ಭಾನುವಾರ, ಡಿಸೆಂಬರ್ 15, 2019
18 °C

ಹಳೆ ಕಟ್ಟಡಕ್ಕೆ ಹೆದರಿ ಮನೆಬಿಟ್ಟ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೆ ಕಟ್ಟಡಕ್ಕೆ ಹೆದರಿ ಮನೆಬಿಟ್ಟ ಪೊಲೀಸರು

ಕಾಳಗಿ: ಇಲ್ಲಿನ ಪೊಲೀಸ್ ಠಾಣೆಯ ಕಟ್ಟಡ ಹಾಗೂ ಪೊಲೀಸ್ ವಸತಿಗೃಹಗಳ ಕಟ್ಟಡ ತುಂಬಾ ಹಳೆಯದಾಗಿದೆ. ದಿನ ಉರುಳಿದಂತೆ ಗೋಡೆ ಮತ್ತು ಮೇಲ್ಛಾವಣಿ ಶಿಥಿಲಗೊಂಡು ಸಿಮೆಂಟ್ ಪ್ಲಾಸ್ಟರ್ ಕಳಚಿ ಬೀಳುತ್ತಿದೆ. ಭಯಭೀತರಾದ ಕೆಲ ಪೊಲೀಸರು ಈ ವಸತಿಗೃಹಗಳನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದಾರೆ.

ಪರಿಣಾಮ ಪೊಲೀಸ್ ಇಲಾಖೆಯ 5ಎಕರೆ 10ಗುಂಟೆ ಪ್ರದೇಶ ಸಂಪೂರ್ಣ ಹಾಳು ಸುರಿಯುತ್ತಿದ್ದು, ವಿಷ ಜಂತುಗಳ ಆವಾಸ ಸ್ಥಳವಾಗಿ ಮಾರ್ಪಟ್ಟಿದೆ. 1978ರಲ್ಲಿ ಉದ್ಘಾಟನೆಗೊಂಡಿರುವ ಸ್ಥಳೀಯ ಪೊಲೀಸ್ ಠಾಣೆ, ಸುತ್ತಲಿನ 27ಹಳ್ಳಿಗಳ ವ್ಯಾಪ್ತಿಗೆ ಒಳಪಟ್ಟಿದೆ.

ಒಬ್ಬ ಸಬ್‌ ಇನ್‌ಸ್ಪೆಕ್ಟರ್, ಐದುಜನ ಸಹಾಯಕ ಸಬ್‌ಇನ್‌ಸ್ಪೆಕ್ಟರ್, ಹದಿನಾಲ್ಕು ಜನ ಹೆಡ್ ಕಾನ್‌ಸ್ಟೆಬಲ್, ಹದಿಮೂರು ಜನ ಕಾನ್‌ಸ್ಟೆಬಲ್ –ಹೀಗೆ ಒಟ್ಟು 33ಜನರ ಸದ್ಯದ ಬಲವನ್ನು ಹೊಂದಿದೆ. ಅಷ್ಟೇ ಅಲ್ಲದೆ, 2006ರಲ್ಲಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಸ್ಥಾಪನೆಗೊಂಡು ಒಬ್ಬ ಸಿಪಿಐ ಹಾಗೂ ಇತರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಚೇರಿಗೆ ಮಾಡಬೂಳ ಪೊಲೀಸ್ ಠಾಣೆ ಮತ್ತು ಕಾಳಗಿ ಪೊಲೀಸ್ ಠಾಣೆ ಸಂಬಂಧಿಸಿದೆ.

ಅಂದಹಾಗೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪೊಲೀಸ್ ಸಿಬ್ಬಂದಿಯ ವಾಸ್ತವ್ಯಕ್ಕಾಗಿ ಕೆಲ ವರ್ಷಗಳ ಹಿಂದೆ ಒಟ್ಟು 18 ವಸತಿಗೃಹಗಳನ್ನು ಕಟ್ಟಲಾಗಿದೆ. ಅವುಗಳಲ್ಲಿ 6 ವಸತಿಗೃಹಗಳು ಮಾತ್ರ ಚೆನ್ನಾಗಿವೆ. ಉಳಿದ 12 ವಸತಿಗೃಹಗಳು ಹಳೆಯದಾಗಿ ಮೇಲ್ಛಾವಣಿಯ ಕುಸಿತಕ್ಕೆ ತುತ್ತಾಗಿವೆ. ಗೋಡೆ ಶಿಥಿಲಗೊಂಡು ತಲೆಬಾಗಿ ನಿಂತಿವೆ. ಮಳೆಗಾಲದಲ್ಲಿ ಮನೆತುಂಬ ನೀರು ನಿಲ್ಲುವ ಸ್ಥಿತಿ ತಲೆದೋರಿದೆ.

ಅದರಲ್ಲೂ ಸಬ್‌ ಇನ್‌ಸ್ಪೆಕ್ಟರ್ ವಸತಿಗೃಹದ ಛತ್ತು ಸಂಪೂರ್ಣ ಹಾಳಾಗಿದೆ. ಕಿಟಕಿ, ಬಾಗಿಲು ಕಿತ್ತುಬಿದ್ದಿವೆ. ನೆಲಹಾಸಿಗೆಯ ಪರ್ಸಿಗಳು ಉಬ್ಬರವಾಗಿ ಹಾವು, ಚೇಳು ಒಳ ಸೇರುತ್ತಿವೆ. ಎಲ್ಲೆಂದರಲ್ಲಿ ಶೌಚಾಲಯದ ಗುಂಡಿಗಳು ಒಡೆದು ಗಬ್ಬುವಾಸನೆ ಹರಡಿಕೊಂಡಿದೆ. ನೀರು ಸರಬರಾಜಿನ ಪೈಪ್‌ಗಳ ಸೋರಿಕೆ ನಿರಂತರವಿದೆ.

ಇಷ್ಟೇ ಅಲ್ಲ, ಕರ್ತವ್ಯದ ಕೇಂದ್ರ ಕಚೇರಿ ಪೊಲೀಸ್ ಠಾಣೆಯಲ್ಲೂ ಛತ್ತಿನ ಸಿಮೆಂಟ್ ಪ್ಲಾಸ್ಟರ್ ಎಲ್ಲೆಂದರಲ್ಲಿ ಕಳಚಿ ಬಿದ್ದು ತುಕ್ಕುಹಿಡಿದ ಕಬ್ಬಿಣದ ಸರಳುಗಳು ತೇಲಿಕೊಂಡಿವೆ.

ಆಯುಧ ಕೋಣೆ, ಬರಹಗಾರರ ಕೋಣೆ, ಪಿಎಫ್ ಕೋಣೆ, ಮಹಿಳಾ ಮತ್ತು ಪುರುಷ ಬಂಧಿಖಾನೆಯ ಕೊಠಡಿಗಳಲ್ಲಿ ತಲೆ ಮೇಲೆತ್ತಿದರೆ ಸಾಕು ಭಯನಕ ಎನಿಸುತ್ತಿದೆ. ಠಾಣೆ ಮತ್ತು ವಸತಿಗೃಹಗಳ ಸುತ್ತಲು ಸಣ್ಣಸಣ್ಣ ಗಿಡಗಳು, ಮುಳ್ಳಿನ ಗಿಡಗಂಟಿ ಹುಟ್ಟಿಕೊಂಡಿವೆ. ಸುತ್ತಲು ಆವರಣ ಗೋಡೆ ಇಲ್ಲದೆ ಊರಿನ ದನಕರುಗಳು ಲಗ್ಗೆ ಇಟ್ಟಿವೆ. ಸರಿಯಾಗಿರುವ ಶೌಚಾಲಯ ಇಲ್ಲದಂತಾಗಿದೆ.

ಸ್ವಲ್ಪ ಮಳೆ ಬಂದರೆ ಸಾಕು ಈ ಪ್ರದೇಶ ಕೆಸರೋ ಕೆಸರಾಗಿ ಯಾರೊಬ್ಬರು ನಡೆದಾಡಲು ಬರಲಾರದಂತೆ ನಿರ್ಮಾಣವಾಗುತ್ತದೆ. ಒಟ್ಟಾರೆ ಇಲ್ಲಿನ ಪೊಲೀಸ್ ಇಲಾಖೆಯ ಪರಿಸರ ಗಮನಿಸುವ ಯಾರೊಬ್ಬರೂ ಅಯ್ಯೋ ಎನ್ನಲಾರದೆ ಇರಲಾರರು.

‘ಇಲಾಖೆ ಸಾಕಷ್ಟು ದೊಡ್ಡದಿದೆ. ಇಲ್ಲೇಕೆ ಈ ಪರಿ ಎಂದು ಕೇಳಿದರೆ, ಈ ಠಾಣೆ ಮತ್ತು ವಸತಿ ಗೃಹಗಳಿಗೆ ಸಂಬಂಧಿಸಿದ ಈ ಎಲ್ಲ ಜಮೀನು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿಕೊಂಡಿದೆ. ಅವರಿಗೆ ಸಿಗಬೇಕಾದ ಪರಿಹಾರ ನಮ್ಮ ಇಲಾಖೆ ಕೊಡಲು ಸಿದ್ಧವಿದೆ. ಆದರೆ, ನಮ್ಮ ಜತೆಗೆ ಬೇರೆ ಇಲಾಖೆಗಳು ಸೇರಿಕೊಂಡು ಆಯಾ ಇಲಾಖೆಯ ಕಚೇರಿ, ವಸತಿಗೃಹಗಳು ಇದೇ ಸರ್ವೆ ನಂಬರ್ (ಸ.ನಂ 110, 9.28ಎಕರೆ) ನಲ್ಲಿ ಇವೆ. ಹಾಗಾಗಿ, ಆ ವ್ಯಕ್ತಿ ಎಲ್ಲ ಇಲಾಖೆಗಳ ಒಟ್ಟು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

ಇದರಿಂದಾಗಿಯೆ ನಮ್ಮೆಲ್ಲ ಕೆಲಸಗಳು ಸ್ಥಗಿತಗೊಂಡು ವಾತಾವರಣ ಈ ಸ್ಥಿತಿಗೆ ಬಂದು ತಲುಪಿದೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಪರಿಣಾಮ ಯಾವೊಂದು ವಸತಿಗೃಹ ದುರಸ್ತಿಗೊಳ್ಳದೆ ಹಾಗೆ ಉಳಿದು ಹಾಳುಕೊಂಪೆಯಾಗಿ ಬಿಟ್ಟಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲದಂತಾಗಿದೆ. ಮಕ್ಕಳು, ಮಹಿಳೆಯರು ಇರುವುದರಿಂದ ಜೀವಕ್ಕೆ ಹೆದರಿ ಕೆಲ ಪೊಲೀಸರು ವಸತಿಗೃಹ ಖಾಲಿ ಮಾಡಿ ಬೇರೆಡೆ ಬಾಡಿಗೆ ಮನೆ ಹಿಡಿದುಕೊಂಡಿದ್ದಾರೆ.

ಇನ್ನು ಕೆಲವರು ಕಲಬುರ್ಗಿಯಿಂದ ಓಡಾಡುತ್ತಿದ್ದಾರೆ. ಇನ್ನೂ ಅನಿವಾರ್ಯ ಎಂಬಂತೆ ಸಿಪಿಐ ಮತ್ತು ಪಿಎಸ್ಐ ಅವರು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ.

‘ಅದೇನೆ ಇರಲಿ, ಈ ಜಮೀನೊಳಗೆ ತಲೆಯೆತ್ತಿರುkವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ರೈತರ ಸೇವಾ ಸಹಕಾರ ಸಂಘದವರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಕೂಡಲೇ ಬಡಪಾಯಿ ಜಮೀನು ವಾರಸುದಾರನಿಗೆ ಪರಿಹಾರ ನೀಡಿ ಮುಂದಿನ ಹಾದಿ ಸುಗಮಗೊಳಿಸಬೇಕು’ ಎಂದು ನಿತ್ಯ ಈ ನರಕಯಾತನೆಯಲ್ಲಿ ಓಡಾಡುವ ಸಾರ್ವಜನಿಕರು ಮನವಿ ಮಾಡಿದ್ದಾರೆ.

* * 

ನನ್ನ ಜಮೀನು ಒಳಗೆ ವಿವಿಧ ಇಲಾಖೆಳಿವೆ. ಪರಿಹಾರ ನೀಡುವಂತೆ ಹೈಕೋರ್ಟ್ ಆಯಾ ಇಲಾಖೆಗಳಿಗೆ ಸೂಚಿಸಿದೆ.  ಯಾವೊಂದು ಇಲಾಖೆ ಪರಿಹಾರ ನೀಡಿಲ್ಲ.

ಶಿವಲಿಂಗಯ್ಯ ಮಠಪತಿ

ಭೂಮಿ ಕಳೆದುಕೊಂಡ ನತದೃಷ್ಟ

 

ಪ್ರತಿಕ್ರಿಯಿಸಿ (+)