ಭಾನುವಾರ, ಡಿಸೆಂಬರ್ 8, 2019
21 °C

ಗಲಭೆಕೋರರ ಗಡೀಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲಭೆಕೋರರ ಗಡೀಪಾರು

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಯಲ್ಲಿ ತೊಡಗುವವರ ಹಾಗೂ ಅದಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ‘ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ’ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಿಎಫ್‌ಐ, ಶ್ರೀರಾಮಸೇನೆ, ಬಜರಂಗದಳ, ಆರ್‌ಎಸ್‌ಎಸ್‌, ಎಸ್‌ಡಿಪಿಐ ಸೇರಿದಂತೆ ಯಾವುದೇ ಧರ್ಮದ ಸಂಘ ಟನೆ ತಪ್ಪೆಸಗಿದರೂ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಲಭೆಯಲ್ಲಿ  ಸಂಘಟನೆಗಳ ಪಾತ್ರದ ಬಗ್ಗೆ ವರದಿ ತರಿಸಿಕೊಂಡು ಅವುಗಳನ್ನು ನಿಷೇಧಿಸುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

‘ಆ ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಕೊಲೆ, ಚಾಕು ಇರಿತ ಹಾಗೂ ಹಲ್ಲೆ ಯಂತಹ ಅಹಿತಕರ ಘಟನೆಗಳು ಪದೇ ಪದೇ ನಡೆಯುತ್ತಿವೆ. ಇವುಗಳ ಹಿಂದೆ ಮತೀಯ ಸಂಘಟನೆಗಳ ಪಾತ್ರವಿದೆ. ಅಂತಹ ಸಂಘಟನೆಗಳ ಚಟುವಟಿಕೆ ಮೇಲೆ ನಿಗಾ ಇಡುವಂತೆ ಹೇಳಿದ್ದೇನೆ. ಸ್ಥಳೀಯ ಮುಖಂಡರ ಸಭೆನಡೆಸಿ ಶಾಂತಿ ಕಾಪಾಡಲು ಸೂಚಿಸಿದ್ದೇನೆ’ ಎಂದರು.

ಮತೀಯವಾದಿಗಳ ಪ್ರಯೋಗಾಲಯ: ‘ಶಾಂತಿಪ್ರಿಯರು ಹಾಗೂ ವಿದ್ಯಾ ವಂತರು ಹೆಚ್ಚಾಗಿರುವ ಕರಾವಳಿಯು ಮತೀಯವಾದಿಗಳ ಪ್ರಯೋಗಾಲಯವಾಗಿ ಮಾರ್ಪಡುತ್ತಿದೆ’ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

‘ಗಲಭೆ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯುತ್ತಿದ್ದಾರೆ. ಇಂಥ ಪ್ರಕರಣಗಳಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜತೆ ಚರ್ಚಿಸಿ, ಜಾಮೀನು ಸಿಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಆರ್‌.ಕೆ. ದತ್ತಾ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸಭೆಯಲ್ಲಿ ಇದ್ದರು.

ಪೊಲೀಸರ ವರ್ಗಾವಣೆ ನೀತಿ ಜಾರಿ: ‘ಮಂಗಳೂರು, ಉಡುಪಿಯಲ್ಲಿ ಕೆಲ ಅಧಿಕಾರಿಗಳನ್ನು ನಿಗದಿತ ಅವಧಿಗೂ ಮುನ್ನವೇ ವರ್ಗಾವಣೆ ಮಾಡಲಾಗಿದೆ. ಇದರಿಂದ ಅವರ ಹಿಡಿತದಲ್ಲಿದ್ದ ಸ್ಥಳಗಳಲ್ಲಿ ಗಲಭೆ ನಿಯಂತ್ರಣ ಸಾಧ್ಯವಾಗಲಿಲ್ಲ’ ಎಂದು ಅಧಿಕಾರಿಯೊಬ್ಬರು ಸಭೆಯಲ್ಲಿ ತಿಳಿಸಿದರು.

ಆಗ ಮುಖ್ಯಮಂತ್ರಿ, ‘ವರ್ಗಾವಣೆ ನಿಯಮವನ್ನು ಬದಲಿಸಲು ಆಗದು. ಆದರೆ, ಒಬ್ಬ ಅಧಿಕಾರಿ ಒಂದೇ ಸ್ಥಳದಲ್ಲಿ ಕಡ್ಡಾಯವಾಗಿ ಎರಡು ವರ್ಷ ಇರುವಂತೆ   ವರ್ಗಾವಣೆ ನೀತಿ ಜಾರಿಗೆ ತರುತ್ತೇವೆ’  ಎಂದರು. ಈ ಸಂಬಂಧ  ಪ್ರಸ್ತಾವ ಸಲ್ಲಿಸುವಂತೆ ಡಿಜಿಪಿ–ಐಜಿಪಿ ಅವರಿಗೆ ಸೂಚಿಸಿದರು.

‘ನೋ ಇಂಗ್ಲಿಷ್‌,  ಓನ್ಲಿ ಕನ್ನಡ!’: ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಆ ಭಾಷೆಯ ವಾಹಿನಿಗಳ ಕೆಲ ವರದಿಗಾರರು ಕೇಳಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನೋ ಇಂಗ್ಲಿಷ್‌, ಓನ್ಲಿ ಕನ್ನಡ!’ ಎಂದರು.

ಗೃಹ ಸಚಿವರ ನೇಮಕ ಯಾವಾಗ? ಎಂದಾಗ, ‘ಈಗ ನಾನೇ ಹೋಮು, ಸಿ.ಎಮ್ಮು ಎಲ್ಲಾ’ ಎಂದು ಹೊರಟು ಹೋದರು.

ಪ್ರತಿಭಟನೆಗೆ ಅವಕಾಶ ನೀಡಿದ್ದಕ್ಕೆ ಗರಂ

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬಿ.ಸಿ.ರೋಡ್‌ನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡರಿಗೆ ಅವಕಾಶ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.

ಪಶ್ಚಿಮ ವಲಯ ಐಜಿಪಿ ಹರಿ ಶೇಖರನ್, ದಕ್ಷಿಣ ಕನ್ನಡ ಎಸ್ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ಹಾಗೂ ಉಡುಪಿ ಎಸ್ಪಿ ಕೆ.ಟಿ.ಬಾಲಕೃಷ್ಣ ಅವರಿಗೆ ಎದ್ದು ನಿಲ್ಲುವಂತೆ ಸೂಚಿಸಿ ತರಾಟೆಗೆ ತೆಗೆದುಕೊಂಡರು. ‘ನೀವು ಮೊದಲೇ ಎಚ್ಚರವಾಗಿದ್ದರೆ, ಇಷ್ಟೆಲ್ಲ ಆಗುತ್ತಿರಲಿಲ್ಲ. ಇನ್ನಾದರೂ ಗಲಭೆ ನಿಯಂತ್ರಿಸಿ ಜನರಿಗೆ ನೆಮ್ಮದಿಯ ವಾತಾವರಣ ನಿರ್ಮಿಸಿ’ ಎಂದರು.

‘ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೀರಾ. ದಾಖಲಿಸಿಕೊಂಡಿದ್ದರೆ, ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?’ ಎಂದೂ ಪ್ರಶ್ನಿಸಿದರು.

‘ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಲು ಕಾರಣವೇನು. ಈ ರೀತಿಯಾದರೆ ಪೊಲೀಸರಿಗೂ ಕೆಟ್ಟ ಹೆಸರು ಬರುತ್ತದೆ. ದೊಡ್ಡ ಸುದ್ದಿಯಾಗಿ ಸರ್ಕಾರಕ್ಕೂ ಕಳಂಕ ಬರುತ್ತದೆ’ ಎಂದು  ಹರಿಹಾಯ್ದರು.

ಚುನಾವಣಾ ವರ್ಷ... ಎಚ್ಚರ!

‘ಇದು ಚುನಾವಣಾ ವರ್ಷ. ಇಂಥ ವರ್ಷದಲ್ಲೇ ಕೋಮುವಾದಿ ಶಕ್ತಿಗಳು ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕುತ್ತವೆ. ಗಲಭೆಗಳು ಉಂಟಾದಾಗ ರಾಜಕೀಯ ಪಕ್ಷಗಳು ಅದರ ಲಾಭ ಪಡೆಯಲು ಹುನ್ನಾರ ಮಾಡುವ ಸಾಧ್ಯತೆ ಇರುತ್ತದೆ. ಪೊಲೀಸರು ಅದಕ್ಕೆ ಆಸ್ಪದ ನೀಡಬಾರದು’ ಎಂದು  ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ಸಹಜ ಸ್ಥಿತಿಯತ್ತ ಬಂಟ್ವಾಳ

ಮಂಗಳೂರು: ಎರಡು ದಿನ ಗಳಿಂದ ಪ್ರಕ್ಷುಬ್ಧವಾಗಿದ್ದ ಬಂಟ್ವಾಳ ತಾಲ್ಲೂಕು ಸೋಮವಾರ ಸಹಜ ಸ್ಥಿತಿಯತ್ತ ಮರಳಿದೆ. ಬಂಟ್ವಾಳ ತಾಲ್ಲೂಕಿನ ಕೈಕಂಬದಿಂದ ಕಲ್ಲಡ್ಕ ದವರೆಗೆ ಬಿಗಿ ಪೊಲೀಸ್‌ ಕಣ್ಗಾವಲು ಮುಂದುವರಿದಿದೆ. ಸೋಮವಾರ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಾಹನ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಇತ್ತು.

ಪ್ರತಿಕ್ರಿಯಿಸಿ (+)