ವಿಮಾನಯಾನದ ಕೆಟ್ಟ ಅನುಭವಗಳನ್ನು ಬಿಚ್ಚಿಟ್ಟ ಗಗನಸಖಿಯರು

7

ವಿಮಾನಯಾನದ ಕೆಟ್ಟ ಅನುಭವಗಳನ್ನು ಬಿಚ್ಚಿಟ್ಟ ಗಗನಸಖಿಯರು

Published:
Updated:
ವಿಮಾನಯಾನದ ಕೆಟ್ಟ ಅನುಭವಗಳನ್ನು ಬಿಚ್ಚಿಟ್ಟ ಗಗನಸಖಿಯರು

ನವದೆಹಲಿ: ರಾಜಕೀಯ ವ್ಯಕ್ತಿಗಳು ವಿಮಾನದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಉಸ್ಮಾನಾಬಾದ್ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ಗಾಯಕ್‌ವಾಡ್‌ ಕೆಲ ತಿಂಗಳ ಹಿಂದೆ ಏರ್‌ ಇಂಡಿಯಾ ವ್ಯವಸ್ಥಾಪಕರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ತೆಲುಗು ದೇಶಂ ಪಕ್ಷದ ಸಂಸದ ಜೆ.ಸಿ. ದಿವಾಕರ್‌ ರೆಡ್ಡಿ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಕಚೇರಿಯಲ್ಲಿ ಗಲಾಟೆ ಮಾಡಿದ್ದರು. ತಡವಾಗಿ ಬಂದ ಕಾರಣ ದಿವಾಕರ್‌ ರೆಡ್ಡಿ ಅವರಿಗೆ ವಿಮಾನ ಏರಲು ಅವಕಾಶ ನಿರಾಕರಿಸಲಾಗಿತ್ತು.

ಹೀಗೆ ಗಲಾಟೆ ನಡೆದು ಸುದ್ದಿಯಾಗುವ ಘಟನೆಗಳು ಕೆಲವು ಮಾತ್ರ. ವಿಮಾನಯಾನದಲ್ಲಿ ಮಹಿಳಾ ಸಿಬ್ಬಂದಿ ಬಹಳಷ್ಟು ಬಾರಿ ಪ್ರಯಾಣಿಕರಿಂದ ಕೆಟ್ಟ ಅನುಭವಕ್ಕೆ ಒಳಗಾಗಿರುತ್ತಾರೆ. ಆದರೆ ಬಹುತೇಕರು ಇಂತಹ ಕೆಟ್ಟ ಅನುಭವಗಳಿಗೆ ಹೆಚ್ಚು ಗಮನ ಕೊಡದೆ ಇದೆಲ್ಲಾ ‘ಮಾಮೂಲು’ ಎಂದುಕೊಂಡು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ವಿಮಾನಯಾನದಲ್ಲಿ ಪ್ರಯಾಣಿಕರಿಂದ ತಮಗಾದ ಕೆಟ್ಟ ಅನುಭವಗಳನ್ನು ಐದು ಮಂದಿ ಮಹಿಳಾ ಸಿಬ್ಬಂದಿ ಇಲ್ಲಿ ಹಂಚಿಕೊಂಡಿದ್ದಾರೆ.‌

‘ವಾಷ್‌ ರೂಮ್‌ಗೆ ಕರೆದ ಪ್ರಯಾಣಿಕ’

‘ಪ್ರಯಾಣಿಕರು ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಸಾಮಾನ್ಯ. ಆದರೆ, ನನಗಾದ ಒಂದು ಕೆಟ್ಟ ಅನುಭವವೆಂದರೆ ಪ್ರಯಾಣಿಕನೊಬ್ಬ ನೇರವಾಗಿ ನನ್ನನ್ನು ವಾಷ್‌ ರೂಮ್‌ಗೆ ಕರೆದದ್ದು. ಕೀಳು ಮನಸ್ಸಿನವರು ಮಾತ್ರ ಹೀಗೆ ವರ್ತಿಸಲು ಸಾಧ್ಯ’ ಎಂಬುದು ಇಂಡಿಗೋ ಸಿಬ್ಬಂದಿ ಮೋನಿಕಾ ಠಾಕೂರ್‌ ಅವರ ಕೆಟ್ಟ ಅನುಭವದ ಮಾತು.‘ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸುವ ವೇಳೆ ಸಹೋದ್ಯೋಗಿಯ ಸ್ಕರ್ಟ್‌ ಎಳೆದ’

‘ವಿಮಾನಯಾನದಲ್ಲಿ ಅಗತ್ಯವಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸುವ ವೇಳೆ ಪ್ರಯಾಣಿಕನೊಬ್ಬ ನನ್ನ ಸಹೋದ್ಯೋಗಿಯ ಸ್ಕರ್ಟ್‌ ಎಳೆಯಲು ಶುರು ಮಾಡಿದ. ಅದನ್ನು ನಿಲ್ಲಿಸುವಂತೆ ಹೇಳಿದ್ದರಿಂದ ಕೋಪಗೊಂಡ ಆತ ಆಕೆಯ ಮೇಲೆ ನೀರು ಎರೆಚಿದ. ಕೆಲವು ಕಿಡಿಗೇಡಿ ಪ್ರಯಾಣಿಕರು ಕೆಲ ವಸ್ತುಗಳನ್ನು ಬೇಕೆಂದೇ ಕೆಳಕ್ಕೆ ಬೀಳಿಸುತ್ತಾರೆ. ನಾವು ಅದನ್ನು ಎತ್ತಿಕೊಡಲು ಬಗ್ಗಿದಾಗ ನಮಗೆ ತಿಳಿಯದಂತೆ ಹಿಂದಿನಿಂದ ಫೋಟೊ ತೆಗೆಯುತ್ತಾರೆ’ ಎನ್ನುತ್ತಾರೆ ಗೋ ಏರ್‌ನ ಸಿಬ್ಬಂದಿ ಅನಿಷಾ ಚಾವ್ಲಾ.‘ಮೈ ಮುಟ್ಟಿ ಪೀಡಿಸಿದ ಪ್ರಯಾಣಿಕ’

‘ಮದ್ಯಪಾನ ಮಾಡಿದ್ದ ಪ್ರಯಾಣಿಕ ನನ್ನ ಮೈ ಮುಟ್ಟಿ ಪೀಡಿಸಲು ಶುರು ಮಾಡಿದ. ನಾನು ಎಷ್ಟೇ ಹೇಳಿದರೂ ಆತ ನನ್ನ ಮೈ ಮುಟ್ಟುತ್ತಲೇ ಇದ್ದ. ಕೊನೆಗೆ ವಿಮಾನದ ಪುರುಷ ಸಿಬ್ಬಂದಿ ಆತನನ್ನು ಬಲವಂತವಾಗಿ ಹಿಡಿದು ಕೂರಿಸಬೇಕಾಯಿತು. ಈ ಘಟನೆ ನಡೆದ ಬಳಿಕ ಆ ಪ್ರಯಾಣಿಕನ ವಿಮಾನ ಪ್ರಯಾಣದ ಮೇಲೆ ನಿಷೇಧ (no-fly list) ಹೇರಲಾಯಿತು’ ಎಂದು ಹೆಸರು ಹೇಳಲಿಚ್ಛಿಸದ ಗಗನಸಖಿಯೊಬ್ಬರು ತಿಳಿಸಿದರು.

‘ಮತ್ತೆ ಮತ್ತೆ ಮದ್ಯ ಕೇಳಿದ... ಕೂಗಾಡಲು ಶುರು ಮಾಡಿದರು’

‘ಒಬ್ಬ ಪ್ರಯಾಣಿಕರ ಮದ್ಯ ತಂದು ಕೊಡುವಂತೆ ಮತ್ತೆ ಮತ್ತೆ ನನ್ನನ್ನೇ ಕೇಳುತ್ತಿದ್ದ. ನಾನೂ ತಂದುಕೊಡುತ್ತಿದ್ದೆ. ನಾನು ಬೇರೆ ಕೆಲಸದಲ್ಲಿದ್ದ ವೇಳೆ ಅದೇ ವ್ಯಕ್ತಿ ಮತ್ತೆ ಕರೆದ. ನಾನು, ‘ಒಂದು ನಿಮಿಷ ತಾಳಿ, ಮತ್ತೆ ಬರುತ್ತೇನೆ’ ಎಂದು ಹೇಳಿ ಮುಂದೆ ಹೊರಟೆ. ಆತ ಏಕಾಏಕಿ ನನ್ನ ಮೇಲೆ ಕೂಗಾಡಲು ಶುರು ಮಾಡಿದ. ‘ಕೋಕ್‌ ಕೇಳಿದರೆ ತಂದುಕೊಡಲು ಆಗುವುದಿಲ್ಲ ಎನ್ನುತ್ತಿದ್ದಾಳೆ’ ಎಂದು ನನ್ನ ಮೇಲೆ ಆರೋಪಿಸಿ ಬಾಯಿಗೆ ಬಂದಂತೆ ಬೈಯ್ದ. ಅವನ ಮಾತು ಕೇಳಿ ನನಗೆ ಆಘಾತವಾಯಿತು. ನಾನು ಅಳುತ್ತಾ ಅಲ್ಲಿಂದ ಹೊರಟುಹೋದೆ’ – ಇದು ಮತ್ತೊಬ್ಬ ಗಗನಸಖಿಯ ಕೆಟ್ಟ ಅನುಭವ.

‘ಪುರುಷರಷ್ಟೇ ಪೀಡಕರಲ್ಲ’

‘ವಿಮಾನದಲ್ಲಿ ಪುರುಷರಷ್ಟೇ ಗಗನಸಖಿಯರಿಗೆ ಪೀಡಕರಾಗಿರುವುದಿಲ್ಲ. ಬಹಳಷ್ಟು ಮಹಿಳೆಯರೂ ನಮ್ಮನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ಒಮ್ಮೆ ಮಹಿಳಾ ಪ್ರಯಾಣಿಕರೊಬ್ಬರಿಗೆ ಆಹಾರ ನೀಡುವುದನ್ನು ಮರೆತು ಮುಂದೆ ಹೋಗಿದ್ದೆ. ಆ ಮಹಿಳೆ ಇಷ್ಟಕ್ಕೇ ಕೋಪಗೊಂಡು ನನ್ನನ್ನು ಬೈಯಲು ಶುರು ಮಾಡಿದರು. ನಾನು, ‘ತಪ್ಪಾಗಿದೆ. ತಂದು ಕೊಡುತ್ತೇನೆ’ ಎಂದು ಹೇಳಿದರೂ ಕೇಳದ ಆಕೆ ದೊಡ್ಡ ದನಿಯಲ್ಲಿ ಕೂಗಾಡಿ ರಂಪ ಮಾಡಿದರು. ನನ್ನನ್ನು ‘ಸೇಲ್ಸ್‌ ಗರ್ಲ್’, ‘ಚೀಪ್‌ ಗರ್ಲ್‌’ ಎಂದೆಲ್ಲಾ ಕರೆದು ಅವಮಾನ ಮಾಡಿದರು. ನನಗೆ ಅಳು ತಡೆಯಲಾಗಲಿಲ್ಲ’ ಎನ್ನುತ್ತಾರೆ ಮತ್ತೊಬ್ಬ ಮಹಿಳಾ ಸಿಬ್ಬಂದಿ.ಇವನ್ನೂ ಓದಿ...ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ
ಸಂಸದ ರವೀಂದ್ರ ಗಾಯಕ್‌ವಾಡ್

ರಂಪಾಟ: ಸಂಸದನಿಗೆ ಇಂಡಿಗೊ ನಿರ್ಬಂಧ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry