ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಯ ಭದ್ರ ಭಾವ ಮೂಡಿಸಿದ ಐಫೋನ್

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಮಾತನಾಡಲು ಮಾತ್ರ ಮೊಬೈಲ್‌ ಫೋನ್‌ ಬಳಸುವ ಕಾಲವೊಂದಿತ್ತು ಎಂಬುದನ್ನು ಇಂದು ಊಹಿಸುವುದೂ ಕಷ್ಟ. ಮೊಬೈಲ್‌ ಫೋನ್‌ ಎಂಬುದು ಕೇವಲ ಕರೆ ಮಾಡುವುದಕ್ಕಷ್ಟೇ ಸೀಮಿತ ಎಂಬಂಥ ಸನ್ನಿವೇಶ ಇದ್ದಾಗಲೇ ಆ್ಯಪಲ್‌ ಕಂಪೆನಿಯು ಐಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಹತ್ತು ವರ್ಷಗಳ ಹಿಂದೆ, 2007ರ ಜೂನ್‌ 29ರಂದು ಐಫೋನ್‌ ಮಾರುಕಟ್ಟೆಗೆ ಬಂದಿತು. ಮಾತನಾಡಲು ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್‌ ಫೋನ್‌ನ ಕಾರ್ಯವೈಖರಿ ಬದಲಾ ಯಿತು. ಆಟವಾಡಲು, ಸಂದೇಶಗಳನ್ನು, ಛಾಯಾಚಿತ್ರಗಳನ್ನು ಕಳುಹಿಸಲು, ಇ–ಮೇಲ್ ಮಾಡಲು, ಪುಸ್ತಕಗಳನ್ನು ಓದಲು... ಹೀಗೆ ಹತ್ತು ಹಲವು ಕೆಲಸಕಾರ್ಯಗಳಿಗೆ ಮೊಬೈಲೇ ಆಧಾರವಾಯಿತು.

ಇದು ಏನಿದ್ದರೂ ಸ್ಮಾರ್ಟ್‌ಫೋನ್‌ ಯುಗ. ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಹೆಚ್ಚಿನೆಲ್ಲ ಕೆಲಸಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲೇ ಮಾಡ ಲಾಗುತ್ತಿದೆ. ಐಫೋನ್‌ ಸಹ ಇದಕ್ಕೆ ಹೊರತಲ್ಲ. ಪರಿಸ್ಥಿತಿ ಹೀಗಿರುವಾಗ, ಸ್ಮಾರ್ಟ್‌ಫೋನ್‌ಗಳು ಕಂಪ್ಯೂಟರ್‌ನಷ್ಟು ಸುರಕ್ಷಿತವೇ ಎಂಬ ಪ್ರಶ್ನೆ ಸಹಜ.

ಸೈಬರ್ ದಾಳಿಕೋರರು ಕುತಂತ್ರಾಂಶಗಳ ದಾಳಿ ಮೂಲಕ ಇಡೀ ಜಗತ್ತಿನ ಅಂತರ್ಜಾಲ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಶಕ್ತರಾಗಿರುವ ಈ ದಿನಗಳಲ್ಲಿ ಗ್ರಾಹಕರ ಮಾಹಿತಿ, ಸಂದೇಶಗಳನ್ನು ಗೋಪ್ಯವಾಗಿಡುವಲ್ಲಿ ಸ್ಮಾರ್ಟ್‌ಫೋನ್‌ಗಳು ಸಬಲವಾಗಿರುವ ಬಗ್ಗೆ ಅನುಮಾನಗಳು ಮೂಡಿದರೆ ತಪ್ಪಲ್ಲ.

ಹಲವು ಗುಣಲಕ್ಷಣಗಳ ಬಗ್ಗೆ ಹಿಂದಿನಿಂದಲೂ ಆಕ್ಷೇಪವಿದೆ. ಆ್ಯಪಲ್‌ ಆ್ಯಪ್ ಸ್ಟೋರ್‌ನಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬುದಕ್ಕೆ, ಪ್ರೋಗ್ರಾಂಗಳನ್ನು ಅಪ್‌ಲೋಡ್ ಮಾಡುವ ವಿಷಯಕ್ಕೆ ಸಂಬಂಧಿಸಿ ಹೇರಲಾಗಿರುವ ನಿರ್ಬಂಧಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

ಇಷ್ಟಾದರೂ ಇತರ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಆ್ಯಪಲ್ ಐಫೋನ್‌ನ ಸುರಕ್ಷತೆ ಮುಂಚೂಣಿಯಲ್ಲಿದೆ ಎಂಬುದು ತಜ್ಞರ
ಅಭಿಪ್ರಾಯ.

ಗೂಢ ಲಿಪಿ ಶಾಸ್ತ್ರ
ಫೋನ್‌ನಲ್ಲಿರುವ ದತ್ತಾಂಶಗಳನ್ನು ಸುರಕ್ಷಿತವಾಗಿ ಮತ್ತು ಗುಪ್ತವಾಗಿಡಲು ಐಫೋನ್ ‘ಗೂಢ ಲಿಪಿ ಶಾಸ್ತ್ರ (ಕ್ರಿಪ್ಟೋಗ್ರಫಿ)’ ಬಳಸಿಕೊಂಡಿದೆ. ದುರುದ್ದೇಶಕ್ಕಾಗಿ ದತ್ತಾಂಶದ ಮೂಲವನ್ನು ತಿರುಚದಂತೆ ಹಾಗೂ ದುರ್ಬಳಕೆ ಮಾಡಿಕೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಚಿತ್ರಗಳು, ಸಂದೇಶಗಳು, ಇ–ಮೇಲ್‌ಗಳು, ಆ್ಯಪ್‌ನಲ್ಲಿರುವ ಮಾಹಿತಿಗಳು... ಹೀಗೆ ಎಲ್ಲವನ್ನೂ ‘ಗುಪ್ತ ಲಿಪಿ ಶಾಸ್ತ್ರ’ ಗೋಪ್ಯವಾಗಿ ಸಂರಕ್ಷಿಸಿ ಇಡುತ್ತದೆ.
‘ಗೂಢ ಲಿಪಿ ಶಾಸ್ತ್ರ’ಕ್ಕೆ ಸಂಬಂಧಿಸಿದ ನವೀನ ಆ್ಯಪ್‌ಗಳ ಬಳಕೆಗೂ ಐಫೋನ್‌ನಲ್ಲಿ ಅವಕಾಶವಿದೆ.

‘ಗೂಢ ಲಿಪಿ ಶಾಸ್ತ್ರ’ದ ಬಳಕೆಯಿಂದ ಸುರಕ್ಷತೆ ವಿಚಾರದಲ್ಲಿ ಐಫೋನ್‌, ಇತರೆಲ್ಲ ಸ್ಮಾರ್ಟ್‌ ಫೋನ್‌ ಗಳಿಗಿಂತಲೂ ಮುಂದಿದೆ. ‘ಗೂಢ ಲಿಪಿ ಶಾಸ್ತ್ರ’ದಿಂದಾಗಿ ಯಾವುದೇ ವ್ಯಕ್ತಿ ಅಥವಾ ಕಂಪೆನಿಗೆ ಗ್ರಾಹಕನ ಫೋನ್‌ನಲ್ಲಿರುವ ಮಾಹಿತಿಯನ್ನು ಪಡೆಯಲು ಅಥವಾ ಕದಿಯಲು ಸಾಧ್ಯವಾಗದು. ಹೆಚ್ಚೇಕೆ, ಐಫೋನ್‌ ತಯಾರಿಸುವ ಆ್ಯಪಲ್ ಕಂಪೆನಿಗೇ ಇದು ಸಾಧ್ಯವಿಲ್ಲ.

ಖಾಸಗಿತನಕ್ಕೆ ಆದ್ಯತೆ
ಐಫೋನ್ ತಯಾರಿಸುವ ಸಂದರ್ಭದಲ್ಲಿ ಕಂಪೆನಿ ಗ್ರಾಹಕನ ಖಾಸಗಿತನಕ್ಕೆ ಆದ್ಯತೆ ನೀಡಿದೆ ಎಂಬುದಕ್ಕೆ ಅಮೆರಿಕದ ಭದ್ರತಾ ಸಂಸ್ಥೆ ಎಫ್‌ಬಿಐಯ ಮನವಿಗೂ ಅದು ಸೊಪ್ಪು ಹಾಕದಿರುವುದು ನಿದರ್ಶನ. ಉಗ್ರನೊಬ್ಬ ಬಳ ಸಿದ್ದ ಐಫೋನ್‌ನಿಂದ ಮಾಹಿತಿ ಕಲೆ ಹಾಕಲು ಸಹಕರಿಸುವಂತೆ ಆತನ ವಿಚಾರಣೆ ವೇಳೆ ಕಂಪೆನಿಗೆ ಎಫ್‌ಬಿಐಗೆ ಸೂಚಿಸಿತ್ತು. ಆದರೆ, ‘ಗೂಢ ಲಿಪಿ ಶಾಸ್ತ್ರ’ದ ಬಳಕೆಯಿಂದ ಮಾಹಿತಿ ಕಲೆ ಹಾಕುವುದು ಅಸಾಧ್ಯ ಎಂದಿದ್ದ ಆ್ಯಪಲ್, ಗ್ರಾಹಕರ ಖಾಸಗಿತನಕ್ಕೇ ಆದ್ಯತೆ ನೀಡಿತ್ತು.

ಅನ್‌ಲಾಕ್ ಪಿನ್:
ಫೋನ್ ಅನ್‌ಲಾಕ್ ಮಾಡುವ ಪಿನ್‌ ಅನ್ನು ಗ್ರಾಹಕನೇ ನಿಗದಿಪಡಿಸುವಂಥ ವ್ಯವಸ್ಥೆಯನ್ನು ಐಫೋನ್‌ನಲ್ಲಿ ಅಳವಡಿಸಲಾಗಿದೆ. ಹೀಗಾಗಿ ಖುದ್ದು ಆ್ಯಪಲ್‌ಗೂ ಗ್ರಾಹಕನ ಐಫೋನ್‌ ಅನ್‌ಲಾಕ್ ಮಾಡಲಾಗುವುದಿಲ್ಲ. ಎಫ್‌ಬಿಐ ಸೂಚನೆಯನ್ನು ಕಂಪೆನಿ ನಿರಾಕರಿಸಲು ಇದೂ ಪ್ರಮುಖ ಕಾರಣವಾಗಿದೆ.

ದೇಶದ ಭದ್ರತೆಯ ವಿಚಾರ ಎದುರಾದಾಗಲೂ ಆ್ಯಪಲ್ ಈ ರೀತಿ ವರ್ತಿಸಿದ್ದು ವಿಶ್ವಮಟ್ಟದಲ್ಲಿ ಚರ್ಚೆಗೆ ಗುರಿಯಾಗಿತ್ತು. ‘ವಾಟ್ಸ್‌ಆ್ಯಪ್ ಮತ್ತು ಇ–ಮೇಲ್‌ಗಳಲ್ಲಿ ಕಳುಹಿಸಲಾಗಿರುವ ಸಂದೇಶ, ಮಾಹಿತಿಗಳನ್ನು ಗೋಪ್ಯವಾಗಿಡುವುದರಿಂದ ಅಪರಾಧ ಎಸಗುವವರಿಗೆ, ಸೈಬರ್ ಅಪರಾಧಿಗಳಿಗೆ ಪ್ರಯೋಜನವಾಗುತ್ತದೆ. ಹೀಗಾಗಿ ಭದ್ರತೆಯ ವಿಚಾರ ಬಂದಾಗ ಅಂಥ ಸಂದೇಶಗಳ, ಮಾಹಿತಿಗಳನ್ನು ಪತ್ತೆಮಾಡಲು ಅವಕಾಶ ನೀಡಬೇಕು’ ಎಂದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಂಸ್ಥೆಗಳು ಆಗ್ರಹಿಸಿದ್ದವು.

ಸರ್ಕಾರಿ ಸಂಸ್ಥೆಗಳ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಂಸ್ಥೆಗಳ ವಿರೋಧದ ಹೊರತಾಗಿಯೂ ತನ್ನ ಸುರಕ್ಷತಾ ಕ್ರಮಗಳ ಮೂಲಕ ಪ್ರತಿಸ್ಪರ್ಧಿ ಕಂಪೆನಿಗಳನ್ನು ಹಿಂದಿಕ್ಕುವಲ್ಲಿ ಆ್ಯಪಲ್ ಬಹುಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅಂಬೋಣ. ಅಂದಹಾಗೆ, 2016ನೇ ಸಾಲಿನಲ್ಲಿ ನೂರು ಕೋಟಿಗೂ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡಲಾಗಿತ್ತು. ‘ಜೇಬಿನಲ್ಲಿ ಇರಿಸಬಹುದಾದ ಸುರಕ್ಷತೆಯ ಕಂಪ್ಯೂಟರ್‌’ ಎಂಬ ಹೆಗ್ಗಳಿಕೆಯೊಂದಿಗೆ ಕಳೆದ ಹತ್ತು ವಸಂತಗಳ ಐಫೋನ್‌ನ ಯಶಸ್ವಿ ಪಯಣವನ್ನು ಮುಂದುವರಿಸುವತ್ತ ಸದ್ಯ ಆ್ಯಪಲ್‌ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT