ಶುಕ್ರವಾರ, ಡಿಸೆಂಬರ್ 6, 2019
18 °C

ರೈತರ ಸಾಲಮನ್ನಾ ಪ್ರಧಾನಿಗೆ ಸಿ.ಎಂ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಸಾಲಮನ್ನಾ ಪ್ರಧಾನಿಗೆ ಸಿ.ಎಂ ಪತ್ರ

ಬೆಂಗಳೂರು:  ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ  ಬರೆದಿದ್ದಾರೆ.

ವಾಣಿಜ್ಯ, ಖಾಸಗಿ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ  ಇದೇ ವರ್ಷದ ಮಾರ್ಚ್‌ ಅಂತ್ಯದವರೆಗೆ ರಾಜ್ಯದ 28.73 ಲಕ್ಷ ರೈತರು ₹ 42 ಸಾವಿರ ಕೋಟಿ ಬೆಳೆ ಸಾಲ ಪಡೆದಿದ್ದಾರೆ. ಕರ್ನಾಟಕ ಸತತ ಆರು ವರ್ಷಗಳಿಂದ ಬರಗಾಲ ಎದುರಿಸುತ್ತಿದೆ.  ಬೆಳೆನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಬರಬೇಕು ಎಂದೂ ಅವರು ಪತ್ರದಲ್ಲಿ ಕೋರಿದ್ದಾರೆ.

ಸಹಕಾರಿ ಬ್ಯಾಂಕ್‌ಗಳಲ್ಲಿ 22.27 ಲಕ್ಷ ರೈತರು ₹10,736 ಕೋಟಿ ಸಾಲ ಪಡೆದಿದ್ದಾರೆ. ರಾಜ್ಯದಲ್ಲಿ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಇತ್ತು. ಆರ್ಥಿಕ ಹೊರೆಯಾಗುವುದನ್ನು ಲೆಕ್ಕಿಸದೇ ರೈತರ ಹಿತದೃಷ್ಟಿಯಿಂದ  ಸಾಲಮನ್ನಾ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

ಇದೇ ಜೂನ್‌ 20ರವರೆಗೆ ಬಾಕಿ ಇರುವ ಸಾಲದ ಪೈಕಿ ₹50 ಸಾವಿರ ಮೊತ್ತವನ್ನು ಮನ್ನಾ ಮಾಡುವ ಆದೇಶವನ್ನೂ ಈಗಾಗಲೇ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಒಟ್ಟು ಕೃಷಿ ಸಾಲದಲ್ಲಿ ಶೇ 80ರಷ್ಟು ಸಾಲ ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿದೆ. ಫೆಬ್ರುವರಿಯಲ್ಲಿ ಈ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ದೆ.ರೈತರ ಸಾಲವನ್ನು ಮನ್ನಾ ಮಾಡುವಂತೆ ಕೋರಿ ಮತ್ತೆ ನೆನಪೋಲೆ ಬರೆಯುತ್ತಿದ್ದೇನೆ’ ಎಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)