ಶನಿವಾರ, ಡಿಸೆಂಬರ್ 7, 2019
24 °C
ಪ್ರಾಧಿಕಾರದ ರಚನೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಪಚ್ಚಾಪುರೆ ಹೇಳಿಕೆ

ಸಮಾಜ, ಪೊಲೀಸರ ಅಂತರ ತಗ್ಗಿಸಲು ಪ್ರಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜ, ಪೊಲೀಸರ ಅಂತರ ತಗ್ಗಿಸಲು ಪ್ರಾಧಿಕಾರ

ಕೊಪ್ಪಳ: ಸಮಾಜ ಮತ್ತು ಪೊಲೀಸ್‌ ವ್ಯವಸ್ಥೆಯ ನಡುವಿನ ಅಂತರ ಕಡಿಮೆ ಮಾಡಲು ಪೊಲೀಸ್‌ ದೂರು ಪ್ರಾಧಿಕಾರ ರಚನೆಯಾಗಿದೆ ಎಂದು ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಸ್‌.ಪಚ್ಚಾಪುರೆ ಹೇಳಿದರು.

ನಗರದ ವಕೀಲರ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಬುಧವಾರ ಪೊಲೀಸ್ ದೂರು ಪ್ರಾಧಿಕಾರದ ರಚನೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸತ್ಯ ಮತ್ತು ಧರ್ಮದ ರಕ್ಷಣೆ ಪೊಲೀಸ್‌ ಮತ್ತು ಕಾನೂನು ವ್ಯವಸ್ಥೆಯದ್ದಾಗಿದೆ. ರಾಜ್ಯಮಟ್ಟದ ದೂರು ಪ್ರಾಧಿಕಾರವು ಪೊಲೀಸರ ಮೇಲಿನ ಗಂಭೀರ ದುರ್ನಡತೆಯ ಆರೋಪಗಳನ್ನು ವಿಚಾರಿಸಬಹುದು’ ಎಂದು ಹೇಳಿದರ.

‘ಕಾನ್‌ಸ್ಟೇಬಲ್‌ನಿಂದ ಹಿಡಿದು ಡಿವೈಎಸ್‌ಪಿವರೆಗಿನ ಆರೋಪಗಳನ್ನು ಜಿಲ್ಲಾಮಟ್ಟದ ದೂರು ಪ್ರಾಧಿಕಾರವು ವಿಚಾರಣೆ ನಡೆಸುತ್ತದೆ. ಜಿಲ್ಲಾಮಟ್ಟದ ಪ್ರಾಧಿಕಾರದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ನಾಗರಿಕ ಸದಸ್ಯರನ್ನು ಜಿಲ್ಲಾಮಟ್ಟದ ಸಮಿತಿ ಹೊಂದಿರುತ್ತದೆ’ ಎಂದು ಅವರು ವಿವರಿಸಿದರು.

‘ದೂರು ಪ್ರಾಧಿಕಾರವು ಪೊಲೀಸರಿಗೆ ಕಿರುಕುಳ ನೀಡುವುದಕ್ಕೆ ಇರುವುದಲ್ಲ. ಅದು ನಮ್ಮ ನಡತೆ ಶುದ್ಧವಾಗಿರುವಂತೆ ಎಚ್ಚರಿಕೆ ನೀಡುತ್ತದೆ. ಎಲ್ಲ ವ್ಯವಸ್ಥೆಗಳಲ್ಲಿ ಇರುವಂತೆ ಇಲ್ಲಿಯೂ ಲೋಪದೋಷಗಳು ಇವೆ. ಅವೆಲ್ಲದರ ನಡುವೆ ನಾವು ಸತ್ಯ ಶುದ್ಧ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಾಕುಮಾರಿ ಜಯಂತಿ ಅವರು ಮಾತನಾಡಿ, ‘ದೇಹದ ಮೇಲಿರುವ ಕಾಳಜಿ ಆತ್ಮದ ಮೇಲೆ ವಹಿಸುವುದಿಲ್ಲ. ಆತ್ಮಜ್ಞಾನ, ಪರಮಾತ್ಮನ ಜ್ಞಾನ ಬಂದರೆ ನಾವು ಪ್ರತಿಯೊಬ್ಬರಲ್ಲೂ ಸೌಹಾರ್ದ ಭಾವ ಹೊಂದುತ್ತೇವೆ.

ಸಹೋದರತ್ವ, ಪ್ರೀತಿ ಕಾಣುತ್ತೇವೆ. ಆದರೆ, ಯಾವುದಕ್ಕೆ ನಾವು ಅಗತ್ಯವಾಗಿ ಸಮಯ ಮೀಸಲಿಡಬೇಕೋ ಅದನ್ನು ಮಾಡುತ್ತಿಲ್ಲ. ಅದರ ಬದಲು ಬೇರೆ ಕೆಲಸಕ್ಕೆ ಸಮಯ ಕೊಡುತ್ತೇವೆ. ಇಲ್ಲದುದರ ಕಡೆಗೆ ಬೆನ್ನುಹತ್ತಿ ಹೋಗುತ್ತಿದ್ದೇವೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ಶೆಟ್ಟಿ ಜಿಲ್ಲಾ ಪೊಲೀಸ್‌ ಪ್ರಾಧಿಕಾರದ ಬಗ್ಗೆ ಅವರು ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ನ್ಯಾಯಾಧೀಶ ಆರ್‌.ಜಿ.ಜೋಷಿ, ವಕೀಲರ ಸಂಘದ ಅಧ್ಯಕ್ಷ ದೊಡ್ಡ ಬಸಪ್ಪ ಕಂಪ್ಲಿ, ಎಂ.ಆರ್‌.ಕಾಂಬಳೆ, ಡಾ.ಮಹಾಂತೇಶ ಮಲ್ಲನಗೌಡರ ಇದ್ದರು. ಹನುಮಂತರಾವ್‌ ಕೆಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)