ಶುಕ್ರವಾರ, ಡಿಸೆಂಬರ್ 13, 2019
20 °C
ಪಿಎಚ್‌ಸಿ, ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಮುಂದಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಬಸ್ ನಿಲ್ದಾಣದಲ್ಲಿ ‘ಆರೋಗ್ಯ ಭಾಗ್ಯ’

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಬಸ್ ನಿಲ್ದಾಣದಲ್ಲಿ ‘ಆರೋಗ್ಯ ಭಾಗ್ಯ’

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ   ಸಂಚಾರ ನಿರ್ವಹಣೆ ಕೇಂದ್ರಗಳು (ಟಿಟಿಎಂಸಿ) ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು  ಆರಂಭಿಸಲು ಮುಂದಾಗಿದೆ.  ಈ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರ ಇವು ಕಾರ್ಯರೂಪಕ್ಕೆ ಬರಲಿವೆ.

‘ಪ್ರಾಯೋಗಿಕವಾಗಿ ಎರಡು ನಿಲ್ದಾಣಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸ್ಥಾಪನೆ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ  ಈ ಸೇವೆ ಲಭ್ಯವಿದೆ.  ಕೆಲವೇ ದಿನಗಳಲ್ಲಿ ಯಶವಂತಪುರ ಬಸ್ ನಿಲ್ದಾಣದಲ್ಲೂ ಪಿಎಚ್‌ಸಿಯನ್ನು ಆರಂಭಿಸಲಾಗುತ್ತದೆ. ಪ್ರಯಾಣಿಕರಿಗೆ ಹಾಗೂ ಬಿಎಂಟಿಸಿ ಸಿಬ್ಬಂದಿಗೆ ಮಾತ್ರ ಇಲ್ಲಿ ಚಿಕಿತ್ಸೆ ಲಭ್ಯ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರತಿ ಕೇಂದ್ರದಲ್ಲೂ ವೈದ್ಯರು, ನರ್ಸ್, ವೈದ್ಯಕೀಯ ತಂತ್ರಜ್ಞ ಹಾಗೂ ಔಷಧ ವಿತರಕರನ್ನು ನೇಮಿಸಲಾಗುತ್ತದೆ. ಇವರಿಗೆ ಆರೋಗ್ಯ ಇಲಾಖೆಯೇ ವೇತನ ನೀಡಲಿದೆ’ ಎಂದು ಅವರು ಹೇಳಿದರು.

‘ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವುದು ಮಾತ್ರ ಸಂಸ್ಥೆಯ  ಕರ್ತವ್ಯವಲ್ಲ. ಜನರ ಜೀವನಾಡಿಯಾಗಿ ಸಂಸ್ಥೆ ಕಾರ್ಯನಿರ್ವಹಿಸಬೇಕು. ಪ್ರಯಾಣಿಕರ ಹಾಗೂ ಸಂಸ್ಥೆಯ ಸಿಬ್ಬಂದಿಯ  ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿದ್ದೇವೆ’  ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ್ ಯಾದವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಯೋಗಿಕವಾಗಿ ಆರಂಭಿಸಿರುವ ಕೇಂದ್ರಗಳಲ್ಲಿ ಪ್ರಯಾಣಿಕರಿಂದ ಹಾಗೂ ಸಿಬ್ಬಂದಿಯಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನಾಧರಿಸಿ ಮುಂದಿನ ದಿನಗಳಲ್ಲಿ ಎಲ್ಲ ಟಿಟಿಎಂಸಿಗಳಲ್ಲೂ ಪಿಎಚ್‌ಸಿಗಳನ್ನು ತೆರೆಯುತ್ತೇವೆ’ ಎಂದರು.

ಬಿಡಿಭಾಗ ಕಳವು: ‘ಡಿಪೊಗಳಲ್ಲಿ ನಿಲ್ಲಿಸಿದ ವಾಹನಗಳ ಇಂಧನ ಕಳವಾಗುತ್ತಿದೆ. ಇಲ್ಲಿ ನಿಲ್ಲಿಸುವ  ವಾಹನಗಳ ಬಿಡಿಭಾಗಗಳ  ಕಳ್ಳತನ ಪ್ರಕರಣಗಳು  ಇತ್ತೀಚೆಗೆ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಯಶಸ್ವಿಯಾಗಿಲ್ಲ. ಡಿಪೊಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಸಿಬ್ಬಂದಿ ಚಿಕಿತ್ಸೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ!: ‘ಸಂಸ್ಥೆಯ ಸಿಬ್ಬಂದಿಯ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಖಾಸಗಿ ವ್ಯಕ್ತಿಗಳು ಮುಂದೆ ಬರುವುದಾದರೆ, ಅಂಥವರಿಗೆ ಉಚಿತವಾಗಿ ಜಾಗ ಒದಗಿಸಲು ಬಿಎಂಟಿಸಿ ಸಿದ್ಧವಿದೆ’ ಎಂದು ನಾಗರಾಜ್‌ ತಿಳಿಸಿದರು.

‘ಸಂಸ್ಥೆಯ ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾದರೆ, ಅವರಿಗೆ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಯನ್ನು ಉಚಿತವಾಗಿ   ಒದಗಿಸುವುದು ಕಡ್ಡಾಯ. ಸಾರ್ವಜನಿಕರಿಗೆ ಚಿಕಿತ್ಸೆ ನೀಡಿ ಅದಕ್ಕೆ ಬೇಕಾದರೆ ಶುಲ್ಕ ಪಡೆಯಲು ಅಡ್ಡಿ ಇಲ್ಲ’ ಎಂದು ಅವರು ಹೇಳಿದರು.

‘ನಗರದ ಬೇರೆ ಬೇರೆ ಭಾಗಗಳಲ್ಲಿ ಸಂಸ್ಥೆಗೆ ಸೇರಿದ 1,000 ಎಕರೆ ಖಾಲಿ ಭೂಮಿ ಇದೆ. ಈ ಜಾಗವನ್ನು ಸಂಸ್ಥೆಗೆ ಆದಾಯ ತರುವ ಉದ್ದೇಶಕ್ಕೆ  ಬಳಸಿಕೊಳ್ಳುವ  ಚಿಂತನೆ ಇದೆ. ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು’ ಎಂದರು.

***

ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಟಿಟಿಎಂಸಿಗಳಲ್ಲಿ ‘ಡಿಜಿಟಲ್ ಲೈಬ್ರರಿ’  ಕೇಂದ್ರಗಳನ್ನು ಸ್ಥಾಪಿಸುತ್ತೇವೆ. ಪ್ರತಿ ಗ್ರಂಥಾಲಯದಲ್ಲಿ ತಲಾ 20 ಕಂಪ್ಯೂಟರ್‌ಗಳು, ಹೈಸ್ಪೀಡ್ ವೈ–ಫೈ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ.  ಇ–ಪುಸ್ತಕಗಳನ್ನೂ ಒದಗಿಸುವಂತೆ ಕೆಲವು  ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ.  ವಿದ್ಯಾರ್ಥಿಗಳು ಬಿಡುವಿನ ಅವಧಿಯಲ್ಲಿ ಇವುಗಳನ್ನು ಬಳಸಬಹುದು’ ಎಂದು ನಾಗರಾಜ್ ಹೇಳಿದರು.

‘ಬಸ್ ಹಾಗೂ ಅವುಗಳ ಬಿಡಿಭಾಗಗಳನ್ನು ಪೂರೈಸುವ ಕಂಪೆನಿಗಳು  ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ  ಈ ಡಿಜಿಟಲ್ ಲೈಬ್ರರಿಗಳ ವೆಚ್ಚ ಭರಿಸಲಿವೆ’ ಎಂದರು.

**

ಆರೋಗ್ಯ ಕೇಂದ್ರಕ್ಕೆ ಗುರುತಿಸಿರುವ ಸ್ಥಳಗಳು

* ಮೆಜೆಸ್ಟಿಕ್ (ಸೇವೆಯಲ್ಲಿದೆ)

* ಶಾಂತಿನಗರ

* ಜಯನಗರ

* ಕೆಂಗೇರಿ

* ಬನಶಂಕರಿ

* ಕೋರಮಂಗಲ

* ಯಶವಂತಪುರ

* ವಿಜಯನಗರ

* ದೊಮ್ಮಲೂರು

* ಐಟಿಪಿಎಲ್

* ಬನ್ನೇರುಘಟ್ಟ

* ಶಿವಾಜಿನಗರ

**

ಆರೋಗ್ಯ ಕೇಂದ್ರ ತೆರೆಯಲು ಜಾಗ ನೀಡುತ್ತೇವೆ. ಸಿಬ್ಬಂದಿ ವೇತನ, ಔಷಧಿ ಪೂರೈಕೆಗೆ ಸಂಸ್ಥೆ ವತಿಯಿಂದ ಹಣ ನೀಡುವುದಿಲ್ಲ. ಇದಕ್ಕೆ ಆರೋಗ್ಯ ಇಲಾಖೆ ಒಪ್ಪಿದೆ.

-ನಾಗರಾಜ್ ಯಾದವ್, ಬಿಎಂಟಿಸಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)