ಶನಿವಾರ, ಡಿಸೆಂಬರ್ 14, 2019
21 °C

ಕಪ್ಪುಹಣ ತನಿಖೆ ಲೆಕ್ಕ ಪರಿಶೋಧನೆಗೆ ಹಗರಣಗಳ ಆರೋಪ ಎದುರಿಸುತ್ತಿರುವ ಸಂಸ್ಥೆಯ ನೇಮಕ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಪ್ಪುಹಣ ತನಿಖೆ ಲೆಕ್ಕ ಪರಿಶೋಧನೆಗೆ ಹಗರಣಗಳ ಆರೋಪ ಎದುರಿಸುತ್ತಿರುವ ಸಂಸ್ಥೆಯ ನೇಮಕ

ನವದೆಹಲಿ: ಕಪ್ಪುಹಣ ತನಿಖೆ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಲೆಕ್ಕ ಪರಿಶೋಧನೆಗೆ ಆಡಿಟಿಂಗ್ ಸಂಸ್ಥೆಯಾದ  ಪ್ರೈಸ್ ವಾಟರ್ ಹೌಸ್ ಕೂಪರ್ಸ್ (PwC) ಅನ್ನು ನೇಮಕ ಮಾಡಿರುವ ಬಗ್ಗೆ ಸಿಟಿಜನ್ಸ್ ವಿಶಲ್ ಬ್ಲೋವರ್ ವೇದಿಕೆ (ಭ್ರಷ್ಟಾಚಾರ ಬಯಲಿಗೆಳೆವ ನಾಗರಿಕರ ವೇದಿಕೆ) ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದೆ.

ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಈ ಹಿಂದೆ ಸತ್ಯಂ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್  (ಜಿಟಿಬಿ) ಮತ್ತು ವಿಜಯ ಮಲ್ಯ ಅವರ ಉದ್ಯಮದಲ್ಲಿ ತಪ್ಪು ವಿತ್ತೀಯ ವರದಿಗಳನ್ನು ಸಲ್ಲಿಸುವ ಮೂಲಕ ಹಗರಣದಲ್ಲಿ ಭಾಗಿಯಾಗಿತ್ತು ಎಂದು ವೇದಿಕೆ ಆರೋಪಿಸಿರುವುದಾಗಿ ದಿವೈರ್ ವೆಬ್‌ಸೈಟ್ ವರದಿ ಮಾಡಿದೆ.

ಸಿಟಿಜನ್ಸ್ ವಿಶಲ್ ಬ್ಲೋವರ್ ವೇದಿಕೆಯು ಮೊದಲ ಸಮಾವೇಶದಲ್ಲಿ  'Is PwC above the law’  ಎಂಬ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು. ಮೋದಿ ಸರ್ಕಾರವು ಆದಾಯ ತೆರಿಗೆ ಇಲಾಖೆ ಮೂಲಕ ಕಪ್ಪು ಹಣದ ತನಿಖೆಗಾಗಿ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಇಂಡಿಯಾವನ್ನು ಸಲಹಾ ಸಂಸ್ಥೆಯನ್ನಾಗಿ ನೇಮಕ ಮಾಡಿತ್ತು. ಈ ಸಂಸ್ಥೆ ಒಂದರ ಮೇಲೊಂದು ಹಗರಣ, ಮೋಸ, ದಾಖಲೆಗಳ ಸುಳ್ಳು ಸೃಷ್ಟಿ, ಲೆಕ್ಕಾಚಾರದಲ್ಲಿ ವಂಚನೆ ಮಾಡಿದ್ದು, ಮಾತ್ರವಲ್ಲದೆ  ₹7,000 ಕೋಟಿ ಸತ್ಯಂ ಹಗರಣದಲ್ಲಿ  ಭಾಗಿಯಾಗಿತ್ತು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿತ್ತು.

ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಇಂಡಿಯಾ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಹೊಂದಿರುವ ನಂಟಿನ ಬಗ್ಗೆ ವಿವರಿಸಿದ ಸಿಟಿಜನ್ಸ್  ವಿಶಲ್ ಬ್ಲೋವರ್ ವೇದಿಕೆಯ ಸದಸ್ಯ ಪ್ರಶಾಂತ್ ಭೂಷಣ್, ಪಿಡಬ್ಲ್ಯುಸಿ ಸಂಸ್ಥೆ ಭ್ರಷ್ಟಾಚಾರ ನಡೆಸಿರುವುದನ್ನು ಜಂಟಿ ಸಂಸದೀಯ ಸಮಿತಿ ಸಾಬೀತು ಪಡಿಸಿತ್ತು. ಆದರೆ ಕಳೆದ 14 ವರ್ಷಗಳಿಂದ ಈ ಸಂಸ್ಥೆಯ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸತ್ಯಂ ಪ್ರಕರಣದಲ್ಲಿ ಪಿಡಬ್ಲ್ಯುಸಿ ವಿರುದ್ಧದ ತನಿಖೆ  ತ್ವರಿತ ಗೊಳಿಸುವಂತೆ ಜನವರಿ 10ರಂದು ಸುಪ್ರೀಂಕೋರ್ಟ್ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಜನವರಿ 10ರಂದು ಸೂಚಿಸಿತ್ತು ಎಂದು ಮಾಹಿತಿ ನೀಡಿದ್ದಾರೆ.

₹ 1,225 ಕೋಟಿ ಅಕ್ರಮದಲ್ಲಿ ಭಾಗಿ: ‘2010ರ ಅಕ್ಟೋಬರ್‌ನಿಂದ 2014ರ ಜುಲೈ ನಡುವಣ ಅವಧಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್‌ನಿಂದ ₹ 1,225 ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಅವಧಿಯಲ್ಲಿ ಮಲ್ಯ ಅವರ ಉದ್ಯಮದ ಲೆಕ್ಕ ಪರಿಶೋಧನೆಯ ಜವಾಬ್ದಾರಿಯನ್ನು ಪಿಡಬ್ಲ್ಯುಸಿ ವಹಿಸಿಕೊಂಡಿತ್ತು. ಆದರೆ ಸೆಬಿ, ಐಸಿಎಐ ಮತ್ತಿತರ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಪಿಡಬ್ಲ್ಯುಸಿ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂದು ಸಿಟಿಜನ್ಸ್ ವಿಶಲ್ ಬ್ಲೋವರ್ ವೇದಿಕೆ ಆರೋಪಿಸಿದೆ.

ಪ್ರಶ್ನಾರ್ಹ: ‘ವಿದೇಶಿ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಸಂಸ್ಥೆಗಳಿಗೆ ಭಾರತದಲ್ಲಿ ಕಾರ್ಯನಿರ್ಹಿಸಲು ಅವಕಾಶವಿಲ್ಲ. ಹೀಗಾಗಿ ಪಿಡಬ್ಲ್ಯುಸಿ ಭಾರತದಲ್ಲಿ ಕಾರ್ಯನಿರ್ವಹಿಸುವುದೇ ಪ್ರಶ್ನಾರ್ಹ’ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

‘ಸ್ವತಂತ್ರ ಸಂಸ್ಥೆಯೆಂದು ಪಿಡಬ್ಲ್ಯುಸಿ ಹೇಳಿಕೊಳ್ಳುತ್ತಿದೆ. ಆದರೆ, ಭಾರತದ ಸಿಎ ಕಂಪೆನಿಯನ್ನು ಖರೀದಿಸುವ ಸಲುವಾಗಿ ಪಿಡಬ್ಲ್ಯುಸಿಯ ಕೋಲ್ಕತ್ತ ಶಾಖೆಗೆ ಡಚ್‌ ಕಂಪೆನಿಯು ₹ 41 ಕೋಟಿ ಹಸ್ತಾಂತರಿಸಲಾಗಿತ್ತು. ಇದೇ ರೀತಿಯಾಗಿ ಡಚ್‌ ಕಂಪೆನಿಯು ಪಿಡಬ್ಲ್ಯುಸಿ ಭಾರತ ಘಟಕಕ್ಕೆ ₹ 500 ಕೋಟಿ ಕಳುಹಿಸಿಕೊಟ್ಟಿತ್ತು. ಇದನ್ನು ಸಾಲ ಸೃಷ್ಟಿಗೆ ಬಳಸಿಕೊಳ್ಳಲಾಗಿತ್ತು. ನಂತರ ಆ ಹಣ ಏನಾಯಿತು ಎಂಬ ಬಗ್ಗೆ ಕಂಪೆನಿ ಮಾಹಿತಿ ಬಹಿರಂಗಪಡಿಸಿಲ್ಲ’ ಎಂದು ಭೂಷಣ್ ತಿಳಿಸಿದ್ದಾರೆ.

‘ಅಧ್ಯಕ್ಷರೂ ಸೇರಿದಂತೆ 15 ನಿರ್ದೇಶಕರು ತಪ್ಪಿಸ್ಥರು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತಾದರೂ ಅದನ್ನು ಮುಚ್ಚಿಹಾಕಲಾಗಿತ್ತು. ತಮಗೆ ಬೇಕಾದಂತೆ ಕಾರ್ಯನಿರ್ವಹಿಸುವ ಸಲುವಾಗಿ, ತಮ್ಮ ಅನುಕೂಲಕ್ಕಾಗಿ ಮೋದಿ ಸರ್ಕಾರ ಪಿಡಬ್ಲ್ಯುಸಿಯನ್ನೇ ನೇಮಕ ಮಾಡಿದೆ’ ಎಂದು ಭೂಷಣ್ ಆರೋಪಿಸಿದ್ದಾರೆ.

ಲೆಕ್ಕ ಪರಿಶೋಧನೆಗಾಗಿ ಪಿಡಬ್ಲ್ಯುಸಿಗೆ ಆರ್‌ಬಿಐಯ ಮಾಹಿತಿ ಪಡೆಯಲು ಅವಕಾಶ ಮಾಡಿಕೊಟ್ಟಿರುವುದಕ್ಕೂ ಭೂಷಣ್ ಆತಂಕ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಕ್ಕೆ ನೈತಿಕ ಹಕ್ಕಿಲ್ಲ’: ಪಿಡಬ್ಲ್ಯುಸಿಯಂಥ ಕಂಪೆನಿಯನ್ನು ನೇಮಕ ಮಾಡಿಕೊಳ್ಳುವ ನೈತಿಕ ಹಕ್ಕು ಸರ್ಕಾರಕ್ಕಿಲ್ಲ ಎಂದು ‘ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ’ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಜಗದೀಪ್‌ ಛೊಕ್ಕರ್ ಹೇಳಿದ್ದಾರೆ.

‘ಕಪ್ಪು ಹಣ ತನಿಖೆಯ ಲೆಕ್ಕ ಪರಿಶೋಧನೆಗೆ ಪಿಡಬ್ಲ್ಯುಸಿಯನ್ನು ನೇಮಕ ಮಾಡಲಾಗಿದೆ. ಯಾಕೆಂದರೆ, ಕಪ್ಪುಹಣ ಸೃಷ್ಟಿಸುವುದು ಹೇಗೆಂಬುದು ಅದಕ್ಕೆ ತಿಳಿದಿದೆ’ ಎಂದು ಜಗದೀಪ್ ವ್ಯಂಗ್ಯವಾಡಿದ್ದಾರೆ.

ಪ್ರತಿಕ್ರಿಯಿಸಿ (+)