ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗಿ– ಶೋಭಾಗೆ ದಿನೇಶ್‌ ಗುಂಡೂರಾವ್‌ ತಿರುಗೇಟು

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಪಿಸಿಸಿ ಕಾರ್ಯಾಧ್ಯಕ್ಷರು ದಲಿತರ ಮನೆ ಹೆಣ್ಣು ತಂದಿದ್ದಾರೆಯೇ. ಅವರು ಯಾರನ್ನು ಮದುವೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು’ ಎಂದು ಶೋಭಾ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ   ದಿನೇಶ್‌  ಗುಂಡೂರಾವ್‌ ಬುಧವಾರ ತಿರುಗೇಟು ನೀಡಿದ್ದಾರೆ.

‘ಶೋಭಾ ಕರಂದ್ಲಾಜೆ ಅವರಿಗೆ  ಇನ್ನೂ ಮದುವೆಯಾಗಿಲ್ಲ. ಮದುವೆಯಾಗಲು ಅವಕಾಶವಿದೆ.  ಬೇಕಾದರೆ ಅವರು ಮದುವೆಯಾಗಲಿ’ ಎಂದು ದಿನೇಶ ಗುಂಡೂರಾವ್‌ ವ್ಯಂಗ್ಯವಾಡಿದ್ದಾರೆ.

‘ನನ್ನ ಮದುವೆಯಾಗಿದ್ದು 1994ರಲ್ಲಿ. ತುಂಬಾ ವರ್ಷಗಳೇ ಕಳೆದಿದೆ. ಈಗ ಅದರ ಬಗ್ಗೆ ಶೋಭಾ ಏಕೆ ಮಾತನಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಯಾರನ್ನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ಗೊತ್ತು. ಅದರಿಂದ ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಿಲ್ಲ. ನಾನು ಅಂದು ದಲಿತ ಹುಡುಗಿಯನ್ನು ಇಷ್ಟಪಟ್ಟಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳು ಇರಲಿಲ್ಲ. ನಾನು ಕುಟುಂಬದ ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿದ್ದೇನೆ’ ಎಂದರು.

ಶೋಭಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಿನೇಶ್‌ ಗುಂಡೂರಾವ್‌ ಪತ್ನಿ ತಬು ರಾವ್‌, ‘ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದವಳು. ನನ್ನ ಪತಿ ಬ್ರಾಹ್ಮಣ. ಅದರಲ್ಲಿ ಗುಟ್ಟೇನೂ ಇಲ್ಲ. ಎರಡು ದಶಕಗಳಿಂದ ಸುಂದರ ವೈವಾಹಿಕ ಜೀವನ ನಡೆಸುತ್ತಿರುವ ನಮ್ಮ ಬದುಕಿಗೆ ಧರ್ಮ ಎಂದೂ ಅಡ್ಡಿ ಬಂದಿಲ್ಲ. ಸಾಮರಸ್ಯದ ಬದುಕು ನಮ್ಮದು. ನಮ್ಮಿಬ್ಬರಲ್ಲಿ ಯಾರೂ ಮತಾಂತರ ಆಗಿಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದೇವೆ’ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಾನೊಬ್ಬಳು ಗೃಹಿಣಿ. ಎರಡು ಹೆಣ್ಣು ಮಕ್ಕಳ ತಾಯಿ. ಕೀಳುಮಟ್ಟದ ರಾಜಕೀಯ ಲಾಭಕ್ಕಾಗಿ ಶೋಭಾ ನಮ್ಮ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸಮಾಜದಲ್ಲಿ ಕೋಮು ಸೌಹಾರ್ದ ಕೆಡಿಸುವುದು ಅವರ ಉದ್ದೇಶ’ ಎಂದೂ ಟೀಕಿಸಿದ್ದಾರೆ.

ಇದಕ್ಕೆ ದನಿಗೂಡಿಸಿರುವ ಕೃಷಿ ಸಚಿವ ಕೃಷ್ಣ ಬೈರೇಗೌಡರ ಪತ್ನಿ ಮೀನಾ ಶೇಷಾದ್ರಿ, ಶೋಭಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಶೋಭಾ ಹೇಳಿದ್ದೇನು?:  ಗಾಂಧಿನಗರದಲ್ಲಿ ಬುಧವಾರ ನಡೆದ ಪಕ್ಷದ ‘ವಿಸ್ತಾರಕ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ‘ಕಾಂಗ್ರೆಸ್‌ ನಾಯಕರು ದಲಿತರ ಮನೆಯಿಂದ ಹುಡುಗಿ ತಂದಿಲ್ಲ’ ಎಂದು ಟೀಕಿಸಿದ್ದರು.

‘ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ,  ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಅವರಿಗೆ ಕೊಡಿ, ಅವರ ಮನೆಯ ಹೆಣ್ಣು ಮಕ್ಕಳನ್ನು ತಂದುಕೊಳ್ಳಿ’ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ, ‘ನಮ್ಮ ಪಕ್ಷದವರಿಗೆ ಹೇಳುವ ಮೊದಲು ಅವರ ಪಕ್ಷದ ಅಧ್ಯಕ್ಷ, ಕಾರ್ಯಾಧ್ಯಕ್ಷರು ಯಾರ ಮನೆಯಿಂದ ಹೆಣ್ಣು ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಲಿ’ ಎಂದು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT