ಬಲ್ಬ್ ಕೊರತೆಗೆ ಜನರ ಅಸಮಾಧಾನ

7

ಬಲ್ಬ್ ಕೊರತೆಗೆ ಜನರ ಅಸಮಾಧಾನ

Published:
Updated:
ಬಲ್ಬ್ ಕೊರತೆಗೆ ಜನರ ಅಸಮಾಧಾನ

ನರಸಿಂಹರಾಜಪುರ: ಇಂಧನ ಉಳಿಸುವ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ  ಎಲ್‌ಇಡಿ ಬಲ್ಬ್ ವಿತರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ ‘ಹೊಸ ಬೆಳಕು’  ಪ್ರಸ್ತುತ  ಬೆಳಕನ್ನು ನೀಡಲು ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ರಾಜ್ಯ ಸರ್ಕಾರ ವಿದ್ಯುತ್ ಉಳಿಸುವ ಮಹತ್ವಾಕಾಂಕ್ಷೆಯಿಂದ ಎನರ್ಜಿ ಎಫಿಷಿಯನ್ಸಿ ಸರ್ವಿಸ್ ಲಿಮಿಟೆಡ್‌ನ ಸಹಯೋಗದೊಂದಿಗೆ ‘ಹೊಸ ಬೆಳಕು’ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆ ಪ್ರಾರಂಭ ವಾದಾಗ ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ದೀಪಗಳನ್ನು ಅಳವಡಿಸಿಕೊಂಡವರು ಅದನ್ನು ಕೊಟ್ಟು ಎಲ್‌ಇಡಿ ಬಲ್ಬ್ ಅನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು.

ನಂತರದ ದಿನಗಳಲ್ಲಿ ಈ ಯೋಜನೆಯ ಅನ್ವಯ ಸಂಬಂಧಿಸಿದ ಕಂಪೆನಿಗೆ ಜನರಿಗೆ ಬಲ್ಬ್‌ಗಳನ್ನು ಮಾರಾಟ ಮಾಡಲು ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಒಂದು ಬಲ್ಬ್‌ಗೆ ₹60 ನಿಗದಿ ಪಡಿಸಲಾಗಿತ್ತು. ಒಂದು ವೇಳೆ ಬಲ್ಬ್ ಹಾಳಾದರೆ ಅದರ ರ್‍್ಯಾಪರ್ ಸಹಿತ ಹಿಂದಿರುಗಿಸಿದರೆ ಹೊಸ ಬಲ್ಬ್ ಕೊಡಲಾಗುತ್ತಿತ್ತು.

ವಿದ್ಯುತ್ ಉಳಿತಾಯವಾಗುವ, ಅಲ್ಲದೆ ಸಾಕಷ್ಟು ಪ್ರಕರ ಬೆಳಕನ್ನು ನೀಡುತ್ತಿದ್ದುದರಿಂದ ಬಹುತೇಕ ಜನರು ಇತರೆ ವಿದ್ಯುತ್ ದೀಪಗಳನ್ನು ಬದಲಿಸಿ ಹೊಸ ಬೆಳಕು ಯೋಜನೆಯಡಿಯ ಎಲ್‌ಇಡಿ ಬಲ್ಬ್ ಅಳವಡಿಸಿದ್ದರು. ಇದರಿಂದ ವಿದ್ಯುತ್ ಉಳಿತಾಯದ ಲಾಭವು ಲಭಿಸಿತ್ತು.

ಆದರೆ, ಕಳೆದ ಹಲವಾರು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೊಸ ಬೆಳಕು ಯೋಜನೆ ಸ್ಥಗಿತಗೊಂಡಿರುವುದರಿಂದ ಈಗಾಗಲೇ ಖರೀದಿಸಿರುವ ಬಲ್ಬ್‌ಗಳು ಹಾಳಾಗಿದ್ದರೆ ಅದನ್ನು ಬದಲಾಯಿಸಲು ಅಥವಾ ಹೊಸ ಬಲ್ಬ್‌ಗಳನ್ನು ಕೊಳ್ಳಲು ಸಾಧ್ಯವಾಗದೆ ಜನ ಸಾಮಾನ್ಯರು ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ ಮೆಸ್ಕಾಂ ಇಲಾಖೆಯ ತಾಂತ್ರಿಕ ವಿಭಾಗದ ಹಿರಿಯ ಅಧಿಕಾರಿ ವಿನೋದ್ ಹಾವಣಗಿ ಅವರನ್ನು ಸಂಪರ್ಕಿಸಿದಾಗ, ‘ಎಲ್‌ಇಡಿ ಬಲ್ಬ್ ಮಾರಾಟ ಮಾಡಲು ಗುತ್ತಿಗೆ ಪಡೆದ ಕಂಪೆನಿಗೆ ಇಲಾಖೆಯ ಆವರಣದಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಯಾವ ಕಾರಣಕ್ಕಾಗಿ ಇದರ ಮಾರಾಟ ಸ್ಥಗಿತಗೊಂಡಿದೆ ಎಂಬ ಬಗ್ಗೆ  ಮಾಹಿತಿ ಲಭ್ಯವಿಲ್ಲ’ ಎಂದು ಹೇಳಿದರು.

ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಯೋಜನೆ ಜಾರಿಗೆ ತಂದಿತ್ತು. ಬಲ್ಬ್ ಪಡೆಯುವಾಗ ಹಾಳಾದರೆ ಅದನ್ನು ಹಿಂಪಡೆದು ಹೊಸ ಬಲ್ಬ್ ಕೊಡುವುದಾಗಿ ತಿಳಿಸಲಾಗಿತ್ತು. ಇದು ಸ್ಥಗಿತಗೊಂಡಿರುವುದರಿಂದ ಯೋಜನೆ ಪ್ರಯೋಜನ ಲಭಿಸದಂತಾಗಿದೆ. ಸರ್ಕಾರ ಕೂಡಲೇ ಈ ಯೋಜನೆ ಪುನಃ ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ದೂರವಾಣಿ ಮೂಲಕ ಎನರ್ಜಿ ಎಫಿಸೆನ್‌ಸಿ ಸರ್ವಿಸ್ ಲಿಮಿಟೆಡ್ ಎಂಜಿನಿಯರ್ (ಟೆಕ್ನಿಕಲ್) ವಿಭಾಗದ  ಬಿ.ವಿ.ಗೋಪಿನಾಥ್ ಅವರನ್ನು ಸಂಪರ್ಕಿಸಿದಾಗ, ‘ಎಲ್‌ಇಡಿ ಬಲ್ಬ್‌ಗಳ ಸಂಗ್ರಹ ಕೊರತೆ ಇದ್ದ ಕಾರಣ ಇದನ್ನು ವಿತರಿಸುವ ಕಾರ್ಯ ಸ್ಥಗಿತ ಗೊಂಡಿದೆ. ಇನ್ನು ಕೆಲವೇ ದಿನದಲ್ಲಿ ವಿತರಣಾ ಕಾರ್ಯ ಆರಂಭಿಸುತ್ತೇವೆ’ ಎಂದು ಹೇಳಿದರು.

ಸರ್ಕಾರ ಇಂಧನ ಉಳಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಯೋಜನೆ ನಿರಂತರವಾಗಿ ಮುಂದುವರೆ ಸಿಕೊಂಡು ಹೋಗುವ ನಿಟ್ಟಿನಲ್ಲಿ ಗಮನಹರಿಸಬೇಕು. ಜನಸಾಮಾನ್ಯರಿಗೆ ಯೋಜನೆಯ ಉಪಯೋಗ ಲಭಿಸು ವಂತೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

* * 

ಶೀಘ್ರದಲ್ಲೆ ಹೊಸಬೆಳಕು ಯೋಜನೆಯಲ್ಲಿ ಬಲ್ಬ್, ಟೂಬ್ ಲೈಟ್ ಮಾರಾಟ ಪುನ: ಆರಂಭಿಸ ಲಾಗುವುದು. ಹಾಳಾದ ಬಲ್ಬ್‌ಗಳನ್ನು ಬದಲಿಸಿ ಕೊಡಲಾಗುವುದು

ಬಿ.ವಿ.ಗೋಪಿನಾಥ್

ಎನರ್‌ಜಿ ಎಫಿಸೆನ್‌ಸಿ ಸರ್ವಿಸ್ ಲಿಮಿಟೆಡ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry