ಅರ್ಜಿ ಸಲ್ಲಿಕೆ 79 ಸಾವಿರ, ವಿತರಣೆ 646

7

ಅರ್ಜಿ ಸಲ್ಲಿಕೆ 79 ಸಾವಿರ, ವಿತರಣೆ 646

Published:
Updated:
ಅರ್ಜಿ ಸಲ್ಲಿಕೆ 79 ಸಾವಿರ, ವಿತರಣೆ 646

ಮೈಸೂರು: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಕೋರಿ ಐದು ತಿಂಗಳಲ್ಲಿ 79,815 ಅರ್ಜಿಗಳು ಸ್ವೀಕೃತವಾಗಿದ್ದು, ಕೇವಲ 646 ಚೀಟಿ ಮಾತ್ರ ವಿತರಣೆ ಮಾಡಲಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಈ ವಿಚಾರ ಪ್ರತಿಧ್ವನಿಸಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಪಡಿತರ ಖರೀದಿಗಿಂತ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಇತರ ಸೇವೆ ಪಡೆಯಲು ಜನರು ಬಿಪಿಎಲ್‌ ಚೀಟಿ ಬಳಸುತ್ತಾರೆ. ಚೀಟಿ ವಿತರಿಸಲು ನಿಮಗೆ ವರ್ಷಾನುಗಟ್ಟಲೇ ಸಮಯಬೇಕೇ? ಈ ಕೆಲಸ ಸಾಧ್ಯವಾಗಲಿಲ್ಲ ಎಂದಾದರೆ ಜನ ನಿಮ್ಮಿಂದ ಏನು ನಿರೀಕ್ಷಿಸಬಹುದು? ಇಲಾಖೆ ಇರುವುದಾದರೂ ಏಕೆ’ ಎಂದು ಪ್ರಶ್ನಿಸಿದರು.

ಆಹಾರ ಅದಾಲತ್‌ನಲ್ಲಿ ಹಿರಿಯ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಬದಲಿಗೆ ಪಾಲ್ಗೊಂಡಿದ್ದ ಸಹಾಯಕ ನಿರ್ದೇಶಕ (ಪ್ರಭಾರ) ಶಿವಸ್ವಾಮಿ ಸಭೆಗೆ ಬಂದಿದ್ದರು. ಜಿ.ಪಂ ಅಧ್ಯಕ್ಷರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಪ್ರಶ್ನೆಗಳಿಗೆ ಮಾಹಿತಿ ನೀಡಲು ಅವರು ತಡಬಡಾಯಿಸಿದರು.

ಆರಂಭದಲ್ಲಿ ತಿಂಗಳಿಗೆ 300 ಚೀಟಿ ಮಾಡಿಕೊಡಲಾಗುವುದು ಎಂದರು. ಸ್ವಲ್ಪ ಹೊತ್ತು ಬಿಟ್ಟು 2,000 ಚೀಟಿ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ, ಅರ್ಜಿ ಪರಿಶೀಲನೆಗೆ ಗ್ರಾಮ ಲೆಕ್ಕಿಗರು ಸಹಕರಿಸುತ್ತಿಲ್ಲ. ಉಪಚುನಾವಣೆ ಕಾರಣ ಎರಡು ತಿಂಗಳು ವಿತರಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

‘ಆಸ್ಪತ್ರೆಗೆ ಹೋಗಿ ಒಂದಿಬ್ಬರಿಗೆ ಚೀಟಿ ಮಾಡಿಸಿಕೊಟ್ಟ ಮಾತ್ರಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಗ್ರಾಮ ಲೆಕ್ಕಿಗರನ್ನು ಬಳಸಿಕೊಂಡು ಅರ್ಜಿ ಪರಿಶೀಲನೆ ಮಾಡಿ ಕೂಡಲೇ ಅರ್ಹರಿಗೆ ಪಡಿತರ ಚೀಟಿ ವಿತರಿಸಿ. ಕೆಲಸ ಮಾಡಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ಣಯ ಮಂಡಿಸಬೇಕಾಗುತ್ತದೆ’ ಎಂದು ಬಸವಣ್ಣ ಎಚ್ಚರಿಕೆ ನೀಡಿದರು.

ಆಗ ಅಧಿಕಾರಿಯು ತಿಂಗಳಿಗೆ 10ಸಾವಿರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಅಲ್ಲದೆ, ಬಿಪಿಎಲ್‌ ಚೀಟಿ ನೀಡಲು ₹ 1.25 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಆದಾಯ ಪ್ರಮಾಣ ಪತ್ರ, ಆಧಾರ್‌ ಸಂಖ್ಯೆ ಇದ್ದರೆ ಸಾಕು ಎಂದು ಹೇಳಿದರು.

₹ 58 ಕೋಟಿ ಬಾಕಿ: ಬೆಳೆ ನಷ್ಟಕ್ಕೆ ಒಳಗಾದ 80 ಸಾವಿರ ಫಲಾನುಭವಿಗಳಿಗೆ ಇದುವರೆಗೆ ₹ 33.7 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ಮಾಹಿತಿ ನೀಡಿದರು.

ಆಗ ಸಿಇಒ ಶಿವಶಂಕರ್‌, ‘ಇನ್ನುಳಿದ ₹ 58 ಕೋಟಿ ಪರಿಹಾರ ವಿತರಿಸಲು ಎಷ್ಟು ದಿನ ಬೇಕು? ಏಕೆ ತಡವಾಗುತ್ತಿದೆ’ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸೋಮಸುಂದರ್‌, ‘ಜಿಲ್ಲೆಯಲ್ಲಿ 1.24 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದ್ದು, ₹ 91 ಕೋಟಿ ಪರಿಹಾರ ಲಭಿಸಿದೆ. ಪರಿಹಾರ ತಂತ್ರಾಂಶದ ಮೂಲಕ ಮಾಹಿತಿ ಕ್ರೋಡೀಕರಿಸಿ ಬ್ಯಾಂಕ್‌ ಖಾತೆಗೆ ಪಾವತಿಸಲಾಗುತ್ತಿದೆ. ಅದಕ್ಕೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ ಮಾಡಲಾಗಿದೆ. ಕೆಲವರು ಇನ್ನೂ ಜೋಡಣೆ ಮಾಡಿಲ್ಲ. ಚೆಕ್‌ ಮೂಲಕವಾಗಿದ್ದರೆ ಬೇಗ ಪಾವತಿಸಬಹುದಿತ್ತು’ ಎಂದರು.

‘ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದವರೆಗೆ 309 ಮಿ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆ 118 ಮಿ.ಮೀ ಹೆಚ್ಚು. 400 ಟಿಲ್ಲರ್‌ ಹಾಗೂ 2500 ಟಾರ್ಪಲ್‌ ಒದಗಿಸುವ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

ಹೊಸ ಯೋಜನೆ ಇಲ್ಲ: ಜಿಲ್ಲೆಯಲ್ಲಿ ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಮುಂದುವರಿದ ಕಾಮಗಾರಿಗೆ ₹ 500 ಕೋಟಿ ಅಗತ್ಯವಿದೆ. ಈ ವರ್ಷಕ್ಕೆ ₹ 200 ಕೋಟಿ ಕೋರಲಾಗಿದೆ. ಕಳೆದ ವರ್ಷ ₹ 170 ಕೋಟಿ ಬಂದಿದೆ. ಯಾವುದೇ ಹೊಸ ಯೋಜನೆ ಹಾಕಿಕೊಂಡಿಲ್ಲ ಎಂದು ಯೋಜನಾಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ್‌, ಉಪಾಧ್ಯಕ್ಷ ನಟರಾಜ್ ಕೈಯಂಬಳ್ಳಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಇದ್ದರು.

ಮರು ಕೌನ್ಸೆಲಿಂಗ್‌ಗೆ ತಾಕೀತು

ಈಗಾಗಲೇ ಜಿಲ್ಲೆಯ ವಿವಿಧೆಡೆ ನಿಯುಕ್ತಿಗೊಂಡಿರುವ 11 ಶಿಕ್ಷಕರ ಮರು ಕೌನ್ಸೆಲಿಂಗ್‌ ಮಾಡುವಂತೆ ಸಿಇಒ ಪಿ.ಶಿವಶಂಕರ್‌  ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಈಚೆಗೆ ನಡೆಸಿದ ಕೌನ್ಸೆಲಿಂಗ್‌ ರದ್ದುಗೊಳಿಸಿ ಸರ್ಕಾರದ ಸುತ್ತೋಲೆ ಪ್ರಕಾರ ಮರು ಕೌನ್ಸೆಲಿಂಗ್‌ ನಡೆಸಬೇಕು. ಅದಕ್ಕೊಂದು ದಿನಾಂಕ ನಿಗದಿಪಡಿಸಿ’ ಎಂದರು.

ಸರ್ಕಾರದ ಸುತ್ತೋಲೆ, ಸೂಚನೆ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಮಂಡಿಸಲು ಸಭೆ ಕರೆಯಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಜಿ.ಪಂ ಅಧ್ಯಕ್ಷರಿಗೆ ಮನವಿ ಮಾಡಿದರು.

ಆರ್‌ಟಿಇ ನಿರಾಕರಣೆ, ಕ್ರಮಕ್ಕೆ ಸೂಚನೆ

‘ಕೆಲ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಸೀಟು ನಿರಾಕರಿಸಿರುವ ಮಾಹಿತಿ ಇದೆ. ಅಂಥ ಶಾಲೆಗಳ ಎನ್‌ಒಸಿ ಹಿಂಪಡೆದು ಮೊಕದ್ದಮೆ ದಾಖಲಿಸಿ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸೀಟು ಹಂಚಿಕೆ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರ ಪಾಟೀಲ್‌, ‘ಸದ್ಯ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಐದಾರು ಶಾಲೆಗಳು ಸೀಟು ನೀಡಲು ನಿರಾಕರಿಸಿದ್ದು ನೋಟಿಸ್‌ ನೀಡಲಾಗಿದೆ’ ಎಂದರು.

ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿ

ಕೆಲ ಗ್ರಾಮಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿದಾಗಿನಿಂದ ಸ್ವಚ್ಛ ಗೊಳಿಸಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ವಿರುದ್ಧ ಹರಿ ಹಾಯ್ದರು. ‘ಹೂಟಗಳ್ಳಿಯ ಕೆಎಚ್‌ಬಿ ಕಾಲೊನಿಯ ಟ್ಯಾಂಕ್‌ ಕೂಡ ಸ್ವಚ್ಛಗೊಳಿ ಸಿಲ್ಲ. ಈ ಭಾಗದ ಜನರು ಜ್ವರ ಹಾಗೂ ವಿವಿಧ ಕಾಯಿಲೆಗಳಿಂದ ಬಳಲು ತ್ತಿದ್ದಾರೆ’ ಎಂದರು.

ಡೆಂಗಿ ಜ್ವರ ಪತ್ತೆ ಹಚ್ಚಲು ತಾಲ್ಲೂಕಿಗೊಂದು ಪ್ರಯೋಗಾಲಯ ನಿರ್ಮಿಸುವಂತೆ ಆಗ್ರಹಿಸಿದರು. ಇದಕ್ಕುತ್ತರಿಸಿದ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು, ‘ಸೌಲಭ್ಯಗಳು ಇಲ್ಲದ ಕಾರಣ ಪ್ರಯೋಗಾಲಯ ತೆಗೆಯುವುದು ಅಸಾಧ್ಯ. ಜಿಲ್ಲಾ ಕೇಂದ್ರದಲ್ಲಿ ಒಂದು ಪ್ರಯೋಗಾಲಯವಿದೆ. ಇಲ್ಲಿಯೇ ಎಲಿಸಾ ಪರೀಕ್ಷೆ ನಡೆಸಬೇಕು. 120 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಯಾರೂ ಸಾವನ್ನಪ್ಪಿಲ್ಲ’ ಎಂದರು.

* * 

ಆಹಾರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಭೆಯಿಂದ ಸಭೆಗೆ ಯಾವುದೇ ಪ್ರಗತಿಯಾಗದಿದ್ದರೆ ಇಂಥ ಸಭೆ ನಡೆಸಿ ಏನು ಪ್ರಯೋಜನ? ಜನರಿಗೆ ಏನು ಉತ್ತರ ಹೇಳುವುದು?

ಬೀರಿಹುಂಡಿ ಬಸವಣ್ಣ

ಅಧ್ಯಕ್ಷ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry