ಸೋಮವಾರ, ಡಿಸೆಂಬರ್ 16, 2019
26 °C
ಆರೋಪಿಯ ಮಾಹಿತಿ ನೀಡಿದ್ದ ಖಾಸಗಿ ಬಸ್‌ ಕಂಪೆನಿ ಸಿಬ್ಬಂದಿ 

ಚಾವಣಿ ಕೊರೆದು ಚಿನ್ನಾಭರಣ ಕದ್ದಿದ್ದವ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾವಣಿ ಕೊರೆದು ಚಿನ್ನಾಭರಣ ಕದ್ದಿದ್ದವ ಸೆರೆ

ಬೆಂಗಳೂರು: ಕಾಟನ್‌ಪೇಟೆಯ ‘ಪ್ಲಾಟಿನಂ ಡೀಲಕ್ಸ್‌’ ವಸತಿಗೃಹದ ಕೊಠಡಿಯ ಚಾವಣಿ ಕೊರೆದು ನೆಲಮಹಡಿಯಲ್ಲಿದ್ದ  ಆಭರಣ ಮಳಿಗೆಗೆ ಕನ್ನ ಹಾಕಿದ್ದ ಆರೋಪಿಯು ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಭಾನುವಾರ ರಾತ್ರಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.

ಗುಜರಾತ್‌ನ ಅಹಮದಾಬಾದಿನ ಮಹಮ್ಮದ್‌ ಹುಸೇನ್‌ ಎಂ. ಸಿದ್ದಿಕಿ (32) ಬಂಧಿತ. ಆತನಿಂದ 1 ಕೆ.ಜಿ 300 ಗ್ರಾಂ ಚಿನ್ನ, 10 ಕೆ.ಜಿ ಬೆಳ್ಳಿ ಆಭರಣ ಹಾಗೂ 2,000 ನಗದು ಜಪ್ತಿ ಮಾಡಲಾಗಿದೆ.

‘ಶನಿವಾರ (ಜುಲೈ 8) ಕೃತ್ಯ ಎಸಗಿದ್ದ ಆರೋಪಿಯು ಸಾರಿಗೆ ನಿಗಮದ ಬಸ್ಸಿನಲ್ಲಿ ಹುಬ್ಬಳ್ಳಿಗೆ ಹೋಗಿದ್ದ. ಅಲ್ಲಿಂದ ಖಾಸಗಿ ಬಸ್‌ನಲ್ಲಿ ಅಹಮದಾಬಾದಿಗೆ ಪ್ರಯಾಣಿಸುತ್ತಿದ್ದ ವೇಳೆ ಬಂಧಿಸಿದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾತ್ರಿ ಹೊತ್ತು ರಂಧ್ರ ಕೊರೆಯುತ್ತಿದ್ದ: ‘ಜೂನ್ 19ರಂದು ವಸತಿಗೃಹಕ್ಕೆ ಬಂದು ಕೊಠಡಿ ಪಡೆದಿದ್ದ ಆರೋಪಿಯು  ವ್ಯವಸ್ಥಾಪಕರಿಗೆ ಮುಂಗಡವಾಗಿ ₹10,000 ಕೊಟ್ಟಿದ್ದ. ಬೆಳಿಗ್ಗೆ 8 ಗಂಟೆಗೆ ಕೊಠಡಿಯಿಂದ ಹೊರಗೆ ಹೋಗುತ್ತಿದ್ದ ಆತ ಮಧ್ಯಾಹ್ನ ವಾಪಸ್‌ ಬಂದು ಮಲಗುತ್ತಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.

‘ರಾತ್ರಿ 10ಕ್ಕೆ ಎದ್ದು ನಸುಕಿನವರೆಗೂ ರಂಧ್ರ ಕೊರೆಯುತ್ತಿದ್ದ.  ಇದಕ್ಕಾಗಿ ಆತ ಮೂರು ಶಬ್ದರಹಿತ ಡ್ರಿಲಿಂಗ್‌ ಮಷಿನ್‌ ಹಾಗೂ ಹಲವು ಸಲಕರಣೆಗಳನ್ನು ಬಳಸುತ್ತಿದ್ದ. ಹೀಗಾಗಿಯೇ ರಂಧ್ರ ಕೊರೆಯುತ್ತಿದ್ದ ಸಂಗತಿ ಯಾರಿಗೂ ಗೊತ್ತಾಗುತ್ತಿರಲಿಲ್ಲ’ ಎಂದು ವಿವರಿಸಿದರು.

‘ವಸತಿಗೃಹಕ್ಕೆ ಬಂದಾಗಿನಿಂದಲೂ ಆರೋಪಿಯು ಅಕ್ಕ–ಪಕ್ಕದ ಅಂಗಡಿಗಳಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ. ವಸತಿಗೃಹದ ನೆಲಮಹಡಿಯಲ್ಲಿ ‘ಕಾಂಚನಾ ಆಭರಣ ಮಳಿಗೆ’ ಇರುವುದನ್ನು ನೋಡಿದ್ದ. ಮೊದಲು ಕೊಠಡಿ ಸಂಖ್ಯೆ 101ರಲ್ಲಿದ್ದ ಆರೋಪಿ,  ದೊಡ್ಡ ಕೊಠಡಿ ಬೇಕು ಎಂದು ಹೇಳಿ ಮಳಿಗೆ ಮೇಲೆಯೇ ಇದ್ದ 102ಕ್ಕೆ ಶಿಫ್ಟ್‌ ಆಗಿದ್ದ’

‘ಮಳಿಗೆಯ ಎದುರಿಗಿದ್ದ ಚಹಾ ಅಂಗಡಿಗೆ ದಿನವೂ ಹೋಗುತ್ತಿದ್ದ ಆತ, ಚಹಾ ಕುಡಿಯುತ್ತಲೇ ಚಾವಣಿಯಲ್ಲಿ ರಂಧ್ರ ಕೊರೆಯುವುದು ಹೇಗೆ ಎಂದು ಯೋಚಿಸುತ್ತಿದ್ದ. ನಿಗದಿಯಂತೆ ಒಂದೇ ವಾರದಲ್ಲಿ ರಂಧ್ರ ಕೊರೆದು, ಕೆಳಗೆ ಇಳಿದು ಆಭರಣ ಕದ್ದೊಯ್ದಿದ್ದ’ ಎಂದು ವಿವರಿಸಿದರು.

(ಆರೋಪಿಯಿಂದ ಜಪ್ತಿ ಮಾಡಲಾದ ಆಭರಣಗಳು)

ಸಿನಿಮೀಯ ಕಾರ್ಯಾಚರಣೆ: ‘ಆರೋಪಿಯು ವಸತಿಗೃಹದ ಪುಸ್ತಕದಲ್ಲಿ ಕಲಬುರ್ಗಿಯ ಹುಸೇನ್‌ ಎಂದು ಬರೆದಿದ್ದ. ಫೋಟೊ ಇದ್ದ ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್‌ ಸಹ ಕೊಟ್ಟಿದ್ದ. ಅದೇ ಹೆಸರು, ಫೋಟೊ ಹಿಡಿದುಕೊಂಡು ಆತನ ಪತ್ತೆಗೆ ಮುಂದಾದ ವಿಶೇಷ ತಂಡವು ಆ ಹೆಸರಿನ ಯಾರಾದರೂ ಬಸ್‌ಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿದ್ದಾರೆಯೇ? ಎಂಬ ಬಗ್ಗೆ  ಮಾಹಿತಿ ಕಲೆಹಾಕಲು ಆರಂಭಿಸಿತ್ತು’.

‘ಆ ಹೆಸರಿನ ಮೂವರು ಅಹಮದಾಬಾದಿಗೆ ಹೋಗುತ್ತಿದ್ದ ಮಾಹಿತಿ ಗೊತ್ತಾಗಿತ್ತು. ಇಬ್ಬರು ಬೆಂಗಳೂರಿನಿಂದ ಹಾಗೂ ಒಬ್ಬ ಹುಬ್ಬಳ್ಳಿಯಿಂದ ಆಸನ ಕಾಯ್ದಿರಿಸಿದ್ದರು. ಹುಬ್ಬಳ್ಳಿಯ ಖಾಸಗಿ ಬಸ್‌ ಕಂಪೆನಿಯ ಸಿಬ್ಬಂದಿಯೊಬ್ಬರನ್ನು ಸಂಪರ್ಕಿಸಿದಾಗ ಟಿಕೆಟ್‌ ಕಾಯ್ದಿರಿಸಿದ್ದನ್ನು ಖಾತ್ರಿ ಮಾಡಿದ್ದರು. ಬೆಂಗಳೂರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಆರೋಪಿಗಳಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ವಿಶೇಷ ತಂಡವು ಮಧ್ಯಾಹ್ನವೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿತ್ತು. ಅಲ್ಲಿಗೆ ತಲುಪುವಷ್ಟರಲ್ಲಿ ಬಸ್‌, ಅಹಮದಾಬಾದಿನತ್ತ ಪ್ರಯಾಣ ಆರಂಭಿಸಿತ್ತು’.

‘ಆಗ ಪೊಲೀಸರು, ಬಸ್‌ ನಿರ್ವಾಹಕನ ಮೊಬೈಲ್‌ಗೆ  ಆರೋಪಿಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ಫೋಟೊವನ್ನು ಕಳುಹಿಸಿದ್ದರು. ಅನುಮಾನ ವ್ಯಕ್ತಪಡಿಸಿದ್ದ ಚಾಲಕ, ಬಸ್‌ ಮಾರ್ಗ ತಿಳಿಸಿದ್ದ. ಬಳಿಕ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಕಿತ್ತೂರು ಬಳಿಯ ಸೆವೆನ್‌ ಲವ್ಸ್‌ ಹೋಟೆಲ್‌ ಬಳಿ ಬಸ್‌ ನಿಲ್ಲಿಸಿ, ಆಭರಣ ಸಮೇತ ಆರೋಪಿಯನ್ನು ಬಂಧಿಸಿದರು’ ಎಂದು ಹಿರಿಯ ಅಧಿಕಾರಿ ವಿವರಿಸಿದರು. 

‘ಲಗೇಜು ಸ್ಥಳದಲ್ಲಿ ಎರಡು ಪ್ರತ್ಯೇಕ ಬ್ಯಾಗ್‌ಗಳಲ್ಲಿ ಆರೋಪಿಯು ಆಭರಣಗಳನ್ನು ಇಟ್ಟಿದ್ದ. ಅದರೊಂದಿಗೆ ಮೂರು ಡ್ರಿಲಿಂಗ್‌ ಮಷಿನ್‌ ಹಾಗೂ ಹಲವು ಸಲಕರಣೆಗಳು ಇದ್ದವು’.

ಕಳವು ಹಣದಿಂದ ತಂಗಿಯರ ಮದುವೆ: ‘ಅವಿವಾಹಿತನಾದ ಆರೋಪಿಯು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಈ ಹಿಂದೆ ಬೆಳಗಾವಿಯ ಸಹಕಾರಿ ಸಂಘದ ಕಚೇರಿಗೆ ನುಗ್ಗಿ ₹15 ಲಕ್ಷ ನಗದು ಹಾಗೂ 300 ಗ್ರಾಂ ಚಿನ್ನದ ಆಭರಣ ಕದ್ದಿದ್ದ. ಅದರಿಂದಲೇ ಇಬ್ಬರು ತಂಗಿಯರ ಮದುವೆ ಸಹ ಮಾಡಿದ್ದ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಮೇ 19ರಂದು ಬೆಂಗಳೂರಿಗೆ ಬಂದಿದ್ದ ಆತ, ಇಲ್ಲಿಂದ ಮಂಗಳೂರಿಗೆ ಹೋಗಿದ್ದ. ಅಲ್ಲಿಯ ಫೈನಾನ್ಸ್‌ ಕಚೇರಿಗೆ ಕನ್ನ ಹಾಕಿದ್ದ. ಅಲ್ಲಿ ಬರೀ  1,500 ಸಿಕ್ಕಿತ್ತು. ಹೀಗಾಗಿ ವಾಪಸ್‌ ಬೆಂಗಳೂರಿಗೆ ಬಂದು ಈ ಕೃತ್ಯ ಎಸಗಿದ’ ಎಂದು ವಿವರಿಸಿದರು.

‘ಆರೋಪಿಯು ವಸತಿಗೃಹಕ್ಕೆ ಕೊಟ್ಟಿದ್ದ ಚುನಾವಣಾ ಗುರುತಿನ ಚೀಟಿ ಸಹ ನಕಲಿಯಾಗಿದೆ. ಯಾರದ್ದೋ ಗುರುತಿನ ಚೀಟಿಗೆ ತನ್ನ ಫೋಟೊ ಅಂಟಿಸಿದ್ದ. ಅದರ ಜೆರಾಕ್ಸ್‌ ಪ್ರತಿಯನ್ನೇ ಹೋದಲೆಲ್ಲ ತೋರಿಸುತ್ತಿದ್ದ’ ಎಂದರು.

**

ಗುರುತು ಸಿಗದಂತೆ ತಲೆ ಬೋಳಿಸಿದ್ದ

‘ಹುಬ್ಬಳ್ಳಿಯಲ್ಲಿ ತಲೆ ಬೋಳಿಸಿಕೊಂಡೇ ಆರೋಪಿಯು ಬಸ್‌ ಹತ್ತಿದ್ದ. ಮೊದಲಿಗೆ ಆತನನ್ನು ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ವಿಶೇಷ ತಂಡದ ಜತೆಗಿದ್ದ ವಸತಿಗೃಹದ ಯುವಕನೇ ಆತನನ್ನು ಗುರುತಿಸಿದ’ ಎಂದು ತನಿಖಾಧಿಕಾರಿ ಹೇಳಿದರು.

**

ಕ್ರಿಕೆಟ್‌ ಬೆಟ್ಟಿಂಗ್‌ ಸಾಲ ತೀರಿಸಲು ಕೃತ್ಯ

‘ಐಪಿಎಲ್‌ ವೇಳೆ ಕ್ರಿಕೆಟ್‌ ಬೆಟ್ಟಿಂಗ್‌ ಕಟ್ಟುತ್ತಿದ್ದೆ. ಈ ವೇಳೆ ಸ್ನೇಹಿತರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆ. ಅದನ್ನು ತೀರಿಸಲು ಹಣ ಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದು ಕೃತ್ಯ ಎಸಗಿದೆ’ ಎಂದು ಆರೋಪಿ ಹೇಳಿದ್ದಾನೆ.

‘ಬಾಲ್ಯದಿಂದ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದೆ. ಆಗ ರಂಧ್ರ ಕೊರೆಯುವುದನ್ನು ಕಲಿತೆ. ಬಳಿಕ ಹಲವೆಡೆ ಸುತ್ತಾಡಿ, ಸುರಂಗ ಕೊರೆದು ಕೃತ್ಯ ಎಸಗಲು ಆರಂಭಿಸಿದ್ದೆ. ಕೃತ್ಯದ ಬಳಿಕ ಪ್ರತಿ ಬಾರಿಯೂ ತಲೆ ಬೋಳಿಸಿಕೊಳ್ಳುತ್ತಿದ್ದೆ. ಪೊಲೀಸರಿಗೂ ಸಿಗುತ್ತಿರಲಿಲ್ಲ’ ಎಂದು ಆತ ಹೇಳಿಕೊಂಡಿದ್ದಾನೆ.

**

ದೂರಿನಲ್ಲಿ ತಪ್ಪಿದ್ದರೆ ಕ್ರಿಮಿನಲ್‌ ಪ್ರಕರಣ

‘ಕಳ್ಳತನದ ಬಗ್ಗೆ ದೂರು ನೀಡಿರುವ ‘ಕಾಂಚನಾ ಆಭರಣ ಮಳಿಗೆ’ ಮಾಲೀಕ ಹಿಮ್ಮತ್ ಪ್ರಕಾಶ್, 3 ಕೆ.ಜಿ ಚಿನ್ನದ ಆಭರಣ ಕಳವಾಗಿದೆ ಎಂದಿದ್ದಾರೆ. ಸದ್ಯ ಆರೋಪಿ ಬಳಿ 1 ಕೆ.ಜಿ 300 ಗ್ರಾಂ ಚಿನ್ನ ಮಾತ್ರ ಸಿಕ್ಕಿದೆ. ಆಕಸ್ಮಾತ್‌ ದೂರಿನಲ್ಲಿ ತಪ್ಪು ಮಾಹಿತಿ ನೀಡಿದ್ದು ಕಂಡುಬಂದರೆ ಮಾಲೀಕರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಪ್ರತಿಕ್ರಿಯಿಸಿ (+)