ಭಾನುವಾರ, ಡಿಸೆಂಬರ್ 15, 2019
18 °C
ರಾಷ್ಟ್ರೀಯ ಹೆದ್ದಾರಿ ಡಿನೋಟಿಫಿಕೇಷನ್‌ ಪ್ರಕರಣ: ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದ ಸುಪ್ರೀಂ ಕೋರ್ಟ್‌

ಮದ್ಯದ ಅಂಗಡಿ ಮಾಲೀಕರ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ಯದ ಅಂಗಡಿ ಮಾಲೀಕರ ಸಂತಸ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫಿಕೇಷನ್‌ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿರುವ ಸುಪ್ರೀಂ ಕೋರ್ಟ್‌ ಕ್ರಮವು ಮದ್ಯದ ಅಂಗಡಿಗಳ ಮಾಲೀಕರ ಸಂತಸಕ್ಕೆ ಕಾರಣವಾಗಿದೆ.

ಇದರಿಂದಾಗಿ ನಗರದ ಹೃದಯ ಭಾಗದಲ್ಲಿರುವ ಪಬ್‌ಗಳು, ಬಾರ್‌ಗಳು ಹಾಗೂ ಮದ್ಯದಂಗಡಿಗಳು ಮತ್ತೆ ಕಾರ್ಯಾರಂಭ  ಮಾಡುವ ಆಸೆ ಮೂಡಿದೆ ಎಂದು ಸಂತಸ ಹಂಚಿಕೊಂಡರು.

‘ಸುಪ್ರೀಂಕೋರ್ಟ್ ನಿಲುವು ಸ್ವಾಗತಾರ್ಹ. ಬಾರ್‌ಗಳನ್ನು ಬಂದ್‌ ಮಾಡಿದ್ದರಿಂದ ನೂರಾರು ಜನರ ಉದ್ಯೋಗಕ್ಕೆ ಕುತ್ತು ಬಂದಿತ್ತು. ಈಗ ಉದ್ಯೋಗಿಗಳು ಹಾಗೂ ಮಾಲೀಕರು ನಿರಾಳರಾಗುವಂತಾಗಿದೆ’ ಎಂದು ಎಂ.ಜಿ.ರಸ್ತೆಯಲ್ಲಿರುವ ವೈಟ್ ರೆಸ್ಟ್ರಾ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ಮೇಘರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಶೇ 80ರಷ್ಟು ಜನ ಮದ್ಯ ಸೇವನೆ ಮಾಡಲೆಂದೇ ಇಲ್ಲಿಗೆ ಬರುತ್ತಾರೆ. ಉಳಿದ ಮಂದಿ ಊಟಕ್ಕಾಗಿ ಬರುತ್ತಾರೆ. ಇಲ್ಲಿ ಹೋಟೆಲ್ ಸಹ ಇದೆ. ಒಟ್ಟು 45 ಮಂದಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ದಿನಗಳಿಂದ ಸುಮಾರು ₹10 ಲಕ್ಷ ನಷ್ಟ ಉಂಟಾಗಿದೆ’ ಎಂದರು.

‘ಅಬಕಾರಿ ಇಲಾಖೆಯವರು ಮದ್ಯ ಜಪ್ತಿ ಮಾಡಿದ್ದಾರೆ. ಈಗ ಸುಪ್ರೀಂಕೋರ್ಟ್‌ನಿಂದ ಆದೇಶದ ಪ್ರತಿ ಇಲಾಖೆಗೆ ಬರಬೇಕು. ಅದು ಎರಡು ದಿನಗಳು ಆಗಬಹುದು. ಬಳಿಕ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ಇದಕ್ಕೆ ಮೂರು ದಿನಗಳಾದರೂ ಬೇಕು. ಮುಂದಿನ ಸೋಮವಾರದಿಂದ ಸೇವೆ ನೀಡುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತಾರೆ ಎಂದರೆ ಉದ್ಯೋಗಿಗಳು ಒಂದು ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಈಗ ಆಗ ಅನುಮತಿ ಕೊಡಬಹುದು ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುವಂತಾಗಿತ್ತು. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕೆಲಸಗಾರರ ರೀತಿಯಲ್ಲಿ ನೋಡಲು ಅಗುವುದಿಲ್ಲ. ಅವರು ನಮ್ಮನೆ ಸದಸ್ಯರಿದ್ದಂತೆ. ಬಾರ್ ನಡೆಯಲಿ, ಬಿಡಲಿ ಅವರಿಗೆ ಸಂಬಳ, ವಸತಿ, ಊಟ ನೀಡಲೇಬೇಕು’ ಎಂದರು.

ಬ್ರಿಗೇಡ್ ರಸ್ತೆಯಲ್ಲಿರುವ ಹೌಸ್ ಆಫ್ ಕಾಮನ್ಸ್ ಪಬ್ ಮತ್ತು ಬಾರ್‌ನ ವ್ಯವಸ್ಥಾಪಕ ರಿಷಿಕೇಶ್, ‘ಸಿಹಿ ತಿಂದಷ್ಟೇ ಸಂತೋಷ ಅಗುತ್ತಿದೆ. ಸದ್ಯಕ್ಕೆ ಇಲ್ಲಿ ಯಾವುದೇ ಸೇವೆ ನೀಡುತ್ತಿಲ್ಲ. ಪರವಾನಗಿ ನವೀಕರಣವಾದ ಬಳಿಕ ಸೇವೆ ಮುಂದುವರಿಸುತ್ತೇವೆ. ಈ ಹಿಂದೆ ಸಾಮಾನ್ಯ ದಿನಗಳಲ್ಲಿ ₹80 ಸಾವಿರ, ವಾರಾಂತ್ಯದಲ್ಲಿ ₹2 ಲಕ್ಷ ವಹಿವಾಟು ನಡೆಯುತ್ತಿತ್ತು’ ಎಂದು ತಿಳಿಸಿದರು.

ಇಲ್ಲೇ ಸೇಲ್ಸ್‌ಮನ್‌ ಆಗಿರುವ ಒಡಿಶಾದ ಸುಕಾಂತ್ ಅವರಲ್ಲಿ ಬಾರ್ ಮುಚ್ಚುತ್ತಾರೆ ಎಂಬ ಆತಂಕ ದೂರವಾಗಿದ್ದ ಭಾವ ಕಾಣುತ್ತಿತ್ತು. ‘ಉದ್ಯೋಗ ಅರಸಿ ಒಡಿಶಾದಿಂದ ಬಂದಿದ್ದೇನೆ. ಕೆಲಸ ಕಳೆದುಕೊಳ್ಳುವ ಭಯದಿಂದ ಕುಗ್ಗಿಹೋಗಿದ್ದೆ. ಊಟ, ವಸತಿಗೆ ಏನು ಮಾಡುವುದೆಂದು ತಿಳಿದಿರಲಿಲ್ಲ. ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ’ ಎಂದರು.

ಕ್ಯಾಷಿಯರ್ ಮಹೇಶ್, ‘ನನ್ನ ದುಡಿಮೆಯಿಂದಲೇ ಸಂಸಾರ ನಡೆಯುತ್ತಿತ್ತು. ಕೆಲಸ ಹೋಗುವ ಭಯ ಇತ್ತು. ಇಲ್ಲಿ ಉತ್ತಮ ವೇತನ ನೀಡುತ್ತಿದ್ದರು.  ಬೇರೆ ಕಡೆ ಇದಕ್ಕಿಂತ ಒಳ್ಳೆಯ ಕೆಲಸ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ’ ಎಂದು ಹೇಳಿದರು.

ಚರ್ಚ್ ಸ್ಟ್ರೀಟ್‌ನಲ್ಲಿರುವ ಈಜಿ ಟೈಗರ್ ಬಾರ್ ಮತ್ತು ಕೆಫೆಯ ವ್ಯವಸ್ಥಾಪಕ ಹನುಮಂತ ಪವನ್, ‘ಆದೇಶ ನಮ್ಮೆಲ್ಲರಿಗೂ ಹರ್ಷ ತಂದಿದೆ. ನಮ್ಮಲ್ಲಿ 28 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಹೋಗುವ ಭೀತಿ ಇತ್ತು. ಈಗ ಅದು ದೂರವಾಗಿದೆ. ನಮಗೆ ₹6 ಲಕ್ಷ ನಷ್ಟವಾಗಿದೆ’ ಎಂದರು.

ಇಲ್ಲಿನ ಸಿಬ್ಬಂದಿ ಲೋಕೇಶ್, ‘ಮದ್ಯದ ಅಂಗಡಿಗಳನ್ನು ಮುಚ್ಚಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ನಮಗೂ ನಷ್ಟವಾಗಿದೆ' ಎಂದು ಹೇಳಿದರು.

‘ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳು ನಗರದ ಹೃದಯ ಭಾಗದಲ್ಲಿವೆ. ಇಲ್ಲಿಗೆ ಸಾವಿರಾರು ಮಂದಿ ಮದ್ಯ ಸೇವಿಸಲು ಬರುತ್ತಿದ್ದರು.

ಆದರೆ, ಸುಪ್ರೀಂಕೋರ್ಟ್ ನ ಆದೇಶದಿಂದ ಮದ್ಯ ಪ್ರಿಯರಿಗೆ ನಿರಾಸೆ ಆಗಿತ್ತು. ಈಗ ತನ್ನ ಆದೇಶವನ್ನು ಪರಿಶೀಲಿಸಿ, ನಗರ ಭಾಗದ ಮದ್ಯದ ಅಂಗಡಿಗೆ ಅನುಮತಿ ನೀಡಿರುವುದು ಸಂತಸದ ವಿಷಯ’ ಎಂದು ಗ್ರಾಹಕ ಪೀಟರ್ ಅವರು ಹೇಳಿದರು.

ಪ್ರತಿಕ್ರಿಯಿಸಿ (+)