ಬುಧವಾರ, ಡಿಸೆಂಬರ್ 11, 2019
20 °C
ಅಬಕಾರಿ ನಿಯಮಕ್ಕೆ ತಿದ್ದುಪಡಿ ತರಲು ಆಗ್ರಹ l ಪಂಜಾಬ್‌ ಮಾದರಿ ಅನುಸರಿಸಲು ಒತ್ತಾಯ

ಮದ್ಯದಂಗಡಿ ಮಾಲೀಕರಿಂದ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ಯದಂಗಡಿ ಮಾಲೀಕರಿಂದ ಮೌನ ಪ್ರತಿಭಟನೆ

ಬೆಂಗಳೂರು: ‘ಹೆದ್ದಾರಿ ಬದಿಯ ಮದ್ಯದಂಗಡಿಗಳ ಡಿನೋಟಿಫಿಕೇಷನ್‌ ಸಂಬಂಧ ಪಂಜಾಬ್, ಹಿಮಾಚಲ ಪ್ರದೇಶ ಸರ್ಕಾರಗಳು ಅನುಸರಿಸಿರುವ ಮಾದರಿಯನ್ನೇ ರಾಜ್ಯವೂ ಅನುಸರಿಸಬೇಕು. ನಮ್ಮಲ್ಲೂ ಅಬಕಾರಿ ನಿಯಮಕ್ಕೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಒಕ್ಕೂಟ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.

ಇದಕ್ಕೂ ಮೊದಲು, ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಮದ್ಯದಂಗಡಿ ಮಾಲೀಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಸುಪ್ರೀಂ ಕೋರ್ಟ್ ಆದೇಶದನ್ವಯ ಹೆದ್ದಾರಿ ಬದಿಯ ಬಾರ್ ಹಾಗೂ ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

‘ಹೆದ್ದಾರಿ ಬದಿಯಲ್ಲಿ ಈಗಿರುವ ಮದ್ಯದಂಗಡಿಗಳಿಗೆ ಸುಪ್ರೀಂ ಕೋರ್ಟ್ ಆದೇಶ ಅನ್ವಯ ಆಗುವುದಿಲ್ಲ. ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಮದ್ಯದಂಗಡಿಗಳಿಗೆ ಮಾತ್ರ ಅನ್ವಯವಾಗುವಂತೆ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಕಾನೂನಿಗೆ ತಿದ್ದುಪಡಿ ತಂದಿವೆ’ ಎಂದು ಒಕ್ಕೂಟದ ಅಧ್ಯಕ್ಷ ಎಸ್.ಗುರುಸ್ವಾಮಿ ಅವರು ಹೇಳಿದರು.

ಮುಖ್ಯಮಂತ್ರಿಗೆ ಮನವಿ: ಪ್ರತಿಭಟನೆ ಬಳಿಕ ಒಕ್ಕೂಟದ ಕೆಲ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

‘ಈ ವಿಷಯದ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಬಳಿಕ ಅಬಕಾರಿ ನಿಯಮಕ್ಕೆ ತಿದ್ದುಪಡಿ ತರುವ ಕುರಿತು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ’ ಎಂದು ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಅಬಕಾರಿ ನಿಯಮಕ್ಕೆ ತಿದ್ದುಪಡಿಯೊಂದೇ ಮಾಲೀಕರ ಮುಂದಿರುವ ಏಕೈಕ ಭರವಸೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗಲಿದೆ.

-ಎಸ್.ಗುರುಸ್ವಾಮಿ, ಒಕ್ಕೂಟದ ಅಧ್ಯಕ್ಷ

ಪ್ರತಿಕ್ರಿಯಿಸಿ (+)