ಸೋಮವಾರ, ಡಿಸೆಂಬರ್ 16, 2019
25 °C

ರ್‍ಯಾಫ್ಟಿಂಗ್‌: ಹೊರಗುತ್ತಿಗೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರ್‍ಯಾಫ್ಟಿಂಗ್‌: ಹೊರಗುತ್ತಿಗೆಗೆ ವಿರೋಧ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ದುಬಾರೆಯಲ್ಲಿ ರ್‍ಯಾಫ್ಟಿಂಗ್‌ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುತ್ತಿರುವ ಜಿಲ್ಲಾಡಳಿತ ಕ್ರಮವನ್ನು ರಿವರ್‌ ರ್‍ಯಾಫ್ಟಿಂಗ್‌ ಅಸೋಸಿಯೇಷನ್‌ ಖಂಡಿಸಿದೆ.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‌ ಉಪಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ‘10 ವರ್ಷಗಳಿಂದ ದುಬಾರೆಯಲ್ಲಿ ರ್‍ಯಾಫ್ಟಿಂಗ್‌ ನಡೆಸುವ ಅವಕಾಶವನ್ನು ಸ್ಥಳೀಯರಿಗೆ ನೀಡಲಾಗಿತ್ತು. ಈಗ ಜಿಲ್ಲಾಡಳಿತ ಏಕಾಏಕಿಯಾಗಿ ಹೊರಗುತ್ತಿಗೆಗೆ ನೀಡಲು ನಿರ್ಧಾರ ತೆಗೆದುಕೊಂಡು ಪ್ರಕಟಣೆ ಹೊರಡಿಸಿದೆ.

ಇದರಿಂದ ಸ್ಥಳೀಯರು ಹಾಗೂ ರ್‍ಯಾಫ್ಟಿಂಗ್‌ ಅವಲಂಬಿತರು ತೊಂದರೆಗೆ ಸಿಲುಕುತ್ತಾರೆ. ಜಿಲ್ಲಾಡಳಿತದ ಈ ಕ್ರಮವನ್ನು ತಕ್ಷಣವೇ ಬಿಡಬೇಕು’ ಎಂದು ಆಗ್ರಹಿಸಿದರು.

‘ಹಿಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಅವರ ಅವಧಿ ಯಲ್ಲೂ ಹೊರಗುತ್ತಿಗೆಗೆ ನೀಡಲು ಪ್ರಕಟಣೆ ಹೊರಡಿಸಲಾಗಿತ್ತು. ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾ ಗಿತ್ತು. ಮತ್ತೆ  ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್‌ ಡಿಸೋಜ ಕೈಗೊಂಡಿರುವ ಕ್ರಮ ಸರಿಯಲ್ಲ’ ಎಂದು ಹೇಳಿದರು.

‘ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌,  ಸಚಿವ ಎಂ.ಆರ್‌. ಸೀತಾರಾಂ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಹೊರಗುತ್ತಿಗೆಯನ್ನು ಕೈಬಿಡುವಂತೆ ಕೋರಲಾಗುವುದು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದೂ ಅವರು ಎಚ್ಚರಿಸಿದರು.

ತಿಂಗಳಿಗೆ ₹36 ಸಾವಿರ: ದುಬಾರೆಯಲ್ಲಿ 16 ಮಾಲೀಕರು ಮನರಂಜನಾ ತೆರಿಗೆ ಪಾವತಿಸುತ್ತಿದ್ದಾರೆ. ಇದಲ್ಲದೆ ಗ್ರಾಮ ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದು ರ್‍ಯಾಫ್ಟಿಂಗ್‌ ನಡೆಸಲಾಗುತ್ತಿದೆ. ಗೈಡ್‌ ನಿರ್ವಹಣೆ, ಸುರಕ್ಷತಾ ಪರಿಕರಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈಗ ಏಕಾಏಕಿ ನಿರ್ಧಾರ ಕೈಗೊಂಡಿರುವುದರಿಂದ ಅದೇ ವೃತ್ತಿಯನ್ನು ಅವಲಂಬಿಸಿರುವವರು ಬೀದಿಗೆ ಬೀಳಲಿದ್ದಾರೆ ಎಂದು ಅವಲತ್ತುಕೊಂಡರು. 

ಟೆಂಡರ್ ಪ್ರಕ್ರಿಯೆ ವಿಷಾದನೀಯ: ಸದಸ್ಯ ದಾಮೋಧರ್‌ ಮಾತನಾಡಿ, ರ್‍ಯಾಫ್ಟಿಂಗ್‌ ಅನ್ನು ಸ್ಥಳೀಯರೇ ಹುಟ್ಟು ಹಾಕಿದ್ದು, ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯ ನೀಡಿಲ್ಲ. ಪ್ರವಾ ಸೋದ್ಯಮ ಇಲಾಖೆಯಿಂದ ದುಬಾರೆ ಯಲ್ಲಿ ಅಭಿವೃದ್ಧಿ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಕ್ರಮ ಆಗಿಲ್ಲ. ಅಭಿವೃದ್ಧಿ ಪಡಿಸದ ಜಿಲ್ಲಾಡಳಿತ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಮುಂದಾದರೆ ಹೊರರಾಜ್ಯದ ಬಂಡವಾಳ ಶಾಯಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

‘ಜಿಲ್ಲಾಡಳಿತ ಕೇಳಿರುವ ದಾಖಲಾತಿಗಳನ್ನು ಗಮನಿಸಿದರೆ ಗುತ್ತಿಗೆ ಪ್ರಕ್ರಿಯೆಯಲ್ಲಿ ತಮಗೆ ಪಾಲ್ಗೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ದಾಖಲಾತಿ ಸಿದ್ಧಪಡಿಸಿಕೊಳ್ಳಲು ಒಂದು ವರ್ಷಗಳ ಕಾಲಾವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಿವರಾಮ್, ಚಂದ್ರ, ತಳೂರು ಚೇತನ್, ನವೀನ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)