ಶುಕ್ರವಾರ, ಡಿಸೆಂಬರ್ 6, 2019
19 °C
ಪ್ರಜ್ವಲ್‌ ರೇವಣ್ಣ ಹೇಳಿಕೆಯಿಂದ ನೊಂದಿರುವ ಎಚ್‌ಡಿಕೆ

ಪಕ್ಷದ ರಾಜ್ಯ ಅಧ್ಯಕ್ಷನಾಗಿ ಕೆಲಸ ಮಾಡುವುದು ಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷದ ರಾಜ್ಯ ಅಧ್ಯಕ್ಷನಾಗಿ ಕೆಲಸ ಮಾಡುವುದು ಕಷ್ಟ

ಬೆಂಗಳೂರು: ‘ಪಕ್ಷದೊಳಗೆ ಸೂಟ್‌ ಕೇಸ್‌ ಸಂಸ್ಕೃತಿ ಇದೆ’ ಎಂದು ಪ್ರಜ್ವಲ್‌ ರೇವಣ್ಣ ನೀಡಿರುವ ಹೇಳಿಕೆಯಿಂದ  ತೀವ್ರ ನೊಂದಿರುವ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಅಧ್ಯಕ್ಷರಾಗಿ ಮುಂದುವರಿಯಲು ಕಷ್ಟ ಎಂದು ಅಲವತ್ತುಕೊಂಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ಮೌನಕ್ಕೆ ಶರಣಾಗಿರುವ ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮನದಾಳದ ಬೇಗುದಿಯನ್ನು ಹೊರ ಹಾಕಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗುರುವಾರ ರಾತ್ರಿ 11:30ರ ಸುಮಾರಿಗೆ ಗೌಡರನ್ನು ಪದ್ಮನಾಭ ನಗರದ ಮನೆಯಲ್ಲಿ ಭೇಟಿ ಮಾಡಿದ ಕುಮಾರಸ್ವಾಮಿ, ‘ನಾನು ಇನ್ನು ಮುಂದೆ ಪಕ್ಷದ ವಿಷಯದಲ್ಲಿ ತಲೆ ಹಾಕುವುದಿಲ್ಲ. ಏನಾದರೂ ಮಾಡಿಕೊಳ್ಳಿ’ ಎಂದು ಹೇಳಿ ಹೊರಬಂದರು ಎಂದು ಮೂಲಗಳು ಖಚಿತಪಡಿಸಿವೆ.

ಪ್ರಜ್ವಲ್‌ ಅವರ ಹೇಳಿಕೆಯಿಂದ ದೇವೇಗೌಡರೂ ಬೇಸರ ಮಾಡಿಕೊಂಡಿದ್ದಾರೆ. ಜೆಡಿಎಸ್‌ ನಾಯಕರು ಹಾಗೂ ಶಾಸಕರೂ ತಳಮಳಗೊಂಡಿದ್ದಾರೆ.= ಇದರಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮೇಲಾಗುವ ಪರಿಣಾಮ ಕುರಿತು ವ್ಯಾಪಕ  ಚರ್ಚೆ ನಡೆಸುತ್ತಿದ್ದಾರೆ.

ಹುಣಸೂರಿನಿಂದ ಸ್ಪರ್ಧೆಗೆ ಪ್ರಜ್ವಲ್‌  ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರೂ  ತಮ್ಮ ಪತ್ನಿ ಲಲಿತಾ ಅಥವಾ ಪುತ್ರ ಹರೀಶ್‌ ಅವರನ್ನು ಇದೇ ಕ್ಷೇತ್ರದಿಂದ ಕಣಕ್ಕಿಳಿಸಲು ಅಪೇಕ್ಷಿಸಿದ್ದರು.

ಆದರೆ, ಇತ್ತೀಚೆಗಷ್ಟೆ ಜೆಡಿಎಸ್‌ ಸೇರಿರುವ  ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರಿಗೆ ಈ ಕ್ಷೇತ್ರ ಬಿಟ್ಟುಕೊಡುವುದಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ. ಈ ಬೆಳವಣಿಗೆ ಬಳಿಕ ಗೌಡರ ಕುಟುಂಬದೊಳಗೆ  ಮುಸುಕಿನ ಗುದ್ದಾಟ ಆರಂಭವಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನ ಆರಂಭವಾದ ತಕ್ಷಣವೇ ಮೈಸೂರು ಜಿಲ್ಲೆಯ ಜೆಡಿಎಸ್‌ ನಾಯಕರ ನಡುವೆ ತಿಕ್ಕಾಟ ಆರಂಭವಾಗಿತ್ತು. ಕೆಲವರು ವಿಶ್ವನಾಥ್‌ ಪಕ್ಷ ಸೇರುವುದನ್ನು ಬೆಂಬಲಿಸಿದರು. ಇನ್ನೂ ಕೆಲವರು ತೆರೆಮರೆಯಲ್ಲಿ ವಿರೋಧಿಸಿದರು.

ಈ ಮಧ್ಯೆ, ಹುಣಸೂರಿಗೆ ಪದೇ ಪದೇ  ಹೋಗುತ್ತಿದ್ದ ಪ್ರಜ್ವಲ್‌ ರೇವಣ್ಣ ಅವರಿಗೂ ದೇವೇಗೌಡರು ಆ ಕಡೆ ತಲೆ ಹಾಕದಂತೆ ತಾಕೀತು ಮಾಡಿದ್ದರು. ಅವರ ಮಾತಿಗೆ ಮನ್ನಣೆ ಸಿಗದಿದ್ದರಿಂದ ಬೇಲೂರು ಅಥವಾ ಬೆಂಗಳೂರು ನಗರದ ಯಾವುದಾದರೂ ಕ್ಷೇತ್ರದಿಂದ ಪ್ರಜ್ವಲ್‌ಗೆ, ಚನ್ನಪಟ್ಟಣದಿಂದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ದೇವೇಗೌಡರು ಒಪ್ಪಿಗೆ ಸೂಚಿಸಿದ್ದರು. ಇದು ಪ್ರಜ್ವಲ್‌ಗೆ ಒಪ್ಪಿಗೆ ಆಗಿರಲಿಲ್ಲ.

ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸುವುದಾಗಿ ಪ್ರಕಟಿಸುತ್ತಿದ್ದಂತೆ ಪಕ್ಷದೊಳಗೆ ಸೂಟ್‌ಕೇಸ್‌ ಸಂಸ್ಕೃತಿ ಇದೆ ಎಂದು  ಪ್ರಜ್ವಲ್‌  ಬಾಂಬ್‌ ಸಿಡಿಸಿದ್ದಾರೆ.

ಪಕ್ಷದೊಳಗಿನ ವಿದ್ಯಮಾನ ಕುರಿತು ಪ್ರತಿಕ್ರಿಯೆ ಕೇಳಲು ಕುಮಾರಸ್ವಾಮಿ ಅವರನ್ನು ಸಂಪರ್ಕಿಸುವ ಪ್ರಯತ್ನ ಫಲಿಸಲಿಲ್ಲ. ‘ತಿರುಪತಿಗೆ ಹೋಗಿದ್ದಾರೆ, ಚೆನ್ನೈಗೆ ಹೋಗಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)