ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಮಧ್ಯೆ ಜಿ20ಗೆ ಚಾಲನೆ

ಜಗತ್ತಿನ ಶ್ರೀಮಂತ ದೇಶಗಳ ಶೃಂಗ ಸಭೆ ಶುರು
Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಹ್ಯಾಂಬರ್ಗ್‌ (ಪಿಟಿಐ): ಜಿ20 ಶೃಂಭ ಸಭೆ ಆರಂಭವಾದ ಜರ್ಮನಿಯ ಹ್ಯಾಂಬರ್ಗ್‌  ನಗರ ಶುಕ್ರವಾರ ಭಾರಿ ಪ್ರತಿಭಟನೆಗೆ ಸಾಕ್ಷಿಯಾಯಿತು. ನಗರವನ್ನು  ಎಡಪಂಥೀಯ ಪ್ರತಿಭಟನಾಕಾರರು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದರು.

ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್‌ ಅವರಿಗೆ ಅವರು ತಂಗಿದ್ದ ಸ್ಥಳದಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಕಾರು ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಿದರು. ಕಿಟಕಿಗಳಿಗೆ ಕಲ್ಲೆಸೆದರು ಮತ್ತು ಕೆನಡ ನಿಯೋಗದ ವಾಹನಗಳ ಟೈರ್‌ಗಳನ್ನು ಸೀಳಿದರು. ಪೊಲೀಸ್‌ ಹೆಲಿಕಾಪ್ಟರ್‌ಗಳ ಮೇಲೆಯೂ ದಾಳಿ ನಡೆಸಲು ಯತ್ನಿಸಿದರು.

ಹಿಂಸಾಚಾರ ನಿಯಂತ್ರಣ ಕಷ್ಟವಾದಾಗ ಹ್ಯಾಂಬರ್ಗ್‌ ಪೊಲೀಸರು ಹತ್ತಿರದ ಪ್ರಾಂತ್ಯಗಳಿಂದಲೂ ಸಿಬ್ಬಂದಿಯನ್ನು ಕರೆಸಿಕೊಂಡರು. ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಮುಖಂಡರ ಸಂಗಾತಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದನ್ನು ಮೊಟಕುಗೊಳಿಸಲಾಯಿತು.
ಪ್ರತಿಭಟನೆಯಿಂದಾಗಿ ಟ್ರಂಪ್‌ ಅವರು ತಾವು ಉಳಿದುಕೊಂಡಿದ್ದ ಅತಿಥಿಗೃಹದಿಂದ ಬಳಸು ದಾರಿಯ ಮೂಲಕ ಶೃಂಗಸಭೆಗೆ ಬರಬೇಕಾಯಿತು.
ಬಂಡವಾಳಶಾಹಿ ನೀತಿ, ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದರ ವಿರುದ್ಧ ಈ ಪ್ರತಿಭಟನೆ ನಡೆದಿದೆ.

ಟ್ರಂಪ್‌–ಪುಟಿನ್‌ ಭೇಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಷ್ಯಾ ಮುಖ್ಯಸ್ಥ ವ್ಲಾಡಿಮಿರ್‌ ಪುಟಿನ್‌ ಅವರ ನಡುವಣ ಮೊದಲ ಮುಖಾಮುಖಿಗೆ ಜಿ20 ಶೃಂಗ ಸಭೆ ವೇದಿಕೆ ಸೃಷ್ಟಿಸಿದೆ. ಜತೆಗೆ, ಉತ್ತರ ಕೊರಿಯಕ್ಕೆ ಸಂಬಂಧಿಸಿ ಪಶ್ಚಿಮದ ದೇಶಗಳ ನಡುವೆ ಖಚಿತ ವಿಭಜನೆಯೂ  ಉಂಟಾಗಿದೆ.

ಭಾರಿ ಭದ್ರತಾ ವ್ಯವಸ್ಥೆ ಅಳವಡಿಸಲಾಗಿದ್ದ ಸಮಾವೇಶ ಸಭಾಂಗಣದ ಒಳಗೆಯೂ ವಾತಾವರಣ ಬಿಗುವಿನಿಂದಲೇ ಕೂಡಿತ್ತು. ಟ್ರಂಪ್‌ ಅವರು ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿರುವುದಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಯುರೋಪ್‌ನ ದೇಶಗಳ ನಡುವೆ ಅತೃಪ್ತಿ ಹೊಗೆಯಾಡುತ್ತಿತ್ತು.
ಒಮ್ಮತದ ಸಾಧ್ಯತೆ: ಭಯೋತ್ಪಾದನೆ, ಹವಾಮಾನ ವೈಪರೀತ್ಯ ಮತ್ತು ರಕ್ಷಣಾವಾದಗಳು ಈ ಹೊತ್ತಿನ ಜಾಗತಿಕ ಸಮಸ್ಯೆಗಳು ಎಂಬುದರ ಬಗ್ಗೆ ಜಿ–20 ರಾಷ್ಟ್ರಗಳ ಬಹುತೇಕ ನಾಯಕರು ಒಮ್ಮತಕ್ಕೆ ಬರುವ ಸಾಧ್ಯತೆ ಇದೆ.

ಜಿ–20 ಶೃಂಗಸಭೆಯ ವೇದಿಕೆಯಲ್ಲಿ ನಾಯಕರು ಚರ್ಚೆ, ಸಭೆಗಳಲ್ಲಿ ನಿರತರಾಗಿದ್ದರೆ, ಆಯಾ ದೇಶಗಳ ರಾಜತಾಂತ್ರಿಕರು  ಶೃಂಗಸಭೆಯ ಜಂಟಿ ಘೋಷಣೆಯ ಕರಡು ಪ್ರತಿಯನ್ನು ಸಿದ್ಧಪಡಿಸುವುದರಲ್ಲಿ ಮಗ್ನರಾಗಿದ್ದಾರೆ. ಹವಾಮಾನ ವೈಪರೀತ್ಯ ಮತ್ತು ಅದರ ನಿಯಂತ್ರಣ ಕ್ರಮಗಳನ್ನು ನಿರಾಕರಿಸುತ್ತಿರುವ ಹಾಗೂ ಸ್ವದೇಶಿ ಕಂಪೆನಿಗಳನ್ನು ಕಾಪಾಡಲು ವಿದೇಶಿ ಕಂಪೆನಿಗಳ ಮೇಲೆ ಅಪಾರ ತೆರಿಗೆ ಹೇರಿ ರಕ್ಷಣಾವಾದವನ್ನು ಪ್ರತಿಪಾದಿಸುತ್ತಿರುವ ಅಮೆರಿಕವನ್ನು ಈ ಶೃಂಗಸಭೆಯ ತೀರ್ಮಾನಗಳಿಂದ ದೂರವಿಡಲಾಗಿದೆ.

ಅಮೆರಿಕದ ನೀತಿ ಮುಕ್ತ ವ್ಯಾಪಾರ ಪರಿಕಲ್ಪನೆಯ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ. ಘೋಷಣೆಯಲ್ಲೂ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಶೃಂಗಸಭೆಯ ಉದ್ಘಾಟನೆ ವೇಳೆ ಮಾತನಾಡಿದ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ‘ರಾಷ್ಟ್ರಗಳು ತಮ್ಮ ನೀತಿಗಳ ಜತೆ ರಾಜಿಯಾಗದಯೇ, ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ನಾವೆಲ್ಲರು ಒಮ್ಮತಕ್ಕೆ ಬಂದರೂ, ನಮ್ಮ –ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬಹುದು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT