ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ ಹೆಚ್ಚಿಸಿದ ನೈಸ್‌ ವಿರುದ್ಧ ಕ್ರಮಕ್ಕೆ ನಿರ್ಧಾರ

Last Updated 7 ಜುಲೈ 2017, 19:29 IST
ಅಕ್ಷರ ಗಾತ್ರ

ಬೆಂಗಳೂರು: ಟೋಲ್‌ ರಸ್ತೆಗಳ ಶುಲ್ಕ ಹೆಚ್ಚಿಸಿದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ (ನೈಸ್) ಕಂಪೆನಿ ವಿರುದ್ಧ  ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಅನುಮತಿ ಪಡೆಯದೆ ಟೋಲ್‌ ಶುಲ್ಕ ಪರಿಷ್ಕರಿಸಿದ ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯ ಪ್ರವರ್ತಕ ನೈಸ್‌ ಸಂಸ್ಥೆಗೆ ನೋಟಿಸ್‌ ನೀಡಲು ಲೋಕೋಪಯೋಗಿ ಇಲಾಖೆ ತೀರ್ಮಾನಿಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಗುರುವಾರ ಮಧ್ಯಾಹ್ನ ಹಿರಿಯ ಅಧಿಕಾರಿಗಳ ಸಭೆ ಕರೆದು ಹಿಗ್ಗಾಮುಗ್ಗ ಜಾಡಿಸಿದ ಬಳಿಕ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಯಚಂದ್ರ ಅವರ ಸೂಚನೆ ಮೇಲೆ ನೈಸ್‌ಗೆ ನೋಟಿಸ್‌ ನೀಡಲಾಗುತ್ತಿದೆ ಎಂದೂ ಮೂಲಗಳು ವಿವರಿಸಿವೆ.

‘ಟೋಲ್‌ ಶುಲ್ಕ ಪರಿಷ್ಕರಿಸುವ ಮೊದಲು ನೈಸ್‌ ಸಂಸ್ಥೆ ಸರ್ಕಾರದಿಂದ ಅನುಮತಿ ಪಡೆಯಬೇಕಿತ್ತು. ಏಕಾಏಕಿ ಶುಲ್ಕ ಹೆಚ್ಚಿಸಿ ಯೋಜನೆ ಸಂಬಂಧ ಮಾಡಿಕೊಂಡಿದ್ದ ಕ್ರಿಯಾ ಒಪ್ಪಂದವನ್ನು ಉಲ್ಲಂಘಿಸಿದೆ’ ಎಂದು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮಿ ನಾರಾಯಣ ತಿಳಿಸಿದರು.

ನೈಸ್‌  ಸಂಸ್ಥೆ  ಟೋಲ್‌ ಶುಲ್ಕವನ್ನು ಇತ್ತೀಚೆಗೆ ಶೇ 14ರಿಂದ 25ರಷ್ಟು ಹೆಚ್ಚಿಸಿತ್ತು. 41 ಕಿ.ಮೀ ಉದ್ದದ ಪೆರಫೆರಲ್‌ ರಸ್ತೆ ಮತ್ತು 9.1 ಕಿ.ಮೀ ಉದ್ದದ ಲಿಂಕ್‌ ರಸ್ತೆಗೆ ಈ ಸಂಸ್ಥೆ ಟೋಲ್‌ ಸಂಗ್ರಹಿಸುತ್ತಿದೆ. ನಾಲ್ಕು ವರ್ಷಗಳ ಅಂತರದ ಬಳಿಕ ಸಂಸ್ಥೆ ಟೋಲ್‌ ಶುಲ್ಕವನ್ನು ಪರಿಷ್ಕರಿಸಿದೆ.

‘ನೈಸ್‌ ಕಂಪೆನಿ ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ನಲ್ಲಿ ಕಾಂಕ್ರೀಟ್‌ ರಸ್ತೆ (ಎಕ್ಸ್‌ಪ್ರೆಸ್‌ ವೇ, ಲಿಂಕ್‌ ರಸ್ತೆ ಮತ್ತು ಪೆರಿಫೆರಲ್‌ ರಸ್ತೆ) ನಿರ್ಮಿಸಬೇಕಿತ್ತು. ಈ ಕಾಮಗಾರಿಯನ್ನು ಸರ್ಕಾರದ ಮಧ್ಯೆ ನಡೆದ ಕ್ರಿಯಾ ಒಪ್ಪಂದದಂತೆ (ಫ್ರೇಮ್‌ ವರ್ಕ್‌ ಅಗ್ರಿಮೆಂಟ್‌) 10 ವರ್ಷಗಳ ಒಳಗಾಗಿ, ಅಂದರೆ, 2012ರ ಮಾರ್ಚ್‌ ಒಳಗೆ ಪೂರ್ಣಗೊಳಿಸಿ, ಬಳಿಕ ಟೋಲ್‌ ಶುಲ್ಕ ಸಂಗ್ರಹಿಸಬೇಕಿತ್ತು’ ಮೂಲಗಳು ತಿಳಿಸಿವೆ.

ಆದರೆ, ಈ ಒಪ್ಪಂದದಂತೆ ಸಂಸ್ಥೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿಲ್ಲ. ಯೋಜನೆ ಅಪೂರ್ಣಗೊಳಿಸಿದ ಕಾರಣಕ್ಕೆ ಕಂಪೆನಿಗೆ ಕಳೆದ ವರ್ಷ ಲೋಕೋಪಯೋಗಿ ಇಲಾಖೆ ನೋಟಿಸ್‌ ನೀಡಿತ್ತು. ಲೋಪ ಸರಿಪಡಿಸಲು 180 ದಿನಗಳ ಕಾಲಾವಕಾಶ  ನೀಡಿತ್ತು. ಆದರೆ, ನೈಸ್‌ ಈ ನೋಟಿಸ್‌ಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT