ಶನಿವಾರ, ಡಿಸೆಂಬರ್ 14, 2019
22 °C
ಕಾರಾಗೃಹಗಳ ಡಿಜಿಪಿ ಸತ್ಯನಾರಾಯಣರಾವ್‌ ಮೇಲೆ ಆರೋಪ

ಶಶಿಕಲಾ ವಿಶೇಷ ಆತಿಥ್ಯಕ್ಕೆ ₹2 ಕೋಟಿ ಲಂಚ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಶಿಕಲಾ ವಿಶೇಷ ಆತಿಥ್ಯಕ್ಕೆ ₹2 ಕೋಟಿ ಲಂಚ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ  ವಿಶೇಷ ಆತಿಥ್ಯ ನೀಡಲು ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್‌. ಎನ್‌.ಸತ್ಯನಾರಾಯಣರಾವ್ ₹2 ಕೋಟಿ ಲಂಚ ಪಡೆದಿದ್ದಾರೆಯೇ?

ಇಲಾಖೆಯ ಡಿಐಜಿ ಡಿ.ರೂಪಾ ಅವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ (ಸತ್ಯನಾರಾಯಣರಾವ್‌) ಅವರಿಗೇ ಬರೆದಿರುವ ಪತ್ರ ಇಂಥ ಅನುಮಾನ ಹುಟ್ಟುಹಾಕಿದೆ. ಈ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇದೇ ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಅವರಿಗೂ ರೂಪಾ ಅವರು ಕಳುಹಿಸಿದ್ದಾರೆ.

‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅವರ ಆಪ್ತೆಯಾಗಿರುವ ಶಶಿಕಲಾಗೆ ವಿಶೇಷ ಅಡುಗೆ ಮನೆ ಕಲ್ಪಿಸಲಾಗಿದೆ. ಇದು ಕಾರಾಗೃಹ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ವಿಷಯ ನಿಮ್ಮ (ಡಿಜಿಪಿ ಸತ್ಯನಾರಾಯಣರಾವ್) ಗಮನದಲ್ಲಿದ್ದರೂ  ಅದನ್ನು ಮುಂದುವರಿಸಲಾಗಿದೆ ಎಂಬ ಊಹಾಪೋಹ ಇದೆ.’‘ಈ ಕಾರ್ಯಕ್ಕೆ ₹ 2 ಕೋಟಿ ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಆಪಾದನೆಗಳು ದುರದೃಷ್ಟಕರವಾಗಿ ನಿಮ್ಮ ಮೇಲೆಯೇ ಇರುವುದರಿಂದ ನೀವು (ಸತ್ಯನಾರಾಯಣರಾವ್) ಇದರ ಬಗ್ಗೆ ಗಮನಹರಿಸಿ ಕೂಡಲೇ ಜೈಲಿನ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಮೇಲೆ  ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲು ಕೋರಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೈದಿಗಳ ನಿಯೋಜನೆ: ‘ಛಾಪಾ ಕಾಗದ ಪ್ರಕರಣ ಮುಖ್ಯ ಆರೋಪಿ ಅಬ್ದುಲ್‌ಕರಿಂಲಾಲ್‌ ತೆಲಗಿ, ಆರು ತಿಂಗಳ ಹಿಂದೆ ವ್ಹೀಲ್‌ಚೇರ್‌ ಉಪಯೋಗಿಸುತ್ತಿದ್ದಾಗ ಸಹಾಯಕರನ್ನು ಕೊಡಬಹುದೆಂದು ಕೋರ್ಟ್‌ ಹೇಳಿತ್ತು.

ಆದರೆ, ಈಗ ಆತ ಚೆನ್ನಾಗಿಯೇ ಓಡಾಡುತ್ತಿದ್ದಾನೆ. ಆದರೂ, ಆತನ ಕೋಣೆಯಲ್ಲಿ 3 ರಿಂದ 4 ಮಂದಿ ವಿಚಾರಣಾ ಕೈದಿಗಳಿದ್ದಾರೆ’ ಎಂದು ಪತ್ರದಲ್ಲಿ ರೂಪಾ ಅವರು ತಿಳಿಸಿದ್ದಾರೆ.

‘ಆ ಕೈದಿಗಳು,  ತೆಲಗಿಯ ಕಾಲು, ಕೈ, ಭುಜ ಒತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೀವೂ (ಡಿಜಿಪಿ ಸತ್ಯನಾರಾಯಣ) ಕಚೇರಿಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ನೋಡಿರುತ್ತೀರೆಂದು ಭಾವಿಸಿರುತ್ತೇನೆ. ಇದು ನಿಯಮ ಉಲ್ಲಂಘನೆ ಎಂಬುದು ಗೊತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾನು ಸಹ 20 ದಿನಗಳಲ್ಲಿ ಹಲವು ಬಾರಿ ಹೇಳಿದರೂ ಸ್ಪಂದಿಸಿಲ್ಲ’ ಎಂದಿದ್ದಾರೆ.

ವೈದ್ಯಾಧಿಕಾರಿಗಳ ಮೇಲೆ ಕೈದಿಗಳಿಂದ ಹಲ್ಲೆ: ‘ಜೂನ್‌ 29ರಂದು ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಹಾಗೂ ನಾಲ್ವರು ವೈದ್ಯರು ಸೇರಿದಂತೆ 10 ಮಂದಿಯ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಈ ಬಗ್ಗೆ ಸಂಬಂಧಪಟ್ಟವರು ನನಗೆ ಹಾಗೂ ನಿಮಗೆ ಫ್ಯಾಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ. ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ  ವರದಿ ನೀಡುವಂತೆ ಅಲ್ಲಿಯ ಮುಖ್ಯ ಅಧೀಕ್ಷಕರಿಗೆ ತಿಳಿಸಿದರೂ ವರದಿ ಬಂದಿಲ್ಲ.’

‘ಅದರಿಂದಾಗಿ ಖುದ್ದಾಗಿ ಜುಲೈ 10ರಂದು ಸಂಜೆ 6.30ಕ್ಕೆ ಜೈಲಿಗೆ ಹೋಗಿದ್ದೆ. ಆಗ ಕೈದಿ ನಾಗೇಂದ್ರಮೂರ್ತಿ ಎಂಬಾತ ವೈದ್ಯರ ಮೇಲೆ ಹಲ್ಲೆ  ಕಬ್ಬಿಣದ ಕುರ್ಚಿಯಿಂದ ಹಲ್ಲೆಗೆ ಯತ್ನಿಸಿದ್ದು ತಿಳಿಯಿತು. ಈ ಘಟನೆ ವೇಳೆ ಮನೋರೋಗಿಯೊಬ್ಬ ಕೈದಿಯನ್ನು ತಡೆದು ಅನಾಹುತ ತಪ್ಪಿಸಿದ್ದಾನೆ. ಗಾರ್ಡ್‌ ಸಹ ಅಂದು ಗೈರಾಗಿದ್ದು, ಆತನ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದ್ದಾರೆ.

ಅನಾಯಾಸವಾಗಿ ಸಿಗುತ್ತದೆ ಗಾಂಜಾ: ‘ಕಾರಾಗೃಹದಲ್ಲಿ ಗಾಂಜಾ ವ್ಯಾಪಕವಾಗಿ ಉಪಯೋಗವಾಗುತ್ತಿದೆ. ಇದನ್ನು ತಿಳಿಯಲು ಜುಲೈ 10ರಂದು ಡ್ರಗ್‌ ಟೆಸ್ಟ್‌ ಕಿಟ್‌ ಬಳಸಿ 25 ಕೈದಿಗಳ ರಕ್ತ ಹಾಗೂ ಮೂತ್ರದ ಪರೀಕ್ಷೆ ಮಾಡಿಸಿದ್ದೆ. ಅವರ ಪೈಕಿ 18 ಜನರಲ್ಲಿ ಗಾಂಜಾ ಅಂಶವಿರುವುದು ವೈದ್ಯಾಧಿಕಾರಿಗಳ ವರದಿಯಿಂದ ಸಾಬೀತಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ. ಗಾಂಜಾ ಅಂಶ ಪತ್ತೆಯಾದ ಕೈದಿಗಳ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ.

‘ಜೂನ್‌ 23ರಂದು ಮಹಿಳಾ ನರ್ಸ್‌ ಜತೆ ಕೈದಿಯು ಅಸಭ್ಯವಾಗಿ ವರ್ತಿಸಿದ್ದು, ಆತನ ವಿರುದ್ಧವೂ ಯಾವುದೇ ಕ್ರಮ ಜರುಗಿಸಿಲ್ಲ. ಜಾಮೀನು ಸಿಗುವ ರೀತಿಯಲ್ಲಿ ವರದಿ ಕೊಡಿ ಎಂದು ಕೆಲವರು ವೈದ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ದಾಖಲೆಗಳು ನಾಪತ್ತೆ: ‘ಕಾರಾಗೃಹದಲ್ಲಿ ದಾಖಲೆಗಳ ಕೊಠಡಿ ಇದ್ದು, ಕೈದಿಗಳ ವೈದ್ಯಕೀಯ ದಾಖಲೆಗಳು ಅಲ್ಲಿವೆ. ಈ ಕೊಠಡಿಯ ನಿರ್ವಹಣೆಗಾಗಿ ವೈದ್ಯಾಧಿಕಾರಿಗಳಿಗೆ ಸಹಾಯ ಮಾಡಲು ಜವಾಬ್ದಾರಿಯುತ ಸರ್ಕಾರಿ ನೌಕರರನ್ನು ನೇಮಿಸುವ ಬದಲು ಕೈದಿಗಳನ್ನೇ ನೇಮಿಸಲಾಗಿದೆ. ಇದರಿಂದ ದಾಖಲೆಗಳೇ ನಾಪತ್ತೆಯಾಗುತ್ತಿವೆ. ಜತೆಗೆ ದುರುಪಯೋಗವೂ ಆಗುತ್ತಿದೆ’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

‘ಮೆಮೊ ಕೊಟ್ಟಿದ್ದಕ್ಕೆ ಆರೋಪ’

‘ಪತ್ರದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ನಾನು ರೂಪಿಸಿದ್ದ ಕಾರ್ಯಕ್ರಮಗಳ ಹೆಸರು ಹೇಳಿಕೊಂಡು ರೂಪಾ ಅವರು ಪ್ರಚಾರ ಪಡೆಯುತ್ತಿದ್ದರು.

ಈ ಬಗ್ಗೆ ಎರಡು ಬಾರಿ ಮೆಮೊ ಕೊಟ್ಟಿದ್ದೆ. ಈ ಕಾರಣಕ್ಕಾಗಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಸತ್ಯನಾರಾಯಣರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೂಪಾ ಅವರು ಜೈಲಿಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದುಕೊಂಡಿಲ್ಲ. ಕಾರಾಗೃಹದಲ್ಲಿ ಸಾಮಾನ್ಯ ಅಡುಗೆ ಮನೆ ಇದೆ. ವಿಶೇಷವಾಗಿ ಅಡುಗೆ ಮನೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

* ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಅದರ ವರದಿ ಸಹಿತ ಪತ್ರವನ್ನು ಡಿಜಿಪಿ ಅವರಿಗೆ ಕಳುಹಿಸಿ, ನನ್ನ ಕೆಲಸವನ್ನು ನಾನು ಮಾಡಿದ್ದೇನೆ

– ಡಿ.ರೂಪಾ, ಡಿಐಜಿ

ಪ್ರತಿಕ್ರಿಯಿಸಿ (+)