ಸೋಮವಾರ, ಡಿಸೆಂಬರ್ 16, 2019
17 °C

ಮುಂಬೈನ ಭೀವ್‍ಪುರಿ ಜಲಪಾತದ ಬಳಿ ಸ್ವಚ್ಛತಾ ಕಾರ್ಯ ಮೂಲಕ ತೆರವು ಮಾಡಿದ್ದು 2,500 ಕೆಜಿ ಮದ್ಯದ ಬಾಟಲಿ ಕಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನ ಭೀವ್‍ಪುರಿ ಜಲಪಾತದ ಬಳಿ ಸ್ವಚ್ಛತಾ ಕಾರ್ಯ ಮೂಲಕ ತೆರವು ಮಾಡಿದ್ದು 2,500 ಕೆಜಿ ಮದ್ಯದ ಬಾಟಲಿ ಕಸ!

ಮುಂಬೈ: ಮುಂಬೈ ನಗರದಿಂದ ಸುಮಾರು 90 ಕಿಮೀ ದೂರದಲ್ಲಿರುವ ಅಶಾನೆ ಗ್ರಾಮದ ಬಳಿ ಇರುವ ಭೀವ್‍ಪುರಿ ಜಲಪಾತದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಪರಿಸರ ಸ್ನೇಹಿಗಳಿಗೆ ಸಿಕ್ಕಿದ್ದು 2500 ಸಾವಿರ ತೂಕದ ಮದ್ಯದ ಬಾಟಲಿ ಕಸ!

ಮುಂಬೈಯ ಎನ್ವಿರಾನ್ಮೆಂಟ್ ಲೈಫ್ ಎಂಬ ಎನ್‍ಜಿಒ ನೇರುಲ್, ಆನಂದ್‍ವಡಿ, ಜುಮ್ಮಾಪಟ್ಟಿ, ತಪಲ್‍ವಡಿ, ಖೋಪೊಲಿ -ಜೆನಿತ್, ವಾಸೈ-ಚಿಂಚೋಟಿ, ಕೊಂಡೇಶ್ವರ್ ಮತ್ತು ಪಾಂಡವ್‍ಕಡ ಎಂಬಲ್ಲಿರುವ ಜಲಪಾತ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡಿತ್ತು. ಈ ಕಾರ್ಯದಲ್ಲಿ 125ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಲ್ಲಿನ ಸ್ಥಳೀಯರು ಭಾಗಿಯಾಗಿದ್ದರು.

ಸುಮಾರು 5,000 ಮಂದಿ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಇಷ್ಟೊಂದು ಮದ್ಯದ ಬಾಟಲಿಗಳನ್ನು ತೆರವು  ಮಾಡುವುದು ಕಷ್ಟದ ಕೆಲಸವಾಗಿತ್ತು ಎಂದು ಎನ್‍ಜಿಒದ ಮುಖ್ಯ ಸಂಚಾಲಕ ಧರ್ಮೇಶ್ ಬರಾಯಿ ಹೇಳಿದ್ದಾರೆ. ಆದಾಗ್ಯೂ, ಈ ಕಸ ಜಲಪಾತದ ಬಳಿ ಇರುವ ಒಟ್ಟು ಕಸದ ಶೇ.10ರಷ್ಟೇ ಆಗಿರಬಹುದು ಅಂತಾರೆ ಇವರು.

ಮಳೆಗಾಲದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ತಿಂದು ಬಿಸಾಡಿದ ತಿಂಡಿಯ ಪೊಟ್ಟಣಗಳು, ಥರ್ಮೋಕಾಲ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಚಮಚ, ಬಾಟಲಿ, ಕಸಗಳನ್ನು ಇಲ್ಲಿಂದ ತೆರವು ಮಾಡಲಾಗಿದೆ, ಪ್ರವಾಸಿಗಳು ಇಲ್ಲಿಗೆ ಬಂದು ಮದ್ಯ ಕುಡಿದು ಬಿಸಾಡುವ ಬಾಟಲಿಗಳಿಂದಾಗಿ ತೊಂದೆರೆ ಅನುಭವಿಸುತ್ತಿದ್ದೇವೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.

ಜಲಪಾತದ ಬಳಿ ಮದ್ಯ ಸೇವನೆ ನಿಷೇಧಿಸಬೇಕು. ಮದ್ಯದ ಬಾಟಲಿಗಳನ್ನು ಕಂಡ ಕಂಡಲ್ಲಿ ಬಿಸಾಡಿರುವುದರಿಂದ ಇಲ್ಲಿ ಓಡಾಡುವಾಗ ಗಾಯಗಳಾಗುತ್ತಿವೆ. ಆದ್ದರಿಂದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗಳು ಮದ್ಯ ಸೇವನೆ ಮಾಡುವುದು ಬೇಡ. ಇದು ನಮ್ಮ ಜನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಶಾನೆ ಗ್ರಾಮದ ಸೋಪಾನ್ ತಾಂಗೆ ಎಂಬವರು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)