ಬುಧವಾರ, ಡಿಸೆಂಬರ್ 11, 2019
25 °C

ಮುಂಗಾರಿನ ಸಿಂಗಾರಿಗೆ ಬಲು ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರಿನ ಸಿಂಗಾರಿಗೆ ಬಲು ಬೇಡಿಕೆ

ಶಿರಸಿ: ಮುಂಗಾರು ಮಳೆಯ ಸಿಂಚನಕ್ಕೆ ನಾಚುತ್ತ, ಬಳುಕುತ್ತ ನಗೆ ಬೀರುವ ಸಿಂಗಾರಿ ಡೇರೆ ಹೂ. ಒದ್ದೆ ನೆಲದ ಒಡಲಿಂದ ಕುಡಿಯುವ ಗಿಡಗಳಲ್ಲಿ ರಂಗು ರಂಗಾಗಿ ಮಿಂಚುವ ಡೇರೆಗೆ ಮನಸೋಲದವರಿಲ್ಲ. ಕೈತೋಟದ ಪ್ರೀತಿಯಿಂದ ಡೇರೆ ಬೆಳೆಸಿಕೊಂಡು ಬಂದಿರುವ ಹಲವಾರು ಮಹಿಳೆಯರಿಗೆ ಈ ಡೇರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಬಲ ತಂದುಕೊಡುತ್ತಿದೆ.

ಎರಡು ದಿನಗಳ ಡೇರೆ ಮೇಳ ಶುಕ್ರವಾರ ಇಲ್ಲಿನ ಟಿಎಸ್‌ಎಸ್ ಆವರಣದಲ್ಲಿ ಅನಾವರಣಗೊಂಡಿದೆ. ಗ್ರಾಮೀಣ ಮಹಿಳೆಯರು ಅಂಗಳದಲ್ಲಿ ಬೆಳೆಸಿರುವ ಡೇರೆ ಗಿಡಗಳನ್ನು ಮಾರಾಟಕ್ಕೆ ತಂದಿದ್ದಾರೆ. 50ಕ್ಕೂ ಅಧಿಕ ಜಾತಿಯ ಡೇರೆ ಗಿಡಗಳು ಮಾರಾಟಕ್ಕೆ ಬಂದಿವೆ. ಹೂವಿನ ಆಕಾರ, ಗಾತ್ರ, ಬಣ್ಣಕ್ಕೆ ತಕ್ಕುದಾಗಿ ನಾಮಕರಣವಾಗಿದೆ. ಏಡಿಕೊಂಬು, ಅರಿಶಿಣ ಕಡ್ಡಿ, ಲಿಲ್ಲಿಪುಟ್, ಮಂದಾರ ಅರಿಶಿಣ, ಮಂದಾರ ಬಿಳಿ, ಅರಿಶಿಣ ಉಂಡೆ, ಡಿಲ್ಲಿ ಡೇರೆ, ಬಿಂಜಲು, ಕಡ್ಡಿ ಡೇರೆ ಹೀಗೆ ಬೆರಗು ಮೂಡಿಸುವ ಹೆಸರುಗಳ ಪಟ್ಟಿಯೇ ಅಲ್ಲಿತ್ತು.

ಡೇರೆ ಮೇಳ ಸಂಘಟಕಿ ನೀರ್ನಳ್ಳಿಯ ವೇದಾ ಹೆಗಡೆ ಮಾಹಿತಿ ನೀಡಿ ‘ಹಳ್ಳಿ ಮನೆಯಲ್ಲಿ ಬೆಳೆಯುವ ಹೂವಿನ ಹಮ್ಮಿಕೊಳ್ಳಲಾಗಿದೆ. ₹ 8ರಿಂದ 100ವರೆಗೆ ಬೆಲೆ ಬಾಳುವ ಗಿಡಗಳು ಮೇಳದಲ್ಲಿವೆ. ಹಬ್ಬಗಳ ಸಂದರ್ಭದಲ್ಲಿ ಒಂದು ಡೇರೆ ಹೂ ₹ 40ರಿಂದ 50ಕ್ಕೆ ಮಾರಾಟವಾಗುತ್ತದೆ. ಇಂತಹ ಬೇಡಿಕೆ ಸಂದರ್ಭದಲ್ಲಿಯೇ ಕೃಷಿಕರು ಬೆಳೆದ ಸಸಿ ಹಾಗೂ ಹೂವುಗಳನ್ನು ಮಾರುಕಟ್ಟೆಗೆ ತಂದು ಆದಾಯ ಪಡೆದುಕೊಳ್ಳಬೇಕು’ ಎಂದರು.

‘ಮನೆ ಕೆಲಸಗಳ ನಡುವೆ ಕೈತೋಟ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿಗೆ ಆನಂದವಾಗುತ್ತದೆ. ಮೇಳ ಹಲವರ ಒಡನಾಟ ಒದಗಿಸುತ್ತದೆ. ಗಿಡ ಮಾರಾಟದ ಖುಷಿಯ ಜೊತೆಗೆ ಅನೇಕರ ಪರಿಚಯ, ಪರಿಚಯಸ್ಥರ ಭೇಟಿ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಡೇರೆ ಗಿಡಗಳನ್ನು ಮಾರಾಟಕ್ಕೆ ತಂದಿದ್ದ ಶುಭಾ ಹೂಡ್ಲಮನೆ.

ಡೇರೆ ಜೊತೆಯಲ್ಲಿ ದಾಸವಾಳ, ಸೇವಂತಿಗೆ, ಕೋಟೆ ಹೂವು, ಚಂಡುಹೂವು (ಗೊಂಡೆ), ಗೌರಿ ಹೂವಿನ ಗಿಡ ಮತ್ತು ಬೀಜಗಳು ಮಾರಾಟಕ್ಕೆ ಬಂದಿವೆ. ನೀರ್ನಳ್ಳಿ, ಪುಟ್ಟನಮನೆ, ಗುಂಡಿಗದ್ದೆ, ಗುಬ್ಬಿಗದ್ದೆ, ಬೆಳಗಲಮನೆ, ಶೀಗೇಮನೆ, ಹಂದಿಮನೆ, ಹುಳಗೋಳ, ಸಿದ್ದಾಪುರ ತಾಲ್ಲೂಕು ಕಲ್ಲಗದ್ದೆ, ಹುಲಿಮನೆಯಿಂದ ಬಂದಿರುವ ಮಹಿಳೆಯರು ಗಿಡಗಳನ್ನು ಮಾರಾಟ ಮಾಡುತ್ತ ದೈನಂದಿನ ಕೆಲಸಕ್ಕೆ ಕೊಂಚ ವಿರಾಮ ನೀಡಿದ್ದಾರೆ.

* * 

ಡೇರೆ ಗಿಡಗಳ ಖರೀದಿಗೆ ಬೇರೆ ಜಿಲ್ಲೆಗಳಿಂದ ಸಹ ಜನರು ಬರುತ್ತಿದ್ದಾರೆ. ಹಿಂದಿನ ವರ್ಷಗಳಿಗಿಂತ ಹೆಚ್ಚು ವಿಧದ, ಉತ್ತಮವಾದ ಸಸಿಗಳು ಈ ಬಾರಿ ಮೇಳದಲ್ಲಿ ಲಭ್ಯವಿವೆ

ಅಂಜನಾ ಭಟ್ಟ

ಕಾರ್ಯಕ್ರಮ ಸಂಘಟಕಿ

ಪ್ರತಿಕ್ರಿಯಿಸಿ (+)