ಬುಧವಾರ, ಡಿಸೆಂಬರ್ 11, 2019
26 °C

ಇದು ಇಕೊ ಫ್ಯಾಷನ್

Published:
Updated:
ಇದು ಇಕೊ ಫ್ಯಾಷನ್

ಆ ಫ್ಯಾಷನ್‌ ಶೋನಲ್ಲಿ ಕಣ್ಣು ಕುಕ್ಕುವ ದಿರಿಸು ತೊಟ್ಟ ಹುಡುಗಿಯರಿರಲಿಲ್ಲ. ಮಿಂಚುವ ಆಭರಣಗಳೂ ಮೈಮೇಲಿರಲಿಲ್ಲ. ಕೈಯಲ್ಲಿ ಯಾವುದೇ ಉತ್ಪನ್ನಗಳೂ ಇರಲಿಲ್ಲ.

ಅರೆ, ಇದೆಂಥ ಫ್ಯಾಷನ್ ಶೋ ಎಂದೆನ್ನಿಕೊಳ್ಳುವ ಮುನ್ನ ಇದನ್ನು ಓದಿಬಿಡಿ...

ಒಂದೆಡೆ ರದ್ದಿ ಪೇಪರ್‌ ಡ್ರೆಸ್ ತೊಟ್ಟ ಹುಡುಗಿ ಬಂದರೆ, ಇನ್ನೊಂದು ಕಡೆ ಹಳೇ ಕ್ಯಾನ್‌ಗಳನ್ನೇ ಉಡುಗೆ ಮಾಡಿಕೊಂಡ ಸುಂದರಿ. ಮತ್ತೊಂದು ಬದಿ ಪುಟ್ಟ ಟೆಡ್ಡಿಬೇರ್‌ಗಳನ್ನೇ ಮೈಗೇರಿಸಿ ಮುದ್ದಾಗಿ ಕಾಣುತ್ತಿದ್ದ ರೂಪಸಿ, ಮತ್ತೂ ಒಂದು ಕಡೆ ಮೂಲೆ ಸೇರಿದ ಫ್ಲಾಪಿಗಳಿಂದಲೇ ಮೈ ಮುಚ್ಚಿಕೊಂಡಾಕೆ. ಪಿಸ್ತೂಲ್‌ಗಳನ್ನೇ ಮೈಗೆ ಹೊದ್ದಿಕೊಂಡವಳ ನೋಟವೂ ಪಿಸ್ತೂಲಿನ ಗುಂಡಿನಂತೆಯೇ ನಾಟುತ್ತಿತ್ತು.

ಈ ಚೆಲುವೆಯರ ಮೈಮೇಲೆಲ್ಲಾ ಇದ್ದದ್ದು ಬಿಸಾಡಿದ ಪೀಪಿ ಚೂರುಗಳು, ಟೀ ಬ್ಯಾಗ್‌ಗಳು, ತಿಂಡಿಗಳ ಪ್ಲಾಸ್ಟಿಕ್ ಪೊಟ್ಟಣಗಳು, ಶೆಲ್‌ಗಳು, ಬೆಂಕಿ ಪೊಟ್ಟಣಗಳು, ಪ್ಲಾಸ್ಟಿಕ್ ಬಾಲ್‌ಗಳು, ಚ್ಯೂಯಿಂಗ್ ಗಮ್‌ ಪೇಪರ್‌ಗಳು.... ಪುನರ್‌ಬಳಕೆಯ ಹಾಗೂ ತ್ಯಾಜ್ಯ ವಸ್ತುಗಳನ್ನು ಬಳಸಿ ವಿನ್ಯಾಸಗೊಳಿಸಿದ್ದ ದಿರಿಸುಗಳವು. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ರೂಪಕವಾಗಿ ಈ ಫ್ಯಾಷನ್ ಶೋ ನಡೆಯಿತಂತೆ.

ಉಕ್ರೇನ್‌ನ ಕೈವ್ ಎಂಬಲ್ಲಿ ಇತ್ತೀಚೆಗಷ್ಟೆ ಈ ಶೋ ನಡೆದಿದ್ದು. ಫ್ರೆಂಚ್‌ನ ಇಸಾಗಸ್ ಟಾಚೆ ಎಂಬ ವಿನ್ಯಾಸಕರು ಪರಿಸರಪ್ರೇಮವನ್ನು ಉಡುಪುಗಳಲ್ಲಿ ಬಿತ್ತರಿಸಿದ ಪರಿ ಹೀಗಿತ್ತು.

ಪ್ರತಿಕ್ರಿಯಿಸಿ (+)