ಮಂಗಳವಾರ, ಡಿಸೆಂಬರ್ 10, 2019
17 °C

ನೇಮಕಾತಿ ಆದೇಶಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಮಕಾತಿ ಆದೇಶಕ್ಕೆ ಆಗ್ರಹ

ಬೆಂಗಳೂರು: ‘2015ರಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಬೇಕು’ ಎಂದು ಒತ್ತಾಯಿಸಿ ನೊಂದ ಅಭ್ಯರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ‘ಬೇಕು ಎಲ್ಲರಿಗೂ ಉನ್ನತ ಶಿಕ್ಷಣ, ನೀಡಬೇಕು ಆದೇಶ ನಮಗೆ ತಕ್ಷಣ’, ‘ಆಶ್ವಾಸನೆ ಸಾಕು, ಆದೇಶ ಪತ್ರ ಬೇಕು’ ಎಂಬ ಬರಹವುಳ್ಳ ಫಲಕಗಳನ್ನು ಪ್ರದರ್ಶಿಸಿದರು.

‘2,160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಆರು ತಿಂಗಳ ಹಿಂದೆಯೇ ಬಿಡುಗಡೆ ಮಾಡಲಾಗಿದೆ’.

‘ಅದಾದ ಬಳಿಕ ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಗಿದ್ದು, ಯಾವುದೇ ನೇಮಕಾತಿ ಆದೇಶ ಪತ್ರವನ್ನು ಕೆಇಎ ನೀಡಿಲ್ಲ. 2017–18ರ ಶೈಕ್ಷಣಿಕ ವರ್ಷದ ಆರಂಭದಲ್ಲಿ ಆದೇಶ ನೀಡುವುದಾಗಿ ಹೇಳಿದ್ದ ಸಚಿವರ ಭರವಸೆ ಸಹ ಈಡೇರಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಹಲವು ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಕೆಲವರು ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲು ಹುನ್ನಾರ ನಡೆಸಿದ್ದಾರೆ. ಕೂಡಲೇ ಕೆಇಎ ಅಧಿಕಾರಿಗಳು, ಅರ್ಹ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಬೇಕು. ಇಲ್ಲದಿದ್ದರೇ ಗಂಭೀರ ಸ್ವರೂಪದ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)