾಗಿ ಮಾರ್ಪಟ್ಟಿವೆ. ನಾಯಿ ಮತ್ತು ಹಂದಿಗಳ ಗುಂಪುಗಳು ಹಸಿ ಕಸವನ್ನು ಎಳೆದಾಡಿ ಹಾಕಿ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಿವೆ.

ನಗರದಾದ್ಯಂತ ಚರಂಡಿ ಮತ್ತು ರಾಜಕಾಲುವೆ ಮಧ್ಯೆ ಸಂಪರ್ಕ ಇಲ್ಲದೆ ಇರುವುದರಿಂದ ಮಳೆಯ ನೀರು ರಸ್ತೆಗಳಲ್ಲಿ ಹರಿದು ಹೋಗಿ ರಸ್ತೆಗಳಲ್ಲೂ ಹಸಿತ್ಯಾಜ್ಯ ಬರುತ್ತಿದೆ. ಇದರೊಂದಿಗೆ ವಿಲೇವಾರಿಯಾಗದ ತ್ಯಾಜ್ಯ ಸೇರಿಕೊಂಡಿದೆ. ಲಿಂಗಸುಗೂರು ರಸ್ತೆ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ರಸ್ತೆ, ಗದ್ವಾಲ್‌ ರಸ್ತೆಗಳ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಗಳ ಎದುರು ಕಸದ ರಾಶಿ ದಿನಕಳೆದಂತೆ ಹೆಚ್ಚಾಗುತ್ತಿದೆ.

ನಗರದಲ್ಲಿ ಚರಂಡಿ, ಒಳಚರಂಡಿ, ನಿರಂತರ ನೀರು ಹಾಗೂ ರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದರಿಂದ ಜನ ಮತ್ತು ವಾಹನಗಳ ಸಂಚಾರ ಸಂಕಷ್ಟಮಯವಾಗಿದೆ. ಅಗೆದುಹಾಕಿದ ರಸ್ತೆಗಳಲ್ಲಿ ತ್ಯಾಜ್ಯವು ತುಂಬಿಕೊಂಡು ಸಂಚಾರವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

‘ತ್ಯಾಜ್ಯ ವಿಲೇವಾರಿಯಾಗದೆ ಸೃಷ್ಟಿಯಾಗುತ್ತಿರುವ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಹೊರಗುತ್ತಿಗೆ ಪೌರಕಾರ್ಮಿಕರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಬೇಕಾಗಿದೆ. ಸರ್ಕಾರದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ನಗರಸಭೆಯಲ್ಲಿ 100 ಕಾಯಂ ಪೌರ ಕಾರ್ಮಿಕರಿದ್ದಾರೆ. ಸಾಧ್ಯವಾದಷ್ಟು ಅವರು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಅವರಿಂದ ಕೆಲವು ಬಡಾವಣೆಗಳಲ್ಲಿ ಮಾತ್ರ ಸದ್ಯಕ್ಕೆ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಇನ್ನುಳಿದ ಪ್ರದೇಶಗಳಿಂದ ತ್ಯಾಜ್ಯ ವಿಲೇವಾರಿ ಮಾಡಿಸಲು ಪರ್ಯಾಯ ಆಲೋಚನೆ ಮಾಡಲಾಗುವುದು’ ಎಂದು ತಿಳಿಸಿದರು.

* * 

ಮಾಸಿಕ ವೇತನ ಹೆಚ್ಚಿಸಿದ್ದಾರೆ. ಆದರೆ, ಸೇವೆ ಕಾಯಂ ಗೊಳಿಸುವ ಭರವಸೆ ಈಡೇರಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದ ಕಾರ್ಮಿಕರನ್ನು  ಕೆಲಸದಿಂದ ವಜಾಗೊಳಿಸಲಾಗಿದೆ 

ಶ್ರೀನಿವಾಸ ಕಲವಲದೊಡ್ಡಿ, ಗುತ್ತಿಗೆ ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry