ಬುಧವಾರ, ಡಿಸೆಂಬರ್ 11, 2019
25 °C
ವಿಶ್ವ ಜನಸಂಖ್ಯಾ ದಿನಾಚರಣೆ ಇಂದು, ಎರಡು ಮಕ್ಕಳಿದ್ದರೆ ಕುಟುಂಬ ನಿರ್ವಹಣೆ ಸುಲಭ ಎನ್ನುವ ಬಗ್ಗೆ ಜಾಗೃತಿ

ಗಂಡನಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಬೇಡ ಎನ್ನುವ ಮಹಿಳೆಯರು

ಕೆ. ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಗಂಡನಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಬೇಡ ಎನ್ನುವ ಮಹಿಳೆಯರು

ಬಳ್ಳಾರಿ:  ‘ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿ ಬಾರಿ ಹಮ್ಮಿಕೊಂಡಾಗಲೂ, ತಮ್ಮ ಪತಿಗೆ ಶಸ್ತ್ರಚಿಕಿತ್ಸೆ ಬೇಡ ಎನ್ನುವ ಮಹಿಳೆಯರೇ ಅಧಿಕವಾಗಿ ಕಂಡುಬರುತ್ತಾರೆ. ಪುರುಷರಿಗೂ ನೋವು ಮತ್ತು ಗಾಯವಿಲ್ಲದೆ ಶಸ್ತ್ರಚಿಕಿತ್ಸೆ ಸಾಧ್ಯ. ಅದರಿಂದ ಅಡ್ಡಪರಿಣಾಮಗಳಿಲ್ಲ ಎಂದರೂ ಅವರು ಕೇಳಿಸಿಕೊಳ್ಳುವುದಿಲ್ಲ....’

ಹೀಗೆ ಹೇಳಿದ್ದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಆರ್‌.ವಿಜಯಲಕ್ಷ್ಮಿ. ಶಸ್ತ್ರಚಿಕಿತ್ಸೆಯನ್ನು ಪುರುಷರಿಗೆ ಮಾಡದಂತೆ ಮಹಿಳೆಯರೇ ಕೋರಿ ಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

‘ಹೊಸ ಅಲೆ, ಹೊಸ ವಿಶ್ವಾಸ, ಸಂಪೂರ್ಣ ಜವಾಬ್ದಾರಿಯೊಂದಿಗೆ ಕುಟುಂಬದ ವಿಕಾಸ ಎಂಬ ಘೋಷಣೆ ಯೊಂದಿಗೆ ದಿನಾಚರಣೆಯನ್ನು ಆರೋಗ್ಯ ಇಲಾಖೆಯು ಹಮ್ಮಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರ ಲ್ಲಿರುವ ಹಳೆಯ ನಂಬಿಕೆಯನ್ನು ಹೋಗ ಲಾಡಿಸುವ ಸವಾಲೂ ಮುಂದುವರಿದಿದೆ ಎಂದು ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತಿಯು ಶಸ್ತ್ರಚಿಕಿತ್ಸೆಗೆ ಒಳಗಾದರೆ ಆತನ ಗಂಡಸುತನಕ್ಕೆ ಕುಂದು ಉಂಟಾಗಬಹುದು ಎಂಬ ಬಲವಾದ ನಂಬಿಕೆ ಬಹಳಷ್ಟು ಮಹಿಳೆಯರಲ್ಲಿದೆ. ಶಸ್ತ್ರಚಿಕಿತ್ಸೆಯಿಂದ ದೈನಂದಿಕ ಕೆಲಸಗಳ ನಿರ್ವಹಣೆಗೂ ತೊಂದರೆಯಾಗಬಹುದು ಎಂಬ ಆತಂಕವೂ ಉಂಟು. ಹೀಗಾಗಿ ಹೆಚ್ಚಿನ ಮಹಿಳೆಯರು ತಾವೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ’ ಎಂದರು.

ನಾಲ್ಕು ವಿಧಾನ: ‘ಕುಟುಂಬ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ ಶಾಶ್ವತ ವಿಧಾನ. ಅದನ್ನು ಹೊರತುಪಡಿಸಿದರೆ ಇನ್ನೂ ಮೂರು ವಿಧಾನಗಳ ಮೂಲಕವೂ ಕುಟುಂಬ ನಿಯಂತ್ರಣ ಸಾಧ್ಯ. ಮಹಿಳೆಯರು ವಂಕಿ ಧರಿಸುವುದು ಮತ್ತು ಮಾತ್ರೆ ನುಂಗುವ ಮೂಲಕ, ಪುರುಷರು ಕಾಂಡೊಮ್‌ ಬಳಸುವ ಮೂಲಕ ಕುಟುಂಬ ನಿಯಂತ್ರಿಸಬಹುದು. ಆದರೆ ಬಹಳ ಮಂದಿ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡುತ್ತಾರೆ’ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್‌ ಹೇಳಿದರು.

ಹೆಚ್ಚು ಮಕ್ಕಳು: ‘ಪ್ರತಿ ಒಂದು ಸಾವಿರ ಜನಸಂಖ್ಯೆಗೆ 156 ಅರ್ಹ ದಂಪತಿಗಳಿ ರುತ್ತಾರೆ. ಅವರಲ್ಲಿ ಶೇ 30ರಷ್ಟು ಮಂದಿ ಒಂದು ಮಗುವನ್ನು ಪಡೆದರೆ, ಶೇ 30ರಷ್ಟು ಮಂದಿ ಎರಡು ಮಗುವನ್ನು ಪಡೆಯುತ್ತಾರೆ. ಶೇ 40ರಷ್ಟು ಮಂದಿಗೆ ಮೂರು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳಿರುತ್ತಾರೆ. ಒಂದು ಮತ್ತು ಎರಡು ಮಕ್ಕಳಿರುವ ಕುಟುಂಬ ನಿರ್ವಹಣೆ ಸುಲಭಸಾಧ್ಯ ಎಂಬ ಕುರಿತು ಪ್ರತಿ ಕಾರ್ಯಕ್ರಮದಲ್ಲೂ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

***

ಬ್ಯಾಂಕ್‌ ಉದ್ಯೋಗಿಗಳ ಉತ್ಸಾಹ

ಶಸ್ತ್ರಚಿಕಿತ್ಸೆಗೆ ಒಳಗಾದ 19 ಮಂದಿ ಪೈಕಿ ನಗರದ ಬ್ಯಾಂಕೊಂದರ ನಾಲ್ವರು ಉದ್ಯೋಗಿ ಪುರುಷರಿರುವುದು ವಿಶೇಷ. ಉಳಿದವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ಪುರುಷರು ಎಂದು ಡಾ.ವಿಜಯಲಕ್ಷ್ಮಿ ತಿಳಿಸಿದರು. ಆದರೆ ಅವರ ಮಾಹಿತಿಯನ್ನು ನೀಡಲು ನಿರಾಕರಿಸಿದರು.

‘ಬ್ಯಾಂಕಿನ ನಾಲ್ವರು ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಗ್ರಾಮೀಣ ಪುರುಷರಲ್ಲೂ ಶಸ್ತ್ರಚಿಕಿತ್ಸೆಗೆ ಮುಂದೆ ಬರುವವರ ಸಂಖ್ಯೆ ಹೆಚ್ಚಾಗಬೇಕು’ ಎಂದು ಅಭಿಪ್ರಾಯಪಟ್ಟರು.

***

ಪುರುಷರಿಗೇ ಪ್ರೋತ್ಸಾಹ ಧನ ಹೆಚ್ಚು!

ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆಯರಿಗಿಂತಲೂ ಪುರುಷರಿಗೇ ಹೆಚ್ಚು ಪ್ರೋತ್ಸಾಹ ಧನ ನಿಗದಿ ಮಾಡಲಾಗಿದೆ.

ಬಿಪಿಎಲ್‌ ಕುಟುಂಬದ ಮಹಿಳೆಗೆ ₹ 600, ಎಪಿಎಲ್‌ ಕುಟುಂಬದವರಿಗೆ ₹ 250 ನೀಡಲಾಗುತ್ತದೆ. ಆದರೆ ಪುರುಷರು ಯಾವ ಕುಟುಂಬಕ್ಕೇ ಸೇರಿದ್ದರೂ ಅವರಿಗೆ ತಲಾ ₹ 1100 ಪ್ರೋತ್ಸಾಹಧನ ನಿಗದಿ ಮಾಡಲಾಗಿದೆ. ಆದರೂ ಪುರುಷರು ಮುಂದೆ ಬರುವುದಿಲ್ಲ ಎಂಬುದು ಅಧಿಕಾರಿಗಳ ಅಳಲು.

ಶಸ್ತ್ರಚಿಕಿತ್ಸೆಗೆ ಮಹಿಳೆಯರ ಮನ ಒಲಿಸುವ ಆಶಾ ಕಾರ್ಯಕರ್ತೆಯರಿಗೆ ₹ 150 ಪ್ರೋತ್ಸಾಹಧ ನಿಗದಿ ಮಾಡಲಾಗಿದೆ. ಪುರುಷರ ಮನ ಒಲಿಸಿದರೆ ಈ ಮೊತ್ತ ₹ 200ಕ್ಕೆ ಏರುತ್ತದೆ!

***

ಪುರುಷರು ಕಾಂಡೊಮ್‌ ಬಳಸುವ ಮೂಲಕ ಕುಟುಂಬ ನಿಯಂತ್ರಿಸಬಹುದು. ಆದರೆ ಬಹಳ ಮಂದಿ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡುತ್ತಾರೆ.

ಈಶ್ವರ ದಾಸಪ್ಪನವರ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

***

ಪತಿಗೆ ಶಸ್ತ್ರಚಿಕಿತ್ಸೆ ಬೇಡ ಎಂದು ಖಡಾಖಂಡಿತವಾಗಿ ಮಹಿಳೆಯರು ಹೇಳಿ, ತಾವೇ ಮುಂದೆ ಬರುತ್ತಾರೆ. ಅಂಥವರನ್ನು ತಡೆಯಲು ಆಗುತ್ತಿಲ್ಲ

ಆರ್‌.ವಿಜಯಲಕ್ಷ್ಮಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ

ಪ್ರತಿಕ್ರಿಯಿಸಿ (+)