ಶುಕ್ರವಾರ, ಡಿಸೆಂಬರ್ 6, 2019
17 °C

2018ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2018ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ

ಕಲಬುರ್ಗಿ: ‘2018ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸೇರಿದಂತೆ ಬಹುತೇಕ ಮುಖಂಡರು ಹೇಳಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಲಬುರ್ಗಿ ವಿಭಾಗ ಮಟ್ಟದ ಜನಪ್ರತಿನಿಧಿಗಳ ಸಮಾವೇಶ’ದಲ್ಲಿ ಮಾತನಾಡಿದ ಎಲ್ಲ ಮುಖಂಡರು, ‘2018ರಲ್ಲಿ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ’ ಎಂದು ನಗುಮೊಗದಿಂದ ಹೇಳಿದಾಗ ನೆರೆದ ಕಾರ್ಯಕರ್ತರು, ಜನಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವಾರು ಜನಪ್ರಿಯ ಯೋಜನೆಗಳು, ಪ್ರಣಾಳಿಕೆಯಲ್ಲಿನ ಭರವಸೆಗಳ ಈಡೇರಿಕೆಯಿಂದ ರಾಜ್ಯದ ಜನತೆ ಖುಷಿಯಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಾವ ಮುಖ ಇಟ್ಟುಕೊಂಡು ಅವರು ಚುನಾವಣೆಗೆ ಹೋಗುತ್ತಾರೋ ಗೊತ್ತಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ಸರ್ಕಾರ, ಕಾಂಗ್ರೆಸ್ ಸರ್ಕಾರ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನಾವೇ ಮುಂದಿನ ಮುಖ್ಯಮಂತ್ರಿ ಎಂದು ಕನಸು ಕಾಣುತ್ತಿದ್ದಾರೆ. ಅವರಪ್ಪರಾಣೆಗೂ ಅವರು ಅಧಿಕಾರಕ್ಕೆ ಬರುವುದಿಲ್ಲ. 2018ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸದಿಂದ ಹೇಳಿದರು.

‘ಎಲ್ಲ ಪಕ್ಷಗಳೂ ಪ್ರಣಾಳಿಕೆ ಕೊಡುತ್ತವೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಕಸದ ಬುಟ್ಟಿಗೆ ಹಾಕುತ್ತವೆ. ನಾವು ಪ್ರಣಾಳಿಕೆಯಲ್ಲಿದ್ದ 165 ಭರವಸೆಗಳ ಪೈಕಿ 155ನ್ನು ಈಗಾಗಲೇ ಈಡೇರಿಸಿದ್ದೇವೆ. ರಾಜ್ಯದ ಜನತೆಗೆ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮನಸ್ವಿನಿ ಸೇರಿದಂತೆ ಹಲವಾರು ಭಾಗ್ಯಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯದ ಕಟ್ಟ ಕಡೆಯ ಜನರಿಗೂ ಯೋಜನೆಗಳ ಲಾಭ ತಲುಪುವಂತೆ ಮಾಡಿದ್ದೇವೆ’ ಎಂದು ಹೇಳಿದರು.

‘ನಮ್ಮ  ಅವಧಿಯಲ್ಲಿ ಒಂದೂ ಹಗರಣ ನಡೆದಿಲ್ಲ. ಒಬ್ಬರೂ ಜೈಲಿಗೆ ಹೋಗಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹೀಗಾಗಿ ಜನರ ಬಳಿ ಹೋಗಲು ನಮಗೆ ಮುಖವಿದೆ. ಆದರೆ ಸಾಲಾಗಿ ಜೈಲು ಸೇರಿದ ಬಿಜೆಪಿಯವರಿಗೆ ಯಾವ ಮುಖವಿದೆ’ ಎಂದು ಕೇಳಿದರು.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮಾತನಾಡಿ, ‘2018ರ ವಿಧಾನಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಇಡೀ ದೇಶದ ಜನತೆ ಕರ್ನಾಟಕವನ್ನು ನೋಡುತ್ತಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಆ ಮೂಲಕ 2018ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾತನಾಡಿ, ‘ಹಿಂದುಳಿದವರ ಉದ್ಧಾರವೇ ಕಾಂಗ್ರೆಸ್ ಗುರಿಯಾಗಿದೆ. ಈ ಕಾರಣಕ್ಕಾಗಿಯೇ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಇಲ್ಲಿಗೆ ಬಂದು ಮತ ಕೇಳಲು ಅವರಿಗೆ ನಾಚಿಕೆ ಆಗಬೇಕು’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಪ್ರಣಾಳಿಕೆಯಲ್ಲಿನ ಶೇ 90ರಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಕಾಂಗ್ರೆಸ್ ಮುಕ್ತ ಸರ್ಕಾರ ಎಂಬುದು ಬಿಜೆಪಿಯ ಭ್ರಮೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಬೀದರ್‌ನಿಂದ ಚಾಮರಾಜನಗರವರೆಗೆ ಕಾಂಗ್ರೆಸ್‌ ಇದ್ದೇ ಇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಪ್ರವಾಸೋದ್ಯಮ ಮತ್ತು ಐಟಿ ಬಿಟಿ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ ಜಿ.ರಾಮಕೃಷ್ಣ, ಡಾ. ಉಮೇಶ ಜಾಧವ್, ಬಿ.ಆರ್.ಪಾಟೀಲ, ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ, ಡಾ. ಅಜಯಸಿಂಗ್, ಇಕ್ಬಾಲ್ ಅಹಮ್ಮದ್ ಸರಡಗಿ, ರಹೀಮ್ ಖಾನ್, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭಾಗಣಗೌಡ ಪಾಟೀಲ ಸಂಕನೂರ, ಮೇಯರ್ ಶರಣಕುಮಾರ ಮೋದಿ ಇದ್ದರು.

‘ತಿಂಡಿ ತಿನ್ನೋಕೆ ಹೋಗ್ತೀರಾ?’

‘ಅಧಿಕಾರದಲ್ಲಿದ್ದಾಗ ಏನೂ ಮಾಡದ ಯಡಿಯೂರಪ್ಪ ಈಗ ದಲಿತರಿಗೆ ಮನೆಗೆ ತಿಂಡಿ ತಿನ್ನೋಕೆ ಹೋಗ್ತಾ ಇದ್ದಾರೆ. ಅವರಿಗೆ ಈಗ ದಲಿತರ ನೆನಪಾಗಿದೆ. ಹೋಟೆಲ್‌ನಿಂದ ತಿಂಡಿ ತರಿಸಿ, ಅದನ್ನು ತಿನ್ನಲು ದಲಿತರ ಮನೆಯೇ ಆಗಬೇಕಾ’ ಎಂದು ಸಿದ್ದರಾಮಯ್ಯ ಕೇಳಿದರು.

ಮಿಷನ್ 150 ಠುಸ್!

‘ಯಡಿಯೂರಪ್ಪ ಅವರ ಮಿಷನ್ 150 ಠುಸ್.. ಶೋಭಾ ಠುಸ್.. ಈಶ್ವರಪ್ಪ ಠುಸ್..’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆಯೇ ಇಡೀ ಸಮಾವೇಶ ನಗೆಗಡಲಲ್ಲಿ ತೇಲಿತು.

‘ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿಯ ದಂಡೇ ಅಲ್ಲಿ ಬೀಡು ಬಿಟ್ಟಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಎಲ್ಲವೂ ಠುಸ್ ಆಗಿತ್ತು. ಯಡಿಯೂರಪ್ಪ ಪೆಚ್ಚು ಮೋರೆ ಹಾಕಿಕೊಂಡು ಮನೆಯತ್ತ ಸಾಗಿದರು’ ಎಂದು ಗೇಲಿ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಖಮರುಲ್  ಗೈರು

ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಶಾಸಕ ಖಮರುಲ್ ಇಸ್ಲಾಂ ಹಾಗೂ  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗೈರು ಹಾಜರಾಗಿದ್ದರು. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಜಿ.ಪರಮೇಶ್ವರ, ‘ಖರ್ಗೆ, ಧರ್ಮಸಿಂಗ್ ಹಾಗೂ ಖಮರುಲ್ ಇಸ್ಲಾಂ ಅವರು ಕೆಲವು ಕಾರಣಗಳಿಂದಾಗಿ ಗೈರಾಗಿದ್ದಾರೆ’ ಎಂದರು.

* * 

ಹೈದರಾಬಾದ್ ಕರ್ನಾಟಕ ಭಾಗದ 40 ಮತಕ್ಷೇತ್ರಗಳ ಪೈಕಿ 29ರಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಸಂಖ್ಯೆ ಹೆಚ್ಚಿಸಬೇಕು.

ಸಿದ್ದರಾಮಯ್ಯ,

ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)