ಸೋಮವಾರ, ಡಿಸೆಂಬರ್ 16, 2019
18 °C
ಸೌಲಭ್ಯ ವಂಚಿತ ಅರಸೀಕೆರೆ: ಶೌಚಾಲಯಕ್ಕಾಗಿ ಮಹಿಳೆಯರ ಪರದಾಟ

ಹಂದಿಗೂಡಾದ ಬಸ್‌ ತಂಗುದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂದಿಗೂಡಾದ ಬಸ್‌ ತಂಗುದಾಣ

ಪಾವಗಡ: ನಿಡಗಲ್ ಹೋಬಳಿ ಅರಸೀಕೆರೆ ಗ್ರಾಮದಲ್ಲಿ ಸಮರ್ಪಕ ತಂಗುದಾಣ, ಶೌಚಾಲಯ ಇಲ್ಲದೆ ಪ್ರಯಾಣಿಕರು ಯಾತನೆ ಅನುಭವಿಸಬೇಕಿದೆ. ಹೋಬಳಿಯ ಪ್ರಮುಖ ಗ್ರಾಮ, ವಾಣಿಜ್ಯ ಕೇಂದ್ರ ಎನಿಸಿರುವ ಅರಸೀಕೆರೆಗೆ ನಿತ್ಯ ನೂರಾರು ಮಂದಿ ಪ್ರಯಾಣಿಕರು ಬರುತ್ತಾರೆ.

ಪ್ರತಿ ಮಂಗಳವಾರ ನಡೆಯುವ ಸಂತೆಗೆ ದೂರದೂರುಗಳಿಂದ ವ್ಯಾಪಾರಿಗಳು, ರೈತರು, ಗ್ರಾಹಕರು ಬರುತ್ತಾರೆ. ಬಿಸಿಲಿನ ತಾಪ, ಮಳೆಯಿಂದ ರಕ್ಷಿಸಿಕೊಳ್ಳಲು ತಂಗುದಾಣ ಇಲ್ಲದೆ, ಅಂಗಡಿ ಮಳಿಗೆಗಳ ಮುಂದೆ ಜನತೆ ಆಶ್ರಯ ಪಡೆಯಬೇಕಿದೆ.

‘ಈ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ತಂಗುದಾಣ ಶಿಥಿಲಾವಸ್ಥೆಗೆ ತಲುಪಿದೆ. ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಚಾವಣಿಗೆ ಹೊದಿಸಿದ್ದ ಶೀಟುಗಳು ಹಾಳಾಗಿವೆ. ಇದೀಗ ತಂಗುದಾಣ ಹಂದಿಗೂಡಾಗಿ ಮಾರ್ಪಟ್ಟಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ವಾರಕ್ಕೊಮ್ಮೆ ನಡೆಯುವ ಸಂತೆಗೆ ತಾಲ್ಲೂಕಿನ ಗುಜ್ಜಾರಹಳ್ಳಿ, ಎಸ್.ಆರ್ ಪಾಳ್ಯ, ತುಮಕುಂಟೆ, ಕೊಂಡಾಪುರ, ಜಂಗಮರಹಳ್ಳಿ, ಹೊಸಹಳ್ಳಿ. ಆಂಧ್ರದ  ಚಿಕ್ಕನಡುಕು, ಆಲದಹಳ್ಳಿ ಸೇರಿದಂತೆ ಹಲ ಗ್ರಾಮಗಳಿಂದ ಜನತೆ ಬರುತ್ತಾರೆ. ಸಮರ್ಪಕ ಬಸ್ ನಿಲ್ದಾಣ, ಕುಡಿಯುವ ನೀರು, ತಂಗುದಾಣ, ಶೌಚಾಲಯ ಸೌಲಭ್ಯಗಳು ಇಲ್ಲದೆ ಮಹಿಳೆಯರು, ಮಕ್ಕಳು ಪರದಾಡುವುದು ಸಾಮಾನ್ಯವಾಗಿದೆ.

‘ಗ್ರಾಮದ ಬಸ್ ನಿಲ್ದಾಣದ ಬಳಿ ಅಳವಡಿಸಿರುವ ಐ ಮ್ಯಾಕ್ಸ್ ದೀಪ ಕೆಟ್ಟು ನಿಂತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿದ ದೀಪ ತಿಂಗಳೂ ಬೆಳಕು ನೀಡಲಿಲ್ಲ. ರಾತ್ರಿಯ ಈ ಪ್ರದೇಶದಲ್ಲಿ ಸಂಚರಿಸಲು ಗ್ರಾಮಸ್ಥರು ಹೆದರುವ ಸ್ಥಿತಿ ಇದೆ. ಐ ಮ್ಯಾಕ್ಸ್ ದೀಪ ಸರಿಪಡಿಸಿ ಎಂದು ಅಧಿಕಾರಿಗಳಿಗೆ ದೂರು ನೀಡಿದರೂ ಗಮನಹರಿಸುತ್ತಿಲ್ಲ’ ಎಂಬುದು ಗ್ರಾಮಸ್ಥರ ದೂರು.

‘ಶಿಥಿಲಗೊಂಡಿರುವ ತಂಗುದಾಣವನ್ನು ದುರಸ್ತಿ ಮಾಡಿಸಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಐ ಮ್ಯಾಕ್ಸ್ ದೀಪ ದುರಸ್ತಿಪಡಿಸಿಬೇಕು’ ಎಂದು ಗ್ರಾಮದ ರಘು, ಗೋವಿಂದಪ್ಪ, ಬುಡೇನ್ ಸಾಬ್, ಕುಮಾರ್ ಒತ್ತಾಯಿಸಿದ್ದಾರೆ.

* * 

ತಂಗುದಾಣ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ವರ್ಷಗಳು ಕಳೆದರೂ ಸಾರ್ವಜನಿಕರ ಗೋಳು ಅಧಿಕಾರಿಗಳಿಗೆ ಕೇಳುತ್ತಿಲ್ಲ.

ತಿಪ್ಪೇಸ್ವಾಮಿ, ಅರಸೀಕೆರೆ.

ಪ್ರತಿಕ್ರಿಯಿಸಿ (+)