ಮಂಗಳವಾರ, ಡಿಸೆಂಬರ್ 10, 2019
16 °C
ಕೇಂದ್ರ ಸರ್ಕಾರದಿಂದ 32 ಶೈಕ್ಷಣಿಕ ವಾಹಿನಿಗಳ ಆರಂಭ

ಪ್ರವೇಶ ಪರೀಕ್ಷೆ ಸಿದ್ಧತೆ ಮನೆಯಿಂದಲೇ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವೇಶ ಪರೀಕ್ಷೆ ಸಿದ್ಧತೆ ಮನೆಯಿಂದಲೇ ಸಾಧ್ಯ

ನವದೆಹಲಿ: ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬೇಕು ಎಂಬ ಆಸೆ ಹೊತ್ತಿರುವ ವಿದ್ಯಾರ್ಥಿಗಳು, ಪ್ರವೇಶ ಪರೀಕ್ಷೆಗಳಿಗಾಗಿ ಇನ್ನು ಮುಂದೆ ಮನೆಯಲ್ಲೇ ಕುಳಿತು ಸಿದ್ಧತೆ ಮಾಡಿಕೊಳ್ಳಬಹುದು.

ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ನಾಲ್ಕು ಶೈಕ್ಷಣಿಕ ಟಿವಿ ವಾಹಿನಿಗಳಿಗೆ ಭಾನುವಾರ ಚಾಲನೆ ನೀಡಿದೆ.

ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ತಜ್ಞರು ವಾಹಿನಿಗಳ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಬೋಧನೆ ಮಾಡಲಿದ್ದಾರೆ.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಈ ವಾಹಿನಿಗಳಿಗೆ ಚಾಲನೆ ನೀಡಿದರು. ಇದಲ್ಲದೇ, ಶಾಲೆಗಳು ಮತ್ತು ಉನ್ನತ ಶಿಕ್ಷಣವನ್ನು ಗುರಿಯಾಗಿಸಿಕೊಂಡು 28 ಇತರ ಡಿಟಿಎಚ್‌ ಉಪಗ್ರಹ ವಾಹಿನಿಗಳನ್ನೂ ಅವರು ಉದ್ಘಾಟಿಸಿದರು.

ಪದವಿ, ಡಿಪ್ಲೊಮಾ ಸೇರಿದಂತೆ ದೇಶದ ವಿದ್ಯಾರ್ಥಿಗಳ ಇತರ ಪ್ರಮಾಣ  ಪತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುವ ಮತ್ತು ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆಯಾದ ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿಗೂ (ಎನ್‌ಎಡಿ) ಮುಖರ್ಜಿ ಅವರು ಚಾಲನೆ ನೀಡಿದರು.

ಭಾರತದ ಬೃಹತ್‌ ಮುಕ್ತ ಆನ್‌ಲೈನ್‌ ಕೋರ್ಸ್‌ಗಳ (ಮೂಕ್ಸ್‌) ವೇದಿಕೆ ‘ಸ್ವಯಂ’ನ ಕಾರ್ಯಾರಂಭಕ್ಕೂ ರಾಷ್ಟ್ರಪತಿ ಅವರು ನಾಂದಿ ಹಾಡಿದರು.

ಸ್ವಯಂ ಪ್ರಭ: ಭಾನುವಾರ ಆರಂಭಗೊಂಡಿರುವ 32 ಶೈಕ್ಷಣಿಕ ವಾಹಿನಿಗಳು ‘ಸ್ವಯಂ ಪ್ರಭ’ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಡಿಶ್‌ ಟಿವಿಯಲ್ಲಿ ದಿನದ 24 ಗಂಟೆಗಳೂ ಪ್ರಸಾರವಾಗಲಿವೆ.

ವಾಹಿನಿಗಳ ಕಾರ್ಯನಿರ್ವಹಣೆ ಹೀಗೆ: ಎಂಜಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವ ನಾಲ್ಕು ವಾಹಿನಿಗಳು ಐಐಟಿ–ಪಾಲ್‌ (ಐಐಟಿ ಪ್ರೊಫೆಸರ್‌ ನೆರವಿನಿಂದ ಕಲಿಯುವಿಕೆ) ಅಡಿಯಲ್ಲಿ ಪ್ರಸಾರವಾಗಲಿವೆ.

ಚಾನೆಲ್‌ಗಳು ಪ್ರತಿದಿನ ನಾಲ್ಕು ಗಂಟೆಗಳ  ಕಾಲ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಹೊಸ ಮಾಹಿತಿಯನ್ನು ಪ್ರಸಾರ ಮಾಡಲಿವೆ. ನಂತರ ಅದು ಐದು ಬಾರಿ ಮರು ಪ್ರಸಾರ ಆಗಲಿದೆ.

ಐಐಟಿ–ಪಾಲ್‌ ವಾಹಿನಿಗಳನ್ನು ದೆಹಲಿಯ ಐಐಟಿ ನಿರ್ವಹಿಸಲಿದೆ. ವಿವಿಧ ಐಐಟಿಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇತರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿಷಯ ತಜ್ಞರು ನೇರ ಮತ್ತು ಸಂವಹನಾತ್ಮಕ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ.

ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಟಿ.ವಿ ಅಥವಾ ಮೊಬೈಲ್‌ ಮೂಲಕ ಈ ತರಗತಿಗೆ ಹಾಜರಾಗಬಹುದು. ಅಲ್ಲದೇ ವಿಷಯ ತಜ್ಞರಿಗೆ ಪ್ರಶ್ನೆಗಳನ್ನೂ ಕೇಳಬಹುದು.

ಸ್ವಯಂ ಎಂದರೆ: ಆನ್‌ಲೈನ್‌ ಕೋರ್ಸ್‌ಗಳ ವೇದಿಕೆ ‘ಸ್ವಯಂ’ ಪ್ರೌಢ ಮತ್ತು ಪಿಯುಸಿ ಮಟ್ಟದ 29 ವಿಷಯಗಳಲ್ಲಿ ವರ್ಚ್ಯುವಲ್  ತರಗತಿಗಳನ್ನು ನಡೆಸಲಿದೆ.

ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ ಮೆಂಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ 210 ಪದವಿ ಕೋರ್ಸ್‌ಗಳು ಮತ್ತು 192 ಸ್ನಾತಕೋತ್ತರ  ಪದವಿ ಕೋರ್ಸ್‌ಗಳ ಬೋಧನೆಯೂ ಸ್ವಯಂ ವಾಹಿನಿಯಲ್ಲಿ ಇರಲಿದೆ.

ಅಲ್ಲದೇ, 14 ಅಲ್ಪಾವಧಿ (ಸರ್ಟಿಫಿಕೇಟ್‌) ಕೋರ್ಸ್‌ಗಳು ಮತ್ತು ಮೂರು ಡಿಪ್ಲೊಮಾ ಕೋರ್ಸ್‌ಗಳನ್ನೂ ನೀಡಲಿದೆ.

ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು.

‘ಸ್ವಯಂ’ ಮೂಲಕ ಪ್ರಮಾಣ ಪತ್ರ, ಡಿಪ್ಲೊಮಾ ಮತ್ತು ಪದವಿ ಪಡೆಯಲು ಬಯಸುವವರು ಅದರ ಪೋರ್ಟಲ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಿಸಿಕೊಂಡು, ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕು.

ಕೋರ್ಸ್‌ ಮುಗಿದು ಪದವಿ, ಡಿಪ್ಲೊಮಾ  ಪ್ರಮಾಣಪತ್ರ ನೀಡುವುದಕ್ಕೂ ಮುನ್ನ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಡೆದಿರುವ ಅಂಕ/ಗ್ರೇಡ್‌ಗಳನ್ನು ಆ ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಯಾವುದಾದರೂ ವಿ.ವಿ ಮತ್ತು ಕಾಲೇಜುಗಳಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರ ಅಂಕಗಳು ಮತ್ತು ಗ್ರೇಡ್‌ಗಳನ್ನು  ಅವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)