ಸೋಮವಾರ, ಡಿಸೆಂಬರ್ 16, 2019
17 °C

ಅಲ್ಲೊಂದು ಅಜ್ಜಿ ಸತ್ತರೆ ಇಲ್ಲೊಂದು ಮಗ್ಗ ಸ್ಥಗಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲೊಂದು ಅಜ್ಜಿ ಸತ್ತರೆ ಇಲ್ಲೊಂದು ಮಗ್ಗ ಸ್ಥಗಿತ!

ಗುಳೇದಗುಡ್ಡದ ಖಣಕ್ಕೆ ಬಹುದೊಡ್ಡ ಮಾರುಕಟ್ಟೆ ಎಂದರೆ ಮಹಾರಾಷ್ಟ್ರ. ಆಧುನಿಕ ಉಡುಗೆ–ತೊಡುಗೆಗಳ ಈ ಕಾಲದಲ್ಲಿ ಖಣದ ಕುಪ್ಪಸವನ್ನು ತೊಡುವವರಾರು? ಪೂಜಾ ಕಾರ್ಯಗಳಿಗೆ, ಧಾರ್ಮಿಕ ಸಮಾರಂಭಗಳಿಗೆ ಹೊರತುಪಡಿಸಿದರೆ ಈಗ ಅಲ್ಲಿ ಖಣ ಬೇಕಾಗಿರುವುದು ವೃದ್ಧೆಯರಿಗೆ ಮಾತ್ರ. ಹೀಗಾಗಿ ಮಹಾರಾಷ್ಟ್ರದಲ್ಲಿ ಒಬ್ಬ ಅಜ್ಜಿ ಸತ್ತರೆ ಗುಳೇದಗುಡ್ಡದ ಒಂದು ಮಗ್ಗ ಬಂದ್ ಆಗುತ್ತದೆ ಎನ್ನುತ್ತಾರೆ. ಅಂದರೆ ತೊಡುವವರಿಲ್ಲದ ಮೇಲೆ ಕೈಮಗ್ಗದ ಕುಪ್ಪಸ ಖಣ ಯಾರಿಗೆ ಬೇಕು?

ಈಗಲೂ ನೆರೆಯ ಮಹಾರಾಷ್ಟ್ರದ ಫಂಡರಪುರ, ಕೊಲ್ಲಾಪುರ, ನಾಸಿಕ್‌, ಅಳಂದ, ಅಹಮ್ಮದ್‌ನಗರ, ಔರಂಗಬಾದ್‌, ಉಸ್ಮಾನಾಬಾದ್‌ ಮತ್ತಿತರ ನಗರಗಳಿಗೆ ಭಾರತೀಯ ಅಂಚೆ ಇಲಾಖೆ ಮೂಲಕ ಪ್ರತಿ ನಿತ್ಯ ‘ಗುಳೇದಗುಡ್ಡದ ಖಣ’ವನ್ನು ಕಳುಹಿಸಲಾಗುತ್ತಿದೆ. ಇದರಿಂದ ತಿಂಗಳಿಗೆ ₹ 65 ಸಾವಿರ ಆದಾಯ ಅಂಚೆ ಇಲಾಖೆಗೆ ಬರುತ್ತಿರುವುದಾಗಿ ಬಾಗಲಕೋಟೆ ಕೇಂದ್ರ ಅಂಚೆ ಕಚೇರಿಯ ಮಾರುಕಟ್ಟೆ ವ್ಯವಸ್ಥಾಪಕ ಸಂತೋಷ್‌ ಕುಲಕರ್ಣಿ ಹೇಳುತ್ತಾರೆ. ಅಂದ ಮೇಲೆ ಮೊದಲಿನ ವೈಭೋಗ ಹೇಗಿದ್ದಿರಬೇಕು?

1991ರಿಂದ 2001ರ ಹತ್ತು ವರ್ಷಗಳ ಅವಧಿಯಲ್ಲಿ ಗುಳೇದಗುಡ್ಡದಲ್ಲಿ ಆದ ಜನಸಂಖ್ಯೆ ಹೆಚ್ಚಳ 95 ಮಾತ್ರ ! ಅದಾದ ಹತ್ತು ವರ್ಷಗಳ ನಂತರದ ಅವಧಿಯಲ್ಲಿ ಮೊದಲು ಇದ್ದುದಕ್ಕಿಂತಲೂ 609 ಜನ ಕಡಿಮೆಯಾದರು. ಎಲ್ಲೆಡೆಯೂ ದಿನೇ ದಿನೇ ಜನಸಂಖ್ಯೆ ಹೆಚ್ಚಳ ಆಗುತ್ತಿರುವಾಗ ಇಲ್ಲಿ ಯಾಕೆ ಹೀಗೆ?

ಇದಕ್ಕೆ ಕಾರಣ ಗುಳೇ ಹೋಗಿರುವ ಜನರು. ಹೊಟ್ಟೆಪಾಡಿಗಾಗಿ, ಕೆಲಸ ಹುಡುಕಿಕೊಂಡು ಮಂಗಳೂರು, ಉಡುಪಿ, ಬೆಂಗಳೂರು, ಪುಣೆ, ನಾಸಿಕ್, ಗೋವಾ ಎಂದು ಹೋಗಿರುವ ಇಲ್ಲಿಯ ಜನರು ಜನಗಣತಿಯಲ್ಲಿ ಸೇರಿಲ್ಲ. ಕಡಿಮೆ ಜನಸಂಖ್ಯೆಯಿಂದಾಗಿಯೇ ಈ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಳ್ಳುವಂತಾಯಿತು.

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿಯೇ ಗುಳೇದಗುಡ್ಡದ 25 ಸಾವಿರ ಜನರು ಇದ್ದಾರೆ ಎನ್ನಲಾಗುತ್ತಿದ್ದು, ಮೆಜೆಸ್ಟಿಕ್‌ನಿಂದ ಕಾಮಾಕ್ಷಿಪಾಳ್ಯಕ್ಕೆ ಹೊರಡುವ ಈ ಬಸ್ಸಿಗೆ ‘ಗುಳೇದಗುಡ್ಡ ಬಸ್’ ಎಂತಲೂ ಹೆಸರಿದೆಯಂತೆ! ಅದನ್ನು ಊರವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೂಡ! ಆದ್ದರಿಂದಲೇ ಗುಳೇದಗುಡ್ಡದ ನಾಗರಿಕ ಹಿತರಕ್ಷಣಾ ಸಮಿತಿಯ ಅಶೋಕ ಹೆಗಡೆ ಮತ್ತು ಶ್ರೀಕಾಂತ ಹುನಗುಂದ ಅವರು ಊರಿನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

‘ಗಣತಿದಾರರು ಮನೆಗೆ ಬಂದಾಗ ಮನೆಯಲ್ಲಿರುವ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರ ಎಲ್ಲರ ಹೆಸರನ್ನೂ ನಮೂದಿಸಬೇಕು. ಅವರು ಊರು ತೊರೆದು ಐದು ವರ್ಷವಾಗಲೀ, ಹತ್ತು ವರ್ಷವಾಗಲೀ ಎಲ್ಲರ ಹೆಸರನ್ನೂ ಬರೆಸಬೇಕು. ಅವರೇನು ಅಲ್ಲಿ ಶಾಶ್ವತವಾಗಿ ನೆಲೆಸಲು ಹೋಗಿಲ್ಲ. ಅನ್ನ ಸಂಪಾದನೆಗೆ ಹೋಗಿದ್ದಾರೆ. ಬರುವ ದಿನಗಳಲ್ಲಿ ಇಲ್ಲಿ ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ಅವರೆಲ್ಲ ಇಲ್ಲಿಗೇ ಮರಳುತ್ತಾರೆ’ ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದಾರೆ.

4 ಚೀಲ ಜೋಳವೂ ಮಾರಾಟವಾಗದು!

ನಲವತ್ತು ವರ್ಷದಿಂದ ಗುಳೇದಗುಡ್ಡದಲ್ಲಿ ಜೋಳದ ವ್ಯಾಪಾರ ಮಾಡುತ್ತಿರುವ ಪಾಂಡು ಹಾದಿಮನಿ, ಪ್ರತೀ ಬುಧವಾರ ಮತ್ತು ಗುರುವಾರ ಏನಿಲ್ಲವೆಂದರೂ 100 ಚೀಲ ಮಾರಾಟ ಆಗುತ್ತಿತ್ತು. ಈಗ ನಾಲ್ಕು ಚೀಲ ಖರ್ಚಾಗುವುದೂ ಕಷ್ಟ ಎನ್ನುತ್ತಾರೆ. ‘ಸೊಲ್ಹಾಪುರ, ಕೊಲ್ಲಾಪುರ, ಅಹಮದಾಬಾದ್ ಎಲ್ಲೆಲ್ಲಿಂದ ಮಂದಿ ಬರ್ತಿತ್ತು ಏನ್ತಾನ? ಸಜ್ಜಿ, ಜ್ವಾಳ, ರಬಡಿ ಜಿಲೇಬಿ…. ಎಲ್ಲಾ ಒಂದ್ ಕನಸನಂಗ ಆಗೇತ್ರಿ’ ಎಂದು ತೋಗುಣಶಿ ತಾಂಡಾದ ಅರಳೀಕಟ್ಟೆಯ ಮೇಲಿನ ದೂಳು ಒರೆಸಿ ಕುಳಿತರು.

ಗುಡ್ಡ ಅಡ್ಡಾಡಿ ದಣಿದವರಿಗೆ ಅರಳಿ ಮರದ ಗಾಳಿ ಹಿತವೆನಿಸಿ ಕುಳಿತರೆ, ತಾಂಡಾದಲ್ಲಿಯೇ ಇದ್ದ ಚಹಾದಂಗಡಿಯಿಂದ ಚಹಾ ತರಿಸಿ ಕುಡಿಸಿದರು. ಆಗಲೇ ತಾಂಡಾದ ಕಡೆ ಲಕ್ಷ್ಯ ಹೊರಳಿದ್ದು. ಕಟ್ಟಿಗೆ ಕಡಿದು, ಮಾರಿ ಜೀವನ ನಡೆಸುತ್ತಿದ್ದ ಬಂಜಾರರಿಗೂ ದುಡಿಮೆ ಇಲ್ಲ! ಖಣದ ಕೆಲಸ ನಿಂತ ಮೇಲೆ ಗುಳೇದಗುಡ್ಡಕ್ಕೆ ಕಟ್ಟಿಗೆ ಪೂರೈಸುವುದೂ ಕಡಿಮೆಯಾಯಿತು. ಬಣ್ಣಗಾರರಿಗೆ, ಹೋಟೆಲ್‌ಗಳಿಗೆ ಮೊದಲಿನಂತೆ ಒಡಗಟ್ಟಿಗೆಯ ಅವಶ್ಯಕತೆ ಉಳಿಯಲಿಲ್ಲ. ಮೇಲಾಗಿ ಮರಗಳನ್ನು ಕಡಿಯುವಂತಿಲ್ಲ ಎಂದು ಅರಣ್ಯ ಇಲಾಖೆಯೂ ಕಾನೂನು ಬಿಗಿ ಮಾಡಿತು. ಉರುವಲು ಕೊರತೆಯಿಂದ ಇಟ್ಟಂಗಿ ಭಟ್ಟಿಗಳೂ ಒಂದೊಂದಾಗಿ ಸ್ಥಗಿತಗೊಂಡವು. ಇನ್ನು ತಾಂಡಾದಲ್ಲಿದ್ದು ಬದುಕುವುದು ಹೇಗೆ? ಪರಿಣಾಮವಾಗಿ ಇವರೂ ಊರು ಬಿಟ್ಟರು... ಎಂದು ಸಮಸ್ಯೆಯ ಸರಪಳಿಯನ್ನು ಬಿಡಿಸಿ, ಹರವಿದರು ಪಾಂಡು.

ಆ ತಾಂಡಾದಲ್ಲಿ ಇರುವ 70 ಮನೆಯಲ್ಲಿ ಎಲ್ಲರೂ ಗೋವಾಕ್ಕೆ ದುಡಿಯಲು ಹೋಗಿದ್ದಾರೆ. ವರ್ಷ, ಎರಡು ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ಏಳೆಂಟು ವರ್ಷದ ಏನಿಲ್ಲವೆಂದರೂ ಇಪ್ಪತ್ತು ಮಕ್ಕಳು ಆವೊತ್ತು ಮಟಮಟ ಮಧ್ಯಾಹ್ನ ಆಡುತ್ತಿದ್ದವು. ಇವರಲ್ಲಿ ಬಹುತೇಕ ಮಕ್ಕಳ ತಂದೆ–ತಾಯಿ ಇಲ್ಲಿಲ್ಲ. ಯಾರದೋ ಮಗುವಿಗೆ ಇನ್ನಾರೋ ಅವ್ವ ಅಥವಾ ಅಜ್ಜಿಯಾಗಿ ಆ ಮಕ್ಕಳನ್ನು ಸಲಹುತ್ತಾರೆ. ಅದಕ್ಕೆ ಸಾಕ್ಷಿಯಾಗಿ ನಾಲ್ಕೈದು ವೃದ್ಧ ಯಾಡಿಯಂದಿರು (ಲಂಬಾಣಿ ಮಹಿಳೆ) ಅಲ್ಲಲ್ಲಿ ಓಡಾಡುತ್ತಿದ್ದರು. ಹತ್ತೋ ಹನ್ನೆರಡೋ ಮನೆಗಳ ಬಾಗಿಲು ತೆರೆದಿದ್ದವು!

‘ಮೊದ್ಲ ನಮ್ಮೂರು ಕುದುರಿ ಆಗಿತ್ತು; ಈಗ ಕತ್ತ್ಯಾಗೇತಿ. ದಾಖಲೆ ಒಳಗ ಅಷ್ಟ ಊರು. ಉಳದಂಗ ಏನೂ ಇಲ್ಲ. ವಿಜಯಪುರ ಜಿಲ್ಲೆಯೊಳಗ ಇದ್ದಾಗನ ಅತಿ ಹೆಚ್ಚು ಟೆಲಿಫೋನ್ ಬಿಲ್ ಕಟ್ಟಿದ ಊರು ಇದು. ಡ್ರೈನೇಜ್ ವ್ಯವಸ್ಥಾ ಆಗಿದ್ದ ಊರು ಇದು. ಈಗೇನೈತಿ. ಹಾಳ್ ಸುರೀತೈತಿ. ಇಂಥಾ ಊರಾಗ ಎಲ್ಲಿಂದ ದುಡಕಿ ಹುಟ್ಟಬೇಕ್?’ ಎಂದು ವೃದ್ಧ ಕಿರಾಣಿ ವ್ಯಾಪಾರಸ್ಥರೊಬ್ಬರು ಆಕ್ರೋಶದಿಂದ ಹೇಳುವಾಗ ಅವರ ಮಾತಲ್ಲಿ ಸಂಕಟವೂ ಇತ್ತು. ಹೆಸರು ಹೇಳಲು ಸುತಾರಾಂ ಒಪ್ಪದ ಅವರು ‘ಅದ್ನ ತೊಗೊಂಡು ಏನ್‌ ಮಾಡ್ತಿರಿ? ಎಲ್ಲಾರೂ ಬರೇ ಇಷ್ಟ ಮಾಡ್ಕೊಂತ ಹೋಗವ್ರು. ಆಗೋದಲ್ಲ; ಹೋಗೋದಲ್ಲ’ ಎಂದು ಇನ್ನಷ್ಟು ಸಿಟ್ಟು ಹೊರಹಾಕಿದರು.

ಯಾರಿಗೆ ಉಪಯೋಗ?

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಭಜಂತ್ರಿ ಕಾಯಕದವರಿಗೆ ನೇಕಾರಿಕೆಯ ಗಂಧವೇ ಇಲ್ಲ. ಅಂಥವರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ಮಗ್ಗಗಳನ್ನು ಒದಗಿಸುತ್ತಿರುವುದ್ಯಾಕೆ? ಸಬ್ಸಿಡಿ ದರದಲ್ಲಿ ಅವುಗಳನ್ನು ಪಡೆದ ಅವರು, ಆ ಬಳಿಕ ₹ 2ಲಕ್ಷಕ್ಕೆ ನೇಕಾರರಿಗೇ ಮಾರುತ್ತಿದ್ದಾರೆ. ನೇಕಾರರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ತಿಂಗಳಿಗೆ ₹ 600–₹800ರಲ್ಲಿ ಜೀವನ ಸಾಗಿಸುತ್ತಿರುವ ಅವರನ್ನು ನೋಡಿದರೆ ಇಲ್ಲಿನ ಪರಿಸ್ಥಿತಿ ವೇದ್ಯವಾಗುತ್ತದೆ ಎನ್ನುತ್ತಾರೆ ನೇಕಾರರ ಸಮುದಾಯದ ಮುಖಂಡ ಶಶಿಧರ ಉದ್ನೂರ.

‘ಪರಿಶಿಷ್ಟ ಜಾತಿ/ಪಂಗಡದವರಿಗೆ ಸೌಲತ್ತು ಕೊಡಬ್ಯಾಡ ಅಂತ ಹೇಳೋದಿಲ್ರಿ. ಆದ್ರ ಅವ್ರಿಗೆ ಏನ್‌ ಅವಶ್ಯಕತಾ ಐತೋ ಅದನ್ನ ಕೊಡ್ರಿ’ ಎಂಬುದು ಅವರ ಆಗ್ರಹ.

‘ಎಂಎಲ್‌ಎ ಒಂದ್‌ ದಿನಾನೂ ಭೇಟಿ ಕೊಟ್ಟಿಲ್ಲ. ನಮ್ಮವ್ರನ್ನ ಆರಿಸಿ ತಂದ್ರೂ ಅವ್ರು ಇಲ್ಲಿಗೆ ಏನೂ ಮಾಡ್ಲಿಲ್ಲ. ಎಚ್.ವೈ. ಮೇಟಿ ಮೂರ್‌ ಸಲ ಗುಡೇದಗುಡ್ಡಕ್ಕ ಎಂಎಲ್‌ಎ ಆಗಿದ್ರು. ಒಂದ್ಸಲ ಎಂಪಿ ಆಗಿದ್ರು. ಮಂತ್ರೀನೂ ಆಗಿದ್ರು. ಆದ್ರ ಊರಿಗೆ ಏನೂ ಹೇಳ್ಳೊಳ್ಳೊ ಅಂಥಾದ್ದು ಏನೂ ಮಾಡ್ಲೇ ಇಲ್ಲ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ ಊರಿನ ಹಿರಿಯರಾದ ಸಂಗಮೇಶ ಸತ್ತಿಗೇರಿ, ಇಲ್ಲಿ ಜಾನುವಾರು ಸಂತೆ ನಡೆಯಬೇಕು, ವಿಧಾನಸಭಾ ಮತಕ್ಷೇತ್ರ ಆಗಬೇಕು. ಜವಳಿ ಉದ್ಯಮ ಸ್ಥಾಪನೆ ಆಗಬೇಕು ಎಂದು ಆಗಬೇಕಾದ ಕಾರ್ಯಗಳ ಪಟ್ಟಿಯನ್ನು ಮುಂದಿಡುತ್ತಾರೆ.

‘ದುಡಿಮೆಯೇ ಇಲ್ಲದ ಊರಲ್ಲಿ ಯಾರು ಇರುತ್ತಾರೆ? ಸಾಯುವಂತಿಲ್ಲ, ಬದುಕುವಂತಿಲ್ಲ’ ಎನ್ನುವ ತರಕಾರಿ ವ್ಯಾಪಾರಸ್ಥರಾದ ಲಾಲ್‌ಸಾಬ್ ಮತ್ತು ಇಮಾಂಸಾಬ್, ಗುಳೇ ಹೋದವರನ್ನು ಹೊರತು ಪಡಿಸಿಯೂ ನಿತ್ಯ ಇಲ್ಲಿಂದ 2ರಿಂದ 3 ಸಾವಿರ ಜನರು ಬಾಗಲಕೋಟೆಗೆ ಕೆಲಸಕ್ಕೆ ಹೋಗುವುದಾಗಿ ಹೇಳುತ್ತಾರೆ.

ಊರಲ್ಲಿ ಕುಂಬಾರಿಕೆಗೂ ಜಾಗವಿತ್ತು. ಖಣವಷ್ಟೇ ಅಲ್ಲ; ಕುಡಿಕೆ–ಮಡಿಕೆಗಳನ್ನು ಹೊತ್ತು ಪ್ರತೀವರ್ಷ ಹತ್ತು ಲಾರಿಗಳು ಸೊಲ್ಲಾಪುರ, ಸಾಂಗಲಿ ಕಡೆ ಹೋಗುತ್ತಿದ್ದವು. ಈಗ ಕುಂಬಾರರೇ ಕಾಣುವುದಿಲ್ಲ. ಕಂಡರೂ ದೀಪಾವಳಿ, ಮಹಾನವಮಿಗಾಗಿ ಬೇಕಾದ ಹಣತೆ, ಒಲೆ–ಚಟಕಿಗಳನ್ನು ಮಾಡುತ್ತಿದ್ದಾರೆ ಅಷ್ಟೆ ಎಂದು ನಿಡುಸುಯ್ಯುತ್ತಾರೆ ಕುಂಬಾರ ಓಣಿಯ ಸಿದ್ದಪ್ಪ ಮಲ್ಲಪ್ಪ ಇದ್ದಲಗಿ.

‘ಒಂದ್‌ ಟೈಮಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದ್ದ ಇಲ್ಲಿನ ಮನಿಗೋಳು ಈಗ ಭಾರಿ ಕಡಿಮಿ ಬಾಡಿಗೀಗೆ ಸಿಗತಾವು. ಊರ್‌ ಬಿಟ್ಟ ಹ್ವಾದ್‌ ಒಂದಿಷ್ಟ್‌ ಮಂದಿ ಮನಿ ಕೀಲಿ ಹಾಕ್ಕೊಂಡ್‌ ಹೋಗ್ಯಾರ’ ಎಂದವರು ಪ್ರಭು ಅಂಗಡಿ. ವಾಹನ ಚಾಲಕರಾಗಿರುವ ಅವರು ಕೂಡ, ಊರು ತೊರೆದವರೊಬ್ಬರ ಮನೆಯನ್ನು ಕಡಿಮೆ ದರದಲ್ಲಿ ಬಾಡಿಗೆಗೆ ಪಡೆದು ವಾಸವಾಗಿದ್ದಾರೆ.

ನೇಕಾರಿಕೆಯನ್ನೇ ಮಾಡಿ ಕೊಂಡಿದ್ದ ನೂರಾರು ಮಂದಿ ಇಲ್ಲಿ ಭಾರತ ಮಾರ್ಕೆಟ್‌ನಲ್ಲಿ ಸಾಂಬಾರು ಪದಾರ್ಥ, ತೆಂಗಿನಕಾಯಿ ಮಾರುತ್ತ ಕುಳಿತಿದ್ದಾರೆ. ಬಾಗಲಕೋಟೆಯ ಸಿಮೆಂಟ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಳ್ಳುವ ಶಕ್ತಿಯೇ ಇಲ್ಲದ ಊರಲ್ಲಿ ಹೋಟೆಲ್‌ ತಿಂಡಿ, ಊಟ, ಮನೆಯ ಬಾಡಿಗೆ ಎಲ್ಲವೂ ಸೋವಿ ಸಿಗುತ್ತಿದ್ದು, ಬದುಕು ಕೂಡ ಅಷ್ಟೇ ಅಗ್ಗವಾಗಿದೆ. ಅದನ್ನೂ ಆಡಲೂ ಆಗದೇ ಅನುಭವಿಸಲೂ ಆಗದೇ ಸಾವಿರಾರು ಒಡಲುಗಳು ಸಂಕಟದಲ್ಲಿವೆ.

ಪ್ರತಿಕ್ರಿಯಿಸಿ (+)