ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ: ಚೂರಿ ಇರಿತ ಪ್ರಕರಣ– ಸಹಜ ಸ್ಥಿತಿಗೆ

18 ಮಂದಿ ಬಂಧನ: ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್‌
Last Updated 15 ಜೂನ್ 2017, 6:59 IST
ಅಕ್ಷರ ಗಾತ್ರ

ಬಂಟ್ವಾಳ: ಮಂಗಳವಾರ ಸಂಜೆ ನಡೆದ ಘರ್ಷಣೆ, ಚೂರಿ ಇರಿತ ಹಾಗೂ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ತಾಲ್ಲೂಕಿನ ಕಲ್ಲಡ್ಕ ಪಟ್ಟಣ ಬುಧವಾರ ಸಹಜ ಸ್ಥಿತಿಗೆ  ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹತ್ತು ಪ್ರಕರಣಗಳನ್ನು ದಾಖಲಿಸಿದ್ದು, 18 ಮಂದಿಯನ್ನು ಬಂಧಿಸಲಾಗಿದೆ.

ಕಲ್ಲಡ್ಕ ಮೇಲಿನ ಪೇಟೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ಎಂದಿನಂತೆ ವ್ಯವಹಾರ ನಡೆಸಿದ್ದರೆ, ಕೆಳಗಿನ ಪೇಟೆಯಲ್ಲಿ ಕೆಲವೊಂದು ಅಂಗಡಿಗಳು ಮಾತ್ರ ತೆರೆದಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಾಗಿತ್ತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್‌ ಇದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಲ್ಲಿನ ಪೇಟೆಯಲ್ಲಿ ಸುತ್ತಲೂ ಪೊಲೀಸರು ಕಾವಲು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇಲ್ಲಿನ ಶ್ರೀರಾಮ ಮಂದಿರದಲ್ಲಿ ಬುಧವಾರ ನಡೆಯಬೇಕಿದ್ದ ಹನುಮನ ವಿಗ್ರಹ ಪ್ರತಿಷ್ಠಾಪನೆಯನ್ನು ಉದ್ವಿಗ್ನ ಪರಿಸ್ಥಿತಿ ಇರುವ ಕಾರಣದಿಂದ ಮುಂದೂಡಲಾಗಿದೆ.

ಮಂಗಳವಾರ ನಡೆದ ಗಲಭೆಯಲ್ಲಿ ರತ್ನಾಕರ ಶೆಟ್ಟಿ ಮತ್ತು ಖಲೀಲ್ ಒಬ್ಬರು ಮತ್ತೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದರು. ನಂತರ ನಡೆದ ಗುಂಪು ಘರ್ಷಣೆ ಹಾಗೂ ಕಲ್ಲು ತೂರಾಟದಲ್ಲಿ ಸ್ಥಳೀಯ ನಿವಾಸಿಗಳಾದ ರವಿ ಭಂಡಾರಿ, ಸಮದ್, ಸಿರಾಜುದ್ದೀನ್ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸರ ಮೇಲೂ ಕಲ್ಲು ತೂರಲಾಗಿತ್ತು. ಇದರಿಂದ ಸಬ್‌ ಇನ್‌ಸ್ಪೆಕ್ಟರ್‌ ರಕ್ಷಿತ್ ಗೌಡ ಮತ್ತು ವಿಟ್ಲ ಎಎಸ್‌ಐ ಧನಂಜಯ ಗಾಯಗೊಂಡಿದ್ದರು.

18 ಮಂದಿ ಬಂಧನ: ಚೂರಿ ಇರಿತ, ಘರ್ಷಣೆ ಮತ್ತು ಕಲ್ಲು ತೂರಾಟದ ಆರೋಪದ ಮೇಲೆ ಹತ್ತು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಮಂಗಳ ವಾರದ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಹಲವು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಹಲವರ ವಿಚಾರಣೆ ನಡೆಸಿದ ಪೊಲೀಸರು,18 ಆರೋಪಿಗಳನ್ನು ಬಂಧಿಸಿದ್ದಾರೆ.

‘ಹಲ್ಲೆ ಸಂದರ್ಭದಲ್ಲಿ ಗಾಯಾಳು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರಿಂದ ಆರಂಭದಲ್ಲಿ ಮೊಬೈಲ್‌ಗೆ ತಲವಾರು ತಾಗಿ ಬಳಿಕ ಕುತ್ತಿಗೆಗೆ ಗಾಯವಾಗಿದೆ. ಮೊಬೈಲ್ ಚೂರಾಗಿ ಚೆಲ್ಲಾಪಿಲ್ಲಿಯಾ  ಗಿದ್ದು, ಮಗ ರಸ್ತೆಯಲ್ಲಿ ರಕ್ತದ ಮಡು ವಿನಲ್ಲಿ ಕುಸಿದು ಬಿದ್ದಿದ್ದ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡ ಲಾಗಿದ್ದು, ಅಪಾಯದಿಂದ ಪಾರಾಗಿ ದ್ದಾನೆ’ ದಾಮೋದರ  ತಿಳಿಸಿದ್ದಾರೆ.

ಬಿಜೆಪಿ ನಿಯೋಗ ಭೇಟಿ: ಎಸ್ಪಿ ಅವರನ್ನು ಭೇಟಿ ಮಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದ ಬಿಜೆಪಿ ನಿಯೋಗ ಸೂಕ್ತ ತನಿಖೆಗೆ ಆಗ್ರಹಿಸಿತು.

ಮತ್ತೊಂದು ಪ್ರಕರಣ
ಸಮೀಪದ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ -ಕೊಣಾಜೆ ಸಂಪರ್ಕ ರಸ್ತೆಯಲ್ಲಿರುವ ಮರದ ಮಿಲ್ಲಿನ ಬಳಿ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಏಕಾಂಗಿಯಾಗಿ ನಡೆದು ಬರುತ್ತಿದ್ದ ಪುರಸಭೆ ಮಾಜಿ ಸದಸ್ಯ ದಾಮೋ ದರ ಅವರ ಮಗ ಪವನ್‌ರಾಜ್‌ ಕುತ್ತಿಗೆಗೆ ಬೈಕ್‌ನಲ್ಲಿ ಬಂದ ಅಪರಿ ಚಿತರಿಬ್ಬರು ಮಾರಕಾಸ್ತ್ರ ದಿಂದ ಕಡಿದು ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT