ಭಾನುವಾರ, ಡಿಸೆಂಬರ್ 8, 2019
25 °C

ಕರೆದರೆ ಬರುವ ಕೃಷ್ಣ!

Published:
Updated:
ಕರೆದರೆ ಬರುವ ಕೃಷ್ಣ!

ದೇವರಿಗೆ ಜಾತಿ, ಧರ್ಮ ಎಂಬ ಭೇದ ಭಾವ ಇಲ್ಲ. ಅವನಿಗೆ ಎಲ್ಲರೂ ಒಂದೆ. ದೇವರು ಭಕ್ತಾಧೀನ. ‘ಕೃಷ್ಣಾ ನೀ ಬೇಗನೆ ಬಾರೋ’ ಎಂದು ಭಕ್ತಿಯಿಂದ ಯಾರು ಕರೆಯುತ್ತಾರೋ ಅವರ ಬಳಿಗೆ ಬಂದು ಬಿಡುತ್ತಾನೆ ಎಂದೇ ಭಕ್ತರು ನಂಬುತ್ತಾರೆ. ಹಿಂದೂ ದೇವರನ್ನು ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಸಿಖ್ ಧರ್ಮದವರು ಕರೆದರೆ ಆತ ಒಲ್ಲೆ ಎನ್ನುವುದಿಲ್ಲ. ಹೀಗೆಯೇ ಅಲ್ಲಾನನ್ನು ಅಥವಾ ಏಸುವನ್ನು ಹಿಂದೂಗಳು ಕರೆದರೂ ಆ ದೇವರು ಭಕ್ತರ ನೆರವಿಗೆ ಧಾವಿಸಿ ಬರುತ್ತಾನೆ ಎಂದೇ ನಂಬಿಕೆ ಇದೆ. ಉಡುಪಿ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ ನಡೆಸಿದ್ದಕ್ಕೆ ಈಗ ನಮ್ಮ ರಾಜ್ಯದಲ್ಲಿ ಗಲಾಟೆಯೋ ಗಲಾಟೆ. ಕೃಷ್ಣ ಮಠ ಅಪವಿತ್ರವಾಗಿದೆ ಎಂದೇ ಹುಯಿಲೆಬ್ಬಿಸಲಾಗುತ್ತಿದೆ. ಆದರೆ ಕೃಷ್ಣ ಯಾವುದೇ ಧರ್ಮಕ್ಕೆ ಸೀಮಿತ ಅಲ್ಲ. ಯಾವ ಜಾತಿಯ ಕಟ್ಟುಪಾಡೂ ಅವನಿಗೆ ಇಲ್ಲ. ಅದು ಉಡುಪಿಯೇ ಇರಲಿ, ಪುರಿಯ ಜಗನ್ನಾಥನೇ ಇರಲಿ ಅಥವಾ ಯಾವುದೇ ದೇವರು ಇರಲಿ, ಜಾತಿ ಧರ್ಮ ಎಂಬುದಿಲ್ಲ. ಉಡುಪಿಯಲ್ಲಿಯೂ ಕನಕದಾಸ ಬಂದಾಗ ದೇವಾಲಯದ ಒಳಕ್ಕೆ ಬಿಡದೇ ಇರುವುದರಿಂದ ಕೃಷ್ಣನೇ ಆತನ ಕಡೆಗೆ ತಿರುಗಿದ ಎಂಬ ಪ್ರತೀತಿ ಇದೆ.

ಪುರಿಯ ಜಗನ್ನಾಥನಂತೂ ಭಕ್ತರದಾಸ. ಆತ ಭಕ್ತರು ಕರೆದಲ್ಲಿಗೆ ಬರುತ್ತಾನೆ. ಪ್ರತಿ ಆಷಾಢ ಶುದ್ಧ ಬಿದಿಗೆಯಿಂದ ಆರಂಭವಾಗುವ ಪುರಿ ಜಗನ್ನಾಥನ ರಥಯಾತ್ರೆ ಕೃಷ್ಣ ಭಕ್ತರು ಇದ್ದಲ್ಲಿಗೇ ಬರುವ ಒಂದು ವಿಸ್ಮಯಕಾರಿ ಘಟನೆ. 

ಪುರಿ ಜಗನ್ನಾಥನ ಜಾತ್ರೆ ಸಂದರ್ಭದಲ್ಲಿ 9 ದಿನ ಜಗನ್ನಾಥ (ಕೃಷ್ಣ) ಪರಿಶಿಷ್ಟ ಜನಾಂಗಕ್ಕೆ ಸೇರಿದ ಪಾಂಡಾಗಳ ಕೈಯಲ್ಲಿಯೇ ಇರುತ್ತಾನೆ. ವರ್ಷದ ಉಳಿದ ದಿನಗಳಲ್ಲಿ ಈ ಪಾಂಡಾಗಳು (ಆದಿವಾಸಿಗಳು) ಜಗನ್ನಾಥನನ್ನು ಮುಟ್ಟು ವಂತಿಲ್ಲ. ಆದರೆ ರಥೋತ್ಸವದ ಸಂದರ್ಭದಲ್ಲಿ ಎಲ್ಲ ಕೈಂಕರ್ಯಗಳನ್ನೂ ಇವರೇ ಮಾಡುತ್ತಾರೆ. ಪುರಿ ಜಗನ್ನಾಥನ ಇನ್ನೊಂದು ವಿಶೇಷ ಎಂದರೆ ಇತರ ಕ್ಷೇತ್ರಗಳಲ್ಲಿ ರಥೋತ್ಸವಕ್ಕೆ ಉತ್ಸವ ಮೂರ್ತಿ ಎಂದು ಬೇರೆಯದೇ ಮೂರ್ತಿ ಇರುತ್ತದೆ. ಅದನ್ನು ರಥದ ಮೇಲೆ ಇಟ್ಟು ರಥವನ್ನು ಎಳೆಯಲಾಗುತ್ತದೆ. ಆದರೆ ಪುರಿಯಲ್ಲಿ ಹಾಗಲ್ಲ ಮೂಲ ಮೂರ್ತಿಯನ್ನೇ ರಥದ ಮೇಲೆ ಇಡಲಾಗುತ್ತದೆ. ರಥೋತ್ಸವ ನಡೆಯುವ ಅಷ್ಟೂ ದಿನ ಜಗನ್ನಾಥ ದೇವಾಲಯದಲ್ಲಿ ಮೂಲ ಮೂರ್ತಿ ಇರುವುದಿಲ್ಲ. ಗರ್ಭ ಗುಡಿಗೆ ಆಗ ಪರದೆ ಹಾಕಲಾಗುತ್ತದೆ.

ಪುರಿ ದೇವಾಲಯದಲ್ಲಿ ಹಿಂದೂಗಳಲ್ಲದೆ ಬೇರೆ ಧರ್ಮದವರಿಗೆ ಪ್ರವೇಶವೇ ಇಲ್ಲ. ಆದರೆ ಭಕ್ತರಿಗೆ ದರ್ಶನ ನೀಡುವುದಕ್ಕಾಗಿಯೇ ವರ್ಷದಲ್ಲಿ ಒಮ್ಮೆ ಜಗನ್ನಾಥನೇ ರಥದ ಮೇಲೆ ಕುಳಿಕೊಂಡು ದರ್ಶನ ನೀಡುತ್ತಾನೆ ಎಂದೇ ಭಕ್ತರು ನಂಬುತ್ತಾರೆ. ರಥದಲ್ಲಿರುವ ಜಗನ್ನಾಥನ ದರ್ಶನ ಪಡೆದರೆ ಪುನರ್ ಜನ್ಮ ಇಲ್ಲ ಎಂಬ ನಂಬಿಕೆಯೂ ಇದೆ. ಇತ್ತೀಚಿನ ವರ್ಷದವರೆಗೂ ರಥದ ಮೇಲೆ ಇರುವ ಜಗನ್ನಾಥ ಮೂರ್ತಿಯನ್ನು ಅಪ್ಪುವ ಭಾಗ್ಯ ಭಕ್ತರಿಗೆ ಇತ್ತು. ಈಗ ಅದನ್ನು ನಿಲ್ಲಿಸಲಾಗಿದೆ.

ಪಂಡಾಗಳಿಗೆ ಮಾತ್ರ ಜಗನ್ನಾಥ ದರ್ಶನ ನೀಡುವುದಲ್ಲ. ಜಗನ್ನಾಥನ ರಥಯಾತ್ರೆಯಲ್ಲಿ ಎಲ್ಲ ಧರ್ಮದವರೂ ಭಾಗಿಯಾಗುತ್ತಾರೆ. ಜಗನ್ನಾಥನಿಗೆ ಮುಸ್ಲಿಂ ಭಕ್ತರು ಬೇಕಾದಷ್ಟು ಮಂದಿ ಇದ್ದಾರೆ. ಉಡುಪಿಯಲ್ಲಿ ಕನಕದಾಸನಿಗೆ ದರ್ಶನ ನೀಡಿದ ಕತೆ ಇರುವಂತೆಯೇ ಪುರಿಯಲ್ಲಿಯೂ ಹರಿದಾಸ ಠಾಕೂರ್ ಅವರ ಕತೆ ಇದೆ.

(ಹರಿದಾಸ ಠಾಕೂರ್‌ ದೇವಾಲಯ)

ಒಬ್ಬ ಮುಸ್ಲಿಂ ಯುವಕನಿಗೆ ಜಗನ್ನಾಥನ ಮೇಲೆ ಬಹಳ ಭಕ್ತಿ. ಆತ ದಿನಕ್ಕೆ 3 ಲಕ್ಷ ಬಾರಿ ಜಗನ್ನಾಥನ ಜಪ ಮಾಡುತ್ತಿದ್ದನಂತೆ. ಕೃಷ್ಣನ ಜಪ ಮಾಡುತ್ತಾ ತನ್ನ ಜನಾಂಗದ ಜನರಿಗೂ ಜಪ ಮಾಡುವಂತೆ ಪ್ರೇರೇಪಿಸುತ್ತಿದ್ದನಂತೆ. ಇದನ್ನು ನೋಡಿ ಮುಸ್ಲಿಮರಿಗೆ ‘ಈತ ನಮ್ಮ ಧರ್ಮದವರನ್ನು ಹಿಂದೂಗಳನ್ನಾಗಿ ಮತಾಂತರ ಮಾಡುತ್ತಿದ್ದಾನೆ’ ಎಂಬ ಭಾವನೆ ಬಂದು ಪಂಚಾಯ್ತಿ ಸೇರಿ ಆತನಿಗೆ ಮಾರುಕಟ್ಟೆ ಬಳಿ 21 ಬಾರಿ ಛಡಿ ಏಟಿನ ಶಿಕ್ಷೆ ನೀಡಿದರಂತೆ. 21 ಬಾರಿ ಛಡಿ ಏಟು ನೀಡಿದಾಗ ಆ ಯುವಕ ‘ಹೇ ಜಗನ್ನಾಥನೇ ನನಗೆ ಛಡಿ ಏಟು ನೀಡಿ ಇವರೆಲ್ಲಾ ಸುಸ್ತಾಗಿದ್ದಾರೆ. ಆದರೆ ನಾನು ಸಾಯುವವರೆಗೂ ನನಗೆ ಹೊಡೆಯುವುದು ಅವರಿಗೆ ಅನಿವಾರ್ಯ. ಅದಕ್ಕೆ ನನ್ನ ಜೀವ ತೆಗೆದುಕೊ’ ಎಂದು ಬೇಡಿಕೊಂಡು ಮೂರ್ಛೆ ಹೋದನಂತೆ. ಅವನು ಸತ್ತಿದ್ದಾನೆ ಎಂದು ನಂಬಿದ ಜನರು ಆತನನ್ನು ನೀರಿಗೆ ಬಿಸಾಡಿದರಂತೆ. ಆದರೆ ಆ ಯುವಕ ಸತ್ತಿರಲಿಲ್ಲ. ಮತ್ತೆ ಬಂದು ಜಗನ್ನಾಥನ ಜಪವನ್ನು ಮುಂದುವರಿಸಿದನಂತೆ. 

ಆಗ ಆತನ ಜನಾಂಗದವರು ಇನ್ನೊಂದು ಉಪಾಯ ಮಾಡಿದರಂತೆ. ಒಬ್ಬ ವೇಶ್ಯೆಯನ್ನು ಆತನ ಬಳಿಗೆ ಕಳಿಸಿ ಆತನ ಜಪವನ್ನು ಭಂಗ ಮಾಡುವಂತೆ ಪ್ರೇರೇಪಿಸಿದರಂತೆ. ಒಂದು ದಿನ ಸಂಜೆ ಆತನ ಬಳಿಗೆ ಬಂದ ವೇಶ್ಯೆ ತನ್ನ ಜೊತೆ ಭೋಗ ನಡೆಸುವುವಂತೆ ಒತ್ತಾಯಿಸಿದಾಗ ‘ಆಯ್ತು, ಇಗೋ ಇನ್ನು ಒಂದೆರಡು ಜಪ ಮಣಿಗಳಿವೆ. ಅದನ್ನು ಮುಗಿಸಿ ನಿನ್ನ ಜೊತೆ ಭೋಗಕ್ಕೆ ಬರುತ್ತೇನೆ ಕುಳಿತುಕೊ’ ಎಂದು ಹೇಳಿ ಅವಳ ಮುಂದೆಯೇ ಕೃಷ್ಣನ ಜಪದಲ್ಲಿ ತೊಡಗಿದನಂತೆ. ಮರುದಿನ ಬೆಳಗಾದರೂ ಆತನ ಜಪ ಮುಗಿಯಲೇ ಇಲ್ಲವಂತೆ. ಇದು ಇನ್ನೂ ಮೂರು ದಿನ ನಡೆದ ಮೇಲೆ ವೇಶ್ಯೆ ಕೃಷ್ಣ ಭಕ್ತಳಾಗಿ ಬದಲಾಗಿದ್ದಳಂತೆ. ‘ನಾನು ಮೊದಲ ದಿನ ಬಂದಾಗಲೇ ಯಾಕೆ ನೀವು ನನ್ನನ್ನು ತಿರಸ್ಕರಿಸಲಿಲ್ಲ’ ಎಂದು ಕೇಳಿದ್ದಕ್ಕೆ ಆ ಯುವಕ ‘ಅಂದೇ ನಾನು ತಿರಸ್ಕರಿಸಿದ್ದರೆ ನೀನು ಕೃಷ್ಣ ಜಪ ಕೇಳಿಸಿಕೊಳ್ಳುವುದರಿಂದ ವಂಚಿತಳಾಗುತ್ತಿದ್ದೆ’ ಎಂದು ಉತ್ತರಿಸಿದನಂತೆ.

ಆ ಮುಸ್ಲಿಂ ಯುವಕ ಎಲ್ಲೆಂದರಲ್ಲಿ ಕೃಷ್ಣನ ಜಪ ಮಾಡುತ್ತಾ ಕುಳಿತುಬಿಡುತ್ತಿದ್ದನಂತೆ. ಆತನಿಗೆ ಬಿಸಿಲು, ಮಳೆಯ ಪರಿವೇ ಇರಲಿಲ್ಲವಂತೆ. ಅದಕ್ಕೇ ಜಗನ್ನಾಥ ದೇವರು ಚೈತನ್ಯ ಮಹಾಪ್ರಭುಗಳ ಕನಸಿನಲ್ಲಿ ಬಂದು ಆತನಿಗೆ ಒಂದು ನೆರಳು ಒದಗಿಸುವಂತೆ ಸೂಚಿಸಿದನಂತೆ.

ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಯುವಕ ಕೃಷ್ಣನ ಜಪ ಮಾಡುತ್ತಿದ್ದ ಜಾಗದ ಬಳಿ ಒಂದು ಬಕುಲ ಸಸಿಯನ್ನು ನೆಟ್ಟರಂತೆ. ಅದು ಬೇಗ ಬೇಗ ಬೆಳೆದು ಮರವಾಗಿ ಆತನಿಗೆ ನೆರಳು ನೀಡಲು ಆರಂಭಿಸಿತು ಎನ್ನುವುದು ಪ್ರತೀತಿ. ಈಗಲೂ ಪುರಿಯಲ್ಲಿ ಅತ್ಯಂತ ಪುರಾತನವಾದ ಬಕುಲ ವೃಕ್ಷವೊಂದು ಇದೆ. ಅಲ್ಲಿಯೇ ಚೈತನ್ಯ ಮಹಾಪ್ರಭುಗಳೂ ಲೀನವಾದರು ಎಂದೂ ಭಕ್ತರು ನಂಬುತ್ತಾರೆ. 

ಆ ಮುಸ್ಲಿಂ ಯುವಕ ನಂತರದ ದಿನಗಳಲ್ಲಿ ಹರಿದಾಸ ಠಾಕೂರ್ ಎಂದು ಪ್ರಸಿದ್ಧರಾದರು. ಈಗಲೂ ಅವರ ಸಮಾಧಿಗೆ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ. ಹರಿದಾಸ ಠಾಕೂರ್ ಅವರಿಗೂ ಪುರಿ ಜಗನ್ನಾಥ ದೇವಾಲಯದ ಒಳಕ್ಕೆ ಪ್ರವೇಶ ಇರಲಿಲ್ಲ. ಆದರೆ ಜಗನ್ನಾಥನೇ ಪ್ರತಿ ದಿನ ಅವರ ಬಳಿಗೆ ಬಂದು ಪ್ರಸಾದ ನೀಡುತ್ತಿದ್ದ ಎಂದು ಜನರು ಕೊಂಡಾಡುತ್ತಾರೆ. ಹರಿದಾಸ ಠಾಕೂರ್ ಹೆಸರಿನಲ್ಲಿ ಆಸ್ಪತ್ರೆ, ಶಾಲೆ ಮುಂತಾದ ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾರೆ. 

ಪುರಿಯ ಬಳಿಯೇ ಇರುವ ಪಿಪಿಲಿಯ ಲಾಲ್ ಬೇಗ್ ಎಂಬ ಮುಸ್ಲಿಂ ಯೋಧನ ಮಗ ಸಾಲ್ ಬೇಗ್ ಕೂಡ ಜಗನ್ನಾಥನ ಪರಮ ಭಕ್ತ. ಒಂದು ಬಾರಿ ಈತ ರಥಯಾತ್ರೆ ನೋಡಲು ಪುರಿಗೆ ಬಂದಾಗ ರಥ ಯಾತ್ರೆ ಬಹುತೇಕ ಮುಗಿದೇ ಹೋಗಿತ್ತಂತೆ. ಆತ ತುಂಬಾ ಬೇಸರದಿಂದ ‘ಭಗವಂತಾ ನನಗೆ ದರ್ಶನ ನೀಡದೇ ಹೋಗುತ್ತೀಯಾ’ ಎಂದು ಬೇಡಿಕೊಂಡನಂತೆ. ಆಗ ಜಗನ್ನಾಥನ ರಥ ರಸ್ತೆಯ ಮಧ್ಯೆಯಲ್ಲಿಯೇ ನಿಂತು ಬಿಟ್ಟಿತಂತೆ. ಸಾಲ್ ಬೇಗ್ ಬಂದು ದೇವರ ದರ್ಶನ ಮಾಡಿ ರಥವನ್ನು ಎಳೆದ ನಂತರವೇ ರಥ ಮುಂದಕ್ಕೆ ಹೋಯಿತಂತೆ. ಹೀಗೆ ಪುರಿಯ ಜಗನ್ನಾಥನಿಗೆ ಮುಸ್ಲಿಂ ಭಕ್ತರು ಬೇಕಾದಷ್ಟು ಮಂದಿ ಇದ್ದಾರೆ. ಸಿಖ್ ಭಕ್ತರೂ ಇದ್ದಾರೆ. ಪುರಿ ಜಗನ್ನಾಥ ಜಾತಿ ಧರ್ಮ ಮೀರಿದ ದೇವರು ಎಂದು ಭಕ್ತರು ಭಕ್ತಿಯಿಂದ ನೆನೆಯುತ್ತಾರೆ. 

ಇಸ್ಕಾನ್ ಸಂಸ್ಥಾಪಕ ಪ್ರಭುಪಾದರು ಕೂಡ ಒಮ್ಮೆ ರಷ್ಯಾದ ಹಲವಾರು ಭಕ್ತರನ್ನು ಕರೆದುಕೊಂಡು ಪುರಿ ಜಗನ್ನಾಥ ದೇವಾಲಯಕ್ಕೆ ಹೋದಾಗ ರಷ್ಯನ್ನರಿಗೆ ದೇವಾಲಯದ ಒಳಕ್ಕೆ ಪ್ರವೇಶ ನಿರಾಕರಿಸಲಾಯಿತಂತೆ. ಇದನ್ನು ವಿರೋಧಿಸಿ ಪ್ರಭುಪಾದರೂ ಜಗನ್ನಾಥ ದೇವಾಲಯವನ್ನು ಪ್ರವೇಶ ಮಾಡುವುದನ್ನು ಬಿಟ್ಟುಬಿಟ್ಟರಂತೆ. ಆದರೆ ಈಗಲೂ ನೂರಾರು ಮಂದಿ ರಷ್ಯನ್ ಭಕ್ತರು ಪುರಿಗೆ ಭೇಟಿ ನೀಡುತ್ತಾರೆ. ರಥಯಾತ್ರೆ ಸಂದರ್ಭದಲ್ಲಿ ರಥದ ಮೇಲೆ ಕುಳಿತ ಕೃಷ್ಣನನ್ನೇ ನೋಡಿ ಪುನೀತರಾಗುತ್ತಾರೆ. ಪುರಿಯ ಹಾದಿ ಬೀದಿಯಲ್ಲಿ ಕೃಷ್ಣನ ಜಪ ಮಾಡುತ್ತಾ, ಕುಣಿಯುತ್ತಾ ಹೋಗುವ ರಷ್ಯದವರು ಹಾಗೂ ಇತರ ದೇಶಗಳ ಭಕ್ತರನ್ನು ಪ್ರತಿ ದಿನವೂ ಕಾಣಬಹುದು. 

ಹೀಗೆ ಪುರಿಯಲ್ಲಿ ಕೃಷ್ಣ ತನ್ನ ಭಕ್ತರನ್ನು ಕಾಣಲು ದೇವಾಲಯದಿಂದ ಹೊರಕ್ಕೆ ಬರುತ್ತಾನೆ. ಉಡುಪಿಯಲ್ಲೂ ಅಷ್ಟೆ. ಕೃಷ್ಣ ದೇವಾಲಯದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರಿಂದ ಮಠಕ್ಕೆ ಮೈಲಿಗೆಯಾಗಿದೆ ಎಂದು ಯಾರು ಏಷ್ಟೇ ಹೇಳಿದರೂ ಕೃಷ್ಣ ಮಾತ್ರ ತನ್ನ ಭಕ್ತರಿಗೆ ದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದಾನೆ. ನಿಜವಾಗಿ ದೇವರು ಇರುವುದು ದೇವಾಲಯದಲ್ಲಿ ಅಲ್ಲ. ಭಕ್ತರ ಹೃದಯದಲ್ಲಿ. ನಿಜವಾದ ಭಕ್ತನಿಗೆ ದೇವರು ದೇವಾಲಯದ ಒಳಗಿದ್ದರೂ ಒಂದೆ. ಹೊರಗಿದ್ದರೂ ಒಂದೆ. ದೇವರಿಗೂ ಹಾಗೆ. ದೇವಾಲಯದ ಒಳಕ್ಕೆ ಯಾವುದೇ ಭಕ್ತರನ್ನು ಬಿಡದೇ ಇದ್ದರೆ ಆತನೇ ಭಕ್ತರಿದ್ದಲ್ಲಿಗೆ ಬರುತ್ತಾನೆ. ದೇವರು ಪೂಜಾರಿಗಳ, ಪರೋಹಿತರ ಕೈಗೊಂಬೆ ಅಲ್ಲ. ಆತ ಭಕ್ತರ ಅಧೀನ.

(ಹರಿದಾಸ ಠಾಕೂರ್‌ ಅವರ ಪಾರ್ಥಿವ ಶರೀರವನ್ನು ಚೈತನ್ಯ ಮಹಾಪ್ರಭುಗಳು ಎತ್ತಿಕೊಂಡು ಹೋಗುತ್ತಿರುವ ವರ್ಣಚಿತ್ರ)

ಪಾಯಸ ಚೆಲ್ಲಿಕೊಂಡ ಭಗವಂತ!

ಪುರಿಯ ಬಳಿಯೇ ಬ್ರಹ್ಮಗಿರಿ ಎಂಬ ಊರಿದೆ. ಅಲ್ಲಿಯೂ ಕೃಷ್ಣನ ದೇವಾಲಯ ಇದೆ. ಇಲ್ಲಿಯೂ ಕೃಷ್ಣ ಭಕ್ತನೊಬ್ಬನಿಗಾಗಿ ಪವಾಡ ಮಾಡಿದ ಕತೆ ಇದೆ.

ಈ ದೇವಾಲಯದ ಅರ್ಚಕನೊಬ್ಬ ಒಂದು ದಿನ ಮಹಾರಾಜರ ಬಳಿಗೆ ಹೋಗಬೇಕಾಯಿತಂತೆ. ಅದಕ್ಕೆ ಆತ ತನ್ನ ಮಗನಿಗೆ ದೇವರಿಗೆ ಇಂದು ಪಾಯಸ ನೈವೇದ್ಯ ಮಾಡು ಎಂದು ಹೇಳಿ ಹೋದನಂತೆ. ಅದರಂತೆ ಆ ಬಾಲಕ ಪಾಯಸವನ್ನು ತೆಗೆದುಕೊಂಡು ಹೋಗಿ ದೇವರ ಮುಂದೆ ಇಟ್ಟು ‘ಬೇಗ ಬೇಗ ತಿನ್ನಪ್ಪ. ನನಗೆ ಆಟ ಆಡಲು ಹೋಗಬೇಕು’ ಎಂದು ಹೇಳಿದನಂತೆ. ಎಷ್ಟು ಹೊತ್ತಾದರೂ ದೇವರು ಪಾಯಸ ತಿನ್ನದೇ ಇದ್ದಾಗ ‘ನಾನು ಆಟ ಆಡಲು ಹೋಗಿ ಬರುತ್ತೇನೆ. ಅಷ್ಟರಲ್ಲಿ ನೀನು ತಿಂದು ಮುಗಿಸು’ ಎಂದು ಹೇಳಿ ಆಡಲು ಹೋದನಂತೆ. ಆಟ ಮುಗಿಸಿಕೊಂಡು ಬಂದರೂ ಪಾಯಸ ಪಾತ್ರೆಯಲ್ಲಿಯೇ ಇತ್ತು. ಇದರಿಂದ ಗಾಬರಿಯಾದ ಬಾಲಕ ‘ಅಯ್ಯೋ ದೇವರೇ ನೀನು ಪಾಯಸ ತಿನ್ನದೇ ಹೋದರೆ ನನಗೆ ಅಪ್ಪ ಹೊಡೆಯುತ್ತಾನೆ. ಬೇಗ ತಿನ್ನಪ್ಪ’ ಎಂದು ಪರಿಪರಿಯಾಗಿ ಬೇಡಿಕೊಂಡಾಗ ದೇವರು ಬಂದು ಪಾಯಸ ತಿಂದನಂತೆ. ನಂತರ ಆ ಬಾಲಕ ಖಾಲಿ ಪಾತ್ರೆಯನ್ನು ಮನೆಗೆ ತೆಗೆದುಕೊಂಡು ಹೋಗಿ ತಾಯಿಗೆ ಕೊಟ್ಟಾಗ ತಾಯಿ ‘ಪಾಯಸ ಎಲ್ಲಿ’ ಎಂದು ಕೇಳಿದರೆ ‘ದೇವರು ಬಂದು ತಿಂದ’ ಎಂದು ಉತ್ತರಿಸಿದನಂತೆ.

ಇದರಿಂದ ಸಿಟ್ಟಾಗ ತಾಯಿ ‘ಇಷ್ಟು ಸಣ್ಣ ವಯಸ್ಸಿಗೇ ಸುಳ್ಳು ಹೇಳುವುದನ್ನು ಕಲಿತಿದ್ದೀಯಾ? ಅಪ್ಪ ಬಂದ ಮೇಲೆ ನಿನಗೆ ಹೊಡೆಸುತ್ತೇನೆ’ ಎಂದು ಹೇಳಿ ಬ್ರಾಹ್ಮಣ ಬಂದಾಗ ಎಲ್ಲ ವಿಷಯ ತಿಳಿಸಿದಳಂತೆ. ಅಪ್ಪನೂ ಪಾಯಸ ಎಲ್ಲಿ ಕೇಳಿದರೆ ಮಗನದ್ದು ಅದೇ ಉತ್ತರ. ಇದರಿಂದ ಕ್ರೋಧಗೊಂಡ ಅಪ್ಪ ‘ಬಾ ಮಗನೇ ಈಗ ದೇವಾಲಯಕ್ಕೆ ಹೋಗೋಣ. ದೇವರು ಪಾಯಸ ತಿನ್ನುವುದನ್ನು ತೋರಿಸು’ ಎಂದು ಬಿಸಿ ಬಿಸಿ ಪಾಯಸ ಮಾಡಿಕೊಂಡು ಮಗನನ್ನು ಕರೆದುಕೊಂಡು ದೇವಾಲಯಕ್ಕೆ ಹೋಗಿ ದೇವರ ಮುಂದೆ ಪಾಯಸ ಇಟ್ಟನಂತೆ. ‘ಈಗ ದೇವರನ್ನು ಕರೆದು ಇದನ್ನು ತಿನ್ನಲು ಹೇಳು, ನಾನು ಮರೆಯುಲ್ಲಿ ನಿಲ್ಲುತ್ತೇನೆ’ ಎಂದು ಮರೆಗೆ ಸರಿದನಂತೆ. ಬಾಲಕ ‘ಅಪ್ಪ ಹೊಡೆಯುತ್ತಾರೆ. ಬೇಗ ಬಂದು ಪಾಯಸ ತಿನ್ನು’ ಎಂದು ದೇವರಲ್ಲಿ ಮೊರೆ ಇಟ್ಟನಂತೆ.

ಕೆಲ ಕಾಲ ಕಳೆದರೂ ದೇವರು ಬಾರದೇ ಇರುವುದನ್ನು ನೋಡಿ ‘ನೀನು ಬಂದು ಪಾಯಸ ತಿನ್ನದೇ ಇದ್ದರೆ ನನಗೆ ಉಳಿಗಾಲವಿಲ್ಲ. ಬೇಗ ಬಾರೋ’ ಎಂದು ಕರೆದಾಗ ದೇವರ ಮೂರ್ತಿಯಿಂದ ಒಂದು ಕೈ ಬಂದು ಪಾಯಸವನ್ನು ಎತ್ತಿಕೊಂಡಿತಂತೆ. ಆಗ ಮರೆಯಲ್ಲಿ ಇದ್ದ ತಂದೆ ಆ ಕೈಯನ್ನು ಹಿಡಿದುಕೊಳ್ಳಲು ಯತ್ನಿಸಿದನಂತೆ. ತಕ್ಷಣ ಕೈ ಮಾಯ. ಪಾಯಸ ದೇವರ ಮೈಮೇಲೆ ಬಿದ್ದು ಕೈ, ದೇಹದ ಭಾಗ ಎಲ್ಲ ಸುಟ್ಟು ಹೋಯಿತಂತೆ. ಈಗಲೂ ಬ್ರಹ್ಮಗಿರಿಯ ಕೃಷ್ಣ ದೇವಾಲಯದಲ್ಲಿ ಇರುವ ಮೂರ್ತಿಯ ಮೇಲೆ ಸುಟ್ಟ ಗಾಯ ಇರುವುದನ್ನು ಪೂಜಾರಿಗಳು ತೋರಿಸುತ್ತಾರೆ.

ಭಗವಂತನೇ ಸಾಕ್ಷಿ!

ಭುವನೇಶ್ವರ–ಪುರಿ ಹೆದ್ದಾರಿಯಲ್ಲಿ ಸಖಿ ಗೋಪಾಲ ಎಂಬ ಊರಿದೆ. ಇಲ್ಲಿ ಗೋಪಾಲಕೃಷ್ಣನ ದೇವಾಲಯ ಇದೆ. ದೇವರು ಭಕ್ತ ಕರೆದಲ್ಲಿಗೆ ಬರುತ್ತಾನೆ ಎನ್ನುವುದಕ್ಕೆ ಇಲ್ಲಿಯೂ ಒಂದು ಕತೆ ಇದೆ. 

ಒಮ್ಮೆ ಬೃಂದಾವನದ ಯುವ ಬ್ರಾಹ್ಮಣನೊಬ್ಬ ವೃದ್ಧ ಬ್ರಾಹ್ಮಣರ ಸೇವೆ ಮಾಡಿದನಂತೆ. ಆತನ ಸೇವೆಯಿಂದ ತೃಪ್ತರಾದ ವೃದ್ಧ ಬ್ರಾಹ್ಮಣ ಆ ಯುವಕನಿಗೆ ‘ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ’ ಎಂದು ಹೇಳಿದನಂತೆ. ಅದಕ್ಕೆ ಯುವಕ ‘ಅಯ್ಯೋ ನನಗೆ ತಂದೆ, ತಾಯಿ ಯಾರೂ ಇಲ್ಲ. ನಾನೊಬ್ಬ ಅನಾಥ. ಅಲ್ಲದೆ ಸರಿಯಾದ ಉದ್ಯೋಗ ಕೂಡ ಇಲ್ಲ. ನನಗೆ ನಿಮ್ಮ ಮಗಳನ್ನು ಕೊಡಲು ನಿಮ್ಮ ಮನೆಯವರು ಒಪ್ಪಲಿಕ್ಕಿಲ್ಲ’ ಎಂದು ಹೇಳಿದಾಗ ವೃದ್ಧ ಬ್ರಾಹ್ಮಣ ‘ಆ ಬಗ್ಗೆ ಚಿಂತೆ ಬೇಡ. ನಾನು ಹೇಳಿದ್ದೇ ಅಂತಿಮ’ ಎಂದರಂತೆ. 

ಈ ಮಾತನ್ನು ನಂಬಿದ ಯುವ ಬ್ರಾಹ್ಮಣ ಒಂದು ದಿನ ವೃದ್ಧ ಬ್ರಾಹ್ಮಣರ ಮನೆಗೆ ಹೋಗಿ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿದಾಗ ವೃದ್ಧ ಬ್ರಾಹ್ಮಣನ ಮಗ ಇದನ್ನು ವಿರೋಧಿಸಿ ‘ನನ್ನ ತಂದೆ ನಿನಗೆ ಯಾವುದೇ ಭರವಸೆ ನೀಡಿಲ್ಲ. ನೀನು ಸುಳ್ಳು ಹೇಳುತ್ತಿದ್ದೀಯ. ಬ್ರಾಹ್ಮಣನಾಗಿ ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ಬೆದರಿಸಿ ಆತನನ್ನು ಹೊರಗೆ ಅಟ್ಟಿದನಂತೆ. ಇದರಿಂದ ಬೇಸರಗೊಂಡ ಯುವ ಬ್ರಾಹ್ಮಣ ಬೃಂದಾವನದಲ್ಲಿರುವ ಕೃಷ್ಣನ ಬಳಿಗೆ ಹೋಗಿ ‘ಹೇ ಭಗವಂತ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈಗ ನೀನೇ ಬಂದು ಸಾಕ್ಷಿ ಹೇಳಬೇಕು’ ಎಂದು ಒತ್ತಾಯಿಸಿದಾಗ ಕೃಷ್ಣ ‘ನಾನು ಇಲ್ಲಿ ಕಲ್ಲಾಗಿ ಕುಳಿತಿದ್ದೇನೆ. ಸಾಕ್ಷಿ ಹೇಳಲು ಅಲ್ಲಿಗೆ ಬರಲಾಗುವುದಿಲ್ಲ. ಆದರೆ ನಾನು ಎಲ್ಲ ವ್ಯವಸ್ಥೆ ಮಾಡುತ್ತೇನೆ. ನೀನು ಅಲ್ಲಿಗೆ ಹೋಗು’ ಎಂದನಂತೆ. ಆದರೆ ಇದಕ್ಕೆ ಯುವಕ ಒಪ್ಪಲಿಲ್ಲ. ‘ನಿನಗೆ ಮಾತನಾಡಲು ಬರುತ್ತದೆ ಎಂದಾದರೆ ನನ್ನ ಜೊತೆ ಬರುವುದಕ್ಕೂ ಆಗುತ್ತದೆ. ನೀನು ಬಂದು ಸಾಕ್ಷಿ ಹೇಳದಿದ್ದರೆ ನಾನು ಸುಳ್ಳುಗಾರ ಎನ್ನುವುದು ಖಾತ್ರಿಯಾಗುತ್ತದೆ’ ಎಂದು ಪರಿಪರಿಯಾಗಿ ಬೇಡಿದನಂತೆ.

ಆಗ ದೇವರು ‘ಆಯ್ತು ನಾನು ಬರುತ್ತೇನೆ. ಆದರೆ ಒಂದು ಷರತ್ತು. ನೀನು ಮುಂದೆ ನಡೆದುಕೊಂಡು ಹೋಗಬೇಕು. ನಾನು ಹಿಂದಿನಿಂದ ಬರುತ್ತೇನೆ. ನನ್ನ ಗೆಜ್ಜೆಯ ಶಬ್ದ ನಿನಗೆ ಕೇಳುತ್ತಿರುತ್ತದೆ. ನಾನು ನಿನ್ನ ಜೊತೆ ಬರುತ್ತಿದ್ದೇನೆ ಎನ್ನುವುದಕ್ಕೆ ಅದೇ ಸಾಕ್ಷಿ. ಯಾವುದೇ ಕಾರಣಕ್ಕೂ ನೀನು ಹಿಂದೆ ನೋಡಬಾರದು. ಹಿಂದೆ ನೋಡಿದರೆ ನಾನು ಅಲ್ಲಿಯೇ ಕಲ್ಲಾಗಿಬಿಡುತ್ತೇನೆ’ ಎಂದನಂತೆ. ಇದಕ್ಕೆ ಒಪ್ಪಿದ ಯುವ ಬ್ರಾಹ್ಮಣ ಪುರಿಯತ್ತ ನಡೆದುಕೊಂಡು ಹೊರಟನಂತೆ. ಪುರಿ ಇನ್ನೇನು ಸ್ವಲ್ಪ ದೂರ ಇದೆ ಎಂದಾಗ ಆತನಿಗೆ ಗೆಜ್ಜೆ ಶಬ್ದ ಕೇಳಿಸಲಿಲ್ಲ. ಅದಕ್ಕೆ ಆತ ತಿರುಗಿ ನೋಡಿದನಂತೆ. ಆಗ ಕೃಷ್ಣ ಅಲ್ಲಿಯೇ ಕಲ್ಲಾಗಿ ನಿಂತುಬಿಟ್ಟನಂತೆ. ಅದಕ್ಕೇ ಆತನನ್ನು ಸಾಕ್ಷಿ ಗೋಪಾಲ ಎಂದು ಈಗಲೂ ಪೂಜೆ ಮಾಡಲಾಗುತ್ತದೆ.

ಪ್ರತಿಕ್ರಿಯಿಸಿ (+)