ಐಡಿಬಿಐ ಸಾಲ: ಮಲ್ಯ ವಿರುದ್ಧ ಆರೋಪ ಪಟ್ಟಿ

7

ಐಡಿಬಿಐ ಸಾಲ: ಮಲ್ಯ ವಿರುದ್ಧ ಆರೋಪ ಪಟ್ಟಿ

Published:
Updated:
ಐಡಿಬಿಐ ಸಾಲ: ಮಲ್ಯ ವಿರುದ್ಧ ಆರೋಪ ಪಟ್ಟಿ

ಮುಂಬೈ:  ಐಡಿಬಿಐ ಬ್ಯಾಂಕ್‌ನಿಂದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಪಡೆದ ₹860.92 ಕೋಟಿ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಉದ್ಯಮಿ ವಿಜಯ್‌ ಮಲ್ಯ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ನಿಗ್ರಹ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ಆರೋಪಪಟ್ಟಿ ಸಲ್ಲಿಸಿದೆ.ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ನಿಯಮಗಳ ಅಡಿಯಲ್ಲಿ 57 ಪುಟಗಳ ಆರೋಪಪಟ್ಟಿಯನ್ನು ಇ.ಡಿ ಸಲ್ಲಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪಿಎಂಎಲ್‌ಎ ಅಡಿಯಲ್ಲಿ ಕಳೆದ ವರ್ಷ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿತ್ತು. ಇದುವರೆಗೆ ₹9,600 ಕೋಟಿ ಮೌಲ್ಯದ ಆಸ್ತಿಗಳನ್ನು ಅದು ಮುಟ್ಟುಗೋಲು ಹಾಕಿಕೊಂಡಿದೆ.

ನಿಯಮಗಳನ್ನು ಉಲ್ಲಂಘಿಸಿ ₹400 ಕೋಟಿಗಳಷ್ಟು ಹಣವನ್ನು  ಯಾವ ರೀತಿ ವಿದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಇ.ಡಿಯು ಆರೋಪಪಟ್ಟಿಯಲ್ಲಿ ವಿಸ್ತೃತವಾಗಿ ವಿವರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಅಕ್ರಮದಲ್ಲಿ ಕೆಎಫ್‌ಎ ಮತ್ತು ಐಡಿಬಿಐ ಬ್ಯಾಂಕ್‌ ಅಧಿಕಾರಿಗಳ ಹಾಗೂ ಕಾರ್ಯನಿರ್ವಾಹಕರ ಪಾತ್ರದ ಬಗ್ಗೆಯೂ ಅದು ಉಲ್ಲೇಖಿಸಿದೆ. ಇವರು ನೀಡಿರುವ ಹೇಳಿಕೆಗಳನ್ನೂ ಈ ಆರೋಪ ಪಟ್ಟಿ ಜೊತೆ ಲಗತ್ತಿಸಲಾಗಿದೆ.ಕೆಎಫ್‌ಎಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ, ಅದರ ಒಟ್ಟು ಮೌಲ್ಯದಲ್ಲಿ ಕುಸಿತವಾಗಿದ್ದರೂ ₹860.92 ಕೋಟಿ ಹಣವನ್ನು ಸಾಲವಾಗಿ ಪಡೆಯಲು ಕೆಎಫ್‌ಎ ಮತ್ತು ಐಡಿಬಿಐ ಅಧಿಕಾರಿಗಳು ಕ್ರಿಮಿನಲ್‌ ಒಳಸಂಚು ನಡೆಸಿದ್ದಾರೆ. ಇಷ್ಟು ಮೊತ್ತದ ಪೈಕಿ ₹807.82 ಕೋಟಿಯನ್ನು ಇನ್ನೂ ಪಾವತಿಸಿಲ್ಲ ಎಂದು ತನಿಖೆಯ ವೇಳೆ ಗೊತ್ತಾಗಿತ್ತು ಎಂದು ಇ.ಡಿ ಹೇಳುತ್ತಲೇ ಬಂದಿತ್ತು.

ಐಡಿಬಿಐ ನೀಡಿದ್ದ ₹860.92 ಕೋಟಿ ಸಾಲದಲ್ಲಿ ₹423 ಕೋಟಿಯನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದೂ ತನಿಖಾ ಸಂಸ್ಥೆ ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry