ರಸ್ತೆ ಸುವ್ಯವಸ್ಥೆಗೆ ‘ಟಾಸ್ಕ್‌ಫೋರ್ಸ್’ ರಚನೆ

7

ರಸ್ತೆ ಸುವ್ಯವಸ್ಥೆಗೆ ‘ಟಾಸ್ಕ್‌ಫೋರ್ಸ್’ ರಚನೆ

Published:
Updated:
ರಸ್ತೆ ಸುವ್ಯವಸ್ಥೆಗೆ ‘ಟಾಸ್ಕ್‌ಫೋರ್ಸ್’ ರಚನೆ

ಶಿವಮೊಗ್ಗ: ಮಳೆಗಾಲದಲ್ಲೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿ ಇರುವಂತೆ ನಿಗಾವಹಿಸಲು ಲೋಕೋಪಯೋಗಿ ಇಲಾಖೆ ‘ಟಾಸ್ಕ್‌ಫೋರ್ಸ್‌’ ರಚಿಸಿದೆ. ಈ ಟಾಸ್ಕ್‌ಫೋರ್ಸ್‌ಗಳು ದಿನದ 24 ಗಂಟೆಯೂ  ಕಾರ್ಯನಿರ್ವಹಿಸಲಿದೆ.

ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿದ್ದು, ಅಧಿಕಾರಿಗಳ ಜತೆಗೆ ಒಂದು ಟಿಪ್ಪರ್‌, ಅಗತ್ಯ ಸಲಕರಣೆ, ಕಾರ್ಮಿಕರನ್ನೂ ಒಳಗೊಂಡಿ ರುತ್ತದೆ ಎಂದು ಲೋಕೋಪಯೋಗಿ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಳೆಗಾಲ ಆರಂಭವಾಗುತ್ತಿದಂತೆ ಭಾರಿ ಮಳೆ, ಗಾಳಿಯ ಪರಿಣಾಮ ಮರಗಳು ರಸ್ತೆಗೆ ಉರುಳಿ ಬೀಳುವುದು, ರಸ್ತೆಗಳಲ್ಲಿ ಗುಂಡಿ ಬೀಳುವುದು, ರಸ್ತೆ ಕೊಚ್ಚಿ ಹೋಗುವುದು ಸಾಮಾನ್ಯ ಸಂಗತಿ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇಂತಹ ಅವಘಡಗಳನ್ನು ಅದಕ್ಕಾಗಿ ನಿಯೋಜಿಸಿದ ತಂಡಗಳು ತಕ್ಷಣವೇ ನಿವಾರಿಸುವ ಮೂಲಕ ವಾಹನಗಳ ಸಂಚಾರಕ್ಕೆ ಅನು ಕೂಲ ಮಾಡಿ ಕೊಡುತ್ತವೆ ಎಂದರು.

ಮೂರೂ ಜಿಲ್ಲೆಗಳ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣೆಗೆ ಸರ್ಕಾರ ಈ ವರ್ಷ ₹ 24 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ಪಾರ ದರ್ಶಕ ಕಾಯ್ದೆ ಪ್ರಕಾರವೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಎರಡು ತಿಂಗಳ ಒಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗವುದು. ಅಲ್ಲಿಯವರೆಗೆ ರಸ್ತೆಗಳ ತುರ್ತು  ನಿರ್ವಹಣೆಗೆ  ಸರ್ಕಾರದ ವಿಶೇಷ ಅನುಮತಿ ಪಡೆದು ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ ಎಂದು ವಿವರ ನೀಡಿದರು.

ಮೂರೂ ಜಿಲ್ಲೆಗಳ ವ್ಯಾಪ್ತಿಯ ಉಪ ವಿಭಾಗಗಳಲ್ಲಿ ಒಟ್ಟು 20 ಟಾಸ್ಕ್‌ಫೋರ್ಸ್‌ ತಂಡ ನಿಯೋಜಿಸ ಲಾಗಿದೆ.  24 ಗಂಟೆಯ ಸೇವೆಗಾಗಿ ಸಹಾಯವಾಣಿ  (ಮೊಬೈಲ್‌ 7259646749) ತೆರೆಯಲಾಗಿದೆ.  ರಸ್ತೆ ಸಮಸ್ಯೆ ಕಂಡುಬಂದರೆ ಸಾರ್ವಜನಿಕರು ಈ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಬಹುದು. ಆಯಾ ವ್ಯಾಪ್ತಿಯ ತಂಡ ತಕ್ಷಣವೇ ಸ್ಥಳಕ್ಕೆ ತಲುಪಿ ರಸ್ತೆ ದುರಸ್ತಿ ಮಾಡುತ್ತದೆ. ಎಲ್ಲ  ವಾಹನಗಳಿಗೂ ಜಿಪಿಎಸ್ ಸಂಪರ್ಕ ಅಳವಡಿಸಲಾಗಿದೆ ಎಂದರು.

ಬೇಕಾಬಿಟ್ಟಿ ಕೇಬಲ್, ವಿದ್ಯುತ್ ಕಂಬ ಅಳವಡಿಕೆ: ಬಿಎಸ್‌ಎನ್‌ಎಲ್‌, ಟೆಲಿಕಾಂ ಕಂಪೆನಿಗಳು, ಇಂಧನ ಇಲಾಖೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ಆ ಇಲಾಖೆಗಳ ಜವಾಬ್ದಾರಿ. ಆದರೆ, ಕೇಬಲ್‌ ಎಳೆಯುವಾಗ, ವಿದ್ಯುತ್ ಕಂಬ ನೆಡುವಾಗ ರಸ್ತೆ ನಿಯಮ ಪಾಲಿಸುವುದು ಆ ಇಲಾಖೆಗಳ ಕರ್ತವ್ಯ ಕೂಡ. ಆದರೆ, ಹಲವು ಸಂದರ್ಭಗಳಲ್ಲಿ ಇಂತಹ ಕರ್ತವ್ಯ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಕೇಬಲ್ ಹಾಕುವುದು,  ವಿದ್ಯುತ್ ಕಂಬಗಳ ಅಳವಡಿಕೆ, ಒಳ ಚರಂಡಿ, ನೀರು ಸರಬರಾಜು ಪೈಪ್‌ ಅಳವಡಿಸುವುದು ಸಾಮಾನ್ಯ. ಆದರೆ, ರಸ್ತೆ ಬದಿಯಲ್ಲೇ ಆಳವಾದ ಗುಂಡಿ ತೋಡುವುದು. ಅದನ್ನು ಮುಚ್ಚದೇ ಬಿಡುವುದು, ರಸ್ತೆಗೆ ತಾಕಿಕೊಂಡೇ ವಿದ್ಯುತ್ ಕಂಬ ಅಳವಡಿಸುವುದು ನಿಯಮಬಾಹಿರ. ಈ ವಿಚಾರದಲ್ಲಿ ಬಿಎಸ್‌ಎನ್‌ಎಲ್‌, ಮೆಸ್ಕಾಂ ಸಹ  ನಿಯಮ ಪಾಲಿಸುತ್ತಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಭರದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಮಾಡಲಾಗುತ್ತಿದೆ ಎಂದು ದೂರಿದರು.

ಹಲವು ಸಂದರ್ಭದಲ್ಲಿ ಬಿಎಸ್ಎನ್ಎಲ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ. ರಸ್ತೆ ಬದಿಗಳಲ್ಲಿ ‘ಯುಟಿಲಿಟಿ ಲೈನ್’ ಅಳವಡಿಸಲು ಕೇಂದ್ರ ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಇದ್ದರೂ,  ಬಿಎಸ್ಎಲ್ಎನ್ ನಿಯಮ ಪಾಲಿಸುತ್ತಿಲ್ಲ.  ಮೆಸ್ಕಾಂ ರಸ್ತೆಯ ನಿರ್ದಿಷ್ಟ ಅಂತರದಲ್ಲೇ ವಿದ್ಯುತ್‌ ಕಂಬ ಅಳವಡಿಸಬೇಕು. ನಿಯಮ ಮೀರಿ ಅಳವಡಿಸಿದ ಕಂಬ ಸ್ಥಳಾಂತರಿಸಲು ಲೋಕೋಪಯೋಗಿ ಇಲಾಖೆಯೇ ಪರಿಹಾರ ನೀಡಬೇಕು. ಇದು ಸದ್ಯದ ಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಜವಾಬ್ದಾರಿ

‘ರಸ್ತೆಗೆ ಮರಗಳು ಉರುಳಿದಾಗ ತೆರವುಗೊಳಿಸುವ ಸಂಪೂರ್ಣ ಜವಾಬ್ದಾರಿ  ಅರಣ್ಯ ಇಲಾಖೆಗೆ ಸೇರಿದೆ. ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೇ ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಈ ಕುರಿತು ಶಿವಮೊಗ್ಗ ಮತ್ತು ಬಳ್ಳಾರಿ ವೃತ್ತದ  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದು ಬಾಲಕೃಷ್ಣ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry