ಸೋಮವಾರ, ಡಿಸೆಂಬರ್ 16, 2019
17 °C

ನಿದ್ದೆಯಿಂದ ಎದ್ದೇಳಿ, ಸರ್ಕಾರಿ ಶಾಲೆಗಳನ್ನು ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿದ್ದೆಯಿಂದ ಎದ್ದೇಳಿ, ಸರ್ಕಾರಿ ಶಾಲೆಗಳನ್ನು ಉಳಿಸಿ

ಕಲಬುರ್ಗಿ: ‘ಶಿಕ್ಷಕರು ನಿದ್ದೆಯಿಂದ ಎದ್ದೇಳಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರಿ ಶಾಲೆಗಳ ಬಲವರ್ಧನೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲೀಕರಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. 9 ಗಂಟೆಗೆ ಬರಬೇಕಾದ ಶಿಕ್ಷಕರು 10 ಗಂಟೆಗೆ ಬರುತ್ತಿದ್ದಾರೆ. ಆ ಬಳಿಕವೂ ಪಾಠ ಮಾಡುತ್ತಿಲ್ಲ. ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಎಲ್ಲ ಶಾಲೆಗಳೂ ಮುಚ್ಚಬಹುದು. ಆದ್ದರಿಂದ ಶಿಕ್ಷಕರು ಗಂಭೀರವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಖಡಕ್ ಆಗಿ ಹೇಳಿದರು.

‘ಎಲ್ಲ ಶಾಲೆಗಳಲ್ಲಿ ಜುಲೈ 31ರ ಒಳಗೆ ಹಳೆ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಬೇಕು. ಕನಿಷ್ಠ 150 ಹಳೆ ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿ ಮಾಡಬೇಕು. ಅವರಿಂದ ದೇಣಿಗೆ ಪಡೆದು ಶಾಲೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ವಾರಕ್ಕೊಮ್ಮೆ ಪಾಠ ಮಾಡುವಂತೆ ಸೂಚಿಸಬೇಕು. ಸ್ಥಳೀಯವಾಗಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಂದು ಗ್ರಾಮದಲ್ಲಿ ಮುಕ್ತ ಹಸ್ತದಿಂದ ದೇಣಿಗೆ ಕೊಡುವವರು ಕನಿಷ್ಠ 4–5 ಜನರು ಇದ್ದೇ ಇರುತ್ತಾರೆ. ಅಂಥವರನ್ನು ಮುಖ್ಯ ಶಿಕ್ಷಕರು ಭೇಟಿ ಮಾಡಬೇಕು. ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಪರಿಕರ, ಮೂಲ ಸೌಕರ್ಯಗಳನ್ನು ದೇಣಿಗೆ ನೀಡುವಂತೆ ಮನವಿ ಮಾಡಬೇಕು. ಹೀಗೆ ಮಾಡಿದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 1,789 ಸರ್ಕಾರಿ ಪ್ರಾಥಮಿಕ ಶಾಲೆ, 293 ಸರ್ಕಾರಿ ಪ್ರೌಢಶಾಲೆಗಳಿದ್ದು, 5.30 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶೇ 80ರಷ್ಟು ಶಾಲೆಗಳಲ್ಲಿ ಬೆಂಚು (ಡೆಸ್ಕ್‌)ಗಳಿಲ್ಲ. ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಯಾವ ಶಾಲೆಗಳಲ್ಲೂ ಫ್ಯಾನ್‌ಗಳಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಮಾತನಾಡಿ, ‘ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಅದರಲ್ಲೂ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ತೀವ್ರವಾಗಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯಗೊಳಿಸಿರುವುದು ಹಾಗೂ ಈ ಜಿಲ್ಲೆಯ ಶೇ 10ರಷ್ಟು ಅಭ್ಯರ್ಥಿಗಳು ಮಾತ್ರ ಟಿಇಟಿಗೆ ಅರ್ಹತೆ ಪಡೆದಿರುವುದರಿಂದ ತೊಂದರೆಯಾಗಿದೆ’ ಎಂದು ಹೇಳಿದರು.

ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ.ರಾಮನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

ಶೌಚಾಲಯ ನಿರ್ಮಿಸಿದರೆ ಕಾಂಪೌಂಡ್

‘ಜಿಲ್ಲೆಯಲ್ಲಿ 800 ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಈ ಶಾಲೆಗಳಿರುವ ಗ್ರಾಮಗಳ ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳಿಲ್ಲ. ಹೀಗಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸುವಲ್ಲಿ ಜಾಗೃತಿ ಮೂಡಿಸುವ ಶಾಲೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಕಾಂಪೌಂಡ್ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ’ ಎಂದು ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

‘1,789 ಶಾಲೆಗಳ ಪೈಕಿ 462 ಶಾಲೆಗಳಲ್ಲಿನ ಶೌಚಾಲಯಗಳು ದುರಸ್ತಿಯಲ್ಲಿವೆ. 589 ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರಿಹಾರಕ್ಕೆ ಯತ್ನಿಸಲಾಗುತ್ತಿದೆ’ ಎಂದರು.

‘ಗುರುವಾರ’ ಪಾಠ ಕಡ್ಡಾಯ!

‘ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಬರುವ ಗುರುವಾರಗಳಂದು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತೆರಳಿ ಪಾಠ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಹೆಚ್ಚುವರಿ ಆಯುಕ್ತೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

‘ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಉನ್ನತ ಪದವಿ ಪಡೆದವರು, ಪ್ರತಿಭಾವಂತರು ಇದ್ದಾರೆ. ಅವರು ತಮ್ಮ ಇಷ್ಟದ ವಿಷಯ, ಇಲ್ಲವೆ ಸಂಗೀತ, ಕರಾಟೆ, ಗಾಯನ, ಕಲೆ, ಸಾಹಿತ್ಯದ ಬಗ್ಗೆ ಬೋಧನೆ ಮಾಡಬಹುದು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪಾಠ ಮಾಡುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಬಂದೋಬಸ್ತ್‌ಗೆ ಶಿಕ್ಷಕರ ನಿಯೋಜಿಸಿ!

‘ಯಾದಗಿರಿ ಎಸ್ಪಿ ವಾರಕ್ಕೊಮ್ಮೆ ಸರ್ಕಾರಿ ಶಾಲೆಗೆ ಹೋಗಿ ಪಾಠ ಮಾಡುತ್ತಿದ್ದಾರೆ. ನೀವೂ ಏಕೆ ಮಾಡಬಾರದು’ ಎಂದು ಕೃಪಾ ಆಳ್ವ ಅವರು ಕಲಬುರ್ಗಿ ಎಸ್ಪಿ ಎನ್.ಶಶಿಕುಮಾರ್ ಅವರನ್ನು ಪ್ರಶ್ನಿಸಿದರು.

‘ನಮ್ಮ ಇಲಾಖೆಯಲ್ಲಿ ಡಿ.ಇಡಿ, ಬಿ.ಇಡಿ, ಎಂ.ಇಡಿ ಓದಿದವರು ಸಾಕಷ್ಟು ಸಂಖ್ಯೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರೆಲ್ಲರನ್ನೂ ವಾರಕ್ಕೊಮ್ಮೆ ಪಾಠ ಮಾಡಲು ಕಳುಹಿಸುತ್ತೇನೆ. ಆದರೆ ಬಂದೋಬಸ್ತ್‌ ಸಂದರ್ಭದಲ್ಲಿ ಶಿಕ್ಷಕರನ್ನು ನಿಯೋಜಿಸಿ, ನಮಗೆ ಅನುಕೂಲ ಕಲ್ಪಿಸಬೇಕು’ ಎಂದು ಅವರು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ.

ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ

1,789 ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು

10,646 ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಕೊಠಡಿಗಳು

462 ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳ ಸಮಸ್ಯೆ

800 ಪ್ರಾಥಮಿಕ ಶಾಲೆಗಳಿಗೆ ಕಾಂಪೌಂಡ್ ಇಲ್ಲ

* * 

ಸರ್ಕಾರಿ ಶಾಲೆ ಶಿಕ್ಷಕರು ಮತ್ತು ಅಧಿಕಾರಿಗಳು ತಮ್ಮ ಮಕ್ಕಳನ್ನು ಏಕೆ ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿಲ್ಲ ಎಂಬುದು ಎಲ್ಲರಿಗಿಂತ ಚೆನ್ನಾಗಿ ಅವರಿಗೇ ಗೊತ್ತಿದೆ

ಡಾ. ಕೃಪಾ ಆಳ್ವ,ಅಧ್ಯಕ್ಷೆ,

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರತಿಕ್ರಿಯಿಸಿ (+)