ಭಾನುವಾರ, ಡಿಸೆಂಬರ್ 15, 2019
18 °C

ಜಿಎಸ್‌ಟಿ: ಚಿಲ್ಲರೆ ವ್ಯಾಪಾರಿಗಳಲ್ಲಿ ಗೊಂದಲ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ: ಚಿಲ್ಲರೆ ವ್ಯಾಪಾರಿಗಳಲ್ಲಿ ಗೊಂದಲ

ಚಿಕ್ಕಬಳ್ಳಾಪುರ: ಅತ್ತ ರಾಷ್ಟ್ರ ರಾಜಧಾನಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಚಾಲನೆ ದೊರೆಯುತ್ತಿದ್ದಂತೆ ಇತ್ತ ಜಿಲ್ಲೆಯ ವರ್ತಕರ ವಲಯದಲ್ಲಿ ಗೊಂದಲ, ಅನುಮಾನ, ಅಳುಕು ಆರಂಭಗೊಂಡಿವೆ. ದೇಶದ ಅತೀ ದೊಡ್ಡ ತೆರಿಗೆ ಸುಧಾರಣೆಯ ಈ ಯೋಜನೆಯಿಂದ ವ್ಯಾಪಾರಿಗಳು ಮುಂದೆ ಏನಾಗಲಿದೆ ಎಂಬ ದಿಗಿಲಿನಿಂದ ಎದುರು ನೋಡುತ್ತಿದ್ದಾರೆ.

ಜಿಎಸ್‌ಟಿ ಶನಿವಾರದಿಂದ (ಜುಲೈ 1ರಿಂದ) ಜಾರಿಗೆ ಬರುತ್ತಿದ್ದು, ಇದರಿಂದಾಗಿ ಸದ್ಯ ದಾಸ್ತಾನು ಇರುವ ಸರಕುಗಳ ಮಾರಾಟ ಬೆಲೆ ಹೇಗೆ ನಿಗದಿಪಡಿಸಬೇಕೆಂಬ ಗೊಂದಲಕ್ಕೆ ಬಹುಪಾಲು ವರ್ತಕರು ಒಳಗಾಗಿದ್ದಾರೆ. ಈವರೆಗೆ ಬಿಳಿ ಚೀಟಿಯ ವ್ಯವಹಾರ ಇಟ್ಟುಕೊಂಡಿದ್ದ ಚಿಲ್ಲರೆ ವ್ಯಾಪಾರಿಗಳೆಲ್ಲ ಇನ್ನು ಮುಂದೆ ಬಿಲ್ಲಿಂಗ್‌, ಇ–ಫೈಲಿಂಗ್‌, ದಾಸ್ತಾನು ನಿರ್ವಹಣೆ ಮಾಡಿ ತೆರಿಗೆ ಇಲಾಖೆಗೆ ಹೇಗಪ್ಪ ಲೆಕ್ಕ ಕೊಡುವುದು ಎಂಬ ಆತಂಕದಲ್ಲಿದ್ದಾರೆ.

‘ಜಿಎಸ್‌ಟಿ ಅಕೌಂಟ್‌ ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಬಹಳ ಗೊಂದಲವಿದೆ. ಸ್ಪಷ್ಟ ಚಿತ್ರಣವೇ ಸಿಗುತ್ತಿಲ್ಲ. ಈ ಹೊಸ ಪದ್ಧತಿಯಲ್ಲಿ ಪ್ಯಾಕಿಂಗ್‌ ಮಾಡಿದ ಮತ್ತು ಮಾಡದ ಪದಾರ್ಥಗಳಿಗೆ ಬೇರೆ ಬೇರೆ ರೀತಿಯಲ್ಲಿ ಪ್ರತ್ಯೇಕ ತೆರಿಗೆ ವಿಧಿಸಲಾಗುತ್ತದೆ. ಪ್ಯಾಕ್‌ ಮಾಡಿದ ಬ್ರಾಂಡೆಡ್‌ ಪದಾರ್ಥಗಳಿಗೆ ಶೇ 5ರಷ್ಟು ತೆರಿಗೆ, ಪ್ಯಾಕ್‌ ಮಾಡದ ಸಾಮಗ್ರಿಗಳಿಗೆ ತೆರಿಗೆ ಇಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕೋ ತಿಳಿಯುತ್ತಿಲ್ಲ’ ಎನ್ನುತ್ತಾರೆ ಗಾಂಧಿ ಕೊಳಾಯಿ ರಸ್ತೆಯಲ್ಲಿರುವ ಸಾಯಿ ಹನುಮಾನ ಟ್ರೆಡರ್ಸ್‌ (ದಿನಸಿ ಅಂಗಡಿ) ಮಾಲೀಕ ನಟರಾಜ್.

ಹಳೇ ಬಾಟಲಿಯಲ್ಲಿ ಹೊಸ ಮದ್ಯ: ‘ಹಳೆಯ ತೆರಿಗೆ ವ್ಯವಸ್ಥೆಯೇ ಹೊಸ ರೂಪದಲ್ಲಿ ಮುಂದುವರಿಯುತ್ತಿದೆ. ದೊಡ್ಡ ಬದಲಾವಣೆಯಿಲ್ಲ. ಆದರೆ ಲೆಕ್ಕಪತ್ರ ಇಡುವ ಕೆಲಸವನ್ನು ಒಬ್ಬರ ಬದಲು ಮೂರು ಜನರು ಮಾಡಬೇಕಷ್ಟೆ. ಈ ಹಿಂದೆ ಖರೀದಿ, ಮಾರಾಟದ ಲೆಕ್ಕವನ್ನು ಒಂದೇ ಬಾರಿ ನೀಡಿ ಬಿಡುತ್ತಿದ್ದೆವು. ಆದರೆ ಈಗ ತಿಂಗಳಿಗೆ ಮೂರು ಸಲ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಬಿಲ್‌ಗಳಲ್ಲಿ ಲೆಕ್ಕ ಹಾಕಿ ತೆರಿಗೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕಿದೆ’ ಎಂದು ಅಡುಗೆ ಎಣ್ಣೆ ಸಗಟು ವ್ಯಾಪಾರಿ, ದೀಕ್ಷಾ ಎಂಟರ್‌ಪ್ರೈಸಸ್‌ ಮಾಲೀಕ ಪ್ರಸನ್ನ ತಿಳಿಸಿದರು.

‘ನಾವು ಹಂಚಿಕೆದಾರರು ಆಗಿರುವ ಕಾರಣಕ್ಕೆ ಜಿಎಸ್‌ಟಿ ಸ್ವಾಗತಿಸುತ್ತೇವೆ. ಈ ಹಿಂದೆ ನಾವು ರಾಜ್ಯದಲ್ಲಿ ಮಾತ್ರ ಎಣ್ಣೆ ಖರೀದಿ ಮಾಡಬೇಕಿತ್ತು. ಹೊರ ರಾಜ್ಯದಲ್ಲಿ ಖರೀದಿಸಿದ್ದರೆ ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕಿತ್ತು. ಆದರೆ ಇದೀಗ ನಾವು ಯಾವ ರಾಜ್ಯದಲ್ಲಿಯಾದರೂ ಖರೀದಿಸುವ ಅನುಕೂಲವಿದೆ. ಹೀಗಾಗಿ ನಮಗೆ ಜಿಎಸ್‌ಟಿ ಒಂದು ರೀತಿ ‘ಹಳೆ ಬಾಟಲಿಯಲ್ಲಿ ಹೊಸ ಮದ್ಯ’ದಂತಾಗಿದೆ’ ಎಂದು ಹೇಳಿದರು.

‘ಜಿಎಸ್‌ಟಿ ಬರುವುದು ನಮಗೆ ಸ್ವಲ್ಪ ಕಷ್ಟವಾಗಿದೆ. ಇನ್ನು ಮುಂದೆ ನಮ್ಮ ಕಥೆ ನೀರಿನಿಂದ ಹೊರ ಬಿದ್ದ ಮೀನು ಒದ್ದಾಡಿಕೊಂಡು ಮತ್ತೆ ನೀರು ಸೇರಿದಂತಿರುತ್ತದೆ. ಈವರೆಗೆ ಚಿಲ್ಲರೆ ವ್ಯಾಪಾರಿಗಳು ದಾಸ್ತಾನು ನಿರ್ವವಣೆ ಮಾಡಿಕೊಂಡು ಬಂದಿಲ್ಲ. ಅನೇಕರಿಗೆ ಅಕೌಂಟ್‌ ಅಂದ್ರೇ ಗೊತ್ತಿಲ್ಲ. ಕೇಂದ್ರ ಸರ್ಕಾರ ಕಳೆದ ಆರೇಳು ತಿಂಗಳಿಂದ ಜಿಎಸ್‌ಟಿ ಕುರಿತು ಮಾಹಿತಿ ನೀಡುತ್ತಲೇ ಬಂದಿದೆ. ವರ್ತಕರು ಕೂಡ ಎಚ್ಚೆತ್ತುಕೊಳ್ಳಬೇಕಿತ್ತು’ ಎನ್ನುತ್ತಾರೆ  ಸಂತೆ ಮಾರುಕಟ್ಟೆಯಲ್ಲಿರುವ ಶಿವಸಾಯಿ ಪ್ರಾವಿಜನ್ಸ್‌ ಮಾಲೀಕ ಮುರುಳಿ.

‘ಈವರೆಗೆ ನಾವು ಗ್ರಾಹಕರಿಗೆ ಉದ್ರಿ ವ್ಯಾಪಾರದಲ್ಲಿ ವಸ್ತುಗಳನ್ನು ಕೊಟ್ಟಿದ್ದರೆ ವಾಪಸ್ ಹಣ ಪಡೆಯಲು ಭದ್ರತೆ ಇರುತ್ತಿರಲಿಲ್ಲ. ಇನ್ನು ಮುಂದೆ ಉದ್ರಿ ವ್ಯಾಪಾರಕ್ಕೆ ಕ್ರೆಡಿಟ್‌ ಬಿಲ್‌ ಹಾಕಿದರೆ ಗ್ರಾಹಕನ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಬಹುದು. ಜತೆಗೆ ಹಿಂದಿದ್ದ 16 ಬಗೆಯ ತೆರಿಗೆಗಳು ರದ್ದಾಗಲಿವೆ. ನಾಗರಿಕರು ಸರಕು ಮತ್ತು ಸೇವಾ ತೆರಿಗೆಯೊಂದನ್ನು ಮಾತ್ರ ಪಾವತಿಸಬೇಕಾಗುತ್ತದೆ. ಜಿಎಸ್‌ಟಿಯಿಂದ ತೊಂದರೆಯೂ ಇದೆ. ಸಂತೋಷವೂ ಇದೆ. ಕೆಲ ಅನನುಕೂಲಗಳನ್ನು ಹೊರತುಪಡಿಸಿಯೂ ಜಿಎಸ್‌ಟಿ ಜನಸ್ನೇಹಿ ವ್ಯವಸ್ಥೆ ಎಂದೇ ಹೇಳಬಹುದು’ ಎಂದು ತಿಳಿಸಿದರು.

‘ನಮಗೂ ಈವರೆಗೆ ಜಿಎಸ್‌ಟಿಯ ಸಂಪೂರ್ಣ ಚಿತ್ರಣ ದೊರೆತಿಲ್ಲ. ಹೊಸ ವ್ಯವಸ್ಥೆ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ಇದರಿಂದ ನಮಗೇನು ತೊಂದರೆ ಇಲ್ಲ. ಏಕೆಂದರೆ ಪ್ರತಿಯೊಂದು ಔಷಧಿ ಮಳಿಗೆಗಳಲ್ಲೂ ಬಿಲ್ಲಿಂಗ್, ದಾಸ್ತಾನು ನಿರ್ವಹಣೆ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದೆ. ಹೀಗಾಗಿ ಇದರಿಂದ ನಮಗೆ ಅಷ್ಟಾಗಿ ಕಷ್ಟವಾಗುವುದಿಲ್ಲ’ ಎಂದು ಹೇಳುತ್ತಾರೆ ನಗರ್ತ ಪೇಟೆ ರಸ್ತೆಯಲ್ಲಿರುವ ರಾಮಚಂದ್ರ ಮೆಡಿಕಲ್‌ ಸ್ಟೋರ್ ಮಾಲೀಕ ರಾಮು.

‘ದೇಶದಲ್ಲಿ 1957 ರಿಂದ 2003ರವರೆಗೆ ಕೆಎಸ್‌ಟಿ ಜಾರಿಯಲ್ಲಿತ್ತು. 2003ರಿಂದ ವ್ಯಾಟ್‌ ಅನುಷ್ಠಾನಕ್ಕೆ ಬಂತು. ಜುಲೈ 1ರಿಂದ ದೇಶದಾದ್ಯಂತ ಜಿಎಸ್‌ಟಿ ಜಾರಿಯಾಗುತ್ತಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದಾಗಲೆಲ್ಲ ಆತಂಕ ಹಾಗೂ ಗೊಂದಲಗಳು ಸಹಜ. ಜಿಎಸ್‌ಟಿ ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಹೊಸ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಷ್ಟೆ’ ಎನ್ನುತ್ತಾರೆ ಹೊಟೇಲ್‌ ಉದ್ಯಮಿ ಸೀತಾರಾಂ.

ಜವಳಿ ಮಳಿಗೆಗಳು ಬಂದ್‌

ಜಿಎಸ್‌ಟಿ ವ್ಯವಸ್ಥೆ ಜಾರಿಗೆ ವಿರೋಧಿಸಿ ಜವಳಿ ಉದ್ಯಮ ಶುಕ್ರವಾರ ಕರೆ ನೀಡಿದ್ದ ಬಂದ್ ಬೆಂಬಲಿಸಿ ನಗರದಲ್ಲಿರುವ ಜವಳಿ ಮಳಿಗೆಗಳು, ಸಿದ್ಧ ಉಡುಪು ಮಾರಾಟ ಮಳಿಗೆಗಳು ಬಾಗಿಲು ಮುಚ್ಚಿದ್ದವು. ನಗರದಲ್ಲಿ ಸುಮಾರು 250ಕ್ಕೂ ಅಧಿಕ ಜವಳಿ ಅಂಗಡಿಗಳಿವೆ.

‘ಜಿಎಸ್‌ಟಿ ಜಾರಿಗೆ ತಂದರೆ ಜವಳಿ ವರ್ತಕರು ತುಂಬಾ ಕಷ್ಟವಾಗಲಿದೆ. ಮೇಲಾಗಿ ಬಹುತೇಕ ವರ್ತಕರಿಗೆ ಐಟಿ ರಿಟರ್ನ್ಸ್‌ ಸಲ್ಲಿಕೆ ಮಾಡುವ ಜ್ಞಾನವಿಲ್ಲ. ಬಹುತೇಕ ಅಂಗಡಿಗಳಲ್ಲಿ ವಿದ್ಯುನ್ಮಾನ ಬಿಲ್ಲಿಂಗ್ ಮಾಡುವ ವ್ಯವಸ್ಥೆ ಇಲ್ಲ. ಇದೀಗ ಏಕಾಏಕಿ ಜಿಎಸ್‌ಟಿ ಜಾರಿ ಮಾಡಿದರೆ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ.

ಹೀಗಾಗಿಯೇ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಲೆಕ್ಕ ಸಲ್ಲಿಸುವ ಪ್ರಕ್ರಿಯೆ ಸರಳಗೊಳಿಸಬೇಕು. ಇನ್ನೂ ಕಾಲಾವಕಾಶ ನೀಡಬೇಕು. ತೆರಿಗೆ ಇಲಾಖೆ ವತಿಯಿಂದಲೇ  ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಬಜಾರ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಸಿಲ್ಕ್ ಸೆಂಟರ್ ಮಾಲೀಕ ಲಕ್ಷ್ಮಿರಾಮ್ ತಿಳಿಸಿದರು.

* * 

ಪ್ರತಿ ಬಿಲ್‌ ಅಪ್‌ಲೋಡ್‌ ಮಾಡಬೇಕು. ಇದಕ್ಕೆ ಕಡ್ಡಾಯವಾಗಿ ಕಂಪ್ಯೂಟರ್‌, ತಂತ್ರಾಂಶಗಳು ಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೆಕ್ಕ ನಿರ್ವಹಣೆ ತುಸು ಕಷ್ಟವಾಗಲಿದೆ.

ಪ್ರಸನ್ನ, ಅಡುಗೆ ಎಣ್ಣೆ ಸಗಟು ವ್ಯಾಪಾರಿ

ಪ್ರತಿಕ್ರಿಯಿಸಿ (+)