ಶನಿವಾರ, ಡಿಸೆಂಬರ್ 7, 2019
26 °C

ಮದುವೆಯ ನಂತರ...

Published:
Updated:
ಮದುವೆಯ ನಂತರ...

ಅಪ್ಪ-ಅಮ್ಮನ ಮುದ್ದಿನ ಆರೈಕೆಯಲ್ಲಿ ಯಾವ ಕಷ್ಟವೂ ಯಾವ ಜವಾಬ್ದಾರಿಯೂ ಇಲ್ಲದೆ ಸುಖವಾಗಿ ಬೆಳೆದ ನನ್ನಂಥ ಹೆಣ್ಣು ಮಕ್ಕಳಿಗೆ ಜೀವನದ ಇನ್ನೊಂದು ಮುಖ ಅನಾವರಣಗೊಳ್ಳುವುದು ಮದುವೆಯ ನಂತರವೇ.

ಅಲ್ಲಿಯವರೆಗೂ ಮನೆಯ ಹೊರಗಿನ ಕೆಲಸಕ್ಕೆ ಅಪ್ಪನ ಕೈ ಹಿಡಿದು, ಮನೆಯ ಒಳಗಿನ ಕೆಲಸಕ್ಕೆ ಅಮ್ಮನ ಸೆರಗಿಡಿದು ನಿಭಾಯಿಸುತ್ತಿದ್ದ ನಮಗೆ ಒಮ್ಮೆಲೇ ಒಂಟಿಯಾದ ಅನುಭವ. ಆಗ ಇಡುವ ಎಷ್ಟೋ ಹೆಜ್ಜೆಗಳು ತಪ್ಪಾಗುತ್ತವೆ. ಕೆಲವೊಂದು ತಪ್ಪು ಹೆಜ್ಜೆಗಳು ನಾವು ಹಿಂದಿರುಗಿ ಬರಲಾರದಷ್ಟು ದೂರ ನಮ್ಮನ್ನು ಕರೆದೊಯ್ದಿರುತ್ತವೆ. ಇನ್ನು ಕೆಲವು ಸರಿಯಾದ ಪಾಠ ಕಲಿಸುತ್ತವೆ.

ಮದುವೆಯ ಮೊದಲು ಅಪ್ಪ-ಅಮ್ಮ ಎಷ್ಟು ಬುದ್ಧಿಮಾತು ಹೇಳಿದರೂ ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಡುತ್ತಿದ್ದ ನಮಗೆ ಈಗ ಅದರ ಬೆಲೆ ಅರಿವಾಗುತ್ತದೆ.

ಮನೆಯ ಒಳಗಿನ ಹೋರಾಟ ಒಂದು ತರಹದ್ದಾದರೆ ಹೊರಗಿನದು ಇನ್ನೊಂದು ತರಹ. ಒಳಗಿನದು ಬರೆಯುವ ಹಾಗಿಲ್ಲ ಬಿಡಿ. ಸಿಟಿ ಬಸ್ ತುಂಬಿ ತುಳುಕುತ್ತಿತ್ತು. ಬಸ್ ಹತ್ತಿ ಆ ಕೈಲೊಂದು ಈ ಕೈಲೊಂದು ಕಂಬಿ ಹಿಡಿದು ನಿಂತೆ. ಮುಂದಿನ ಸ್ಟಾಪಿನಲ್ಲಿ ಐದಾರು ಹೆಂಗಸರು ಹತ್ತಿದರು.ಈ ತರಹದ ಹೆಂಗಸರು ನೋಡಲು ಮುಗ್ಧರಾಗಿರುತ್ತಾರೆ. ಅವರೊಂದಿಗೆ ಪುಟ್ಟ -ಪುಟ್ಟ ಮಕ್ಕಳೂ ಇರುತ್ತಾರೆ.

ಅವರ ಕೆಲಸದ ವೈಖರಿ ಹೀಗಿರುತ್ತದೆ. ಅವರು ತುಂಬಾ ರಶ್ ಇರುವ ಬಸ್ ಹತ್ತುತ್ತಾರೆ. ನನ್ನಂಥ ಒಂದು ಮಿಕ ಗುರುತಿಸುತ್ತಾರೆ. ಅವರು ಮಾಡುವ ಕೆಲಸವನ್ನು ಬೇರೆ ಪ್ರಯಾಣಿಕರು ನೋಡದಂತೆ ಅವರೇ ಮಿಕದ ಸುತ್ತಲೂ ನಿಲ್ಲುತ್ತಾರೆ. ನಮಗೇ ಗೊತ್ತಾಗದಂತೆ ನಮ್ಮ ಬ್ಯಾಗಿನಿಂದ ದುಡ್ಡು ತೆಗೆಯುತ್ತಾರೆ. ಡ್ರೈವರ್‌ ಜೊತೆ ಕಾಲು ಕೆರೆದು ಜಗಳ ತೆಗೆದು ಬಸ್ ನಿಲ್ಲಿಸಿ ಇಳಿಯುತ್ತಾರೆ. ನಮಗೆ ತಿಳಿಯುವ ಹೊತ್ತಿಗೆ ನಾವೇ ಎಷ್ಟೋ ದೂರ ಬಂದಿರುತ್ತೇವೆ. ನಮ್ಮ ವಸ್ತುಗಳನ್ನು ನಾವೇ ನೋಡಿಕೊಳ್ಳಬೇಕು ಎಂಬ ಅಮ್ಮನ ಮಾತು ನೆನಪಾಗುತ್ತದೆ.

ಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಬೇಕಿತ್ತು. ಅದಕ್ಕೆ ಸಂಬಂಧಿಸಿದ ಪಾಸ್ ಬುಕ್, ಚೆಕ್ ಬುಕ್ ಎಲ್ಲವನ್ನೂ ಸರಂಡರ್ ಮಾಡಿ ಬಂದೆ. ಅಕೌಂಟಿನಲ್ಲಿದ್ದ `10000 ಬೇರೆ ಅಕೌಂಟಿಗೆ ಹಾಕಲು ಹೇಳಿದ್ದೆ. ಒಂದೇ ದಿನದಲ್ಲಿ ಆಗಬೇಕಿದ್ದ ಕೆಲಸ ಮೂರು ದಿನವಾದರೂ ಆಗಿಲ್ಲ! ಹೋಗಿ ಕೇಳೋಣವೆಂದರೆ ಅಲ್ಲಿಯವರೆಗೂ ನಾಲಗೆಯ ತುದಿಯಲ್ಲಿದ್ದ ಅಕೌಂಟ್ ನಂಬರ್ ತಲೆಯ ಯಾವ ಮೂಲೆ ಹುಡುಕಿದರೂ ಸಿಗಲಿಲ್ಲ.

ನಮಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೆಡೆ ಬರೆದಿಡಬೇಕು ಎಂದು ಅಪ್ಪ ಹೇಳುತ್ತಿದ್ದುದು ನೆನಪಾಯಿತು. ಏನೂ ಮಾಡಲು ತೋಚದೆ ಮ್ಯಾನೇಜರ್‌ಗೆ ಫೋನ್ ಮಾಡಿ ಮಂಗಳಾರತಿ ಮಾಡಿಸಿಕೊಂಡು ಕೆಲಸ ಸಾಧಿಸಿದ್ದಾಯಿತು.

ಈಗ ನಾವು ಹೇಳುವ ಬುದ್ಧಿಮಾತನ್ನು ನಮ್ಮ ಮಕ್ಕಳು ಕೇಳುವುದಿರಲಿ, ಕೇಳಿಸಿಕೊಳ್ಳುವುದೂ ಇಲ್ಲ. ಆದರೂ ಜೀವನದ ಯಾವ ಕ್ಷಣದಲ್ಲದರೂ ಮಕ್ಕಳು ನೆನೆಸಿಕೊಳ್ಳುತ್ತಾರೆ ಎಂದು ನಮಗೆ ಗೊತ್ತಿರುವುದನ್ನು ನಾವು ಮಕ್ಕಳಿಗೆ ಹೇಳಲೇ ಬೇಕು.

ರಾಜಲಕ್ಷ್ಮಿ ಸಿ.ವಿ, ಬೆಂಗಳೂರು

ಪ್ರತಿಕ್ರಿಯಿಸಿ (+)