ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಸಿಗಲಿ’

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ‘ಗುಣಮಟ್ಟದ ಆರೋಗ್ಯ ಸೇವೆ ಗ್ರಾಮೀಣ ಭಾಗವೂ ಸೇರಿದಂತೆ ದೇಶದ ಎಲ್ಲ ಜನರಿಗೆ ಸಿಗಬೇಕು’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು.

ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಕೇಂದ್ರ ಉಡುಪಿಯಲ್ಲಿ ನಿರ್ಮಾಣ ಮಾಡುತ್ತಿರುವ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು  ಮಾತನಾಡಿದರು.

‘ಸದೃಢ ದೇಹ ಮತ್ತು ಮನಸ್ಸಿನ ಪ್ರಜೆಗಳು ಇದ್ದಾಗ ಮಾತ್ರ ಬಲಯುತ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ, ಆದ್ದರಿಂದ ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳು ಸಿಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ಪ್ರತಿಯೊಬ್ಬರಿಗೂ ಇದರ ಲಾಭ ದೊರಕಬೇಕು’ ಎಂದರು.

‘ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ 1,000 ಜನರಿಗೆ ಒಬ್ಬ ವೈದ್ಯ ಇರಬೇಕು, ಆದರೆ ನಮ್ಮಲ್ಲಿ 1,700 ಜನರಿಗೆ ಒಬ್ಬರು ವೈದ್ಯರಿದ್ದಾರೆ. ಆದ್ದರಿಂದ ವೈದ್ಯರ ಸಂಖ್ಯೆ ಹಾಗೂ ಮೂಲ ಸೌಕರ್ಯ ಗಣನೀಯವಾಗಿ ಹೆಚ್ಚಳವಾಗಬೇಕು. ಆಧುನಿಕ ತಂತ್ರಜ್ಞಾನ, ಸಾಧನ ಹಾಗೂ ಉತ್ತಮ ವೈದ್ಯರಿದ್ದಾಗ ಈ ಕ್ಷೇತ್ರದಲ್ಲಿ ಅದ್ಭುತಗಳನ್ನು ಸಾಧಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ರೋಗಿಯ ಜೀವ ಕಾಪಾಡಲು ಶಕ್ತಿ ಮೀರಿ ಶ್ರಮಿಸುವ ವೈದ್ಯರ ಮೇಲೆ ನಂಬಿಕೆ ಇಡಬೇಕು. ವೈದ್ಯರು ಚಿಕಿತ್ಸೆ ನೀಡಿದ ನಂತರವೂ ರೋಗಿ ಜೀವವನ್ನು ಉಳಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ಅವರ ಮೇಲೆ ಹಲ್ಲೆ ಮಾಡುವುದು ಅನಾಗರಿಕ ವರ್ತನೆಯಾಗುತ್ತದೆ’ ಎಂದರು.

‘ಸಮಾಜಕ್ಕಾಗಿ ಕೆಲಸ ಮಾಡಿದ ಹಾಜಿ ಅಬ್ದುಲ್ಲಾ ಅವರ ಹೆಸರಿನಲ್ಲಿ ಬಿ.ಆರ್. ಶೆಟ್ಟಿ ಅವರು ಸೂಪರ್ ಸ್ಪೆಷಾಲಿಟಿ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಉತ್ತಮ ಆರಂಭವಾಗಿದ್ದು, ಈ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿ’ ಎಂದು ಹಾರೈಸಿದರು.

‘1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದಾಗ ಈ ಭಾಗಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು’ ಎಂದು ಅವರು ನೆನಪು ಮಾಡಿಕೊಂಡರು.

ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಜಗತ್‌ಪತಿಯ ಸನ್ನಿಧಾನಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬಂದಿದ್ದಾರೆ. ಮಾಡಿದ ಎಲ್ಲ ಕೆಲಸವನ್ನು ಕೃಷ್ಣನಿಗೆ ಅರ್ಪಿಸಲಾಗುತ್ತದೆ, ಅದೇ ರೀತಿ ರಾಷ್ಟ್ರಪತಿಗಳಾಗಿ ಐದು ವರ್ಷ ಮಾಡಿದ ಕೆಲಸವನ್ನು ಕೃಷ್ಣಾರ್ಪಣ ಮಾಡಿದ್ದಾರೆ. ಪ್ರಣವ ಮಂತ್ರ ಯತಿಗಳಿಗೆ ಪ್ರಿಯವಾದ ಶ್ರೇಷ್ಠ ಮಂತ್ರವಾಗಿದೆ. ಅವರ ಹೆಸರಿನಲ್ಲಿಯೂ ಪ್ರಣವ ಇದೆ’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್. ರಮೇಶ್ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್, ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಬಿ.ಆರ್. ಶೆಟ್ಟಿ, ಅವರ ಪತ್ನಿ ಚಂದ್ರಕಲಾ ಉಪಸ್ಥಿತರಿದ್ದರು.

ಪಂಕ್ತಿಭೇದಕ್ಕೆ ವಿರೋಧ, ಸಿದ್ದರಾಮಯ್ಯ ಗೈರು?

ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಅಧಿಕಾರ ಸ್ವೀಕರಿಸಿದ ನಂತರ ನಾಲ್ಕು ಬಾರಿ ಉಡುಪಿಗೆ ಬಂದರೂ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿರಲಿಲ್ಲ.

ರಾಷ್ಟ್ರಪತಿ ಅವರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಹ್ವಾನ ನೀಡಿದ್ದರಿಂದ ಬರಬಹುದು ಎಂಬ ನಿರೀಕ್ಷೆ ಇತ್ತು.

‘ಕೃಷ್ಣ ಮಠದಲ್ಲಿನ ಪಂಕ್ತಿ ಭೇದ ಹಾಗೂ ತಾತ್ವಿಕ ಭಿನ್ನಾಭಿಪ್ರಾಯದ ಕಾರಣ ಮುಖ್ಯಮಂತ್ರಿ ಅವರು ಮಠಕ್ಕೆ ಭೇಟಿ ನೀಡುತ್ತಿಲ್ಲ’ ಎನ್ನುತ್ತವೆ ಮೂಲಗಳು.

ಉಡುಪಿ ಶ್ರೀಕೃಷ್ಣ ಮಠಕ್ಕೆ ಭಾನುವಾರ ಭೇಟಿ ನೀಡಿದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ನಮಿಸಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT