ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ ಹೊಂದಿಕೊಳ್ಳಲು ವರ್ತಕರ ಹೆಣಗಾಟ

ಹೋಟೆಲ್‌, ಜವಳಿ ಅಂಗಡಿಗಳಲ್ಲಿ ಏಕರೂಪದ ತೆರಿಗೆ ಪದ್ಧತಿ ಅಳವಡಿಕೆ
Last Updated 1 ಜುಲೈ 2017, 20:21 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಶನಿವಾರದಿಂದ ಜಾರಿಗೆ ಬಂದಿದೆ. ಆದರೆ, ಈ ಬಗ್ಗೆ ವರ್ತಕರಿಗೆ ತಿಳಿವಳಿಕೆಯೇ ಇಲ್ಲ.   ಹೊಸ ತೆರಿಗೆ ಪದ್ಧತಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿರುವ ಅವರು ಕಾದು ನೋಡುವ ತಂತ್ರ  ಅನುಸರಿಸಲು   ಮುಂದಾಗಿದ್ದಾರೆ.

ಇನ್ನೊಂದೆಡೆ ಜಿಎಸ್‌ಟಿ ಬಗ್ಗೆ ಕುತೂಹಲ ಹೊಂದಿದ್ದ ಗ್ರಾಹಕರಿಗೆ ಇದರ ಸಿಹಿ –ಕಹಿ ಅನುಭವಗಳಾಗಿವೆ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಗ್ರಾಹಕರಿಗೆ ಇದರ ಪರಿಣಾಮ ತುಸು ತಟ್ಟಿದೆ.

ಹೋಟೆಲ್‌ ತಿನಿಸು ತುಟ್ಟಿ:  ಕೆಲವು ಹೋಟೆಲ್‌ಗಳು ಶನಿವಾರದಿಂದಲೇ ಜಿಎಸ್‌ಟಿ ಸೇರಿಸಿ ಬಿಲ್‌ ನೀಡುತ್ತಿವೆ. ಇಂತಹ ಹೋಟೆಲ್‌ಗಳಲ್ಲಿ ತಿಂಡಿ–ತಿನಿಸುಗಳು ತುಟ್ಟಿಯಾಗಿವೆ. ಹವಾನಿಯಂತ್ರಿತ ವ್ಯವಸ್ಥೆ (ಎ.ಸಿ.) ಇಲ್ಲದ ಹೋಟೆಲ್‌ಗಳಿಗೆ ಶೇ 12ರಷ್ಟು ಹಾಗೂ ಎ.ಸಿ. ಇರುವ ಹೋಟೆಲ್‌ಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

ಎ.ಸಿ. ಇಲ್ಲದ ಹೋಟೆಲ್‌ಗಳಲ್ಲಿ ಟೀ, ಮತ್ತು ಕಾಫಿ ದರ ₹10 ಇದ್ದುದು ಈಗ ₹11ಕ್ಕೆ ಏರಿಕೆ ಆಗಿದೆ. ಇಡ್ಲಿ, ವಡೆ, ಮಸಾಲೆ ದೋಸೆ, ರೈಸ್‌ಬಾತ್‌ನಂತಹ ತಿನಿಸುಗಳ ಬೆಲೆಯೂ  ಹೆಚ್ಚಾಗಿದೆ. ಎ.ಸಿ. ಇರುವ ಹೋಟೆಲ್‌ಗಳಲ್ಲಿ ₹120ರಿಂದ ₹140 ರಷ್ಟಿದ್ದ ಊಟದ ದರ ₹160– ₹180 ರಷ್ಟು ಆಗಿದೆ.

ಮಾವಳ್ಳಿ ಟಿಫನ್‌ ರೂಮ್ಸ್‌ ಹೋಟೆಲ್‌ನಲ್ಲಿ ₹32.2 ದರದ ಕಾಫಿಗೆ ಸಿಜಿಎಸ್‌ಟಿ ₹2.90 ಹಾಗೂ ಎಸ್‌ಜಿಎಸ್‌ಟಿ ₹2.90 ಸೇರಿ ಒಟ್ಟು ₹38 ದರ ನಿಗದಿ ಮಾಡಲಾಗಿದೆ. ಆದರೆ, ಬಹುತೇಕ ಸಾಮಾನ್ಯ ಹೋಟೆಲ್‌ಗಳು ಈ ಹಿಂದಿನ  ದರದ ಪ್ರಕಾರವೇ ತಿಂಡಿ–ತಿನಿಸುಗಳನ್ನು ನೀಡುತ್ತಿವೆ.

‘ನಾವು ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿಲ್ಲ. ಹಳೆಯ ದರಗಳ ಅನುಸಾರ ತಿಂಡಿ–ತಿನಿಸುಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಇದನ್ನು ಜಾರಿಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕಿದೆ’ ಎಂದು ಶಿವಾಜಿನಗರದ ವಿನಯ್‌ ಉಪಾಹಾರದ ಸುಭಾಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಪ್ರಸಾದ್‌ ದರ್ಶಿನಿಯ ಮಾಲೀಕ ಬಸವರಾಜು, ‘ಅಗತ್ಯ ಸಾಮಗ್ರಿಗಳನ್ನು ಈಗಾಗಲೇ ಖರೀದಿ ಮಾಡಿದ್ದೇವೆ. ಅದರ ದಾಸ್ತಾನು ಮುಗಿದ ಬಳಿಕ ಹೊಸ ದರ ನಿಗದಿಪಡಿಸುತ್ತೇವೆ. ಸದ್ಯಕ್ಕೆ ತಿಂಡಿ–ತಿನಿಸುಗಳ ದರಗಳಲ್ಲಿ ವ್ಯತ್ಯಾಸ ಇಲ್ಲ’ ಎಂದರು.

ಇನ್ನು ಕೆಲವು ಹೋಟೆಲ್‌ಗಳು ಹಳೆಯ ತೆರಿಗೆ ಹಾಗೂ ಜಿಎಸ್‌ಟಿ ಎರಡನ್ನೂ ಸೇರಿಸಿ ಗ್ರಾಹಕರಿಂದ ವಸೂಲಿ ಮಾಡುತ್ತಿರುವುದೂ ಕಂಡುಬಂತು. ಇದರಿಂದ ತಿಂಡಿ–ತಿನಿಸುಗಳ ಬೆಲೆ ದುಬಾರಿ ಆಗಿದೆ.

‘ಜಿಎಸ್‌ಟಿ ಜಾರಿ ಬಗ್ಗೆ ನಮ್ಮ ಮಾಲೀಕರು ಏನು ಕ್ರಮ ಕೈಗೊಂಡಿದ್ದಾರೆ  ಎಂಬುದು ಗೊತ್ತಿಲ್ಲ. ಅವರು ನೀಡುವ ಸೂಚನೆಯ ಅನುಸಾರ ನಾವು ನಡೆದುಕೊಳ್ಳುತ್ತೇವೆ’ ಎಂದು ಕೋರಮಂಗಲದ ರಾಘವೇಂದ್ರ ಉಪಾಹಾರದ ಕೆಲಸಗಾರ ಗಿರೀಶ್‌ ತಿಳಿಸಿದರು. ನಗರದ ಬಹುತೇಕ ದಿನಸಿ ಅಂಗಡಿಗಳಲ್ಲಿ ಹಳೆಯ ದರ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ.

‘ಜಿಎಸ್‌ಟಿ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ದಿನ ಬಳಕೆಯ ವಸ್ತುಗಳು ಸಾಕಷ್ಟು ದಾಸ್ತಾನಿವೆ. ಅವು ಖಾಲಿ ಆಗುವವರೆಗೂ ಹಳೆಯ ದರದಲ್ಲೇ ಮಾರಾಟ ಮಾಡುತ್ತೇವೆ. ಹೊಸ ವಸ್ತುಗಳನ್ನು ಎಂಆರ್‌ಪಿ ದರದಲ್ಲೇ ಮಾರಾಟ ಮಾಡುತ್ತೇವೆ’ ಎಂದು ಜಕ್ಕಸಂದ್ರದ ಪ್ರಾವಿಜನ್‌ ಸ್ಟೋರ್‌ನ ಮುಜೀದ್‌ ತಿಳಿಸಿದರು.

ಬಿಗ್‌ ಬಜಾರ್‌, ರಿಲಯನ್ಸ್‌ ಫ್ರೆಶ್‌, ಮೋರ್‌ನಂತಹ ಸೂಪರ್‌ ಮಾರುಕಟ್ಟೆಗಳಲ್ಲಿ ಜಿಎಸ್‌ಟಿ ಅನ್ವಯವೇ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

ಮಲ್ಲೇಶ್ವರದ ಸೂಪರ್‌ ಮಾರುಕಟ್ಟೆಯ ವ್ಯವಸ್ಥಾಪಕ ರಘುರಾಂ, ‘ಗ್ರಾಹಕರ ಸಂಖ್ಯೆಯಲ್ಲಿ ಅಂತಹ ವ್ಯತ್ಯಾಸ ಉಂಟಾಗಿಲ್ಲ. ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದಾರೆ. ಯಾರಿಗೂ ಅಂತಹ ಗೊಂದಲ ಇಲ್ಲ. ಕೆಲ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದಕ್ಕೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದರು.

ಜವಳಿ ಉತ್ಪನ್ನಗಳಿಗೆ ಶೇ 5ರಷ್ಟು ತೆರಿಗೆ: ‘ಜವಳಿ ಉತ್ಪನ್ನಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ನಮ್ಮ ಮಳಿಗೆಯಲ್ಲಿ ಇಂದಿನಿಂದಲೇ ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡಿದ್ದೇವೆ.  ಆದರೆ, ತಂತ್ರಾಂಶವನ್ನು ಮೇಲ್ದರ್ಜೇಗೇರಿಸಬೇಕಿದೆ. ಸದ್ಯ ಹಳೆಯ ಬಿಲ್‌ ಪುಸ್ತಕದಲ್ಲಿ ದರದ ಜತೆಗೆ ಜಿಎಸ್‌ಟಿಯನ್ನು  ಬರೆದು ಕೊಡುತ್ತಿದ್ದೇವೆ. ಸೋಮವಾರದಿಂದ ಕಂಪ್ಯೂಟರೀಕೃತ ಬಿಲ್‌ ನೀಡುತ್ತೇವೆ’ ಎಂದು ಚಿಕ್ಕಪೇಟೆಯ ವೆಂಕಟೇಶ್ವರ ಸಿಲ್ಕ್ಸ್‌ನ ಬಾಲಾಜಿ ಹೇಳಿದರು.

‘ಈಗ ಜವಳಿ ಉತ್ಪನ್ನಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ₹1,000 ಮೌಲ್ಯದ ಸೀರೆಗೆ ₹50 ತೆರಿಗೆ ವಿಧಿಸಬೇಕು. ಆದರೆ, ನಮ್ಮಲ್ಲಿಗೆ ಬರುವ ಗ್ರಾಹಕರಿಗೆ ಮೂರು ತಿಂಗಳವರೆಗೆ ಈ ತೆರಿಗೆಯನ್ನು ಹಾಕುವುದಿಲ್ಲ. ಅದನ್ನು ನಾವೇ ಭರಿಸುತ್ತೇವೆ’ ಎಂದು ತಿಳಿಸಿದರು.

‘ಜಿಎಸ್‌ಟಿ ದೇಶಕ್ಕೆ ಹಾಗೂ ವ್ಯಕ್ತಿಗೆ ಅನುಕೂಲ. ಸರಿಯಾದ ರೀತಿಯಲ್ಲಿ ವ್ಯಾಪಾರ ಮಾಡುವವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ’ ಎಂದರು.

ಹಳೆಯ ದರದಲ್ಲೇ ಔಷಧ ಮಾರಾಟ
ನಗರದ ಬಹುತೇಕ ಔಷಧ ಮಳಿಗೆಗಳಲ್ಲಿ  ಔಷಧಗಳನ್ನು ಹಳೆಯ ದರದಲ್ಲೇ ಮಾರಾಟ ಮಾಡಲಾಗುತ್ತಿದೆ. ‘ತಂತ್ರಾಂಶವನ್ನು ಮೇಲ್ದರ್ಜೆಗೇರಿಸಬೇಕಿದೆ. ಜಿಎಸ್‌ಟಿ ಕೋಡ್‌ ಇನ್ನೂ ಸಿಕ್ಕಿಲ್ಲ. ಹೀಗಾಗಿ ಹೊಸ ಬಿಲ್ಲಿಂಗ್‌ ವ್ಯವಸ್ಥೆ ಜಾರಿಗೊಂಡಿಲ್ಲ. ದಾಸ್ತಾನು ಇರುವ ಔಷಧಗಳನ್ನು ಹಳೆಯ ದರದಲ್ಲೇ ಮಾರಾಟ ಮಾಡುತ್ತೇವೆ. ನಿಗದಿಪಡಿಸಿರುವ ಬೆಲೆಗಿಂತ (ಎಂಆರ್‌ಪಿ) ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಮಾರತ್ತಹಳ್ಳಿಯ ಔಷಧ ಮಳಿಗೆಯ ಮಾಲೀಕ ಬಿ.ಕೆ.ರಾಜೇಶ್‌ ಹೇಳಿದರು.

‘ಈ ಹಿಂದೆ ಔಷಧಗಳಿಗೆ ಶೇ 5.5ರಷ್ಟು ತೆರಿಗೆ  ವಿಧಿಸಲಾಗುತ್ತಿತ್ತು. ಈಗ ಇದು ಶೇ 12ರಷ್ಟು ಆಗಿದೆ. ಇದರಿಂದ ಗ್ರಾಹಕರಿಗೆ ಸ್ವಲ್ಪ ಹೊರೆ ಆಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT