ಸೋಮವಾರ, ಡಿಸೆಂಬರ್ 16, 2019
23 °C
ಗ್ರಾಮ ಪಂಚಾಯಿತಿ ಕೇಂದ್ರದ ಊರಲ್ಲಿ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ

ಶಿಥಿಲಗೊಂಡ ತೊಗಲೂರ ಸರ್ಕಾರಿ ಶಾಲೆ ಕಟ್ಟಡ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಶಿಥಿಲಗೊಂಡ ತೊಗಲೂರ ಸರ್ಕಾರಿ ಶಾಲೆ ಕಟ್ಟಡ

ಬಸವಕಲ್ಯಾಣ: ತಾಲ್ಲೂಕಿನ ತೊಗಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲ ಕೋಣೆಗಳು ಶಿಥಿಲಗೊಂಡಿವೆ. ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಗೋಡೆಗಳು ಕುಸಿದು ಬೀಳುವ ಹಂತದಲ್ಲಿವೆ.

ಶಾಲೆಯ ಒಟ್ಟು 10 ಕೊಠಡಿಗಳ ಪೈಕಿ 9 ಕೋಣೆಗಳ ಗೋಡೆಗಳು ಮತ್ತು ಮೇಲ್ಛಾವಣಿ ಶಿಥಿಲಗೊಂಡಿವೆ. ಮಳೆ ಬಂದಾಗ ನೀರು ಸೋರುತ್ತಿದ್ದು, ಈ ವೇಳೆ ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಶಾಲೆಗೆ ರಜೆ ಘೋಷಿಸಬೇಕಾಗುತ್ತದೆ. ಹಾಸುಗಲ್ಲುಗಳು ಕೂಡ ಒಡೆದಿದ್ದು ಕೊಠಡಿಯ ಒಳಗೆ ಅಲ್ಲಲ್ಲಿ ಮಣ್ಣು ಹರಡಿದೆ.

ಶಾಲೆಯ ಎದುರೇ ತಿಪ್ಪೆಗಳು ನಿರ್ಮಾಣವಾಗಿದ್ದು, ಶಾಲೆ ಪಕ್ಕದಲ್ಲಿನ ಹಳ್ಳದಲ್ಲಿ ಮಲ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ಶಾಲೆ ಪ್ರವೇಶ ದ್ವಾರದಲ್ಲಿ ದುರ್ಗಂಧ ಬೀರುತ್ತದೆ.

‘ಹೊಸ ಕಟ್ಟಡದ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಂಡೆಪ್ಪ ಮಂಠಾಳೆ ಹೇಳುತ್ತಾರೆ.

‘ಗ್ರಾಮದಲ್ಲಿ ಹೊಸ ಪೈಪ್‌ಲೈನ್ ಅಳವಡಿಸಿದರೂ ಪೈಪ್‌ಗಳು ಹಾಳಾಗಿವೆ. ಆದ್ದರಿಂದ ಹಳೆಯ ಪೈಪ್‌ಲೈನ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ಓಣಿಗಳಿಗೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ನೀರು ಸರಬರಾಜು ಮಾಡುವಾಗಲೂ ಒಂದು ಭಾಗಕ್ಕೆ ಹೆಚ್ಚಿಗೆ ಇನ್ನೊಂದು ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು ಪೊರೈಸಲಾಗುತ್ತದೆ. ಈ ಕಾರಣ ಕೆಲ ಓಣಿಯವರು ಕೊಳವೆ ಬಾವಿಯ ನೀರನ್ನು ಅವಲಂಬಿಸಬೇಕಾಗಿದೆ’ ಎಂದು ಗ್ರಾಮಸ್ಥರಾದ ಸತೀಶ ಹೊಸಮನಿ ಅಪಾದಿಸಿದ್ದಾರೆ

‘ಎಲ್ಲ ಓಣಿಗಳಲ್ಲಿ ಚರಂಡಿ ನಿರ್ಮಿಸಿಲ್ಲ. ಕೆಲವೆಡೆ ಸಿಮೆಂಟ್ ರಸ್ತೆ ಇಲ್ಲದ್ದರಿಂದ ಮಳೆ ಬಂದಾಗ ಕೆಸರು ಆಗುತ್ತಿದೆ. ತ್ಯಾಜ್ಯ ನೀರು ರಸ್ತೆಗಳಲ್ಲಿ ಹರಿದು ಹೊಲಸು ಆಗುತ್ತಿದೆ. ಆದ್ದರಿಂದ ನೀರು ಸರಾಗವಾಗಿ ಊರಿನ ಹೊರಗೆ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

‘ಗ್ರಾಮದ ಮೂಲಕ ಹಾಲಹಳ್ಳಿ ಮಾರ್ಗವಾಗಿ ಹುಲಸೂರಿಗೆ ಹೋಗುವ ರಸ್ತೆಯಲ್ಲಿ ತಗ್ಗುಗಳು ಬಿದ್ದಿವೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಮಧ್ಯಾಹ್ನದ ವೇಳೆ ಬಸವಕಲ್ಯಾಣ ಮತ್ತು ಹುಲಸೂರಿನ ಶಾಲಾ ಕಾಲೇಜುಗಳಿಂದ ಗ್ರಾಮಕ್ಕೆ ಬರುವ ಮಕ್ಕಳಿಗಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂರ್ಯಕಾಂತ ಒತ್ತಾಯಿಸಿದ್ದಾರೆ.

‘ಬಹಳಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ. ಸಾಮೂಹಿಕ ಶೌಚಾಲಯಗಳನ್ನು ಕೂಡ ನಿರ್ಮಿಸಿಲ್ಲ. ಆದ್ದರಿಂದ ಮಹಿಳೆಯರು ರಸ್ತೆ ಪಕ್ಕದಲ್ಲಿ, ಹೊಲಗಳಲ್ಲಿನ ಗಿಡಗಂಟೆಗಳ ಮರೆಯಲ್ಲಿ ಬಹಿರ್ದೆಸೆಗೆ ಹೋಗಬೇಕಾಗುತ್ತಿದೆ. ಆದ್ದರಿಂದ ಸಾಮೂಹಿಕ ಶೌಚಾಲಯ ಕಟ್ಟಬೇಕು’ ಎಂದು ಶಿವಮ್ಮ ಮತ್ತು ಗಿರಿಜಾಬಾಯಿ ಆಗ್ರಹಿಸಿದ್ದಾರೆ.

‘ಪ್ರತಿದಿನ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆಗೆ ಸಂಬಂಧಿತರಿಗೆ ಪ್ರಸ್ತಾವ ಕಳುಹಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮಾಮಡೆ ಹೇಳಿದ್ದಾರೆ.

***

ಶಿಥಿಲಗೊಂಡಿರುವ ಶಾಲಾ ಕೊಠಡಿಗಳು ಕುಸಿದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಹೊಸ ಕೊಠಡಿ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು.

ಬಂಡೆಪ್ಪ ಮಂಠಾಳೆ, ಎಸ್‌ಡಿಎಂಸಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)