ಭಾನುವಾರ, ಡಿಸೆಂಬರ್ 8, 2019
21 °C

72 ಗಂಟೆ ನಾದೋಲ್ಲಾಸದ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

72 ಗಂಟೆ ನಾದೋಲ್ಲಾಸದ ವೈಭವ

ಚಿಂತಾಮಣಿ: ಶುಕ್ರವಾರದಿಂದ (ಜುಲೈ 7) ನಡೆಯಲಿರುವ ಗುರುಪೂಜಾ ಮಹೋತ್ಸವ ಮತ್ತು ಸಂಗೀತೋತ್ಸವಕ್ಕೆ ಕೈವಾರ ಮದುವೆ ಮನೆಯಂತೆ ಸಂಗಾರಗೊಂಡಿದೆ. 

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಕೈವಾರವು ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಂ ನೇತೃತ್ವದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರವಾಗಿ ಅಭಿವೃದ್ದಿ ಹೊಂದುತ್ತಿದೆ.

ಗುರುಪೂಜಾ ಮಹೋತ್ಸವದಂದು ಸಾವಿರಾರು ಜನ ಸಂಗೀತಗಾರರು, ಸಂಗೀತಪ್ರೇಮಿಗಳು ಹಾಗೂ ಸಂಗೀತಾಭಿಮಾನಗಳು ಒಂದೆಡೆ ಸೇರಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ 72 ಗಂಟೆಗಳ ಕಾಲ ಸಂಗೀತಸುಧೆಯನ್ನು ಹರಿಸುವರು.

ತಮಿಳುನಾಡಿನ ತಿರುವಯ್ಯಾರ್‌ ಹೊರತುಪಡಿಸಿದರೆ ರಾಜ್ಯ ಹಾಗೂ ದೇಶದ ಯಾವ ಭಾಗದಲ್ಲೂ 72 ಗಂಟೆಗಳ ಕಾಲ ನಿರಂತರವಾಗಿ ಸಂಗೀತೋತ್ಸವ ನಡೆದ ಉದಾಹರಣೆಗಳಿಲ್ಲ. ಈ ರೀತಿ ಸಂಗೀತೋತ್ಸವ ನಡೆಸುವ ರಾಜ್ಯದ ಏಕೈಕ ಕ್ಷೇತ್ರ ಕೈವಾರವಾಗಿದೆ. ತಿರುವಯ್ಯಾರ್‌ ಶಾಸ್ತ್ರೀಯ ಸಂಗೀತ ಕೇಂದ್ರವಾದರೆ ಕೈವಾರವು ಶಾಸ್ತ್ರೀಯ ಸಂಗೀತದ ಜತೆಗೆ ಆಧ್ಯಾತ್ಮಿಕ ಹಾಗೂ ಸಂಗೀತ ಕೇಂದ್ರವಾಗಿದೆ.

ಸಾಮಾಜಿಕವಾಗಿ ಹಾಗೂ ಧಾರ್ಮಿವಾಗಿ ಮಹಾನ್ ಕ್ರಾಂತಿಯನ್ನು ಮಾಡುತ್ತಿರುವ ಕೈವಾರ ಗ್ರಾಮಕ್ಕೆ ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇದೆ. ಕ್ಷೇತ್ರದಲ್ಲಿ ಸದಾ ಭಜನೆ, ಪೂಜೆ, ಉಪನ್ಯಾಸ, ಸತ್ಸಂಗ ಹಾಗೂ ಬಡವರ ಬದುಕಿಗೆ ಅನುಕೂಲವಾಗುವಂತಹ ವಿಚಾರಗೋಷ್ಠಿಗಳು, ತರಬೇತಿಗಳು, ಸಾಹಿತ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.

ಯೋಗಿನಾರೇಯಣ ಯತೀಂದ್ರರು ಸುಮಾರು 200 ವರ್ಷಗಳ ಹಿಂದೆ ತಮ್ಮ ತಪಸ್ಸಿನ ಶಕ್ತಿಯಿಂದ ಕಾಲಜ್ಞಾನವನ್ನು ರಚಿಸಿ ಮುಂದೆ ನಡೆಯಲಿರುವ ಮಹತ್ವದ ಘಟನೆಗಳ  ಬಗ್ಗೆ ಭವಿಷ್ಯವಾಣಿಯನ್ನು ನುಡಿದಿದ್ದರು. ಮನುಷ್ಯ, ರಾಜ್ಯ, ರಾಷ್ಟ್ರ ಮತ್ತು ವಿಶ್ವದ ಬಗ್ಗೆ ಅವರ ಭವಿಷ್ಯವಾಣಿಗಳು ಸತ್ಯ ಘಟನೆಗಳಾಗಿ ನಡೆಯುತ್ತಿವೆ. ಭವಿಷ್ಯವಾಣಿ ‘ಕಾಲಜ್ಞಾನವು’ ಇಂದಿಗೂ ಪ್ರಸ್ತುತವಾಗಿದೆ.

ಸಂಗೀತೋತ್ಸವ ನಡೆಯುವ ಯೋಗಿನಾರೇಯಣ ಸಭಾಂಗಣದಲ್ಲಿ 2 ಬೃಹತ್‌ ವೇದಿಕೆಗಳನ್ನು ನಿರ್ಮಿಸಲಾಗಿದೆ.  ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಮತ್ತೊಂದು ವೇದಿಕೆ ನಿರ್ಮಿಸಿ ಸದ್ಗುರು ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿ ಪ್ರತಿಷ್ಠಾ ಪಿಸಲಾಗುತ್ತದೆ. ಸಭಾಂಗಣ ಮದುವೆ ಮಂಟಪದಂತೆ ಅಲಂಕೃತಗೊಂಡಿದೆ.

‘2500 ಜನ ಹಾಗೂ ಹೊರಗಡೆ ಶಾಮಿಯಾನದಲ್ಲಿ ಸುಮಾರು 10 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಿತ್ಯ 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ’ ಎಂದು  ಸಂಗೀ ತೋತ್ಸವದ ಸಂಯೋಜಕ ಬಾಲಕೃಷ್ಣಭಾಗವತರ್‌ ತಿಳಿಸುವರು.

ಭಕ್ತರಿಗೆ, ಸಂಗೀತಗಾರರಿಗೆ 3 ದಿನ ಉಚಿತವಾಗಿ ಅನ್ನದಾಸೋಹ ಇರುತ್ತದೆ. ಮಠದ ಪ್ರಾಂಗಣದಲ್ಲಿ ಅನ್ನದಾಸೋಹಕ್ಕಾಗಿ  ಪ್ರತ್ಯೇಕ ಸ್ಥಳ ಗುರುತಿಸಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ. ಊಟಕ್ಕಾಗಿ ನೂಕುನುಗ್ಗಲು ಉಂಟಾಗಬಾರದು ಎಂದು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅನ್ನ ಸಾಂಬಾರ್‌, ಪುಳಿಯೊಗರೆ, ಮೊಸರನ್ನು, ಸಿಹಿಪೊಂಗಲ್‌  ವಿತರಿಸಲಾಗುವುದು ಎಂದು ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮಿನಾರಾಯಣ್‌ ತಿಳಿಸಿದರು.

ಸಂಗೀತೋತ್ಸವದಲ್ಲಿ ಪ್ರತಿವರ್ಷ ಒಬ್ಬ ಖ್ಯಾತ ಸಂಗೀತ ವಿದ್ವಾಂಸರನ್ನು ಸನ್ಮಾನಿಸಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ, ನೇದನೂರು ಕೃಷ್ಣಮೂರ್ತಿ, ಸಂತಾನ ಗೋಪಾಲಕೃಷ್ಣನ್‌ ಅವರನ್ನ ಸನ್ಮಾನಿಸಲಾಗಿತ್ತು. ಈ ಬಾರಿ ಪದ್ಮಶ್ರೀ ಕದ್ರಿ ಗೋಪಾಲನಾಥ್‌ ಅವರನ್ನು ಸನ್ಮಾನಿಸಲಾಗುವುದು.

* * 

ದೇಶದ ಖ್ಯಾತ ವಿದ್ವಾಂಸರನ್ನು ನೋಡುವ ಹಾಗೂ ಅವರ ಸಂಗೀತ ಕೇಳುವ ಹಾಗೂ ಅವರ ಜತೆಗೆ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ತೋರಿಸುವ ಅವಕಾಶ ಸಂಗೀತೋತ್ಸದಿಂದ ದೊರೆಯುತ್ತದೆ.

ರಾಮ್‌ಕುಮಾರ್, ತಬಲವಾದಕ

 

ಪ್ರತಿಕ್ರಿಯಿಸಿ (+)