ಕೊನೆಯಲ್ಲಿ ಜೆಡಿಎಸ್‌ ಕಡೆ ಕೈಚಾಚಿದ್ದರಿಂದ ಮುಖಭಂಗ

7

ಕೊನೆಯಲ್ಲಿ ಜೆಡಿಎಸ್‌ ಕಡೆ ಕೈಚಾಚಿದ್ದರಿಂದ ಮುಖಭಂಗ

Published:
Updated:
ಕೊನೆಯಲ್ಲಿ ಜೆಡಿಎಸ್‌ ಕಡೆ ಕೈಚಾಚಿದ್ದರಿಂದ ಮುಖಭಂಗ

ಬೆಂಗಳೂರು: ‘ಉಪ ಚುನಾವಣೆ ಗೆಲುವಿನ ಉಮೇದಿನಲ್ಲಿ ಬೀಗುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ವಿಧಾನಪರಿಷತ್ತಿನ ಸಭಾಪತಿ ಚುನಾವಣೆಯಲ್ಲಿ ಸೋಲಿನ ರುಚಿ ಉಣಿಸುವ ಮೂಲಕ ಜೆಡಿಎಸ್‌ ನಾಯಕರು ತಮ್ಮ ಕೈಚಳಕ ತೋರಿಸಿದ್ದಾರೆ’ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.ವಿಧಾನಪರಿಷತ್ತಿನಲ್ಲಿ ಸ್ವಂತ ಬಲದ 33, ಪಕ್ಷೇತರರಾದ 5 ಸದಸ್ಯರ ಬೆಂಬಲ ಪಡೆದು ಸಭಾಪತಿ ಸ್ಥಾನದಿಂದ ಡಿ.ಎಚ್. ಶಂಕರಮೂರ್ತಿ ಅವರನ್ನು ಕೆಳಗಿಳಿಸುವ ತಂತ್ರವನ್ನು ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯರು ಹೆಣೆದಿದ್ದರು. ಜೆಡಿಎಸ್‌ನ 13 ಸದಸ್ಯರ ಬೆಂಬಲ ಲೆಕ್ಕಕ್ಕೇ ಇಲ್ಲ ಎಂಬಂತೆ ನಿರ್ಲಕ್ಷ್ಯ ತೋರಿದ್ದರು.ಪಕ್ಷೇತರರಾದ ಬಸನಗೌಡ ಪಾಟೀಲ ಯತ್ನಾಳ, ಡಿ.ಯು. ಮಲ್ಲಿಕಾರ್ಜುನ ಅವರ ಬೆಂಬಲ ಪಡೆಯುವ ಯತ್ನವನ್ನೂ ನಡೆಸಿದ್ದರು. ಬಿಜೆಪಿ ಮೂಲದವರಾದ ಇವರಿಬ್ಬರೂ ಕಡೆಗಳಿಗೆಯಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟರು.ಮುಖಭಂಗ ಖಚಿತ ಎಂದು ಗೊತ್ತಾಗುತ್ತಿದ್ದಂತೆ ವಿ.ಎಸ್‌. ಉಗ್ರಪ್ಪ, ಐವನ್‌ ಡಿಸೋಜ, ಎಚ್.ಎಂ. ರೇವಣ್ಣ ಅವರು ಜೆಡಿಎಸ್‌ ನಾಯಕರನ್ನು ಸಂಪರ್ಕಿಸಿ ಬೆಂಬಲ ಕೋರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌  ಅವರಿಗೆ ದುಂಬಾಲು ಬಿದ್ದರು.ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಸಿದ್ದರಾಮಯ್ಯ  ಬುಧವಾರ ಮಧ್ಯಾಹ್ನ  ಕರೆ ಮಾಡಿದಾಗಲೇ ಜೆಡಿಎಸ್‌ ಬೆಂಬಲ ಸಿಗುವುದಿಲ್ಲ ಎಂಬುದು ಖಾತ್ರಿಯಾಯಿತು.‘ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲೇ ಚರ್ಚಿಸಿದ್ದರೆ ಆಲೋಚನೆ ಮಾಡಬಹುದಿತ್ತು. ಶಂಕರಮೂರ್ತಿ ಬೆಂಬಲಿಸುವಂತೆ ಪರಿಷತ್ತಿನ ಸದಸ್ಯರಿಗೆ ಸೂಚಿಸಿದ ಮೇಲೆ ಕರೆ ಮಾಡಿದರೆ ಹೇಗೆ’ ಎಂದು ಗೌಡರು ಪ್ರಶ್ನಿಸಿದರು. ‘ಬೆಂಬಲ ನೀಡಲು ಸಾಧ್ಯವಿಲ್ಲ’ ಎಂದೂ ಅವರು  ಕೈಚೆಲ್ಲಿದ್ದಾರೆ.ಈ ಬೆಳವಣಿಗೆಗಳ ಮಧ್ಯೆಯೇ, ವಿಧಾನಸಭಾಧ್ಯಕ್ಷರ ಕೊಠಡಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್‌, ‘ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಿ. ಉಪಸಭಾಪತಿಯಾಗಿ ನಿಮ್ಮವರೇ ಮುಂದುವರಿಯಲಿ’ ಎಂದು ಹೇಳಿದರು. ಬದಲಾದ ನಿಲುವು:  ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತ ಎಂದು ಸ್ಪಷ್ಟವಾಗುತ್ತಿದ್ದಂತೆ ಪರಿಷತ್ತಿನ ಸಭಾನಾಯಕರೂ ಆಗಿರುವ ಪರಮೇಶ್ವರ್‌ ರಾಗ ಬದಲಿಸಿದರು. ಗುರುವಾರ ಬೆಳಿಗ್ಗೆ ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ ಪರಮೇಶ್ವರ್, ‘ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವರನ್ನು ಆಯ್ಕೆ ಮಾಡಲು ಬೆಂಬಲ ನೀಡುತ್ತೇವೆ. ಉಪಸಭಾಪತಿ ಸ್ಥಾನ ಬಿಟ್ಟುಕೊಡಿ’ ಎಂಬ ಹೊಸ ಬೇಡಿಕೆ ಇಟ್ಟರು. ಇದಕ್ಕೆ ಜೆಡಿಎಸ್‌ ಸ್ಪಂದಿಸಲಿಲ್ಲ.‘ಹಿನ್ನಡೆಯಾಗಿಲ್ಲ’

‘ಅವಿಶ್ವಾಸ ನಿರ್ಣಯದ ಸೋಲು ಪಕ್ಷಕ್ಕಾಗಿರುವ ಹಿನ್ನಡೆಯಲ್ಲ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಜನತಾದಳ ಜಾತ್ಯತೀತ ಪಕ್ಷದವರು ನಮ್ಮ ಜೊತೆ ಬರಬಹುದು ಅಂದುಕೊಂಡಿದ್ದೆವು. ಕೋಮುವಾದಿಗಳೊಂದಿಗೆ ಕೈಜೋಡಿಸಿದರು’ ಎಂದರು.ಸಿದ್ದರಾಮಯ್ಯ ಕೆಂಡಾಮಂಡಲ

ದೇವೇಗೌಡರ ಜತೆ ಮಾತನಾಡಿದ ಬಳಿಕ ಉಗ್ರಪ್ಪ ಮತ್ತು ಐವನ್‌ ಡಿಸೋಜ ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಂಡ ಇಬ್ಬರು ಸದಸ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.

‘ಜೆಡಿಎಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕಾಗಿತ್ತು. ತಂತ್ರಗಾರಿಕೆ ಇಲ್ಲದೆ ರಾಜಕಾರಣ ಮಾಡಿದರೆ ಸೋಲಾಗುತ್ತದೆ ಎಂಬುದು ಗೊತ್ತಾಗುವುದಿಲ್ಲವೇ. ಆಡಳಿತ ಪಕ್ಷವಾಗಿ ಸೋಲು ಅನುಭವಿಸಿದರೆ ಪಕ್ಷದ ರಾಷ್ಟ್ರಿಯ ನಾಯಕರಿಗೆ ಏನೆಂದು ಉತ್ತರ ಕೊಡಲಿ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry