ಸೋಮವಾರ, ಡಿಸೆಂಬರ್ 16, 2019
18 °C

ಬಿಜೆಪಿಯವರು ಮೀಸಲಾತಿ ವಿರೋಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯವರು ಮೀಸಲಾತಿ ವಿರೋಧಿಗಳು

ಹಾಸನ:‘ ಮೀಸಲಾತಿ ವಿರೋಧಿಗಳಾದ ಬಿಜೆಪಿಯವರು ಮತಕ್ಕಾಗಿ ರಾಜ್ಯದಾದ್ಯಂತ ‘ಬಿಜೆಪಿ ನಡಿಗೆ ದಲಿತರ ಕಡೆಗೆ’ ಎಂಬ ನಾಟಕ ಶುರು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರ ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ  ಮೈಸೂರು ವಿಭಾಗೀಯ ಮಟ್ಟದ (ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳ) ಕಾಂಗ್ರೆಸ್‌ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುಳಿದ ಮತಗಳನ್ನು ಪಡೆಯುವ ಉದ್ದೇಶದಿಂದ ಬಿಜೆಪಿ ಅವರು ದಲಿತರ ಮನೆಗಳಲ್ಲಿ ಉಪಹಾರ, ಊಟ ಮಾಡುವ ನಾಟಕ ಪ್ರಾರಂಭಿಸಿದ್ದಾರೆ.  ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ದಲಿತರು, ಅಲ್ಪಸಂಖ್ಯಾತರು ಆತಂಕದಿಂದ ಬದುಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಹಿತದೃಷ್ಟಿಯಿಂದ 2018ರ ವಿಧಾನಸಭೆ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಗೆ  ನಾಂದಿ ಆಗಬೇಕು’ ಎಂದರು. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು, ಚುನಾವಣೆಗೆ ಕೇವಲ 9 ತಿಂಗಳು ಬಾಕಿ ಉಳಿದಿವೆ. ಪಕ್ಷದ ಸಾಧನೆ ಬಗ್ಗೆ ಜನರಿಗೆ ತಿಳಿಸಬೇಕು. ಜುಲೈ 31 ರ ಒಳಗೆ ಬೂತ್ ಕಮಿಟಿ ರಚಿಸಬೇಕು ಎಂದು ಸಲಹೆ ಮಾಡಿದರು.

ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್, 2018 ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು.  ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗಿದ್ದು, ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ.  ಜೈಲಿಗೆ ಹೋಗುವುದು, ಜಾಮೀನು ಪಡೆದು ಓಡಾಡುವುದು ಅಭಿವೃದ್ಧಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು  ಟೀಕಿಸಿದರು. ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌.ಪಾಟೀಲ್‌, ಸಚಿವ ಯು.ಟಿ.ಖಾದರ್‌ ಮತ್ತು ಸಚಿವ ಎ.ಮಂಜು ಮಾತನಾಡಿದರು. ಡಿ.ಕೆ.ತಾರಾದೇವಿ, ಶಾಸಕ ಎಂ.ಎ.ಗೋಪಾಲ ಸ್ವಾಮಿ, ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್,  ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವರಾಂ ಇದ್ದರು.

ಏಳು ತಿಂಗಳಲ್ಲಿ 5 ಬಾರಿ ಜಿಲ್ಲೆಗೆ ಸಿಎಂ

ಹಾಸನ: ಏಳು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗಾಗಿ ಅರಸೀಕೆರೆ, ಶ್ರವಣಬೆಳಗೊಳ ತಲಾ ಒಂದು ಬಾರಿ ಹಾಗೂ ಹಾಸನ ನಗರಕ್ಕೆ ಮೂರು ಬಾರಿ ಭೇಟಿ ನೀಡಿದ್ದಾರೆ.

ಇಂದು ಜೆಡಿಎಸ್‌ ಭದ್ರಕೋಟೆಯಲ್ಲಿ ವಿಭಾಗೀಯ ಮಟ್ಟದ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ನಡೆಸಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಕಾರಣಕ್ಕೆ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಜಿಲ್ಲೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೀರಲ್ಲಾ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ಜಿಲ್ಲೆಗಳ ಮೇಲೂ ಗಮನ ಹರಿಸಲಾಗುತ್ತಿದೆ.  ಅದೇ ರೀತಿ ಜಿಲ್ಲೆಗೂ ಕೇಂದ್ರಿಕರಿಸಲಾಗಿದೆ. ಹಾಸನ ಜಿಲ್ಲೆ ವಿಶೇಷವಾಗಿದೆ ಎಂದರು.

‘ಜೆಡಿಎಸ್‌  ಪಕ್ಷ ಅವಕಾಶವಾದಿ’

ಹಾಸನ:  ಜೆಡಿಎಸ್‌ ನಾಯಕರು ಅವಕಾಶವಾದಿಗಳು. ಮುಂದಿನ ಚುನವಾಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ  ಎಂಬ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. 

ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ, ಹಾಗೆಯೇ 2018 ಕ್ಕೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಮದು ಪ್ರತಿಪಾದಿಸಿದರು.

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ ಎಂದು ಪ್ರತಿಪಾದಿಸಿದರು.

* * 

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೈಲಿನಲ್ಲಿ ಇರುತ್ತಿದ್ದರು.

ಸಿದ್ದರಾಮಯ್ಯ,

ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)