‘ಪಲ್ಲಕ್ಕಿ’ ನಿರ್ದೇಶನದಲ್ಲಿ ಗೋಹತ್ಯೆಯ ಕಥೆ

7

‘ಪಲ್ಲಕ್ಕಿ’ ನಿರ್ದೇಶನದಲ್ಲಿ ಗೋಹತ್ಯೆಯ ಕಥೆ

Published:
Updated:
‘ಪಲ್ಲಕ್ಕಿ’ ನಿರ್ದೇಶನದಲ್ಲಿ ಗೋಹತ್ಯೆಯ ಕಥೆ

ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ಗೋಹತ್ಯೆಗೆ ಸಂಬಂಧಿಸಿದ ಕಥಾವಸ್ತುವೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ನಮ್ಮ ಕಾಲದ ಬಹುಚರ್ಚಿತ ವಿಚಾರ ಗೋಹತ್ಯೆ ಆಗಿರುವ ಕಾರಣ, ಸಿನಿಮಾ ಬಿಡುಗಡೆ ಆದ ನಂತರ ವಿವಾದಗಳಿಂದ ತಪ್ಪಿಸಿಕೊಳ್ಳಲು ಒಂದೆರಡು ತಿಂಗಳವರೆಗೆ ‘ಊರು ಬಿಡುವಂತೆ ಸ್ನೇಹಿತರು ಹೇಳಿದ್ದಾರೆ’ ಎಂದೂ ಪಲ್ಲಕ್ಕಿ ಹೇಳಿಕೊಂಡಿದ್ದಾರೆ!

ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಈ ಸಿನಿಮಾ ಆಗಸ್ಟ್‌ 15ರ ನಂತರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸಿನಿಮಾದ ಕಥಾ ನಾಯಕನ ಹೆಸರು ನಜೀರ್ ಸಾಬ್. ಗೋಹತ್ಯೆ ಈತನ ಕಾಯಕ. ಆದರೆ, ಗೋವಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ವಾಸಿಸುತ್ತಾರೆ ಎಂಬುದನ್ನು ಈತ ಒಂದು ದಿನ ಅರಿಯುತ್ತಾನೆ. ಅರಿತು, ಗೋಹತ್ಯೆಯ ಕಾಯಕವನ್ನು ತ್ಯಜಿಸುತ್ತಾನೆ. ಅದಾದ ನಂತರ ಸಮಸ್ಯೆಗೆ ಸಿಲುಕುತ್ತಾನೆ. ಸಮಸ್ಯೆ ಏನು, ಆತ ಸಮಸ್ಯೆಗೆ ಸಿಲುಕುವುದು ಏತಕ್ಕೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ಪಲ್ಲಕ್ಕಿ ಅವರು.

‘ಕೂಡಲೇ ಸಂಗಮದೇವಾ’ ಎನ್ನುವ ಅಡಿ ಶೀರ್ಷಿಕೆ ಕೂಡ ವಿಭಿನ್ನವಾಗಿದೆ. ಇದರ ಅರ್ಥ ಏನು, ಈ ರೀತಿಯಲ್ಲಿ ಬಳಸಿರುವ ಉದ್ದೇಶ ಏನು ಎಂದು ಪ್ರಶ್ನಿಸಿದಾಗ ಪಲ್ಲಕ್ಕಿ ಅವರು ‘ಅದನ್ನು ತಿಳಿಯಲು ಸಿನಿಮಾ ವೀಕ್ಷಿಸಬೇಕು’ ಎಂದು ಉತ್ತರಿಸಿದರು. ಬಹುತೇಕ ಪ್ರಶ್ನೆಗಳಿಗೆ ಅವರ ಉತ್ತರ ‘ಸಿನಿಮಾ ನೋಡಿ’ ಎಂಬುದೇ ಆಗಿತ್ತು! ಹುಕ್ಕೇರಿ, ಚಿಕ್ಕಜಾಜೂರು, ಕಡೂರು ಸೇರಿದಂತೆ ಹಲವೆಡೆ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಕೂಡಲೇ ಸಂಗಮದೇವಾ ಎಂದರೆ ಎಲ್ಲರೂ ಒಟ್ಟಾಗುವ ತುರ್ತು ಅಗತ್ಯ ಇದೆ ಎಂಬ ಅರ್ಥವಿರಬಹುದು’ ಎನ್ನುವ ವ್ಯಾಖ್ಯಾನ ನೀಡಿದರು. ‘ಗೋಮಾತೆಯನ್ನು ಧರ್ಮಕ್ಕೆ ಸೀಮಿತಗೊಳಿಸುವುದು ಹಾಸ್ಯಾಸ್ಪದ ಆಗುತ್ತದೆ. ಅದಕ್ಕೆ ವೈಜ್ಞಾನಿಕ ನೆಲೆಯೂ ಇದೆ’ ಎನ್ನುವ ಮೂಲಕ ಸಿನಿಮಾದ ಒಂದೆರಡು ಎಳೆಗಳನ್ನೂ ಬಿಟ್ಟುಕೊಟ್ಟರು. ಅಂದಹಾಗೆ, ಕಥೆಗೆ ಅಗತ್ಯವಿರುವ ಕೆಲವು ಮಾಹಿತಿಗಳನ್ನು ಪಲ್ಲಕ್ಕಿ ಅವರು ಸ್ವಾಮೀಜಿಯವರಿಂದ ಪಡೆದಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry