‘ಠಾಣೆಗೆ ಬಂದವರ ಅಳಲಿಗೆ ಸ್ಪಂದಿಸಿ’

7
ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

‘ಠಾಣೆಗೆ ಬಂದವರ ಅಳಲಿಗೆ ಸ್ಪಂದಿಸಿ’

Published:
Updated:
‘ಠಾಣೆಗೆ ಬಂದವರ ಅಳಲಿಗೆ ಸ್ಪಂದಿಸಿ’

ಬಾಗಲಕೋಟೆ: ‘ಪೊಲೀಸರಿಂದ ಸೌಜನ್ಯಯುತ ನಡವಳಿಕೆ ಹಾಗೂ ಕೊಟ್ಟ ದೂರಿಗೆ ಎಫ್‌ಐಆರ್ ಮಾಡುವುದನ್ನು ಮಾತ್ರ ಠಾಣೆಗೆ ಬರುವ ಸಾರ್ವಜನಿಕರು ಬಯಸುತ್ತಾರೆ. ಆದರೆ, ಆ ಕೆಲಸವೂ ಸರಿಯಾಗಿ ನಡೆಯುತ್ತಿಲ್ಲ’ ಎಂದು ಉತ್ತರ ವಲಯ ಐಜಿಪಿ ಡಾ.ಕೆ.ರಾಮಚಂದ್ರರಾವ್ ಬೇಸರ ವ್ಯಕ್ತಪಡಿಸಿದರು.ಇಲ್ಲಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಎಂಟನೇ ತಂಡದ ಸಶಸ್ತ್ರಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಡಿಎಆರ್‌ ಮೈದಾನದಲ್ಲಿ ನಡೆದ ನಿರ್ಗಮನ ಪಥ ಸಂಚಲನದ ಆತಿಥ್ಯ ವಹಿಸಿ ಅವರು ಮಾತನಾಡಿದರು.‘ಸಾರ್ವಜನಿಕರಿಗೆ ಸಾಂತ್ವನ ಹೇಳುವ ದೊಡ್ಡ ಜವಾಬ್ದಾರಿ ಪೊಲೀಸರು ಹೊಂದಿದ್ದಾರೆ. ಕೊಟ್ಟ ದೂರಿಗೆ ನಮ್ಮಿಂದ ಸರಿಯಾದ ಸ್ಪಂದನೆ ಮಾತ್ರ ಅವರು ನಿರೀಕ್ಷಿಸುತ್ತಾರೆ. ಬೇರೇನೂ ಕೇಳುವುದಿಲ್ಲ. ಹಾಗಾಗಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು’ ಕಿವಿಮಾತು ಹೇಳಿದರು.‘ವೇತನ, ಭತ್ಯೆ ಹಾಗೂ ಇತರೆ ಸವಲತ್ತುಗಳ ವಿಚಾರದಲ್ಲಿ ಕರ್ನಾಟಕದ ಪೊಲೀಸರು, ದೇಶದ ಇತರೆ ರಾಜ್ಯಗಳ ಪೊಲೀಸರಿಗಿಂತ ಹೆಚ್ಚು ಅದೃಷ್ಟಶಾಲಿಗಳಾಗಿದ್ದಾರೆ’ ಎಂದು ಹೇಳಿದ ಐಜಿಪಿ, ‘ಹೊಸದಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದೀರಿ. ತರಬೇತಿ ಅವಧಿ ಮುಗಿಸಿ ಪ್ರತಿಜ್ಞೆ ಕೂಡ ಸ್ವೀಕರಿಸಿದ್ದೀರಿ. ಅದರಂತೆ ದೇಶದ ಸಂವಿಧಾನಕ್ಕೆ ಬದ್ಧರಾಗಿ ಯಾವುದೇ ಅನ್ಯಾಯಕ್ಕೆ ಅವಕಾಶವಿಲ್ಲದಂತೆ ವೃತ್ತಿಬದುಕಿನಲ್ಲಿ ಮುನ್ನಡೆಯಿರಿ’ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಸಾರ್ವಜನಿಕರ ಸುರಕ್ಷೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡುವುದು ದೊಡ್ಡ ಕೆಲಸ. ಯಾವುದೇ ಪೂರ್ವ ಗ್ರಹವಿಲ್ಲದೇ ಸೇವೆ ಸಲ್ಲಿಸಿರಿ ಎಂದರು.ತಾತ್ಕಾಲಿಕ ತರಬೇತಿ ಶಾಲೆಯ ಉಪಪ್ರಾಚಾರ್ಯರೂ ಆದ ಡಿವೈಎಸ್‌ಪಿ ರವೀಂದ್ರ ಶಿರೂರ ವರದಿ ವಾಚನ ಮಾಡಿದರು. ಎಸ್‌ಪಿ ಸಿ.ಬಿ.ರಿಷ್ಯಂತ್ ಪ್ರತಿಜ್ಞಾವಿಧಿ ಬೋಧಿಸಿದರು. ಕಲಬುರ್ಗಿ, ಯಾದಗಿರಿ, ರಾಯಚೂರು, ಕಾರವಾರ, ಕೆಜಿಎಫ್, ತುಮಕೂರು, ಕೋಲಾರ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ 123 ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರ್ಣಗೊಳಿಸಿದರು.ನಿರ್ಗಮನ ಪಥಸಂಚಲನದ ಆರು ತಂಡಗಳ ನಾಯಕತ್ವವನ್ನು ಕ್ರಮವಾಗಿ ಕಲಬುರ್ಗಿಯ ಅಮರ್‌ಸಿಂಗ್ ಠಾಕೂರ್, ಭೀಮರಾಯ, ರವಿಚಂದ್ರ ನಿಂಗಣ್ಣ, ಸುಧೀರ ಗಜರೆ, ಬಂದೇನವಾಜ್ ರುಕ್ಮುದ್ದೀನ್ ಹಾಗೂ ರಾಯಚೂರಿನ ಶಿವರಾಜ ವಡಗೇರಿ ವಹಿಸಿದ್ದರು.

ಜಿಲ್ಲಾ ಸಶಸ್ತ್ರಮೀಸಲು ಪಡೆಯ ಇನ್‌ಸ್ಪೆಕ್ಟರ್ ಎ.ಎಸ್.ವಾರದ ನೇತೃತ್ವ ವಹಿಸಿದ್ದರು. ಬಾಗಲಕೋಟೆ ತೋಟಗಾರಿಕೆ ವಿ.ವಿ. ಕುಲಪತಿ ಡಾ.ಡಿ.ಎಲ್. ಮಹೇಶ್ವರ್, ಎಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಇದ್ದರು.

ಕಲಬುರ್ಗಿ ಜಿಲ್ಲೆ ಪ್ರಶಿಕ್ಷಣಾರ್ಥಿಗಳ  ಪಾರಮ್ಯ

ಬಾಗಲಕೋಟೆ:
ಎಂಟನೇ ತಂಡದ ತರಬೇತಿ ಅವಧಿಯ ಚಟುವಟಿಕೆಗಳಲ್ಲಿ ಕಲಬುರ್ಗಿ ಜಿಲ್ಲೆಯ ಪ್ರಶಿಕ್ಷಣಾರ್ಥಿಗಳು ಪಾರಮ್ಯ ಮೆರೆದರು. ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಅದೇ ಜಿಲ್ಲೆಯ ಮಲ್ಲಯ್ಯ ಸಿದ್ದಪ್ಪ ಆಯ್ಕೆಯಾದರು. ಡಿಜಿ–ಐಜಿಪಿ ಅವರ ಪುರಸ್ಕಾರ ಅದೇ ಜಿಲ್ಲೆಯ ಸುಧೀರ ಗಜರೆ ಅವರ ಪಾಲಾಯಿತು.

ಒಳಾಂಗಣ ಆಟಗಳಲ್ಲಿ ಕಲಬುರಗಿ ಜಿಲ್ಲೆಯ ಕಿಶನರಾವ್‌ ಬಾಬು–ಪ್ರಥಮ, ಮಲ್ಲಯ್ಯ ಸಿದ್ದಪ್ಪ–ದ್ವಿತೀಯ ಸ್ಥಾನ ಹಾಗೂ ಅಂಬರೀಶ ಶಿವಪುತ್ರಪ್ಪ ತೃತೀಯ ಸ್ಥಾನ ಪಡೆದರು.ಹೊರಾಂಗಣ ಕ್ರೀಡೆಗಳಲ್ಲಿ ಕಲಬುರ್ಗಿ ಜಿಲ್ಲೆಯ ಭೀಮರಾಯ ಅಂಬ್ಲಪ್ಪ, ಶರಬಣ್ಣ ಪರಮಣ್ಣ, ಸುರೇಶಗೌಡ ಎಸ್.ಹಿರೇಗೌಡ್ರ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಫೈರಿಂಗ್‌ನಲ್ಲಿ ರಾಯಚೂರಿನ ಸುರೇಶ ಗುಜ್ಜಲ ಪ್ರಥಮ ಸ್ಥಾನ ಪಡೆದರೆ ಕಲಬುರ್ಗಿ ಜಿಲ್ಲೆಯ ಮಹೇಶ್ವರಗೌಡ ಓಬಲಾಪುರ, ಉಮೇಶ ಬಾಬುರಾವ್ ಎಕರಕಿ ದ್ವಿತೀಯ ಸ್ಥಾನ ಹಂಚಿಕೊಂಡರು. ಸಿದ್ಧಾರೂಢ ರಾಜಶೇಖರ ಮೂರನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry