ಶನಿವಾರ, ಡಿಸೆಂಬರ್ 7, 2019
24 °C

ಸಹಜ ಸ್ಥಿತಿಯತ್ತ ದಕ್ಷಿಣ ಕನ್ನಡ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಜ ಸ್ಥಿತಿಯತ್ತ ದಕ್ಷಿಣ ಕನ್ನಡ ಜಿಲ್ಲೆ

ಮಂಗಳೂರು: ಕೋಮು ದ್ವೇಷ ಸಂಬಂಧಿ ಅಹಿತಕರ ಘಟನೆಗಳಿಂದ ಪ್ರಕ್ಷುಬ್ಧಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಹುತೇಕ ಸಹಜ ಸ್ಥಿತಿಯತ್ತ ಸಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಪೊಲೀಸ್‌ ಕಟ್ಟೆಚ್ಚರ ಮುಂದುವರಿದಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ರೂಪಕ್‌ ಕುಮಾರ್‌ ದತ್ತ  ಗುರುವಾರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ನಿಯಂತ್ರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ  ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಮಂಗಳವಾರ ಡಿಜಿಪಿ ನೇತೃತ್ವದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದು, ಮತ್ತೆ ಅಹಿತಕರ ಘಟನೆಗಳು ಮರುಕಳಿಸದಂತೆ ನಿಯಂತ್ರಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಮಂಗಳವಾರ ರಾತ್ರಿ ಮಂಗಳೂರಿಗೆ ಬಂದಿದ್ದು, ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ.

ಮತ್ತೆ ಇಬ್ಬರ ಬಂಧನ: ಶರತ್‌ ಮಡಿವಾಳ ಶವಯಾತ್ರೆ ವೇಳೆ ಬಂಟ್ವಾಳ ತಾಲ್ಲೂಕಿನ ಕೈಕಂಬದಿಂದ ಬಿ.ಸಿ.ರೋಡ್‌ವರೆಗಿನ ಮಾರ್ಗದಲ್ಲಿ ನಡೆದಿರುವ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 15ಕ್ಕೇರಿದೆ. ‘ಶನಿವಾರ ಮತ್ತು ಭಾನುವಾರ ನಿರಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 13 ಜನರನ್ನು ಬಂಧಿಸಿದ್ದರು. ಮಂಗಳವಾರ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದರು.

ಜುಲೈ 21ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಜುಲೈ 21ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಮೇ 27ರಿಂದ ಬಂಟ್ವಾಳ ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಉಳಿದ ಮೂರು ತಾಲ್ಲೂಕುಗಳಿಗೆ ನಿಷೇಧಾಜ್ಞೆ ವಿಸ್ತರಿಸಿ ಜೂನ್‌ 13ರಂದು ಆದೇಶ ಹೊರಡಿಸಲಾಗಿತ್ತು. ಮಂಗಳವಾರ ಮಧ್ಯರಾತ್ರಿಗೆ ನಿಷೇಧಾಜ್ಞೆ ಅವಧಿ ಮುಕ್ತಾಯಗೊಳ್ಳಬೇಕಿತ್ತು. ಬಂಟ್ವಾಳ ತಾಲ್ಲೂಕಿನಲ್ಲಿ ಪದೇ ಪದೇ ಅಹಿಕತರ ಘಟನೆಗಳು ನಡೆಯುತ್ತಿರುವ ಕಾರಣದಿಂದ ಜುಲೈ 21ರವರೆಗೂ ನಿಷೇಧಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಪ್ರತಿಕ್ರಿಯಿಸಿ (+)