ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯ

Last Updated 4 ಜುಲೈ 2017, 11:12 IST
ಅಕ್ಷರ ಗಾತ್ರ

ರಾಮನಗರ: ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಎಲ್ಲ ಬಗೆಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಲೀಡ್‌ ಬ್ಯಾಂಕ್ ಕಚೇರಿ ಎದುರು ಒಂದು ದಿನದ ಧರಣಿ ನಡೆಸಿದರು.

ಬ್ಯಾಂಕ್‌ ಎದುರಿನ ಅಂಗಳದಲ್ಲಿ ಪೆಂಡಾಲ್ ಹಾಕಿ ಬೆಳಿಗ್ಗೆ 11ರ ಸುಮಾರಿಗೆ ಧರಣಿ ಕುಳಿತ ನೂರಾರು ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯ ಸರ್ಕಾರವು ರೈತರು ಸಹಕಅರಿ ಬ್ಯಾಂಕುಗಳಲ್ಲಿ ಪಡೆದಿರುವ ಅಲ್ಪಾವಧಿ ಕೃಷಿಸಾಲದಲ್ಲಿ ಕೇವಲ ₹50,000 ಮಾತ್ರವೇ ಮನ್ನಾ ಮಾಡಿದೆ.ಆದರೆ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಆಗದು.

ಉಳಿದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತರು ಮುಂದಿನ ಬೆಳೆ ಬೆಳೆಯಲು ಅನುಕೂಲವಾಗುವಂತೆ ಪ್ರಸಕ್ತ ಸಾಲಿನಿಂದ ಹೊಸ ಸಾಲ ನೀಡುವ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರಾಕೃತಿಕ ವಿಕೋಪವನ್ನು ಅಳೆಯುವ ಮಾನದಂಡವಾಗಿ ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಹಿಂದಿನ ಕಾಲದ ಅಣೇವಾ ಪದ್ಧತಿ ಅವೈಜ್ಞಾನಿಕವಾಗಿದೆ. ಅದನ್ನು ಕೈ ಬಿಟ್ಟು ಜಿಲ್ಲಾ ಮಟ್ಟದಲ್ಲಿ ಕಂದಾಯ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಅಧಿಕಾ ರಿಗಳ ನೆರವಿನೊಂದಿಗೆ ಸ್ಥಳೀಯವಾಗಿ ಬೆಳೆ ನಷ್ಟ ಅಂದಾಜಿಸಿ ಪ್ರಾಕೃತಿಕ ವಿಕೋಪದ ಸಂದರ್ಭದ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಕೇಂದ್ರದ ನಾಯಕರ ವಿರುದ್ಧ ಕಿಡಿ:
‘ಕೇಂದ್ರ ಸಚಿವ ವೆಂಕಯ್ಯನಾಯ್ಡು, ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯಂ, ರಿಸರ್ವ್ ಬ್ಯಾಂಕಿನ ಗವರ್ನರ್‌ ಊರ್ಜಿತ್ ಪಟೇಲ್‌ ಮೊದಲಾದವರು ರೈತರ ಬಗ್ಗೆ ನೀಡಿರುವ ಬೇಜವಾಬ್ದಾರಿಯುತ ಹೇಳಿಕೆ ಖಂಡನೀಯ. ಅವರು ತಮ್ಮ ಹೇಳಿಕೆಗಳ ಬಗ್ಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ: ‘ಸಂಪೂರ್ಣ ಸಾಲ ಮನ್ನಾ ಜೊತೆಗೆ ಕೃಷಿಕರಿಗೆ ಹೊಸತಾಗಿ ಬೆಳೆ ಸಾಲ ನೀಡಬೇಕು. ಬ್ಯಾಂಕುಗಳು ನೀಡುವ ಕೃಷಿ ಸಾಲಗಳನ್ನು ಎನ್‌ಪಿಎ ಮಾನದಂಡಕ್ಕೇ ಸೇರಿಸಿಕೊಳ್ಳಬೇಕು. ಕುರಿಗಾಹಿ ಯೋಜನೆಯಡಿ ನೊಂದ ರೈತರಿಗೆ ಕಳೆದ ಮೂರು ವರ್ಷಗಳಿಂದ ಪರಿಹಾರ ದೊರಕಿಲ್ಲ. ಈಗಲಾದರೂ ವಿತರಿಸಬೇಕು.

ರೈತರನ್ನು ಸಂಪೂರ್ಣ ಋಣ ಮುಕ್ತರನ್ನಾಗಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಬರ ಪರಿಹಾರವು ಸಮರ್ಪಕವಾಗಿ ವಿತರಣೆ ಆಗಬೇಕು. ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ರೈತ ಸಂಘಟನೆಯ ನಿರ್ವಹಣೆಗಾಗಿ ಧರಣಿಯಲ್ಲಿ ಪಾಲ್ಗೊಂಡ ರೈತರಿಂದಲೇ ಚಂದಾ ಎತ್ತಿದ್ದು ವಿಶೇಷವಾಗಿತ್ತು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಎಂ. ರಾಮು, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ, ಕಾರ್ಯಾಧ್ಯಕ್ಷ ಮುನಿ ರಾಜು, ಗೌರವ ಅಧ್ಯಕ್ಷ ತಿಮ್ಮೇಗೌಡ,  ಕಾರ್ಯದರ್ಶಿ ಎಂ.ಪುಟ್ಟಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಕಾಂತ ರಾಜು ತಾಲ್ಲೂಕು ಘಟಕಗಳ ಅಧ್ಯಕ್ಷ ರಾದ ಎಚ್‌.ಸಿ. ಕೃಷ್ಣಪ್ಪ, ಲೋಕೇಶ್‌, ಕೆ. ನಾಗರಾಜು, ಸಾವಂದೇಗೌಡ ಧರಣಿ ನೇತೃತ್ವ ವಹಿಸಿದ್ದರು.

* * 

ಸಾಲಮನ್ನಾ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಒಮ್ಮೆ ಸಂಪೂರ್ಣ ಸಾಲ ಮನ್ನಾ  ಮೂಲಕ ನಮ್ಮನ್ನು ಋಣಮುಕ್ತರನ್ನಾಗಿಸಬೇಕು
ಎಂ. ರಾಮು
ರಾಜ್ಯ ಉಪಾಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT