ಶನಿವಾರ, ಡಿಸೆಂಬರ್ 14, 2019
25 °C

ಹವಾಯ್‌ನಲ್ಲಿ ಸ್ಕೂಬಾ ಡೈವಿಂಗ್‌ ಅವಘಡ: ಕೋಮಾಸ್ಥಿತಿಯಲ್ಲಿದ್ದ ಶ್ರುತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವಾಯ್‌ನಲ್ಲಿ ಸ್ಕೂಬಾ ಡೈವಿಂಗ್‌ ಅವಘಡ: ಕೋಮಾಸ್ಥಿತಿಯಲ್ಲಿದ್ದ ಶ್ರುತಿ ಸಾವು

ಚಿಕ್ಕಮಗಳೂರು: ಅಮೆರಿಕದ ಹವಾಯ್‌ನಲ್ಲಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದಾಗ ಆಮ್ಲಜನಕ ನಳಿಕೆ ಕಳಚಿಬಿದ್ದ ಪರಿಣಾಮ ಅಸ್ವಸ್ಥಗೊಂಡು ಕೋಮಾಸ್ಥಿತಿಗೆ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ವಿಶ್ವನಾಥ್‌ ಪುತ್ರಿ ವಿ.ಶ್ರುತಿ (20) ಅವರು ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಜೂನ್‌ 30ರಂದು ಅವಘಡ ನಡೆದಿತ್ತು. 10 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಶ್ರುತಿ ತಂದೆ ವಿಶ್ವನಾಥ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾನತಾಡಿ, ‘ಹವಾಯ್‌ನಲ್ಲಿನ ಆಸ್ಪತ್ರೆಗೆ ಮಗಳ ದೇಹದಾನವನ್ನು ಮಾಡಿದ್ದೇವೆ. ಅಸ್ಥಿಯನ್ನು ಮಾತ್ರ ಇಲ್ಲಿಗೆ ತಂದು ಉತ್ತರಾದಿ ಕ್ರಿಯೆಗಳನ್ನು ನೆರವೇರಿಸುತ್ತೇವೆ’ ಎಂದು ತಿಳಿಸಿದರು.

‘ಮಗ ಕಾರ್ತಿಕ್‌ ಮತ್ತು ಪತ್ನಿ ಶಕುಂತಲಾಗೆ ತತ್ಕಾಲ್‌ನಲ್ಲಿ ಪಾಸ್‌ಪೋರ್ಟ್‌ ಸಿಕ್ಕಿದ್ದರಿಂದ ಅವರಿಬ್ಬರು ಜುಲೈ 7ರಂದು ರಾತ್ರಿ ಹೊರಟು 8ರಂದು ರಾತ್ರಿ ಹವಾಯ್‌ಗೆ ತಲುಪಿದ್ದರು. ನನಗೆ ಪಾಸ್‌ಪೋರ್ಟ್‌ ಸಿಗುವುದು ವ್ಯತ್ಯಯವಾಗಿದ್ದರಿಂದ ನಾನು ಹೋಗಲು ಸಾಧ್ಯವಾಗಲಿಲ್ಲ’ ಎಂದರು.

ಹತ್ತು ತಿಂಗಳ ಹಿಂದೆ ವಿಜಯವಾಡದ ಸೀತಾರಾಮಕೃಷ್ಣ ಅವರೊಂದಿಗೆ ಶ್ರುತಿ ಮದುವೆಯಾಗಿತ್ತು. ಪತಿ ಕ್ಯಾಲಿಪೋರ್ನಿಯಾದಲ್ಲಿ ಯಾಹೂ ಡಾಟ್‌ ಕಾಂನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ. ರಜೆ ಕಳೆಯಲು ಈ ದಂಪತಿ ಹವಾಯ್‌ ದ್ವೀಪಕ್ಕೆ ಹೋಗಿದ್ದಾಗ ಅನಾಹುತ ನಡೆದಿತ್ತು. 

ಶ್ರುತಿ ಕುಟುಂಬದವರು ಪಾಸಪೋರ್ಟ್‌ ಪಡೆಯಲು ಹರಸಾಹಸ ಪಟ್ಟಿದ್ದರು. ಶಿವಮೊಗ್ಗ ಜಿಲ್ಲಾಡಳಿತದ ನೆರವು ಪಡೆದು ತತ್ಕಾಲ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್‌ ಪಡೆದು ಹವಾಯ್‌ಗೆ ತೆರಳಿದ್ದರು.

ಪ್ರತಿಕ್ರಿಯಿಸಿ (+)