ದಾಳಿಂಬೆ ರಕ್ಷಣೆಗೆ ತೋಟಕ್ಕೆ ಬಟ್ಟೆ ಹೊದಿಕೆ!

7

ದಾಳಿಂಬೆ ರಕ್ಷಣೆಗೆ ತೋಟಕ್ಕೆ ಬಟ್ಟೆ ಹೊದಿಕೆ!

Published:
Updated:
ದಾಳಿಂಬೆ ರಕ್ಷಣೆಗೆ ತೋಟಕ್ಕೆ ಬಟ್ಟೆ ಹೊದಿಕೆ!

ಹನುಮಸಾಗರ: ಕೊಪ್ಪಳ ಜಿಲ್ಲೆಯ ವಿವಿಧ ಭಾಗದಲ್ಲಿರುವ ದಾಳಿಂಬೆ ಬೆಳೆಗಾರರು ತಾವು ಬೆಳೆದ ಗುಣಮಟ್ಟದ ಕೇಸರ ತಳಿಯ ದಾಳಿಂಬೆ ಹಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಲು ಬಟ್ಟೆ ಹೊದಿಕೆ ಉಪಾಯ ಕಂಡುಕೊಂಡಿದ್ದಾರೆ.

ಸಣ್ಣ ಪ್ರಮಾಣದಲ್ಲಿ ಬೆಳೆ ಹೊಂದಿದ ರೈತರು ಕಾಗದ, ಪ್ಲಾಸ್ಟಿಕ್ ಪೇಪರ್, ಗೋಣಿ ಚೀಲ ಇಲ್ಲವೆ ಕಡಿಮೆ ಬೆಲೆಗೆ ದೊರಕುವ ಸೀರೆಗಳಿಂದ ದಾಳಿಂಬೆ ಹಣ್ಣುಗಳನ್ನು ಬಿಸಿಲಿಗೆ ಮರೆ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆ ಹೊಂದಿದ ರೈತರು ಇಡೀ ತೋಟಕ್ಕೆ ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಪಾರದರ್ಶಕ ಬಟ್ಟೆ ಹೊದಿಕೆ ಹಾಕುವುದರ ಮೂಲಕ ಉತ್ಕೃಷ್ಠ ಗುಣಮಟ್ಟದ ದಾಳಿಂಬೆ ಹಣ್ಣುಗಳನ್ನು ಉಳಿಸಿಕೊಂಡು ಕೈತುಂಬ ಕಾಸು ಸಂಪಾದನೆ ಮಾಡುತ್ತಿದ್ದಾರೆ.

ದಾಳಿಂಬೆ ತೋಟಗಳತ್ತ ದೃಷ್ಟಿ ಹಾಯಿಸಿದರೆ ಗಿಡಗಳು ಇರಲಿ ಅಲ್ಲಿಯ ಒಂದು ಗರಿಕೆ ಕೂಡ ಕಣ್ಣಿಗೆ ಕಾಣುವುದಿಲ್ಲ. ಇಡೀ ತೋಟಕ್ಕೆ ಸೊಳ್ಳೆ ಪರದೆಯಂತೆ ಬಿಳಿ ಬಟ್ಟೆ ಹೊದಿಕೆ ಹಾಕಿ ಮುಚ್ಚಲ್ಪಟ್ಟಿರುತ್ತದೆ. ಅಲ್ಲದೆ, ಗಿಡಗಳು ಸಾಲು ಸಾಲು ಬಿಳಿ ಅರಿವೆ ಹೊದ್ದ ಜೋಪಡಿಗಳಂತೆ ಕಾಣುತ್ತವೆ. ಹತ್ತಿರ ಹೋದಾಗಲೇ ದಾಳಿಂಬೆ ಗಿಡಗಳಿರುವುದು ತಿಳಿಯುತ್ತದೆ. ಸೂರ್ಯನ ದೃಷ್ಟಿ ಹಣ್ಣಿಗೆ ತಾಕಿ ಹಾಳಾಗದಿರಲಿ ಎಂಬ ಕಾರಣದಿಂದ ಹೀಗೆ ತೋಟಕ್ಕೆ ಬಟ್ಟೆ ಹೊದಿಕೆ ಹಾಕುವ ಸಂಪ್ರದಾಯ ಆರಂಭವಾಗಿದೆ.

ಉಳಿದ ದಿನಗಳಲ್ಲಿ ಇವೆಲ್ಲ ತೆರೆದ ತೋಟಗಳಾಗಿದ್ದರೆ ಡಿಸೆಂಬರ್ ತಿಂಗಳಿನಿಂದ ಸೂರ್ಯನ ಶಾಖದ ಪ್ರಮಾಣ ಹೆಚ್ಚಾಗುವುದರಿಂದ ಜೂನ್ ತಿಂಗಳ ವರೆಗೆ ಹೀಗೆ ತೋಟಗಳು ಬಟ್ಟೆ ಹೊದ್ದುಕೊಳ್ಳುತ್ತವೆ. ದಾಳಿಂಬೆಯ ಹಣ್ಣಿನ ಮೇಲೆ ಬೀಳುವ ಪ್ರಖರ ಸೂರ್ಯನ ಕಿರಣಗಳು ಹಣ್ಣುಗಳನ್ನು ಕಪ್ಪಾಗಿಸಬಹುದು, ಇಲ್ಲವೆ ಚುಕ್ಕೆಯಂತಹ ಕಲೆಗಳಾದರೂ ಬೀಳಬಹುದು. ಈ ರೀತಿ ಸೂರ್ಯನ ಶಾಖಕ್ಕೆ ಒಳಪಟ್ಟ ಹಣ್ಣುಗಳು ಮಾರುಕಟ್ಟೆಯಲ್ಲಿ ಮೂರನೇ ದರ್ಜೆಗೆ ಸೇರುತ್ತವೆ.

‘ಗ್ರಾಹಕರು ಹಣ್ಣುಗಳನ್ನು ಕೊಳ್ಳುವಾಗ ಬಣ್ಣಕ್ಕೆ ಮರುಳಾಗುವುದರಿಂದ ಬೆಳೆಗಾರರು ದಾಳಿಂಬೆಯ ಹೊಂಬಣ್ಣ ಉಳಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಈ ರೀತಿ ಮೇಲು ಹೊದಿಕೆ ಹಾಕಿದ ಹಣ್ಣುಗಳು ಮಾತ್ರ ತಮ್ಮ ಬಣ್ಣ ಕೆಡಿಸಿಕೊಳ್ಳದೇ ತಾಜಾತನ ಉಳಿಸಿಕೊಂಡು ಗ್ರಾಹಕರನ್ನು ಆಕರ್ಷಿಸುತ್ತವೆ. ಹಣ್ಣುಗಳ ರಕ್ಷಣೆಯ ಜೊತೆಗೆ ಈ ಹೊದಿಕೆ ಬೆಳೆಗೆ ಅವಶ್ಯವಿರುವಷ್ಟು ಬೆಳಕು, ಗಾಳಿ ಪೂರೈಕೆ ಮಾಡುವುದರಿಂದ ಹಣ್ಣಿನ ಬೆಳವಣಿಗೆ ಹಾಗೂ ಗುಣಮಟ್ಟ ಕಾಪಾಡುತ್ತದೆ’ ಎಂದು ರೈತರು ಹೇಳುತ್ತಾರೆ.

ಕುಷ್ಟಗಿ ತಾಲ್ಲೂಕಿನ ಕೆ.ಬೆಂಚಮಟ್ಟಿ ಗ್ರಾಮದ ಪುನೀತರೆಡ್ಡಿ ಎಂಬ ರೈತ 60 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯುತ್ತಿದ್ದು, ಉತ್ಕೃಷ್ಟ ಗುಣಮಟ್ಟದ ಫಸಲು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಇಡೀ ತೋಟಕ್ಕೆ ಹೊದಿಕೆ ಹಾಕಿದ್ದಾರೆ. ಹೊರಗೆ ತಲೆ ಸಿಡಿಯುವ ಬಿಸಿಲು ಇದ್ದರೂ ಪಾರದರ್ಶಕ ಬಟ್ಟೆಯ ನೆರಳಿನಲ್ಲಿ ಬೆಳೆಯುತ್ತಿರುವ ದಾಳಿಂಬೆ ಹಣ್ಣುಗಳು ಮಾತ್ರ ತಮ್ಮ ಬಣ್ಣಕ್ಕೆ ಮತ್ತಷ್ಟು ಹೊಳಪಿನ ಲೇಪನ ಮಾಡಿಕೊಂಡು ಕಣ್ಣು ಕುಕ್ಕಿಸುತ್ತಿವೆ.

400 ಕ್ವಿಂಟಲ್ ಬೆಳೆ ಪಡೆದ ರೈತ: ‘ಸದ್ಯ ದಾಳಿಂಬೆ ಕೊಯ್ಲು ನಡೆದಿದ್ದು ಈಗ 300 ಕ್ವಿಂಟಲ್ ಹಣ್ಣು ಇಳುವರಿ ಬಂದಿದೆ. ಅಲ್ಲದೆ, ಇನ್ನು 100 ಕ್ವಿಂಟಲ್‌ಗೂ ಹೆಚ್ಚು ಹಣ್ಣು ದೊರಕುವ ಸಾಧ್ಯತೆ ಇದೆ’ ಎಂದು ಪುನೀತರೆಡ್ಡಿ ಹೇಳುತ್ತಾರೆ. ‘ತಾವು ಬೆಳೆದ ಹಣ್ಣುಗಳನ್ನು ಆರು ಗ್ರೇಡ್‌ಗಳಾಗಿ ವಿಂಗಡಿಸಲಾಗಿದ್ದು, ಮೊದಲನೆ ದರ್ಜೆಯ ಹಣ್ಣುಗಳು ಪ್ರತಿ ಕಿಲೋಕ್ಕೆ ₹90 ಮಾರಾಟವಾಗಿದ್ದರೆ, ಎರಡನೇ ದರ್ಜೆಯ ಹಣ್ಣುಗಳು ₹80 ಮಾರಾಟವಾಗಿವೆ’ ಎಂದು ಅವರು ತಿಳಿಸಿದರು.

* * 

ಯುರೋಪ್‌ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ದಾಳಿಂಬೆಗೆ ಬೆಲೆ ಕಡಿಮೆಯಾಗಿದೆ. ಖರೀದಿದಾರರು ಬರುತ್ತಿಲ್ಲ. ಆದ್ಯಾಗೂ ದೊಡ್ಡ ಪ್ರಮಾಣದ ಹಾನಿಯೇನು ಆಗಿಲ್ಲ.

ಪುನೀತ ರೆಡ್ಡಿ

ದಾಳಿಂಬೆ ಬೆಳೆದ ರೈತ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry