ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ಮಹಾನಗರವಾಗಿ ಬೆಳೆದಿರುವ ಬೆಂಗಳೂರಿನ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸದ್ದಿಲ್ಲದೆ ದುಡಿದ ಮಹಿಳೆಯರನ್ನು ಕುರಿತ ಆಕರ ಗ್ರಂಥ ‘ಬೆಂಗಳೂರು ಅಭಿವೃದ್ಧಿಗೆ ಮಹಿಳೆಯರ ಕೊಡುಗೆ’.

ಅಂತಹ ಸಾಧನೆಗಳ ಬಗ್ಗೆ ಆಯಾ ಕ್ಷೇತ್ರಗಳಲ್ಲಿ ಪರಿಣತರಾದ ಮಹಿಳೆಯರ ಮೂಲಕವೇ ದಾಖಲಿಸಿರುವುದು ಈ ಗ್ರಂಥದ ಹೆಚ್ಚುಗಾರಿಕೆ. ಜಾನಪದ ವಿದ್ವಾಂಸರೂ, ಮಹಿಳಾ ಅಧ್ಯಯನ, ಅನುವಾದ ಹಾಗೂ ಸೃಜನಶೀಲ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಅಕ್ಷರ ಕೃಷಿ ಮಾಡಿರುವ ಡಾ.ಕೆ.ಆರ್. ಸಂಧ್ಯಾರೆಡ್ಡಿ ಅವರ ಸಂಪಾದಕತ್ವದಲ್ಲಿ ಗ್ರಂಥ ಪ್ರಕಟವಾಗಿದೆ.

ಜೀವಪರ ಮತ್ತು ಜನಪರ ದೃಷ್ಟಿಕೋನವನ್ನಿಟ್ಟುಕೊಂಡು ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಮಹಿಳೆಯರು ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಅಗತ್ಯ ಈಗ ಖಂಡಿತಾ ಇದೆ.  ರಾಜಕೀಯ, ವೈದ್ಯಕೀಯ, ವಿಜ್ಞಾನ, ಸಾಹಿತ್ಯ, ಪ್ರವಾಸ ಸಾಹಿತ್ಯ, ಆಕಾಶವಾಣಿ, ಮುದ್ರಣ ಮಾಧ್ಯಮ, ಸುಗಮ ಸಂಗೀತ ಕ್ಷೇತ್ರದ ಕಲಾವಿದೆಯರು, ಜಾನಪದ, ಗಮಕ, ವೃತ್ತಿರಂಗ, ಕಲೆ, ಮಹಿಳಾ ಅಭಿವ್ಯಕ್ತಿ, ಚಿತ್ರಕಲೆ, ಕನ್ನಡ ಚಲನಚಿತ್ರ, ಕಾನೂನು, ಸಹಕಾರ, ಕ್ರೀಡೆ, ಕಾರ್ಮಿಕ ಜಗತ್ತು, ಮಹಿಳಾ ಚಳವಳಿ, ಜೈನ ಪರಂಪರೆ, ಸಮಕಾಲೀನ ಹೋರಾಟ ಹೀಗೆ ಅಭಿವೃದ್ಧಿ ಮತ್ತು ಸಾಮಾಜಿಕ ಆಯಾಮದ ಕೊಡುಗೆಗಳನ್ನು ಹೆಕ್ಕಿ ಸಾಧಕರಿಗೆ ಆಭಾರ ಸಲ್ಲಿಸಲಾಗಿದೆ.

1927ರಲ್ಲಿ ಮಲ್ಲೇಶ್ವರ ಬಡಾವಣೆಯಲ್ಲಿ ಮಹಿಳೆಯರೇ ಸ್ಥಾಪಿಸಿದ ‘ಮಲ್ಲೇಶ್ವರಂ ಲೇಡೀಸ್‌ ಅಸೋಸಿಯೇಷನ್‌’ (ಎಂ.ಎಲ್.ಎ) ಕುರಿತ ಪರಿಚಯದೊಂದಿಗೆ ಲೇಖನ ಸರಣಿ ಶುರುವಾಗುತ್ತದೆ. ಬಹುಶಃ ಇಂದು ಆ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ, ಸಂಸ್ಥಾಪಕರ ಕುರಿತು ಮಾಹಿತಿ ಇರಲಾರದೇನೊ.
1840ರಲ್ಲಿ ಸ್ಯುಯೆಲ್‌ ಎಂಬ ಮಿಷನರಿಯೊಬ್ಬರ ಪತ್ನಿ ಸ್ಥಾಪಿಸಿದ ಕನ್ನಡ ಶಾಲೆ (ಈಗಿನ ಮಿತ್ರಾಲಯ), ಬಿಷಪ್‌ ಕಾಟನ್‌ ಬಾಲಕಿಯರ ಶಾಲೆ, ಮೌಂಟ್‌ ಕಾರ್ಮೆಲ್‌, ಜ್ಯೋತಿ ನಿವಾಸ್‌ ಮುಂತಾದುವು ಈಗ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತವೆ. ಆದರೆ, ಶತಮಾನಗಳ ಹಿಂದೆಯೇ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಮನಗಂಡು ಆರಂಭಿಸಿದ ದೂರದರ್ಶಿ ಯೋಜನೆಗಳಿವು. ಇಂತಹ ಹತ್ತಾರು ಶಾಲೆಗಳ ಮಾಹಿತಿ ‘ಶಿಕ್ಷಣ ಸಂಸ್ಥೆಗಳು–ಮಹಿಳೆಯರ ಕೊಡುಗೆ’ ಲೇಖನದಲ್ಲಿದೆ.

ಸ್ವಾತಂತ್ರ್ಯೋತ್ತರ ಕಾಲಘಟ್ಟದಿಂದ ಹಿಡಿದು 80ರ ದಶಕದವರೆಗಿನ ಮಾಹಿತಿಯ ಮೆಲುಕು ಮಹತ್ವದ್ದೆನಿಸುತ್ತದೆ. ನಂತರದ ಸಂಗತಿಗಳು ಮಹತ್ವದ್ದೇ ಆಗಿದ್ದರೂ ಸಾಧಕರು ನಮ್ಮ ನಡುವೆಯೇ ಇರುವ ಹಾಗೂ ಅವರ ಬಗ್ಗೆ ಆಗಿಂದಾಗ್ಯೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೂ ಈ ದಾಖಲಾತಿ ಶ್ಲಾಘನೀಯವಾಗಿದೆ. ಇದು, ಸಂಶೋಧನೆಗೆ, ಅಧ್ಯಯನಕ್ಕೆ ಪೂರಕವಾದ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT