ಭಾನುವಾರ, ಡಿಸೆಂಬರ್ 15, 2019
17 °C

ಭಾರತದ ವಿರುದ್ಧದ ಏಕೈಕ ಟ್ವೆಂಟಿ–20 ಪಂದ್ಯ: ಲೆವಿಸ್‌ ಶತಕದ ಮಿಂಚು

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತದ ವಿರುದ್ಧದ ಏಕೈಕ ಟ್ವೆಂಟಿ–20 ಪಂದ್ಯ: ಲೆವಿಸ್‌ ಶತಕದ ಮಿಂಚು

‌ಕಿಂಗ್ಸ್‌ಟನ್‌, ಜಮೈಕಾ: ಆರಂಭಿಕ ಆಟಗಾರ ಎಲ್ಟನ್‌ ಲೆವಿಸ್‌ (ಔಟಾಗದೆ 125; 62ಎ, 6ಬೌಂ, 12ಸಿ) ಅವರು ಭಾನುವಾರ ಸಬೀನಾ ಪಾರ್ಕ್‌ ಕ್ರೀಡಾಂಗಣದಲ್ಲಿ ಹರಿಸಿದ ರನ್‌ ಹೊಳೆ ಯಲ್ಲಿ ಭಾರತ ತಂಡದ ಗೆಲುವಿನ ಕನಸು ಕೊಚ್ಚಿ ಹೋಯಿತು.

ಲೆವಿಸ್‌ ಅವರ ಮನಮೋಹಕ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಏಕೈಕ ಟಿ–20 ಪಂದ್ಯದಲ್ಲಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್‌ ಗಳಿಸಿತು. ಈ ಗುರಿ ಕೆರಿಬಿಯನ್‌ ನಾಡಿನ ತಂಡಕ್ಕೆ ಸವಾಲೆನಿಸಲೇ ಇಲ್ಲ. ಕಾರ್ಲೊಸ್‌ ಬ್ರಾಥ್‌ವೇಟ್ ಪಡೆ 9 ಎಸೆತಗಳು ಬಾಕಿ ಇರುವಂತೆ ಒಂದು ವಿಕೆಟ್‌ ಕಳೆದು ಕೊಂಡು ಗುರಿ ಸೇರಿತು.

ದಿಟ್ಟ ಆರಂಭ: ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡಕ್ಕೆ ಲೆವಿಸ್‌ ಮತ್ತು ಕ್ರಿಸ್‌ ಗೇಲ್‌ (18; 20ಎ, 1ಬೌಂ, 1ಸಿ) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 50 ಎಸೆತ ಗಳಲ್ಲಿ 82ರನ್‌ ಕಲೆಹಾಕಿ ತಂಡದ ಗೆಲು ವಿನ ಹಾದಿಯನ್ನು ಸುಗಮ ಮಾಡಿತು.

9ನೇ ಓವರ್‌ ಬೌಲ್‌ ಮಾಡಿದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಎರಡನೇ ಎಸೆತದಲ್ಲಿ ಗೇಲ್‌ ವಿಕೆಟ್‌ ಉರುಳಿಸಿ ಈ ಜೋಡಿಯನ್ನು ಮುರಿದರು.

ಸುಂದರ ಇನಿಂಗ್ಸ್‌: ಆ ನಂತರ ಲೆವಿಸ್‌ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ಮರ್ಲಾನ್‌ ಸ್ಯಾಮುಯೆಲ್ಸ್‌ (ಔಟಾಗದೆ 36; 29ಎ, 5ಬೌಂ, 1ಸಿ) ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 10.1 ಓವರ್‌ಗಳಲ್ಲಿ 11.01ರ ಸರಾಸರಿ ಯಲ್ಲಿ 112 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಭಾರತ ತಂಡದ ಆಟಗಾರರು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಮುಳುವಾಯಿತು.

ಆರಂಭದಿಂದಲೇ ತೋಳರಳಿಸಿ ಆಡಿದ ಲೆವಿಸ್‌ ಭಾರತದ ಬೌಲರ್‌ಗಳನ್ನು ಹೈರಾಣಾಗಿಸಿದರು. 12 ಸಿಕ್ಸರ್‌ಗಳನ್ನು ಸಿಡಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿ ಯಾಗಿತ್ತು. ಅವರಿಗೆ ಸ್ಯಾಮುಯೆಲ್ಸ್‌ ತಕ್ಕ ಬೆಂಬಲ ನೀಡಿದರು. ಈ ಜಯದೊಂದಿಗೆ ವಿಂಡೀಸ್‌ ತಂಡ ಏಕದಿನ ಸರಣಿಯಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ್ದ ನಾಯಕ ವಿರಾಟ್ ಕೊಹ್ಲಿ (39) ಹಾಗೂ ಶಿಖರ್ ಧವನ್ (23) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಕೇಸ್ರಿಕ್‌ ವಿಲಿಯಮ್ಸ್ ಅವರ ಬೌಲಿಂಗ್‌ನಲ್ಲಿ  ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ, ಸುನಿಲ್ ನಾರಾಯಣ್‌ಗೆ ಕ್ಯಾಚ್ ನೀಡಿದರು. ಶಿಖರ್ ರನ್‌ಔಟ್‌ ಆಗಿ ಪೆವಿಲಿಯನ್ ಸೇರಿದರು.

ವೇಗದ ಆಟಕ್ಕೆ ಒತ್ತು ನೀಡಿದ ಯುವ ಆಟಗಾರ ರಿಷಭ್‌ ಪಂತ್‌ 25 ಎಸೆತಗಳಲ್ಲಿ 38ರನ್ ದಾಖಲಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು.

ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 5 ಬೌಂಡರಿ  ಮತ್ತು 3 ಸಿಕ್ಸರ್ ಸೇರಿದಂತೆ 48ರನ್ ದಾಖಲಿಸಿ ಮಿಂಚಿದರು. ಆದರೆ ಅರ್ಧಶತಕದ ಹಾದಿಯಲ್ಲಿ ಎಡವಿದರು.

ಮಹೇಂದ್ರ ಸಿಂಗ್‌ ದೋನಿ ಹಾಗೂ ಕೇದಾರ್ ಜಾಧವ್ ಕ್ರಮವಾಗಿ 2, 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್‌ (11) ಮುರಿಯದ  ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌:

ಭಾರತ:
20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 (ವಿರಾಟ್‌ ಕೊಹ್ಲಿ 39, ಶಿಖರ್‌ ಧವನ್‌ 23, ರಿಷಭ್‌ ಪಂತ್‌ 38, ದಿನೇಶ್‌ ಕಾರ್ತಿಕ್‌ 48, ರವೀಂದ್ರ ಜಡೇಜ ಔಟಾಗದೆ 13, ಆರ್‌. ಅಶ್ವಿನ್‌ ಔಟಾಗದೆ 11; ಜೆರೋಮ್‌ ಟೇಲರ್‌ 31ಕ್ಕೆ2, ಕೇಸ್ರಿಕ್‌ ವಿಲಿಯಮ್ಸ್‌ 42ಕ್ಕೆ2, ಮರ್ಲಾನ್‌ ಸ್ಯಾಮುಯೆಲ್ಸ್‌ 32ಕ್ಕೆ1).

ವೆಸ್ಟ್‌ ಇಂಡೀಸ್‌: 18.3 ಓವರ್‌ಗಳಲ್ಲಿ 1 ವಿಕೆಟ್‌ಗೆ 194 (ಕ್ರಿಸ್‌ ಗೇಲ್‌ 18, ಎವಿನ್‌ ಲೆವಿಸ್‌ ಔಟಾಗದೆ 125, ಮರ್ಲಾನ್‌ ಸ್ಯಾಮುಯೆಲ್ಸ್‌ ಔಟಾಗದೆ 36; ಕುಲದೀಪ್‌ ಯಾದವ್‌ 34ಕ್ಕೆ1).

ಫಲಿತಾಂಶ: ವೆಸ್ಟ್‌ ಇಂಡೀಸ್‌ ತಂಡಕ್ಕೆ 9 ವಿಕೆಟ್‌ ಗೆಲುವು.

ಪಂದ್ಯಶ್ರೇಷ್ಠ: ಎವಿನ್ ಲೆವಿಸ್‌.

ಪ್ರತಿಕ್ರಿಯಿಸಿ (+)